ನೇರ ಫೋನ್ ಇನ್: ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಪ್ರಶ್ನೆಗಳ ಸುರಿಮಳೆ; ಯಶಸ್ವಿ ವಾರ್ತಾಸ್ಪಂದನ ಕಾರ್ಯಕ್ರಮ

Source: S O News Service | By Office Staff | Published on 22nd January 2020, 8:25 PM | Coastal News |

ಕಾರವಾರ: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬುಧವಾರ ಹಮ್ಮಿಕೊಂಡಿದ್ದ, ವಾರ್ತಾ ಸ್ಪಂದನ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ನೇರವಾಗಿ ಫೋನ್ ಕರೆ ಮಾಡುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಇವುಗಳ ಕುರಿತು ತಮ್ಮಲ್ಲಿರುವ ಸಂದೇಹಗಳನ್ನು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
 ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಜೆಂದ್ರ ಬೇಕಲ್ ಅವರ ನೇತೃತ್ವದ  ತಂಡ, ಸಾರ್ವಜನಿಕರು ದೂರವಾಣಿ ಮೂಲಕ ಮಾಡಿದ ಕರೆಗಳನ್ನು ಸಹಾನುಭೂತಿಯಿಂದ ಆಲಿಸಿ ಪರಿಹಾರಗಳನ್ನು ಕೈಗೊಳ್ಳುವ ಭರವಸೆಗಳನ್ನು ನೀಡಿದರು.

 ಜಿಲ್ಲೆಯ ವಿವಿಧ ಪ್ರದೇಶಗಳಿಂದ 30 ಕ್ಕೂ ಹೆಚ್ಚು ದೂರವಾಣಿ ಕರೆಗಳನ್ನು ಮಾಡಿದ ಸಾರ್ವಜನಿಕರು ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಅಹವಾಲು ತೋಡಿಕೊಂಡರು. ಇದಕ್ಕೆ ಪೂರಕವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಾಳ್ಮೆಯ ಸ್ಪಂದನೆ ನೇರ ಫೋನ್ ಇನ್ ಕಾರ್ಯಕ್ರಮದ ಯಶಸ್ಸಿಗೆ ಅನುವಾಯಿತು. ಏತನ್ಮಧ್ಯೆ ಪತ್ರಕರ್ತರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಿದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಯೋಜನೆಗಳ ಅನುಷ್ಠಾನಕ್ಕೆ ಪೂರಕ ಮಾಹಿತಿ ಲಭ್ಯವಾದಂತಾಯಿತು.

 ಆರಂಭದಲ್ಲಿ ಭಟ್ಕಳದ ರೇಷ್ಮಾ ನಾಯ್ಕ್ ಕರೆ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ವಯೋಮಿತಿಯ ಕುರಿತು ಇರುವ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ವಯೋಮಿತಿ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ವಿದವೆಯರಾಗಿದ್ದರೆ ಆಧ್ಯತೆ ನೀಡಲಾಗುತ್ತದೆ. ಮತ್ತು ಗರಿಷ್ಠ ವಯೋಮಿತಿ 35 ಎಂದು ನಿಗದಿಪಡಿಸಲಾಗಿದ್ದು, ಇದರಿಂದ ವಿದವೆ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಹೊನ್ನಾವರದ ಉಷಾ ಮಡಿವಾಳ ಸಖಿ ಯೋಜನೆ ಕುರಿತು ಮಾಹಿತಿ ಪಡೆದರು.  ಶಿರಸಿಯ ವಿದ್ಯಾ ವೈದ್ಯ, ಅನಸೂಯ ಭಟ್, ಶೋಭಾ ಹಾದಿಮನೆ, ಲಕ್ಷ್ಮೀ ಪ್ರಕಾಶ, ಗಂಗಾ ಗೌಡ, ಕೃಷ್ಣ ಭಟ್, ಭಟ್ಕಳದ ಪದ್ಮಾ ನಾಯ್ಕ್, ಮುಂಡಗೋಡದ ಗಿರಿಜಾ ನಾಯ್ಕ್, ಮಂಜುನಾಥ ಭೋವಿ, ಹೊನ್ನಾವರದ ಗೀತಾ ನಾಯ್ಕ್, ಶೋಭಾ ನಾಯ್ಕ್, ಸೌಮ್ಯಾ ನಾಯ್ಕ್, ಸುಜಾತಾ ನಗರಬಸ್ತಿಕೇರಿ, ಕಾಮಾಕ್ಷಿ ದೇವಾಡಿಗ, ರಾಮ ಗೌಡ, ಸುಶೀಲಾ ನಾಯ್ಕ್, ಭವ್ಯ ಶೇಟ್, ಕಾರವಾರದ ಅಚ್ಯುತ್ ಕುಮಾರ್, ಸುನೀಲ್ ನಾಯ್ಕ್ ಸೇರಿದಂತೇ ಮತ್ತಿತರರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. 
        ಮಹಿಳೆಯರ ಸ್ವೀಕಾರ ಕೇಂದ್ರ, ಮಾತೃಶ್ರೀ ಯೋಜನೆ, ಸಖಿ ಯೋಜನೆ, ದತ್ತು ಮಕ್ಕಳ ಕೇಂದ್ರ, ಮಕ್ಕಳ ರಕ್ಷಣಾ ಘಟಕ, ಅಂಗವಿಕಲ ಕಾರ್ಡ, ಮಹಿಳೆಯರು ಮತ್ತು ಮಕ್ಕಳ ಭಿಕ್ಷಾಟನೆ, ಪೋಕ್ಸೋ ಕಾಯಿದೆ, ಬಾಲನ್ಯಾಯ ಮಂಡಳಿ, ಅನಾಥ ಮಕ್ಕಳಿಗೆ ಶಿಕ್ಷಣ, ಮಾಸಾಶನ, ಬಸ್‍ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹೀಗೆ ಮೊದಲಾದ ವಿಷಯಗಳ ಕುರಿತು ಸಾರ್ವಜನಿಕರ ಪ್ರಶ್ನೆಗಳ ಸುರಿಮಳೆಯಲ್ಲಿ ವಾರ್ತಾಸ್ಪಂದನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು. ಅಷ್ಟೆ ಸಮಪರ್ಕಕವಾಗಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ತಾಳ್ಮೆಯ ಸ್ಪಂದನೆ ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
    ಹೊನ್ನಾವರ ಹಾಗೂ ಹಳಿಯಾಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರುಪಾಕ್ಷಪ್ಪ ಪಾಟೀಲ್, ಲಕ್ಷ್ಮೀ ದೇವಿ ಮತ್ತು ಪರ್ತಕರ್ತರು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದರು.     

Read These Next