ಎಸ್.ಎಸ್.ಎಲ್.ಸಿ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಯೋಜನೆ ರೂಪಿಸಿ- ದಿನಕರ ಬಾಬು 

Source: so news | By MV Bhatkal | Published on 15th June 2019, 9:37 PM | Coastal News | Don't Miss |

ಉಡುಪಿ : ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 5 ನೇ ಸ್ಥಾನ ಪಡೆದಿದ್ದು, ಮುಂದಿನ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ, ಈಗಿನಿಂದಲೇ ಯೋಜನೆ ರೂಪಿಸಿ, ಕಾರ್ಯೋನ್ಮುಖರಾಗುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.
ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಯೋಜನೆ ರೂಪಿಸುವಂತೆ ಸೂಚಿಸಿದ ಅಧ್ಯಕ್ಷ ದಿನಕರ ಬಾಬು, ಏನು ಕ್ರಮ ಕೈಗೊಳ್ಳುವಿರಿ ಎಂದು ಕೇಳಿದರು, ಈ ಕುರಿತು ಉತ್ತರಿಸಿದ ಡಿಡಿಪಿಐ ಶೇಷಶಯನ ಕಾರಿಂಜ, ಜುಲೈನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರಥಮ ಟೆಸ್ಟ್ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಹಿಂದುಳಿಯುವ ಮಕ್ಕಳಿಗೆ ವಿಶೇಷ ತರಗತಿ ಏರ್ಪಡಿಸಿ ಅವರ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಿದೆ, ಅಲ್ಲದೇ ಡಿಸೆಂಬರ್ ಅಂತ್ಯದ ವೇಳಗೆ ಎಲ್ಲಾ ಪಾಠಗಳನ್ನು ಮುಗಿಸಿ, ಜನವರಿಯಿಂದ ರಿವಿಷನ್ ಮಾಡಲು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಕೋಚಿಂಗ್ ನೀಡಲು ಮತ್ತು ವಿದ್ಯಾರ್ಥಿಗಳಿಗೆ ಮೆಡಿಟೇಷನ್ ಶಿಬಿರ ಆಯೋಜಿಸಲು ಸಹ ಯೋಜನೆ ರೂಪಿಸಿದೆ ಎಂದು ಹೇಳಿದರು.
ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದ ನಂತರ, ಮರು ಅಂಕ ಎಣಿಕೆಯಲ್ಲಿ ಹಲವು ಶಾಲೆಗಳು 100% ಫಲಿತಾಂಶ ದಾಖಲಿಸಿವೆ ಆದರೆ ಇದು ಈಗ ಗಣನೆಗೆ ಬರುವುದಿಲ್ಲ ಎಂದ ಡಿಡಿಪಿಐ, ಈ ವರ್ಷ ಜಿಲ್ಲೆಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮಕ್ಕಾಗಿ 22 ಶಾಲೆಗಳಿಗೆ ಅನುಮತಿ ಸಿಕ್ಕಿದೆ ಎಂದು ಹೇಳಿದರು. 
ಜಿಲ್ಲೆಯಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕುರಿತಂತೆ ಈಗಾಗಲೇ 86% ಪಠ್ಯ ಪುಸ್ತಕ ಬಂದಿದ್ದು, ಜೂನ್ ಅಂತ್ಯ ಅಥವಾ ಜುಲೈ ಪ್ರಾರಂಭದಲ್ಲಿ ಸಮವಸ್ತ್ರ ವಿತರಣೆ ನಡೆಯಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ವಿತರಿಸಲಾಗುತ್ತಿರುವ ಮರಳಿನಲ್ಲಿ ಶೇ. 30 ರಷ್ಟು ಕಲ್ಲು, ಮಣ್ಣಿನಿಂದ ಕೂಡಿದ್ದು, ಮನೆ ನಿರ್ಮಾಣ ಮಾಡುವ ಸಾರ್ವಜನಿಕರು ಜನಪ್ರತಿನಿಧಿಗಳಾದ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ಉತ್ತಮ ಗುಣಮಟ್ಟದ ಮರಳು ನೀಡಲು ಏಕೆ ಸಾಧ್ಯವಿಲ್ಲ ಎಂಬ ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಪ್ರಸ್ತುತ ಜಿಲ್ಲಾಡಳಿತ ಗುರುತಿಸಿರುವ ಪ್ರದೇಶದಲ್ಲಿ ತೆಗೆಯುತ್ತಿರುವ ಮರಳಿನಲ್ಲಿ ಗುಣಮಟ್ಟ ಕಡಿಮೆ ಇದೆ, ಮುಂದೆ ಉತ್ತಮ ಮರಳು ದೊರೆಯುವ ಪ್ರದೇಶಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದರು. 
ಕುಂದಾಪುರ ಮತ್ತು ಪಡುಬಿದ್ರೆಯಲ್ಲಿ ಉತ್ತಮ ಮರಳು ದೊರೆಯಲಿದ್ದು, ಈ ಪ್ರದೇಶಗಳನ್ನು ಗುರುತಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಂತ ಪಡುಬಿದ್ರೆ ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಭತ್ತದ ನಾಟಿ 15 ದಿನ ಮುಂದೆ ಹೋಗಲಿದೆ, ಜಿಲ್ಲೆಯಲ್ಲಿ ಭತ್ತನೆ ಬೀಜದ ದಾಸ್ತಾನು ಇದ್ದು, ಕೊರೆತೆ ಇಲ್ಲ, ಜಿಲ್ಲೆಯಾದ್ಯಂತ ಕೃಷಿ ಅಭಿಯಾನ ಕಾರ್ಯಕ್ರಮದ ಮೂಲಕ ರೈತರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ, ಪ್ರದಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಇದ್ದ ನಿಯಮಗಳನ್ನು ಸರಳಗೊಳಿಸಿದ್ದು, ಎಲ್ಲಾ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು, ಭತ್ತದ ಬೆಳೆ ವಿಮೆ ಮಾಡಲು ಜುಲೈ 31 ಕೊನೆಯ ದಿನವಾಗಿದ್ದು, ರೈತರು ಯೋಜನೆಯ ಪ್ರಯೋಜನ ಪಡೆಯುವಂತೆ ಕೃಷಿ ಇಲಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.
ತೋಟಗಾರಿಕಾ ಇಲಾಖೆ ವತಿಯಿಂದ 94000 ಗಿಡಗಳು ವಿತರಣೆಗೆ ಸಿದ್ದವಿದೆ, ಮಳೆ ವಿಳಂಬದಿಂದ ಪ್ಲಾಂಟೇಶನ್ ಕಾರ್ಯ ಕಡಿಮೆ ಇದೆ, ಅಡಿಕೆ ಮತ್ತು ಕಾಳು ಮೆಣಸು ಬೆಳೆಗೆ ವಿಮಾ ಯೋಜನೆ ಜಾರಿಯಲ್ಲಿದ್ದು, ನೊಂದಣಿಗೆ ಜೂನ್ 30 ಕೊನೆಯ ದಿನಾಂಕವಾಗಿದ್ದು, ರೈತರು ಯೋಜನೆಯ ಪ್ರಯೋಜನ ಪಡೆಯುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ತಿಳಿಸಿದರು. 
ಎಲ್ಲಾ ಪಂಚಾಯತ್ಗಳು ತೆರಿಗೆ ಸಂಗ್ರಹಣೆಯಲ್ಲಿ 100% ಗುರಿ ಸಾಧಿಸುವಂತೆ ತಿಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಪ್ರತಿ ತಿಂಗಳು ನಿಯಮಿತವಾಗಿ ತೆರಿಗೆ ಸಂಗ್ರಹಿಸಿ ಹಾಗೂ ಗ್ರಾಮ ಪಂಚಾಯತ್ ಕಟ್ಟಡಗಳ ಬಾಡಿಗೆ ವಸೂಲಾತಿಯಲ್ಲಿ ಸಹ 100% ಗುರಿ ಸಾಧಿಸುವಂತೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಿರುವ ಮೊಬೈಲ್ ಟವರ್ಗಳ ತೆರಿಗೆಯನ್ನೂ ಸಹ ಕಡ್ಡಾಯವಾಗಿ ಸಂಗ್ರಹಿಸುವಂತೆ ಎಲ್ಲಾ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ವಿವಿಧ ನಿಗಮಗಳ ವತಿಯಿಂದ ನೀಡಲಾಗುತ್ತಿರುವ ವಿದ್ಯುದೀಕರಣ ಯೋಜನೆಗಳ ಕುರಿತಂತೆ ಸಂಬಂದಪಟ್ಟ ನಿಗಮ ಮತ್ತು ಮೆಸ್ಕಾಂ ಇಲಾಖೆಗಳು ಪ್ರತ್ಯೇಕ ಸಭೆ ನಡೆಸಿ, ನಿಖರ ಮಾಹಿತಿಯನ್ನು ನೀಡುವಂತೆ ಸಿಇಓ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಾದ್ಯಕ್ಷೆ ಶೀಲಾ ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಜಿ.ಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...