ಉತ್ತಮ ನಾಯಕತ್ವಕ್ಕೆ ಸಂಘಟನಾ ಪರ್ವ:ರಾಷ್ಟ್ರ ರಾಜಕಾರಣದಲ್ಲಿ ವಿರೋಧಿಗಳೇ ಇರಬಾರದು ಎಂಬುದೇ ಉದ್ದೇಶ:ಹೆಗಡೆ

Source: S.O. News Service | By MV Bhatkal | Published on 7th July 2019, 7:13 PM | Coastal News | Don't Miss |

ಕುಮಟಾ: ಚುನಾವಣೆ ಸಂದರ್ಭದಲ್ಲಿ ಬೇಕಾಗಬಹುದು ಎಂಬ ಹಮಾಲಿಗಳನ್ನು ಸದಸ್ಯತ್ವ ಅಭಿಯಾನದಲ್ಲಿ ಹುಡುಕುತ್ತಿಲ್ಲ. ಬದಲಾಗಿ ಭವಿಷ್ಯದ ಉತ್ತಮ ನಾಯಕರ ಹುಡುಕಾಟಕ್ಕಾಗಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಆರಂಭಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.

ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ನಡೆದ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಮಾಜಿ ಸೈನಿಕ ಎನ್‌.ಎನ್‌. ಪಟಗಾರ ಜೊತೆ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ ನಿರ್ಮಿಸಿದೆ. ಈ ಅಭಿಯಾನದಲ್ಲಿ ಉತ್ತರಕನ್ನಡ ಜಿಲ್ಲೆಯಿಂದ 4 ಲಕ್ಷ ಜನರ ಸದಸ್ಯತ್ವ ನೋಂದಾಯಿಸುವ ಜವಬ್ದಾರಿ ನಮ್ಮಮೇಲಿದೆ. ಪಕ್ಷದ ತತ್ವ ಸಿದ್ಧಾಂತವನ್ನು ಅರಿತು, ನಾನೊಬ್ಬ ಬಿಜೆಪಿಯ ಸದಸ್ಯ ಎಂದು ಹೆಮ್ಮೆಯಿಂದ ಹೇಳುವ ಮನೋಭಾವನೆಯ ಸದಸ್ಯರು ನಮಗೆ ಬೇಕು. ಈ ಸಂಘಟನೆ ಭವಿಷ್ಯ ರಾಜಕೀಯದ ಬೆಳವಣಿಗೆಗೆ ಮುನ್ನುಡಿಯಾಗಲಿದೆ ಎಂದರು.
ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿಯ ಹಾದಿ ಹಿಡಿಯಬೇಕು. ಆದರೆ ಈಗಿನ ಸರ್ಕಾರ ಜಾತಿ, ಧರ್ಮ ಹಾಗೂ ಗುಂಪು ರಾಜಕೀಯ ಮಾಡುತ್ತಿವೆ. ಅವರ ಸಮ್ಮಿಶ್ರದ ನಿಲುವೇ ಅವರ ಅರಿವಿಗಿಲ್ಲ. ಆದ್ದರಿಂದ ದಿನಕ್ಕೊಂದು ರಾಜಕೀಯದ ನಾಟಕ ಬಯಲಿಗೆ ಬರುತ್ತಿದೆ. ಅವರ ರಾಜಕೀಯದ ತೆವಲಿಗೆ ರಾಜ್ಯದ ಜನತೆ ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ಕಲ್ಪನೆಯ ದರಿದ್ರತೆ ನಮ್ಮ ದೇಶಕ್ಕೆ ಬಡಿದಿತ್ತು. ಆದರೆ ರಾಷ್ಟ್ರದ ಜನತೆಗೆ ಈಗ ಅರಿವಾಗಿದೆ. ಮೋದಿ ನೇತೃತ್ವದ ನಾಯಕತ್ವವನ್ನು ಜನ ಮೆಚ್ಚಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ವಿರೋಧಿಗಳೇ ಇರಬಾರದು ಎಂಬುದು ನಮ್ಮ ಉದ್ದೇಶ. ಹಿಂದೆ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಅಂತರವಿತ್ತು. ಅದನ್ನು ಹೋಗಲಾಡಿಸಲು ಇನ್ನೊಂದು ದಾಪುಗಾಲು ಇಡಲಿದ್ದೇವೆ. ಕೇಂದ್ರ ಸರ್ಕಾರದ ನಡತೆಯಿಂದ ಕೆಲ ದಿನಗಳಲ್ಲಿ ಸೈನಿಕರು ಅಜೇಯ ಶಕ್ತಿಯಾಗಿ ಹೊರಬೀಳಲಿದ್ದಾರೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಪುಂಗಿ ಅಡಗಿದೆ. ರಾಷ್ಟ್ರೀಯ ಅಭಿವೃದ್ಧಿಯ ನಕ್ಷೆಯಲ್ಲಿ ಉತ್ತರಕನ್ನಡವನ್ನು ಬರೆಯಲಾಗಿದೆ. ಅದರ ಫಲವನ್ನು ನೀವೇ ಕಾಣಲಿದ್ದೀರಿ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಭಾರತೀಯರ ಸಾಕ್ಷರತೆ ಹಾಗೂ ಮೋದಿಜಿ ಪ್ರಭಲ ನಾಯಕತ್ವದಿಂದ ಕಾಂಗ್ರೆಸ್‌ ಕಾಲ ಮುಗಿಯುತ್ತಿದೆ. ದೇಶ ಉಳಿಯಲು ಬಿಜೆಪಿ ಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದೆ. ಬಿಜೆಪಿಗೆ ಹೆಮ್ಮೆಯಿಂದ ಬರುವವರನ್ನು ಪಕ್ಷ ಸ್ವಾಗತಿಸುತ್ತದೆ. ಆದರೆ ಪಕ್ಷದ ನಿಷ್ಠೆ ಹಾಗೂ ತತ್ವ, ಸಿದ್ಧಾಂತವನ್ನು ಅನುಸರಿಸಬೇಕು. ಪಕ್ಷಕ್ಕಾಗಿ ನಿಸ್ವಾರ್ಥ ಮನೋಭಾವನೆಯಿಂದ ದುಡಿಯಬೇಕು. ಸದಸ್ಯತ್ವ ಅಭಿಯಾನವನ್ನು ಗ್ರಾಮೀಣ ಮಟ್ಟದಲ್ಲೂ ನಡೆಸಬೇಕು ಎಂದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಸದಸ್ಯತಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಹೆಚ್ಚಾಗಬೇಕು. ಎಲ್ಲ ಧರ್ಮದವರನ್ನೂ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಸಂಸದ ಅನಂತಕುಮಾರ ಹೆಗಡೆಯವರ ಪ್ರಾಮಾಣಿಕ ಪ್ರಯತ್ನದಿಂದ ಕಾರವಾರದಲ್ಲಿ ಸದ್ಯದಲ್ಲೇ ಬೃಹತ್‌ ಅಂತಾರಾಷ್ಟ್ರೀಯ ಬಂದರು ಸ್ಥಾಪನೆಯಾಗಲಿದೆ ಎಂದರು.
ಶಾಸಕ ಸುನೀಲ ನಾಯ್ಕ ಭಟ್ಕಳ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಬಿಜೆಪಿ ಶಾಸಕರ ಮನವಿಗಳಿಗೆ ಕವಡೆ ಕಾಸಿನ ಬೆಲೆ ಸಿಗುತ್ತಿಲ್ಲ. ನಮ್ಮ ಅರ್ಜಿ ಹಾಗೂ ಬೇಡಿಕೆಗಳನ್ನು ತಿಪ್ಪೆಗೆ ಎಸೆಯಲಾಗುತ್ತಿದೆ. ಎಲ್ಲರ ಉತ್ತಮ ಭವಿಷ್ಯಕ್ಕಾಗಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕಿದೆ. ಈ ಸಂಘಟನೆ ಮುಂಬರುವ ತಾ.ಪಂ., ಪ.ಪಂ, ಜಿ.ಪಂ ಸೇರಿದಂತೆ ಎಲ್ಲ ಚುನಾವಣೆಗಳಿಗೂ ಸಹಕಾರಿಯಾಗಲಿದೆ ಎಂದರು.
ಮಾಜಿ ಶಾಸಕ ಸುನಿಲ ಹೆಗಡೆ ಹಳಿಯಾಳ, ರಾಜ್ಯ ವಕ್ತಾರ ಪ್ರಮೋದ ಹೆಗಡೆ ಯಲ್ಲಾಪುರ, ನಿವೃತ್ತ ಸೈನಿಕ ಎನ್‌.ಎನ್‌.ಪಟಗಾರ. ಬಿಜೆಪಿ ಮುಖಂಡ ವಿನೋದ ಪ್ರಭು, ವಿವಿಧ ತಾಲೂಕಿನ ಮಂಡಲಾಧ್ಯಕ್ಷರು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಕ್ಷ್ಮೀ ನಾರಾಯಣ ಹೆಗಡೆಕರ ವಂದೇ ಮಾತರಂ ಹಾಡಿದರು. ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಸ್ವಾಗತಿಸಿದರು. ಎಂ.ಎಸ್‌. ಹೆಗಡೆ ನಿರೂಪಿಸಿದರು. ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಎನ್‌.ಎಸ್‌. ಹೆಗಡೆ ವಂದಿಸಿದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...