ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆ; ದೇಶದ ಮೊದಲ ಆದಿವಾಸಿ, ಎರಡನೇ ಮಹಿಳಾ ರಾಷ್ಟ್ರಪತಿ

Source: Vb | By I.G. Bhatkali | Published on 22nd July 2022, 12:52 PM | National News |

ಹೊಸದಿಲ್ಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗುರುವಾರ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಭಾರೀ ಮತಗಳ ಅಂತರದಿಂದ ಪರಾಭವಗೊಳಿಸಿರುವ ಮುರ್ಮು ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಮತ್ತು ಸಸ್ಯಪಡೆಗಳ ದಂಡನಾಯಕರೂ ಹೌದು. ಜಾರ್ಖಂಡ್‌ ಮಾಜಿ ರಾಜ್ಯಪಾಲರಾದ 64 ವರ್ಷ ವಯಸ್ಸಿನ ಮುರ್ಮು ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು,ಜು.25ರಂದು ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.


ಮುರ್ಮು ಅವರು ಒಟ್ಟು 6,76,803(ಶೇ.64) ಮೌಲ್ಯದ 2,824 ಪ್ರಥಮ ಪ್ರಾಶಸ್ಯದ ಮತಗಳನ್ನು ಪಡೆದಿದ್ದಾರೆ.

 ಯಶವಂತ್ ಸಿನ್ಹಾ ಅವರಿಗೆ 3,80,177(ಶೇ.36) ಮೌಲ್ಯದ 1,877 ಪ್ರಥಮ ಪ್ರಾಶಸ್ಯದ ಮತಗಳು ಲಭಿಸಿವೆ.

153 ಮತಗಳು ಅಸಿಂಧುಗೊಂಡಿವೆ.

· ಪ್ರತಿಪಕ್ಷಗಳ 17 ಸಂಸದರು ಹಾಗೂ 125 ಶಾಸಕರು ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತ ಚಲಾಯಿಸಿದ್ದಾರೆ.

ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜು.24ರಂದು ನಿವೃತ್ತರಾಗಲಿದ್ದು, ನೂತನ ರಾಷ್ಟ್ರಪತಿ ಆಯ್ಕೆಗಾಗಿ ಜು.18ರಂದು ಚುನಾವಣೆ ನಡೆದಿತ್ತು.

ಮುರ್ಮು ಅವರ ತವರೂರು ಒಡಿಶಾದ ರಾಯರಂಗಪುರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಮತ ಎಣಿಕೆ ಪ್ರಕ್ರಿಯೆ ದಿಲ್ಲಿಯ ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭಗೊಂಡಿದ್ದರೆ, ವಾಸ್ತವ ಮತಗಳ ಎಣಿಕೆ ಅಪರಾಹ್ನ 1:30 ಗಂಟೆಗೆ ಪ್ರಾರಂಭವಾಗಿತ್ತು.

ಮೊದಲ ಸುತ್ತು ಮುಗಿದಾಗ ಮುರ್ಮು ಶೇ.39ರಷ್ಟು ಮತಗಳನ್ನು ಗಳಿಸಿದ್ದರು ಮತ್ತು ಆಗಲೇ ಅವರ ಗೆಲುವು ನಿಶ್ಚಿತವಾಗಿತ್ತು. ಮುರ್ಮು ಅವರು ಮುನ್ನಡೆಯಲ್ಲಿರುವ ಮಾಹಿತಿ ಹೊರಬೀಳುತ್ತಿದ್ದಂತೆಯೇ ಅವರ ಎರಡಂತಸ್ತಿನ ನಿವಾಸದ ಮುಂದೆ ವಿಜಯೋತ್ಸವ ಆರಂಭಗೊಂಡಿತ್ತು. ಇದಕ್ಕಾಗಿಯೇ 20,000 ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು.

ಜನರು ಸಂಭ್ರಮದಿಂದ ನರ್ತಿಸುತ್ತಿದ್ದರೆ ಬಣ್ಣಬಣ್ಣದ ಬಲೂನುಗಳು ಹಾರಾಡುತ್ತಿದ್ದವು. ಊರಿನ ತುಂಬೆಲ್ಲ 'ಒಡಿಶಾದ ಪುತ್ರಿಗೆ ಅಭಿನಂದನೆಗಳು' ಹೋರ್ಡಿಂಗ್‌ಗಳು ರಾರಾಜಿಸುತ್ತಿದ್ದವು. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಆದಿವಾಸಿ ಸಮುದಾಯದ ಸದಸ್ಯರಿಂದ ನೃತ್ಯದೊಂದಿಗೆ ವಿಜಯದ ಮೆರವಣಿಗೆ ಯನ್ನು ನಡೆಸಲಾಯಿತು.

ತಡಸಂಜೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಿಗೇ ಪ್ರಧಾನಿ ન ನರೇಂದ್ರ ಮೋದಿ, ಕೆಲವು ಹಿರಿಯ ಕೇಂದ್ರ ಸಚಿವರು ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಲ್ಲಿಯ ತೀನ್‌ಮೂರ್ತಿ ಮಾರ್ಗದಲ್ಲಿನ ಮುರ್ಮು ಅವರ ತಾತ್ಕಾಲಿಕ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುರ್ಮು ಗೆಲುವಿನ ಸಂಭ್ರಮದಲ್ಲಿ ದಿಲ್ಲಿ ಬಿಜೆಪಿ ಘಟಕವು ಪಕ್ಷದ ಕೇಂದ್ರ ಕಚೇರಿಯಿಂದ ರಾಜಪಥ್‌ವರೆಗೆ ರೋಡ್‌ಶೋ ನಡೆಸಿದ್ದು, 3 ಪಕ್ಷದ ಹಲವಾರು ಹಿರಿಯ ನಾಯಕರು ಭಾಗಿಯಾಗಿದ್ದರು. ಬಿಜೆಪಿಯ ಎಲ್ಲ ರಾಜ್ಯ ಘಟಕಗಳೂ ವಿಜಯೋತ್ಸವ ಮೆರವಣಿಗೆಗಳನ್ನು ನಡೆಸಿದವು.

2000 ಮತ್ತು 2004ರಲ್ಲಿ ಒಡಿಶಾ ವಿಧಾನಸಭೆಯ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾಗಿದ್ದಮುರ್ಮು 2000ದಿಂದ 2004ರವರೆಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ-ಬಿಜೆಪಿ ಸರಕಾರದಲ್ಲಿ ಸಚಿವೆಯಾಗಿದ್ದರು. 2015ರಲ್ಲಿ ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮುರ್ಮು ಸಂಸದರ ಒಟ್ಟು ಸಿಂಧು ಮತಗಳ ಶೇ.71.19 ಮತ್ತು ಸಿನ್ಹಾ ಶೇ.27.81ರಷ್ಟನ್ನು ಪಡೆದಿದ್ದರು. ಎರಡನೇ ಸುತ್ತಿನ ಅಂತ್ಯದಲ್ಲಿ ಮುರ್ಮು 1,439 ಮತಗಳನ್ನು (ಮೌಲ್ಯ 4,82,299) ಮತ್ತು ಸಿನ್ಹಾ 533 ಮತಗಳನ್ನು (ಮೌಲ್ಯ 1,89,876) ಗಳಿಸಿದ್ದರು. ಮೂರನೇ ಸುತ್ತು ಮುಗಿದಾಗ 20 ರಾಜ್ಯಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಮುರ್ಮು ಅವರು ಚಲಾವಣೆಯಾಗಿದ್ದ ಒಟ್ಟು ಮತಗಳಲ್ಲಿ ಶೇ.50ಕ್ಕೂ ಅಧಿಕ ಮತಗಳನ್ನು ಪಡೆದಿದ್ದರು ಮತ್ತು ಅಲ್ಲಿಗೆ ಅವರ ವಿಜಯ ನಿಚ್ಚಳಗೊಂಡಿತ್ತು.

ಮುರ್ಮು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಮತ್ತು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ಹಲವಾರು ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...