ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಹಮ್ಮಿಕೊಳ್ಳಲಾದ "ಕೃಷಿಯೆಡೆಗೆ ನಮ್ಮ ನಡಿಗೆ @ ಜಿಕೆವಿಕೆ" ಕಾರ್ಯಕ್ರಮವನ್ನು ಇಂದು ಜಿ.ಕೆ.ವಿ.ಕೆ. ಕೃಷಿ ಆವರಣದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಸಾರ್ವಜನಿಕ ಸಂಸ್ಥೆಯಾಗಿದ್ದು ನಿರಂತರವಾಗಿ ಸಂಶೋಧನೆಗಳು ಹಾಗೂ ರೈತ ಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ೧೯೬೩ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಹಾಗೂ ಹಳೆಯ ಕೃಷಿ ವಿಶ್ವವಿದ್ಯಾನಿಲಯವಾಗಿದ್ದು, ರಾಜ್ಯದ ಕೃಷಿ ಅಭಿವೃದ್ಧಿಗೆ ಮೊದಲ ಭೂಮಿಕೆ ಕಲ್ಪಿಸಿಕೊಟ್ಟ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಹೃದಯ ಭಾಗದಲ್ಲಿ ೧೩೨೦ ಎಕರೆ ವಿಶಾಲವಾದ ಹಸಿರು ಆವರಣವನ್ನು ಹೊಂದಿದ್ದು, ವಿಭಿನ್ನ ಜಾತಿಯ ಗಿಡ ಮರಗಳು, ಬೆಳೆ/ಬೆಳೆ ಪದ್ಧತಿಗಳು, ಪಕ್ಷಿ ಸಂಕುಲಗಳನ್ನು ಹೊಂದಿರುವ ಅಪರೂಪದ ಜೀವ ವೈವಿಧ್ಯತೆಯ ತಾಣವಾಗಿಯೂ ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ರೈತರಲ್ಲಿ ಅರಿವು ಮೂಡಿಸಲು ಕೃಷಿಯಡೆಗೆ ನಮ್ಮ ನಡಿಗೆ ಉತ್ತಮ ವೇದಿಕೆಗೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಜೈವಿಕ ವೈವಿಧ್ಯತೆಯ ಅರಿವಿಗೆ ಸಹಕಾರಿಯಾಗಿದೆ. ಈ ನಡಿಗೆಯು ನಗರ ಪ್ರದೇಶದ ವಾಸಿಗಳಿಗೆ ಗ್ರಾಮೀಣ ಸೊಗಡಿನ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ಉಳುಮೆ, ಬಿತ್ತನೆ, ತೂರುವುದು, ನರ್ಸರಿ ತಾಂತ್ರಿಕತೆಗಳು, ಪಶುಸಂಗೋಪನೆ, ಕುರಿ - ಮೇಕೆ ಸಾಕಣೆ, ಹಂದಿ ಸಾಕಣೆ, ಕೋಳಿ ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ, ಎತ್ತಿನಗಾಡಿ ಸವಾರಿ, ಜಲ ಕೃಷಿ ಮತ್ತು ರಾಶಿ ಪೂಜೆ ಬಗ್ಗೆ ಸಂಪೂರ್ಣ ಜ್ಞಾನವನ್ನು ಒದಗಿಸುವುದರ ಜೊತೆಗೆ ಆರೋಗ್ಯದ ವೃದ್ಧಿಗೂ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ಕೃಷಿ ವಿಶ್ವವಿದ್ಯಾನಿಲಯದ ತಾಜ ಉತ್ಪನ್ನಗಳು ರೈತರಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗಲು ಕ್ಷೇತ್ರ ಉತ್ಪನ್ನ ಮಾರಾಟ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕರಾದ ಹೆಚ್. ಎಸ್. ಶಿವರಾಮು, ಆಡಳಿತ ಮಂಡಳಿ ಸದಸ್ಯರಾದ ಡಾ. ಎಂ. ಚಂದ್ರೇಗೌಡ, ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ. ಎ. ಪಿ. ಮಲ್ಲಿಕಾರ್ಜುನ ಗೌಡ ಸೇರಿದಂತೆ ೮೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎಂದು ಪ್ರಕಟಣೆ ತಿಳಿಸಿದೆ.