ಸೊನಾರಕೇರಿ ವಸತಿ ನಿಲಯದಲ್ಲಿ ಕೋವಿಡ್ ಚಿಕಿತ್ಸೆಗೆ ವಿರೋಧ

Source: so news | Published on 1st July 2020, 1:02 PM | Coastal News | Don't Miss |


ಭಟ್ಕಳ: ಜಿಲ್ಲಾಡಳಿತದ ಆದೇಶದಂತೆ, ಪತ್ತೆಯಾಗುವ ಲಕ್ಷಣವಿಲ್ಲದ ಕೋವಿಡ್ ಸೋಂಕಿತರಿಗೆ ಆಯಾ ತಾಲೂಕಾ ವ್ಯಾಪ್ತಿಯಲ್ಲಿಯೇ ಇನ್ಮುಂದೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಹೃದಯ ಭಾಗವಾದ ಸೋನಾರಕೇರಿ ಸರ್ಕಾರಿ ಹಾಸ್ಟೆಲ್ ಅನ್ನು ಆಸ್ಪತ್ರೆಯಂತೆ ಪರಿಗಣಿಸಿ, ಸೋಂಕಿತರು ದಾಖಲಿಸಿ ಚಿಕಿತ್ಸೆ ನೀಡಲು ತಾಲೂಕಾಡಳಿತ ಮುಂದಾಗಿದೆ.

ಇದಕ್ಕೆ ಇಲ್ಲಿನ ವಿ.ಟಿ.ರೋಡ್, ಸೋನಾರಕೇರಿ, ಆಸರಕೇರಿ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿ, ಹಾಸ್ಟೆಲ್ ನ ರಸ್ತೆಗೆ ಬ್ಯಾರಿಕೇಡ್ ಹಾಕಿ ಪ್ರತಿಭಟಿಸಿದರು. ಕೋವಿಡ್ ಸೋಂಕಿತರನ್ನು ಸೋನಾರಕೇರಿ ಸರಕಾರಿ ಹಾಸ್ಟೆಲ್ ಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದ ಸ್ಥಳೀಯರು ಹಾಸ್ಟೆಲ್ ಗೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ನಿಂತು ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ಸಿಪಿಐ ದಿವಾಕರ್, ಕೋವಿಡ್ ಸೋಂಕಿತರನ್ನು ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಸ್ಥಳಾಂತರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿಲು ಯತ್ನಿಸಿದರು. ಆದರೂ ಪ್ರತಿಭಟನಾಕಾರರು ಜಗ್ಗದೆ, ಸೋಂಕಿತರ ಸ್ಥಳಾಂತರದಿಂದ ನಾಳೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ನಂತರ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಭರತ್ ಎಸ್., ಸದ್ಯ ಸೋಂಕಿತರಿರುವವರು ಕಡಿಮೆ ಪ್ರಮಾಣದ ಲಕ್ಷಣಗಳಿದ್ದವರಾಗಿದ್ದು, ಅವರ ಬಗ್ಗೆ ಸಂಪೂರ್ಣ ನಿಗಾ ವಹಿಸಲಿದ್ದೇವೆ. ಒಂದಾನುವೇಳೆ ರೋಗ ಲಕ್ಷಣ ಹೆಚ್ಚಿದ್ದಲ್ಲಿ ತಾಲೂಕಾಸ್ಪತ್ರೆಗೆ ಹಾಗೂ ನಂತರ ಕಾರವಾರ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಿದ್ದೇವೆ ಎಂದು ಭರವಸೆ ನೀಡಿದರು.

ಸ್ಥಳೀಯ ಪ್ರತಿಭಟನಾಕಾರರು ಮಣಿಯದೇ ಇದ್ದ ವೇಳೆ ಎ.ಎಸ್‌.ಪಿ. ನಿಖಿಲ್ ಬಿ‌. ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದು, ಇಷ್ಟು ದಿನ ಲಾಕ್ ಡೌನ್ ಸಮಯದಲ್ಲಿ ತಾಲೂಕಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡು ಕೊರೋನಾ ನಿಯಂತ್ರಣ ಮಾಡಿರುವ ಬಗ್ಗೆ ನಿಮಗೆಲ್ಲರಿಗೂ ವಿಶ್ವಾಸವಿದೆ. ಈಗ ಬಂದ ಸೋಂಕಿತರ ಮೇಲೆ ಪೊಲೀಸ್ ಹೆಚ್ಚಿನ ನಿಗಾ ವಹಿಸಲಿದ್ದು, ಒಂದು ಡಿ.ಎ.ಆರ್. ವಾಹನ ಸಹಿತ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಕಣ್ಗಾವಲು ಮಾಡಲಿದ್ದೇವೆ. ಇನ್ನು ಸೋನಾರಕೇರಿ ಸರಕಾರಿ ಹಾಸ್ಟೆಲ್ ಅಧಿಕಾರಿಗಳಿಗೆ ಸಮೀಪವಿದ್ದು, ಏನಾದರು ಸಮಸ್ಯೆಯಾದಲ್ಲಿ ತಕ್ಷಣಕ್ಕೆ ಬಂದು ಗಮನಿಸಲು ಸಾದ್ಯವಾಗಲಿದೆ. ಹಾಗೂ ಸೋಂಕಿತರಿಗೆ ನೀಡಬೇಕಾದ ಎಲ್ಲಾ ವ್ಯವಸ್ಥೆ ಹಾಗೂ ಪರೀಕ್ಷೆಯ ನಡೆಯುವ ದಿನದಂದು ಹೆಚ್ಚಿನ ಸಿಬ್ಬಂದಿ ನೇಮಿಸಲಿದ್ದೇವೆ ಎಂದು ಭರವಸೆ ನೀಡಿದರು.

ಈ ಮಧ್ಯೆ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳ ಹೈಡ್ರಾಮಾ ಒಂದು ಕಡೆ ಆದರೆ ಅತ್ತ ಕಡೆ ರಸ್ತೆಯ ಎರಡು ಕಡೆ ಸರಕಾರಿ ಆಸ್ಪತ್ರೆ ಅಂಬ್ಯುಲೆನ್ಸ್ ಹಾಗೂ 108 ಅಂಬ್ಯುಲೆನ್ಸ್ ನಲ್ಲಿ ಸೋಂಕಿತರನ್ನು ಕರೆ ತರಲಾಗಿದ್ದು, ಸಾಕಷ್ಟು ಹೊತ್ತು ಕಾದು ಕಾದು ಕೊನೆಗೂ ಅಧಿಕಾರಿಗಳ ಭರವಸೆಗೆ ಸ್ಥಳೀಯ ಮುಖಂಡರು ಮಣಿದು ಬಂದ ದಾರಿಗೆ ವಾಪಸ್ಸು ತೆರಳಿದರು‌. ನಂತರ ಕೋವಿಡ್ ಸೋಂಕಿತರನ್ನು ಅಂಬ್ಯುಲೆನ್ಸ್ ನಲ್ಲಿ ಹಾಸ್ಟೆಲ್ ಗೇಟ್ ಬಳಿ ಕರೆ ತಂದು ಬಿಡಲಾಗಿದ್ದು, ನಂತರ ಎಲ್ಲಾ ಸೋಂಕಿತರು ಒಬ್ಬೊಬ್ಬರಾಗಿ ಹಾಸ್ಟೆಲ್ ಒಳಗೆ ತೆರಳಿದರು

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...