ಹೊಸದಿಲ್ಲಿ: ಮಾರುಕಟ್ಟೆ, ಗಿರಿಧಾಮಗಳಲ್ಲಿ ಸುರಕ್ಷಿತ ಅಂತರ ಮರೆತ ಜನತೆ ಮೋದಿ ಕಳವಳ

Source: VB | By S O News | Published on 14th July 2021, 7:42 PM | National News |

ಹೊಸದಿಲ್ಲಿ: ಕೋವಿಡ್-19 ಮೂರನೇ ಅಲೆ ಅಪ್ಪಳಿಸುವ ಭೀತಿಯು ದೇಶವನ್ನು ಕಾಡುತ್ತಿರುವಾಗಲೇ, ಮಾಸ್ಕ್ ಧರಿಸದೆ ಹಾಗೂ ಸುರಕ್ಷಿತ ಅಂತರವಿಲ್ಲದೆ ಗಿರಿಧಾಮಗಳಿಗೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ  ಆತಂಕ ವ್ಯಕ್ತಪಡಿಸಿದ್ದಾರೆ.

ಈಶಾನ್ಯ ಭಾರತದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅವರು ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದರು. ಕೋವಿಡ್-19ನ ಮೂರನೇ ಅಲೆ ಅಪ್ಪಳಿಸುವುದನ್ನು ತಡೆಯಲು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡದಿರುವುದು ಹಾಗೂ ಲಸಿಕೀಕರಣವನ್ನು ಖಾತರಿಪಡಿಸುವಂತಹ ಕೋವಿಡ್-19 ಶಿಷ್ಟಾಚಾರಗಳನ್ನು ಪಾಲಿಸಬೇಕೆಂದು ಪ್ರಧಾನಿ ಕರೆ ನೀಡಿದರು.

ಕೊರೋನ ವೈರಸ್‌ನ ಪ್ರತಿಯೊಂದು ನೂತನ ಪ್ರಭೇದದ ಬಗ್ಗೆಯೂ ಕಣ್ಣಿಡುವಂತೆ ಕರೆ

ಕೋವಿಡ್-19 ಸಾಂಕ್ರಾಮಿ ಕದ ಹಾವಳಿಯಿಂದಾಗಿ ಪ್ರವಾಸೋದ್ಯಮ ಹಾಗೂ ಉದ್ಯಮಗಳ ಮೇಲೆ ತೀವ್ರವಾದ ಪರಿಣಾಮ ವುಂಟಾಗಿರುವುದು ನಿಜವಾದುದಾಗಿದೆ. ಆದರೆ, ಗಿರಿಧಾಮಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್‌ಗಳಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಸರಿಯಲ್ಲವೆಂದು ನಾನು ಒತ್ತಿ ಹೇಳುತ್ತಿದ್ದೇನೆ. ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯನ್ನು ತಡೆಯಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ.

– ನರೇಂದ್ರ ಮೋದಿ, ಪ್ರಧಾನಿ

ನೀಡಿದ ಪ್ರಧಾನಿ ಅವರು ರೂಪಾಂತರಗೊಂಡ ವೈರಸ್ ಜನರಿಗೆ ಹೇಗೆ ಮಾರಕವಾಗುತ್ತಿವೆಯೆಂಬ ಬಗ್ಗೆ ತಜ್ಞರು ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದಾರೆಂದು ಹೇಳಿದರು. ಇಂತಹ ಸನ್ನಿವೇಶದಲ್ಲಿ ಸೋಂಕು ಹರಡುವುದನ್ನು ತಡೆಯುವುದು ಹಾಗೂ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯವೆಂದು ಅವರು ಹೇಳಿದರು. ಕೊರೋನ ಸೋಂಕಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಸುಧಾರಣೆಯನ್ನು ಮುನ್ನಡೆಸಬೇಕಾಗಿದೆ. ಇದಕ್ಕಾಗಿ ಕೇಂದ್ರ ಸಂಪುಟವು 23 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ ಎಂದರು. ಈಶಾನ್ಯ ಭಾರತದ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19 ಪರಿಸ್ಥಿತಿ ತೀರಾ ಆತಂಕಕಾರಿಯಾಗಿದೆ ಎಂದು ಪ್ರಧಾನಿ ತಿಳಿಸಿದರು. ಹಾಗೂ ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯಲು ಕಟ್ಟೆಚ್ಚರ ವಹಿಸುವಂತೆ ಹಾಗೂ ತ್ವರಿತವಾಗಿ ಕಾರ್ಯಾಚರಿಸುವಂತೆ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದರು.
 

Read These Next

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...