ಹೊಸದಿಲ್ಲಿ: ಸತತ ಎಂಟನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Source: VB News | By JD Bhatkali | Published on 17th February 2021, 1:46 PM | National News |

ಹೊಸದಿಲ್ಲಿ: ಸತತ ಎಂಟನೇ ದಿನವಾದ ಮಂಗಳವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆ ಕಂಡಿರುವಂತೆ ಭಾರತದಲ್ಲಿಯೂ ತೈಲ ಬೆಲೆಗಳು ಏರುತ್ತಲೇ ಇದ್ದು ಮಂಗಳವಾರ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 35 ಪೈಸೆಯಷ್ಟು ಏರಿಕೆಯಾಗಿದ್ದರೆ ಪೆಟ್ರೋಲ್ ಬೆಲೆ ಲೀಟರ್‌ಗೆ 30 ಪೈಸೆಯಷ್ಟು ಏರಿಕೆ ಕಂಡಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 89.29 ಆಗಿದ್ದರೆ ಡೀಸೆಲ್ ಬೆಲೆ ರೂ. 79.70 ಆಗಿದೆ.

ಕಳೆದ ಏಳು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 2.36ರಷ್ಟು ಏರಿಕೆ ಕಂಡಿದ್ದರೆ ಡೀಸೆಲ್ ಬೆಲೆ ರೂ. 2.91ರಷ್ಟು ಏರಿಕೆ ಕಂಡಿದೆ. ದೇಶದಾದ್ಯಂತ ಆಯಾ ರಾಜ್ಯ ಸರಕಾರಗಳ ತೆರಿಗೆ ಪ್ರಮಾಣದ ಅನುಸಾರ ಪೆಟ್ರೋಲ್ ದರಗಳು ಇಂದು 26ರಿಂದ 32 ಪೈಸೆಯಷ್ಟು ಹಾಗೂ ಡೀಸೆಲ್ ಬೆಲೆ 30ರಿಂದ 35 ಪೈಸೆಯಷ್ಟು ಏರಿಕೆ ಕಂಡಿದೆ.

ಮುಂಬೈಯಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ತಲುಪಲು ಇನ್ನು ಕೇವಲ ರೂ. 4 ಮಾತ್ರ ಬಾಕಿಯಿದೆ. ಸದ್ಯ ಅಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 95.75ರಷ್ಟಿದ್ದರೆ ಡೀಸೆಲ್ ಬೆಲೆ ರೂ. 86.72ರಷ್ಟಿದೆ. ಪ್ರೀಮಿಯಂ ಪೆಟ್ರೋಲ್ ಬೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ಲೀಟರ್‌ಗೆ ರೂ.100ರ ಗಡಿ ದಾಟಿದೆ.

ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 63.5 ಡಾಲರ್ ತಲುಪಿದೆ. ಈ ವರ್ಷ ಇಲ್ಲಿಯ ತನಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 20 ಬಾರಿ ಏರಿಕೆ ಕಂಡಿದ್ದು ಈ ವರ್ಷದ ಆರಂಭದಿಂದ ಇಲ್ಲಿಯ ತನಕ ಎರಡೂ ಇಂಧನಗಳ ಬೆಲೆ ಕ್ರಮವಾಗಿ ರೂ. 5.58 ಹಾಗೂ ರೂ. 5.83ರಷ್ಟು ಏರಿಕೆಯಾಗಿದೆ.

Read These Next

ಗೋಕರ್ಣ ಮಹಾಬಲೇಶ್ವರ ದೇವಾಲಯದ ಹೊಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ. ರಾಮಚಂದ್ರಪುರ ಮಠಕ್ಕೆ ಹಿನ್ನಡೆ.

ನವದೆಹಲಿ : ‌ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಪುರಾಣ ಪ್ರಸಿದ್ದ ಶ್ರೀ ಮಹಾಬಲೇಶ್ವರ ದೇವಾಲಯವನ್ನ ಸುಪ್ರೀಂಕೋರ್ಟ್ ನಿವೃತ್ತ ...

ಪಶ್ಚಿಮಬಂಗಾಳ: ರೋಡ್‌ ಶೋನಲ್ಲಿ ಸೇರಿದ ಭಾರೀ ಜನಸ್ತೋಮ; ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ; ಮೋದಿ

ಪಶ್ಚಿಮಬಂಗಾಳದ ಅಸ್ಸನ್‌ಸೋಲ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜನಸಂದಣಿಗೆ ಶ್ಲಾಘನೆ ...