ವಿದ್ಯೆ ಮತ್ತು ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು-ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

Source: sonews | By Staff Correspondent | Published on 15th December 2019, 7:08 PM | Coastal News | Don't Miss |

•    ಮುರುಢೇಶ್ವರ  ಜನತಾವಿದ್ಯಾಲಯ ಪ್ರೌಢಶಾಲೆಯಲ್ಲಿ ಸುವರ್ಣ ಮಹೋತ್ಸವ ಸಮಾರಂಭ

ಭಟ್ಕಳ: ವಿದ್ಯೆಯು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ. ಆದರೆ ಇಂದಿನ ವಿದ್ಯೆ, ಡಿಗ್ರಿ, ಇವ್ಯಾವುವೂ ಕೂಡಾ ಶಾಂತಿ ನಮ್ಮೆದಿಯನ್ನು ಕೊಡಲಾರವು ಎಂದು ಉಜಿರೆಯ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. 

ಅವರು ಇಲ್ಲಿನ ಮುರ್ಡೇಶ್ವರದ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಅಂಕೋಲದ ಕೆನರಾ ಎಜ್ಯುಕೇಶನ್ ಟ್ರಸ್ಟ್ ಜಂಟಿಯಾಗಿ ಎರ್ಪಡಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. 

ನಮ್ಮ ವಿದ್ಯೆಯು ಸಂಸ್ಕಾರಯುತ, ದೇಶ ಕಟ್ಟುವ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ವಿದ್ಯೆಯು ಸಾರ್ಥಕ್ಯವನ್ನು ಪಡೆಯುತ್ತದೆ.  ಕೇವಲ ಅಂಕಗಳ ಹಿಂದೆ ಓಡುವ ನಮ್ಮ ಶಿಕ್ಷಣ ಇಲಾಖೆ ಹಾಗೂ ಪಾಲಕರು ಎಂದೂ ಮಕ್ಕಳ ಭವಿಷ್ಯದ ಜೀವನದ ಕುರಿತು ಚಿಂತಿಸುತ್ತಿಲ್ಲ. ಪ್ರತಿ ವಿಷಯದಲ್ಲಿಯೂ ಕೂಡಾ 100ಕ್ಕೆ 100  ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಕರ, ಪಾಲಕರ ಮನ ತಣಿಸಿದರೆ ಅದುವೇ ಸಂತೋಷ ಎನ್ನುವ ಮನಸ್ಥಿತಿಯಲ್ಲಿ ನಾವಿದ್ದೇವೆ ಎಂದ ಅವರು ನಮ್ಮ ಶಿಕ್ಷಣದಲ್ಲಿಯ ದೋಷದಿಂದಾಗಿ ಇಂದು ದೇಶದಲ್ಲಿ ಗೊಂದಲಗಳು, ಅವಘಡಗಳು ಸಂಭವಿಸುತ್ತಿವೆ. ಇಂದಿನ ಶಿಕ್ಷಣ ಪದ್ಧತಿಯು ಸಮಾಜಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದೂ ಅವರು ಹೇಳಿದರು. 

ಶಿಕ್ಷಣ ಇಲಾಖೆ ಕೇವಲ ಮಕ್ಕಳ ಅಂಕಗಳನ್ನು ಹೆಚ್ಚು ಮಾಡುವಂತೆ ಸುತ್ತೋಲೆಗಳನ್ನು ಹೊರಡಿಸುತ್ತದೆಯೇ ವಿನಹ ಅವರಿಗೆ ಸಂಸ್ಕಾರ ಕಲಿಸುವಂತೆ ಎಂದೂ ಸುತ್ತೋಲೆ ಹೊರಡಿಸುವುದಿಲ್ಲ.  ಶಿಕ್ಷಕರೂ ಕೂಡಾ ಸಂಸ್ಕಾರ ಭರಿತ ಶಿಕ್ಷಣವನ್ನು, ಪ್ರತಿ ವಿದ್ಯಾರ್ಥಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎನ್ನುವ ಕುರಿತು ಚಿಂತಿಸದೇ ಅಂಕಗಳ ಹಿಂದೆ ಹೋಗುತ್ತಿದ್ದಾರೆ. ಕೇವಲ ಪಠ್ಯಕ್ರಮವನ್ನು ಮುಗಿಸುವುದಷ್ಟೇ ನಮ್ಮ ಕೆಲಸ ಎಂದು ಶಿಕ್ಷಕರು ತಿಳಿದು ಕೊಂಡಿದ್ದರೆ ಅದು ತಪ್ಪು, ಮಕ್ಕಳಿಗೆ ನೈತಿಕ ಶಿಕ್ಷಣದೊಂದಿಗೆ ನಮ್ಮ ರಾಷ್ಟ್ರ ಪುರುಷರ ಜೀವನ ಚರಿತ್ರೆಯನ್ನು ಹೇಳುವ ಮೂಲಕ ಅವರ ಮನಸ್ಸಿನಲ್ಲಿ ತಾವೂ ಆದರ್ಶ ವ್ಯಕ್ತಿಯಾಗಬೇಕು ಎನ್ನುವ ಭಾವನೆ ಮೊಳಕೆಯೊಡೆಯುವಂತೆ ಮಾಡುವುದು ಮುಖ್ಯ ಎಂದರು. 

ಓರ್ವ ಉತ್ತಮ ಶಿಕ್ಷಕ ಮೂರು ತಾಸು ನಿರಂತರವಾಗಿ ಪಾಠ ಮಾಡಿದರೂ ಕೂಡಾ ವಿದ್ಯಾರ್ಥಿಗಳ ಆಸಕ್ತಿ ಕುಂದುವುದಿಲ್ಲ. ಆದರೆ ಕಲಿಸುವ ಪಾಠದಲ್ಲಿ ಹುರುಳಿಲ್ಲವಾದರೆ ವಿದ್ಯಾರ್ಥಿಗಳು ಪಾಠವನ್ನಾದರೂ ಹೇಗೆ ಕೇಳುತ್ತಾರೆ ಎಂದ ಅವರು ಶಿಕ್ಷಕರು ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವ ಕೆಲಸ ಮಾಡಬೇಕು. ತಾನು ತನ್ನ ತಂದೆ-ತಾಯಿ, ಸುತ್ತಮುತ್ತಲಿನ ಪರಿಸರ, ನೆರೆಹೊರೆಯನ್ನು ಪ್ರೀತಿಯಿಂದ ಕಾಣುವಂತಹ ವಿದ್ಯಾರ್ಥಿಗಳನ್ನು ಶಿಕ್ಷಣ ಸಮಾಜಕ್ಕೆ ಕೊಡಬೇಕಾಗಿದೆ ಎಂದೂ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. 

ಇಂದಿನ ವಿಕಾರವಾದ ವರ್ತನೆಗೆ ನಮ್ಮ ಸರಕಾರಗಳೇ ಕಾರಣ ಎಂದು ನೇರವಾಗಿ ಆರೋಪಿಸಿದ ಸ್ವಾಮೀಜಿ ಅನೇಕ ಜಾಹೀರಾತುಗಳನ್ನು ನಾವು ನೋಡುತ್ತೇವೆ. ಅವುಗಳನ್ನು ಅನಗತ್ಯ ಅಶ್ಲೀಲತೆಯನ್ನು ತುಂಬಲಾಗುತ್ತದೆ. ಒಂದು ಬಟ್ಟೆ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಚಿನ್ನ ಹೀಗೆ ಯಾವುದೋ ಒಂದು ವಸ್ತುವನ್ನು ಪ್ರಚಾರ ಪಡಿಸುವಾಗಲೂ ಅಶ್ಲೀಲತೆಯ ಅಗತ್ಯವಿದೆಯೇ ಇದನ್ನು ಸರಕಾರ ನಿರ್ಬಂಧಿಸಬೇಕು ಎಂದೂ ಅವರು ಆಗ್ರಹಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ಹಾಗೂ ಶಾಲೆಗೆ ಭೋಜನ ಶಾಲೆಯನ್ನು ಕಟ್ಟಿಸಿಕೊಟ್ಟ ಮಂಕಾಳ ಎಸ್. ವೈದ್ಯ, ಕೆನರಾ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ್, ಕಾರ್ಯದರ್ಶಿ ಕೆ.ವಿ.ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ನಾಯ್ಕ, ಸಾಹಿತಿ ಹಾಗೂ ಟ್ರಸ್ಟ್ ಧರ್ಮದರ್ಶಿ ವಿಷ್ಣು ನಾಯಕ, ಮುಖ್ಯಾಧ್ಯಾಪಕ ಟಿ.ಡಿ.ಲಮಾಣಿ, ಚಿತ್ರಕೂಟದ ಗುರೂಜಿ, ಹಿರಿಯರಾದ ಜೆ.ಎನ್.ನಾಯ್ಕ, ಜಿ.ಪಂ.ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಸುಬ್ರಾಯ ನಾಯ್ಕ ಕಾಯ್ಕಿಣಿ ಮುಂತಾದವರು ಉಪಸ್ಥಿತರಿದ್ದರು. 

ಇದಕ್ಕೂ ಪೂರ್ವ ಸ್ವಾಮೀಜಿವರು ಹಳೆ ವಿದ್ಯಾರ್ಥಿಗಳು ಕೊಡಮಾಡಿದ ಸ್ವಾಗತ ಕಮಾನು, ದಿನಕರ ಸಭಾ ಭವನ, ಮಂಕಾಳ ವೈದ್ಯರ ಕೊಡುಗೆಯಾದ ಊಟದ ಹಾಲ್ ಇವುಗಳನ್ನು ಉದ್ಘಾಟಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...