ಹೊಸದಿಲ್ಲಿ: ಕುಂಭಮೇಳ ಸಾಂಕೇತಿಕ ಆಚರಣೆಗೆ ಪ್ರಧಾನಿ ಮನವಿ

Source: VB | By S O News | Published on 18th April 2021, 6:18 PM | National News |

ಹೊಸದಿಲ್ಲಿ: ಕೊರೋನ ಸೋಂಕು ಹೆಚ್ಚುತ್ತಿರುವುದರಿಂದ ಹರಿದ್ವಾರದಲ್ಲಿ ಈಗ ನಡೆಯುತ್ತಿರುವ ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ, ಇದರಿಂದ ಕೊರೋನ ವಿರುದ್ಧದ ಹೋರಾಟಕ್ಕೆ ಪ್ರೋತ್ಸಾಹ ದೊರಕುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

'ಕುಂಭಮೇಳದ ಸಾಂಕೇತಿಕ ಆಚರಣೆಯ ಕುರಿತು ಪ್ರಮುಖ ಸಂತರಲ್ಲಿ ಒಬ್ಬರಾಗಿರುವ ಜುನಾ ಅಖಾಡಾದ ಸ್ವಾಮಿ ಅವದೇಶಾನಂದ ಗಿರಿ ಜತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಕುಂಭಮೇಳದ ಎರಡು ಪವಿತ್ರ ಸ್ನಾನದ ವಿಧಿ ನಡೆದಿರುವುದರಿಂದ ಉಳಿದ ಆಚರಣೆ ಸಾಂಕೇತಿಕವಾಗಿರಲಿ ಎಂದು ಮನವಿ ಮಾಡಿಕೊಂಡಿದ್ದೇನೆ' ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ ಅವದೇಶಾನಂದ 'ಪ್ರಧಾನಿ ಮೋದಿಯವರ

ನಂತಿಯನ್ನು ಗೌರವಿಸುತ್ತೇವೆ. ಜೀವಗಳನ್ನು ಉಳಿಸುವುದು ಪವಿತ್ರ ಕಾರ್ಯ. ಪವಿತ್ರಸ್ಥಾನದಲ್ಲಿ ಭಾರೀ ಸಂಖ್ಯೆಯಲ್ಲಿ ಭಾಗವಹಿಸದಂತೆ ಮತ್ತು ಕೊರೋನ ಶಿಷ್ಟಾಚಾರಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ' ಎಂದು ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಜನವರಿ ಮಧ್ಯಭಾಗದಿಂದ ಎಪ್ರಿಲ್ ವರೆಗೆ ನಡೆಯುವ ಕುಂಭಮೇಳವನ್ನು ಈ ಬಾರಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಎಪ್ರಿಲ್ 1ರಿಂದ ಎಪ್ರಿಲ್ 30ರವರೆಗೆ ಸೀಮಿತಗೊಳಿಸಲಾಗಿದೆ. ಕೊರೋನ ಸೋಂಕಿನಿಂದಾಗಿ ಈ ಬಾರಿಯ ಕುಂಭಮೇಳಕ್ಕೆ ಮುಕ್ತಾಯ ಹೇಳಲು ಪ್ರಮುಖ ಅಖಾಡಾಗಳು ನಿರ್ಧರಿಸಿವೆ ಎಂದು ಬುಧವಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಇಂತಹ ಯಾವುದೇ ನಿರ್ಧಾರ ಕೈಗೊಂಡ ಬಗ್ಗೆ ಮಾಹಿತಿಯಿಲ್ಲ. ಕೊರೋನ ಸೋಂಕಿನ ಸಮಸ್ಯೆಯಿಂದ ಈ ಬಾರಿ ಕುಂಭಮೇಳದ ಅವಧಿಯನ್ನು 30 ದಿನಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಮೊಟಕುಗೊಳಿಸಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಹೇಳಿದ್ದಾರೆ.

ಪ್ರತೀ 12 ವರ್ಷಕ್ಕೊಮ್ಮೆ ಗಂಗಾ ನದಿಯ ನಾಲ್ಕು ಯಾತ್ರಾಸ್ಥಳಗಳಾದ ಹರಿದ್ವಾರ, ಉಜೈನಿ, ನಾಶಿಕ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಸರದಿ ಪ್ರಕಾರ ಕುಂಭಮೇಳ ನಡೆಯುತ್ತದೆ. ಈ ಬಾರಿ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಉತ್ಸವ ಕುಂಭಮೇಳದಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶದ ಸಂತ, ಮಹಾನಿರ್ವಾಣಿ ಅಖಾಡಾದ ಮುಖಂಡ ಸ್ವಾಮಿ ಕಪಿಲ್‌ದೇವ್ ಕೊರೋನ ಸೋಂಕಿನಿಂದ ಮೃತಪಟ್ಟಿದ್ದು, ಹಲವರಿಗೆ ಸೋಂಕು ದೃಢಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೂ ಸೋಂಕು ದೃಢಪಟ್ಟಿದೆ.

ಕುಂಭಮೇಳದಿಂದ ಹಿಂದಿರುಗಿದವರು ಪ್ರಸಾದದಂತೆ ಕೊರೋನ ಹಂಚಲಿದ್ದಾರೆ  : ಮುಂಬೈ ಮೇಯರ್‌

ಹೊಸದಿಲ್ಲಿ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡವರು ತಮ್ಮ ರಾಜ್ಯಗಳಿಗೆ ಮರಳಿ ಕೊರೋನ ಸೋಂಕನ್ನು ಪ್ರಸಾದದಂತೆ ಹಂಚಲಿದ್ದಾರೆ ಎಂದು ಮುಂಬೈ ಮೇಯರ್‌ ಕಿಶೋರಿ ಪೆಡೇಕರ್ ಹೇಳಿದ್ದಾರೆ.

ಕುಂಭಮೇಳದಲ್ಲಿ ಪಾಲ್ಗೊಂಡು ಮುಂಬೈಗೆ ಮರಳುವ ಯಾತ್ರಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸುವ ಮತ್ತು ಅದರ ವೆಚ್ಚವನ್ನು ಅವರೇ ಭರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದೇ ರೀತಿ ಆಯಾ ರಾಜ್ಯಗಳೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೇಯರ್‌ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮುಂಬೈ ನಿವಾಸಿಗಳಲ್ಲಿ ಶೇ.95 ಜನರು ಕೊರೋನ ನಿರ್ಬಂಧಗಳನ್ನು ಗೌರವಿಸಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ಶೇ.5ರಷ್ಟು ಮಂದಿ ನಿರ್ಬಂಧಗಳನ್ನು ಉಲ್ಲಂಘಿಸುತ್ತಿರುವುದು ಇತರರಿಗೆ ಸಮಸ್ಯೆಯಾಗಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಮುಂಬೈಯಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಮುಂಬೈಯಲ್ಲಿ ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ 63,729 ಹೊಸ ಸೋಂಕಿನ ಪ್ರಕರಣ ದಾಖಲಾಗಿದ್ದು, 53 ಸಾವು ಸಂಭವಿಸಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 37 ಲಕ್ಷದ ಗಡಿ ದಾಟಿದೆ.

ಜುನಾ ಅಖಾಡಾದಪಾಲಿಗೆ ಕುಂಭಮೇಳ ಅಂತ್ಯ ಅವಧೇಶಾನಂದ

ಹರಿದ್ವಾರ: ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಪ್ರತಿಕ್ರಿಯಿಸಿರುವ  ಜುನಾ ಅಖಾಡಾದ ಮುಖ್ಯಸ್ಥ ಸ್ವಾಮಿ ಅವಧೇಶಾನಂದ ಗಿರಿ, ಜುನಾ ಅಖಾಡಾದ ಪಾಲಿಗೆ ಈ ಬಾರಿಯ ಕುಂಭಮೇಳ ಅಂತ್ಯವಾಗಿದೆ ಎಂದಿದ್ದಾರೆ.

ಕೊರೋನ ವಿರುದ್ಧ ದೇಶದ ಜನತೆಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವರ ವಿಸರ್ಜನೆ ವಿಧಿ ನಡೆಸಿದ್ದೇವೆ. ಇದರರ್ಥ ಜುನಾ ಅಖಾಡಾದ ಪಾಲಿಗೆ ಈ ಬಾರಿಯ ಕುಂಭಮೇಳ ಸಮಾಪ್ತಿಯಾಗಿದೆ ಎಂದು ಸ್ವಾಮಿ ಅವಧೇಶಾನಂದ ಗಿರಿ ಹೇಳಿದ್ದಾರೆ.

ಭಾರತದ ಜನತೆ ಮತ್ತವರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಗಮನಾರ್ಹವಾಗಿ ಹೆಚ್ಚುತ್ತಿರುವ ಕೊರೋನ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ನಾವು ಕುಂಭದ ಎಲ್ಲಾ ದೇವತೆಗಳನ್ನೂ ವಿಸರ್ಜಿಸಿದ್ದೇವೆ. ಹೀಗೆ ಔಪಚಾರಿಕವಾಗಿ ವಿಸರ್ಜಿಸುವ ಮೂಲಕ ಈ ಬಾರಿಯ ಕುಂಭಮೇಳಕ್ಕೆ ಜುನಾ ಅಖಾಡಾ ಮುಕ್ತಾಯ ಹೇಳಿದೆ ಎಂದು ಸ್ವಾಮಿ ಅವಧೇಶಾನಂದ ಗಿರಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದಕ್ಕೂ ಮೊದಲು, ಕುಂಭಮೇಳವನ್ನು ಸ್ಥಗಿತಗೊಳಿಸುವುದಾಗಿ ಎಪ್ರಿಲ್ 17ರಂದು ನಿರಂಜನಿ ಅಖಾಡಾ ಘೋಷಿಸಿತ್ತು. ತಮ್ಮ ಅಖಾಡಾದವರು ಉಳಿದುಕೊಂಡಿದ್ದ ಶಿಬಿರದಲ್ಲಿರುವ ಹಲವರಲ್ಲಿ ಕೊರೋನ ಸೋಂಕಿನ ಲಕ್ಷಣ ಪತ್ತೆಯಾಗಿದೆ ಎಂದು ನಿರಂಜನಿ ಅಖಾಡಾದ ಕಾರ್ಯದರ್ಶಿ ಮಹಂತ ರವೀಂದ್ರ ಪುರಿ ಹೇಳಿದ್ದರು. ಕುಂಭಮೇಳ ಸ್ಥಗಿತಗೊಳಿಸುವ ಹೇಳಿಕೆಗೆ ಇತರ ಅಖಾಡಾಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆ, ಕೊರೋನ ಸೋಂಕಿನಿಂದಾಗಿ ಎದುರಾಗಿರುವ ಸಮಸ್ಯೆಯಿಂದ ಕುಂಭಮೇಳವನ್ನು ಅವಧಿಗೆ ಮೊದಲೇ ಮುಕ್ತಾಯಗೊಳಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹಲವು ಅಖಾಡಾಗಳ ಮುಖ್ಯಸ್ಥರು ಘೋಷಿಸಿದ್ದರು.

ಗುರುವಾರ ಮಹಾ ನಿರ್ವಾಣಿ ಅಖಾಡಾದ ಸ್ವಾಮಿ ಕಪಿಲ್‌ದೇವ್ ದಾಸ್  ಕೊರೋನಸೋಂಕಿನಿಂದ ಮೃತಪಟ್ಟಿದ್ದರು. ಕಪಿಲ್‌ದೇವ್ ದಾಸ್ ಉಳಿದುಕೊಂಡಿದ್ದ ಶಿಬಿರದ ಬಳಿಯೇ 10,000 ಸಂತರು ಹಾಗೂ ಅನುಯಾಯಿಗಳು ಉಳಿದುಕೊಂಡಿದ್ದು, ಇವರೆಲ್ಲರ ಸ್ಯಾಂಪಲ್‌ಗಳನ್ನು ಕೊರೋನಸೋಂಕು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಈ ಘಟನೆಯ ಬಳಿಕ ನಿರಂಜನಿ ಅಖಾಡಾ ಮತ್ತು ಆನಂದ ಅಖಾಡಾಗಳು ಈ ಬಾರಿಯ ಕುಂಭಮೇಳವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದ್ದವು.

ಕುಂಭಮೇಳದ ಸಾಂಕೇತಿಕ ಆಚರಣೆ ಮಾತ್ರ ಮುಂದುವರಿಯಲಿ ಎಂದು ಪ್ರಧಾನಿ ಮೋದಿ ಶನಿವಾರ ವಿನಂತಿಸಿದ ಬೆನ್ನಲ್ಲೇ, ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಉತ್ತರಾಖಂಡದ ಮುಖ್ಯಮಂತ್ರಿ ತೀರಣ್‌ಸಿಂಗ್ ರಾವತ್ ಸಂತರಿಗೆ ಮನವಿ ಮಾಡಿಕೊಂಡಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...