ಒಂಟಿ ಮಹಿಳೆಗೆ ಸಹಾಯ ಮಾಡಿದ್ದೇ ತಪ್ಪಾಯ್ತು: ಯುವಕರಿಬ್ಬರಿಗೆ ಕಂಕನಾಡಿ ಪೊಲೀಸರಿಂದ ಥಳಿತ ಆರೋಪ

Source: sonews | By Staff Correspondent | Published on 26th September 2018, 4:36 PM | Coastal News | Incidents | Don't Miss |

ಮಂಗಳೂರು: ಈಗಿನ ಕಾಲದಲ್ಲಿ ಯಾರಿಗಾದರೂ ಸಹಾಯ ಮಾಡೋಕೂ ಮುನ್ನ ನೂರಾರು ಬಾರಿ ಯೋಚನೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಇನ್ನಿಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಉದಾಹರಣೆ. ಹೌದು, ರಾತ್ರಿಯ ವೇಳೆ ಒಂಟಿ ಮಹಿಳೆಗೆ ಸಹಾಯ ಮಾಡಲು ಹೋದ ಇಬ್ಬರು ಪೊಲೀಸರಿಂದ ಅನ್ಯಾಯವಾಗಿ ಒದೆ ತಿಂದಿದ್ದಾರೆ. ಘಟನೆಯಲ್ಲಿ ಕಡಬ ನಿವಾಸಿಗಳಿಬ್ಬರ ಮೇಲೆ ಮಂಗಳೂರು ಕಂಕನಾಡಿ ಪೊಲೀಸರು ಮಫ್ತಿಯಲ್ಲಿ ಬಂದು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. 

ಕಡಬದ ನಿವಾಸಿಗಳಾದ ಜೋಬಿನ್ ಹಾಗು ಶಿರಾಡಿ ವರ್ಗೀಸ್ ಎಂಬವರೇ ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರು. ಜೋಬಿನ್ ಅವರ ಚಿಕ್ಕಪ್ಪ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.  ಹೀಗಾಗಿ ಜೋಬಿನ್ ಮತ್ತು ಅವರ ಸಹೋದರ ವರ್ಗೀಸ್ ಆಸ್ಪತ್ರೆಯಲ್ಲೇ ಕಳೆದ ಒಂದು ವಾರದಿಂದ ಇದ್ದರು. ನಿನ್ನೆ ರಾತ್ರಿ ಮಂಗಳೂರಿನ ಮಿಲಾಗ್ರಿಸ್ ಬಳಿಯಿರೋ ಹೊಟೇಲೊಂದರಲ್ಲಿ ಊಟ ಮುಗಿಸಿ ಆಸ್ಪತ್ರೆಯತ್ತ ಮರಳುತ್ತಿದ್ದರು. ಈ ಸಂದರ್ಭ ಬುರ್ಖಾ ತೊಟ್ಟ ಮಹಿಳೆಯೊಬ್ಬರು ತನ್ನ ಜೋಬಿನ್ ಗೆ ತನ್ನ ಮೊಬೈಲ್ ಕೊಟ್ಟು ಲಾಸ್ಟ್ ಕರೆ ಬಂದ ನಂಬರ್ ತೆಗೆದುಕೊಡುವಂತೆ ವಿನಂತಿಸಿದ್ಧರು. ಹೀಗಾಗಿ ಮಾನವೀಯ ನೆಲೆಯಲ್ಲಿ ಜೋಬಿನ್ ಮೊಬೈಲ್ ನಲ್ಲಿ ಕಾಲ್ ಡೀಟೈಲ್ ಹುಡುಕ್ತಾ ಇದ್ದ ವೇಳೆ ಆಟೋ ರಿಕ್ಷಾದಿಂದ ಇಳಿದ ಮಫ್ತಿಯಲ್ಲಿದ್ದ ನಾಲ್ವರು ಪೊಲೀಸರ ತಂಡ ಏಕಾಏಕಿ ಇಬ್ಬರ ಮೇಲೆ ಮುಗಿಬಿದ್ದಿದೆ. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆಗೆ ಒಯ್ದು ಅಲ್ಲಿ ಇಬ್ಬರ ಬಟ್ಟೆ ಬಿಚ್ಚಿಸಿ ಚಡ್ಡಿಯಲ್ಲಿ ಕೂರಿಸಿ ಹಲ್ಲೆಗೈದಿದ್ದಾರೆ ಎಂದು ಜೋಬಿನ್ ಆರೋಪಿಸಿದ್ದಾರೆ. 

ಅಲ್ಲದೆ ಕುತ್ತಿಗೆಗೆ ಕೈಹಾಕಿ ಮಾಲೆಯನ್ನೂ ಕೂಡ ತುಂಡು ಮಾಡಿದ್ದಾರೆ ಎನ್ನುವ ಆರೋಪವನ್ನು ಜೋಬಿ ಮತ್ತು ವರ್ಗೀಸ್ ಮಾಡಿದ್ದಾರೆ. ಅಲ್ಲದೆ ರಾತ್ರಿ ಇಡೀ ತಮ್ಮ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಇಬ್ಬರು ಯುವಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲಯಾಳಿ ಕ್ರಿಶ್ಚಿಯನ್ ಸಂಘದ ನೇತೃತ್ವದಲ್ಲಿ ಕಂಕನಾಡಿ ಪೊಲೀಸ್ ಠಾಣೆಯೆದುರು ಪ್ರತಿಭಟನೆಯನ್ನೂ ನಡೆಸಲಾಗಿದೆ. ಕೊನೆಗೆ ತಪ್ಪೊಪ್ಪಿಕೊಂಡ ಪೊಲೀಸರು ಪೊಲೀಸ್ ಆಯುಕ್ತರಿಗೆ ವರದಿ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. 
ಅಷ್ಟಕ್ಕೂ ಈ ಘಟನೆಗೆ ಕಾರಣವಾಗಿರುವುದು ಮಂಜೇಶ್ವರ ಮೂಲದ ಮಹಿಳೆಯ ಅಪಹರಣ ಪ್ರಕರಣ ಎನ್ನಲಾಗಿದೆ. ಮಂಜೇಶ್ವರ ಮೂಲದ ಮುಸ್ಲಿಂ ಮಹಿಳೆಯೊಬ್ಬರನ್ನ ಯಾರೋ ಮಂಗಳೂರಿಗೆ ಕರೆದುಕೊಂಡು ಬಂದು ಕಳೆದ ಹಲವು ದಿನಗಳಿಂದ ವೇಶ್ಯಾವಾಟಿಕೆಗೆ ತಳ್ಳಿದ್ದರು. ಮಾತ್ರವಲ್ಲದೆ ಇಬ್ಬರು ಯುವಕರು ಆಕೆಯನ್ನ ಅತ್ಯಾಚಾರ ಕೂಡ ಮಾಡಿದ್ದ ಬಗ್ಗೆ ನಾಗುರಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಜೊತೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಮಹಿಳೆ ತನ್ನನ್ನ ಅತ್ಯಾಚಾರ ಮಾಡಿದ್ಧಾನೆ ಎನ್ನಲಾದ ಯುವಕನಿಗೆ ಕರೆ ಮಾಡುವಂತೆ ಹೇಳಿದ್ದರು. ಆದರೆ ಆತ ತಾನು ಜ್ಯೋತಿ ಕೆಎಂಸಿ, ಅಥೇನಾ ಅಸ್ಪತ್ರೆ ಬಳಿ ಇದ್ದೇನೆ ಎಂದು ಹೇಳಿ ಯಾಮಾರಿಸಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆಯು ನಂಬರ್ ಸಿಗದಾದಾಗ ರಸ್ತೆಯ ಮೂಲಕ ನಡೆದುಕೊಂಡು ಬರುತ್ತಿದ್ದ ಜೋಬಿನ್ ಮತ್ತು ವರ್ಗೀಸ್ ಬಳಿ ನಂಬರ್ ಹುಡುಕಿಕೊಡುವಂತೆ ಹೇಳಿದ್ಧರು. ಅಷ್ಟರಲ್ಲಿ ಇವರೇ ಆರೋಪಿಗಳು ಎಂದು ಬಗೆದ ಪೊಲೀಸರು ಏಕಾಏಕಿ ನುಗ್ಗಿ, ಮಾತನಾಡಲೂ ಅವಕಾಶ ನೀಡದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Read These Next

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...