2047ರ ವೇಳೆಗೆ ಭವ್ಯ ಭಾರತ ನಿರ್ಮಾಣದ ಸಂಕಲ್ಪ: ಮೋದಿ, ಕೆಂಪುಕೋಟೆಯಲ್ಲಿ ಪ್ರಧಾನಿ ಸ್ವಾತಂತ್ರೋತ್ಸವದ ಭಾಷಣ

Source: Vb | By I.G. Bhatkali | Published on 16th August 2022, 3:16 PM | National News |

ಹೊಸದಿಲ್ಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭ ಸೋಮವಾರ ದಿಲ್ಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತವು ಭ್ರಷ್ಟಾಚಾರದ ವಿರುದ್ಧ ತನ್ನ ಯುದ್ಧದಲ್ಲಿ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದೆ. ಸ್ವಜನಪಕ್ಷಪಾತ ಮತ್ತು ಸ್ತ್ರೀದ್ವೇಷ ದೇಶದ ಮುಂದಿರುವ ಕೆಲವು ದೊಡ್ಡ ಸವಾಲುಗಳಾಗಿವೆ. ಈ ಸವಾಲುಗಳು ಕೇವಲ ರಾಜಕೀಯ ಸಮಸ್ಯೆಯಲ್ಲ, ಅವು ಸಮಾಜದ ಇತರ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿಯೂ ಅಸ್ತಿತ್ವದಲ್ಲಿವೆ ಹಾಗೂ ಅವುಗಳ ವಿರುದ್ಧ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಕೆಂಪುಕೋಟೆಯಿಂದ ತನ್ನ ಸತತ ಒಂಭತ್ತನೇ ವರ್ಷದ ಭಾಷಣದಲ್ಲಿ ಮೋದಿ, ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ ಮತ್ತು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿರುವುದು ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆಯಿಡುವ ಸಮಯವಾಗಿದೆ ಎಂದರು. 'ಪ್ರಜಾಪ್ರಭುತ್ವದ ತಾಯಿ' ಎಂದು ಭಾರತವನ್ನು ಬಣ್ಣಿಸಿದ ಅವರು, 'ನಮ್ಮ ವೈವಿಧ್ಯತೆಯಿಂದ ನಾವು ಅಂತರ್ಗತ ಶಕ್ತಿಯನ್ನು ಹೊಂದಿದ್ದೇವೆ ಎನ್ನುವುದನ್ನು ನಮ್ಮ ದೇಶವು ಸಾಬೀತುಗೊಳಿಸಿದೆ ಮತ್ತು ದೇಶಭಕ್ತಿಯ ಸಾಮಾನ್ಯ ಎಳೆಯು ಭಾರತವನ್ನು ಅಲುಗಾಡಿಸಲು ಅಸಾಧ್ಯವನ್ನಾಗಿಸಿದೆ' ಎಂದರು.

ಬೃಹತ್‌ ಸಂಕಲ್ಪಗಳ ಗುರಿಯನ್ನು ಹೊಂದಲು ಕರೆ ನೀಡಿದ ಅವರು, 2047ರ ವೇಳೆಗೆ ಭಾರತದ ಸ್ವಾತಂತ್ರ್ಯ ಶತಮಾನೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು 'ಪಂಚ ಪ್ರಾಣ (ಐದು ಸಂಕಲ್ಪಗಳು)'ವನ್ನು ಉಚ್ಚರಿಸಿದರು. ಅಭಿವೃದ್ಧಿ ಹೊಂದಿದ ಭಾರತ, ವಸಾಹತುಶಾಹಿ ಮನಃಸ್ಥಿತಿಯ ಯಾವುದೇ ಕುರುಹನ್ನು ತೆಗೆದುಹಾಕುವುದು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ, ಏಕತೆಯಲ್ಲಿ ನಮ್ಮ ಶಕ್ತಿ, ಪ್ರಾಮಾಣಿಕತೆಯಿಂದ ನಾಗರಿಕರ ಕರ್ತವ್ಯಗಳನ್ನು ಪೂರೈಸುವುದು, ಇದನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಗಳೂ ಮಾಡಬೇಕು, ಈ ಐದು ಸಂಕಲ್ಪಗಳ ಬಗ್ಗೆ ಭಾರತೀಯರು ಗಮನವನ್ನು ಕೇಂದ್ರೀಕರಿಸಬೇಕು ಎಂದು ಮೋದಿ ಹೇಳಿದರು.

'ಜಗತ್ತು ನಮಗೆ ಪ್ರಮಾಣಪತ್ರಗಳನ್ನು ನೀಡುವುದನ್ನು ಎಲ್ಲಿಯವರೆಗೆ ಮುಂದುವರಿಸುತ್ತದೆ? ನಾವು ನಮ್ಮದೇ ಆದ ಮಾನದಂಡಗಳನ್ನು ಹೊಂದಿರಲು ಸಾಧ್ಯವಿಲ್ಲವೇ? 130 ಕೋಟಿ ಜನತೆಯ ದೇಶವು ತನ್ನ ಮಟ್ಟಗಳನ್ನು ಮೀರುವ ಪ್ರಯತ್ನವನ್ನು ಮಾಡದಿರಲು ಸಾಧ್ಯವೇ ಎಂದು ಪ್ರಶ್ನಿಸಿದ ಪ್ರಧಾನಿ,ನೂತನ ಶಿಕ್ಷಣ ನೀತಿ (ಎನ್‌ಇಪಿ)ಯು ಈ ಉದ್ದೇಶವನ್ನು ಪೂರೈಸುತ್ತದೆ ಎಂದು ಹೇಳಿದರು. ಪ್ರತಿಯೊಂದು ಭಾರತೀಯ ಭಾಷೆಯ ಬಗ್ಗೆಯೂ ದೇಶವು ಹೆಮ್ಮೆ ಪಡಬೇಕು ಎಂದೂ ಅವರು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ದಾಳಿಗೆ ತನ್ನ ಭಾಷಣದ ಹೆಚ್ಚಿನ ಸಮಯ ನೀಡಿದ ಮೋದಿ, ಕೆಲವರಿಗೆ ತಮ್ಮ ಅಕ್ರಮ ಸಂಪತ್ತನ್ನು ಬಚ್ಚಿಡಲು ಸಾಕಷ್ಟು ಸ್ಥಳಾವಕಾಶವಿಲ್ಲ ಮತ್ತು ದೇಶದಲ್ಲಿಯ ಹಲವರಿಗೆ ವಾಸವಾಗಿರಲು ಸಾಕಷ್ಟು ಸ್ಥಳಾವಕಾಶವಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಕೆಲವು ನಾಯಕರ ಮೇಲಿನ ಇತ್ತೀಚಿನ ದಾಳಿಗಳಲ್ಲಿ ಲೆಕ್ಕಕ್ಕೆ ಸಿಗದ ಭಾರೀ ನಗದು ಮತ್ತು ಆಸ್ತಿಗಳನ್ನು ವಶಪಡಿಸಿಕೊಂಡಿರುವುದನ್ನು ಸ್ಪಷ್ಟವಾಗಿ ಬೆಟ್ಟು ಮಾಡಿದರು.

`ಭ್ರಷ್ಟಾಚಾರವು ದೇಶವನ್ನು ಗೆದ್ದಲು ಹುಳಗಳಂತೆ ತಿನ್ನುತ್ತಿದೆ ಮತ್ತು ನಾವು ಅದರ ವಿರುದ್ಧ ಪೂರ್ಣ ಶಕ್ತಿಯಿಂದ ಹೋರಾಡಬೇಕಿದೆ. ದೇಶವನ್ನು ಕೊಳ್ಳೆ ಹೊಡೆದವರು ಅದನ್ನು ಮರಳಿಸಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ'ಎಂದ ಮೋದಿ ಅವರನ್ನು 'ವೈಭವೀಕರಿಸುವ ಪ್ರಯತ್ನಗಳನ್ನು ಟೀಕಿಸುವ ಮೂಲಕ ಭ್ರಷ್ಟಾಚಾರದ ಆರೋಪಿಗಳನ್ನು ಪ್ರತಿಪಕ್ಷಗಳು ಸಮರ್ಥಿಸಿಕೊಳ್ಳುತ್ತಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಭ್ರಷ್ಟಾಚಾರ ಮತ್ತು ಭ್ರಷ್ಟರ ಬಗ್ಗೆ ದ್ವೇಷದ ಭಾವನೆ ಇಲ್ಲದಿದ್ದರೆ ಮತ್ತು ಜನರು ಸಾಮಾಜಿಕವಾಗಿ ಅವರನ್ನು ಕೀಳಾಗಿ ನೋಡುವವರೆಗೂ ಈ ಮನಃಸ್ಥಿತಿಯು ಅಂತ್ಯಗೊಳ್ಳುವುದಿಲ್ಲ ಎಂದರು.

ಪ್ರಧಾನಿ ಯಾರನ್ನೂ ಹೆಸರಿಸದಿದ್ದರೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನ್ನ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿಚಾರಣೆ ವಿರುದ್ಧ ಕಾಂಗ್ರೆಸ್ ಪಕ್ಷದ ದೇಶವ್ಯಾಪಿ ಪ್ರತಿಭಟನೆಗಳನ್ನು ಬಿಜೆಪಿ ಆಗಾಗ ಪ್ರಸ್ತಾಪಿಸುತ್ತಿರುತ್ತದೆ.

ವಂಶಪಾರಂಪರ್ಯ ಮತ್ತು ಪರಿವಾರವಾದದ ವಿರುದ್ಧವೂ ದಾಳಿ ನಡೆಸಿದ ಮೋದಿ, ರಾಜಕೀಯದಲ್ಲಿ ಅವುಗಳ ಉಪಸ್ಥಿತಿಯು ದೇಶದ ಎಲ್ಲ ಸಂಸ್ಥೆಗಳಲ್ಲಿ ಈ ಪಿಡುಗನ್ನು ಪೋಷಿಸಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಪರಿವಾರವಾದವು ಭಾರತದ ಪ್ರತಿಭೆಗಳು ಮತ್ತು ಸಾಮರ್ಥ್ಯಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಜನರು ತಮಗೆ ಯಾವುದೇ ಪರ್ಯಾಯವಿಲ್ಲದಿದ್ದಾಗ ಅದನ್ನು ಆಶ್ರಯಿಸುವುದೂ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದರು. ಈ ಪಿಡುಗುಗಳ ವಿರುದ್ಧ ಹೋರಾಡುವುದು ತನ್ನ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಹೊಣೆಗಾರಿಕೆಯಾಗಿದೆ ಎಂದ ಅವರು, ಇದಕ್ಕಾಗಿ ಜನತೆಯ ಬೆಂಬಲವನ್ನು ಕೋರಿದರು.

ರಾಜಕೀಯದಲ್ಲಿಯೂ ವಂಶಪಾರಂಪರ್ಯವು ದೇಶದ ಶಕ್ತಿಗೆ ತೀರಾ ಅನ್ಯಾಯವನ್ನು ಮಾಡಿದೆ. ವಂಶಪಾರಂಪರ್ಯ ರಾಜಕಾರಣವು ಒಂದು ಕುಟುಂಬದ ಹಿತವನ್ನೇ ಗುರಿಯಾಗಿಸಿಕೊಂಡಿದ್ದು, ಅದಕ್ಕೆ ದೇಶದ ಹಿತದ ಬಗ್ಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದರು.

ಸ್ತ್ರೀದ್ವೇಷ ಹಾಗೂ ಮಹಿಳೆಯರಿಗೆ ಅವಮಾನವನ್ನುಂಟು ಮಾಡುವ ಭಾಷಣ ಮತ್ತು ಕೃತ್ಯದ ವಿರುದ್ಧ ಹರಿಹಾಯ್ದ ಮೋದಿ,ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿನ ಮಹಿಳೆಯರ ಪ್ರತಿಭೆಯ ಅನಾವರಣವು ದೇಶವು ತನ್ನ ಅಭಿವೃದ್ಧಿ ಮತ್ತು ಸಾಮಾಜಿಕ ಗುರಿಗಳನ್ನು ಶೀಘ್ರವಾಗಿ ತಲುಪುವುದನ್ನು ಸಾಧ್ಯವಾಗಿಸಲಿದೆ ಎಂದರು.

ಇಂದು ಐತಿಹಾಸಿಕ ಕೆಂಪುಕೋಟೆಯಲ್ಲಿನ ಸ್ವಾತಂತ್ರೋತ್ಸವದಲ್ಲಿ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ 21 ಕುಶಾಲು ತೋಪು ವಂದನೆಗಾಗಿ 'ಮೇಡ್ ಇನ್ ಇಂಡಿಯಾ' ಫಿರಂಗಿಯನ್ನು ಬಳಸಲಾಗಿದೆ ಎಂದು ಹೇಳಿದ ಮೋದಿ, ಇದಕ್ಕಾಗಿ ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು. 'ಆತ್ಮನಿರ್ಭರ ಭಾರತ ಸರಕಾರದ ಸಂಕಲ್ಪಕ್ಕೆ ಒತ್ತು ನೀಡಿದ ಅವರು,130 ಕೋಟಿ ಭಾರತೀಯರು ಒಂದು ಹೆಜ್ಜೆಯನ್ನು ಮುಂದಿಟ್ಟಾಗ ದೇಶವು 130 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ ಎಂದರು.

ಡಿಜಿಟಲ್ ಟೆಕ್ನಾಲಜಿ,ಡಿಜಿಟಲ್ ಇಂಡಿಯಾ ಸೇರಿದಂತೆ ಹಲವಾರು ವಿಷಯಗಳ ಬಗ್ಗೆಯೂ ಮೋದಿ ತನ್ನ 82 ನಿಮಿಷಗಳ ಭಾಷಣದಲ್ಲಿ ಮಾತನಾಡಿದರು.

ನೆಹರೂರನು ಸ್ಮರಿಸಿದ ಪ್ರಧಾನಿ
ಹೊಸದಿಲ್ಲಿ, ಆ.15: ಕೆಂಪು ಕೋಟೆಯ ಆವರಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭ ದೇಶವನ್ನು ಉದ್ದೇಶಿಸಿ 9ನೇ ಬಾರಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು ಹಾಗೂ ದೇಶವನ್ನು ರೂಪಿಸಿದ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಬಿರ್ಸಾ ಮುಂಡಾ ಹಾಗೂ ರಾಣಿ ಲಕ್ಷ್ಮಿ ಬಾಯಿಯಂತಹ ನಾಯಕರನ್ನು ನೆನಪಿಸಿಕೊಳ್ಳುವ ಮೂಲಕ “ಸ್ವತಂತ್ರ ಭಾರತದ ನಿರ್ಮಾಣಕಾರರಿಗೆ ಗೌರವ ಸಲ್ಲಿಸಿದರು.

ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರು ಕ್ರೌರ್ಯ ಹಾಗೂ ಬರ್ಬರತೆಯನ್ನು ಎದುರಿಸದ ಒಂದೇ ಒಂದು ವರ್ಷ ಇರಲಾರದು. ಇಂದು ನಾವು ಅವರಿಗೆ ಗೌರವ ಸಲ್ಲಿಸುವಾಗ ಭಾರತದ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಹಾಗೂ ಕನಸನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯಕ್ಕೆ ಆಘಾತ ನೀಡಿದ ಗಾಂಧೀಜಿ, ಭಗತ್‌ ಸಿಂಗ್, ರಾಜಗುರು, ರಾಮ್ ಪ್ರಸಾದ್‌ ಬಿಸ್ಮಿಲ್ಲಾ, ರಾಣಿ ಲಕ್ಷ್ಮೀ ಬಾಯಿ, ಸುಭಾಶ್ ಚಂದ್ರ ಬೋಸ್ ಹಾಗೂ ಇತರ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ದೇಶ ಆಭಾರಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಮಾತ್ರವಲ್ಲದೆ, ಸ್ವಾತಂತ್ರೋತ್ತರ ಭಾರತದ ನಿರ್ಮಾತೃಗಳಾದ ಜವಾಹರಲಾಲ್ ನೆಹರೂ, ರಾಮ್ ಮನೋಹ‌ ಲೋಹಿಯಾ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಹಾಗೂ ಇತರರಿಗೆ ವಂದನೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಭಾರತದ ಸಮೃದ್ಧ ಚರಿತ್ರೆಯನ್ನು ಪ್ರಶಂಸಿಸಿದ ಪ್ರಧಾನಿ, ಬಿರ್ಸಾ ಮುಂಡಾ, ಟೈರೋಟ್ ಸಿಂಗ್ ಹಾಗೂ ಅಲ್ಲುರಿ ಸೀತಾರಾಮ ರಾಜು ಅವರಂತಹ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟವನ್ನು ದೇಶದ ಪ್ರತೀ ಮೂಲೆಯಲ್ಲಿ ಜೀವಂತವಾಗಿ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಿ ಅವರು, ಭಾರತೀಯ ಮಹಿಳೆಯರಾದ ರಾಣಿ ಲಕ್ಷ್ಮೀ ಬಾಯಿ, ಝಾಲ್ಕರಿ ಬಾಯಿ, ಕಿತ್ತೂರು ಚೆನ್ನಮ್ಮ, ಬೇಗಂ ಹಝತ್‌ ಮಹಲ್‌ ಅವರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿಯೊಬ್ಬ ಭಾರತೀಯನಿಗೆ ಅವರ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...