ಸೇತುವೆ ಕುಸಿತ ಪ್ರಕರಣ; ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮು.ಮಂ. ಸಿದ್ಧರಾಮಯ್ಯ
ಕಾರವಾರ: ಕಾರವಾರ ಮತ್ತು ಸದಾಶಿವಗಢಕ್ಕೆ ಸಂಪರ್ಕ ಕಲ್ಪಿಸುವ ಕಾರವಾರದ ಕೋಡಿಬಾಗ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಕಟ್ಟಲಾಗಿದ್ದ ಹಳೆಯ ಸೇತುವೆ ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು ಪರಿಣಾಮ ಸದಾಶಿವಗಢ ಮತ್ತು ಕಾರವಾರ ನಡುವಿನ ಸಂಪರ್ಕ ಕಡಿತಗೊಂಡು ಎರಡೂ ಬದಿಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ತಮಿಳುನಾಡಿನಿಂದ ಕಲ್ಲಿದ್ದಲು ಇಳಿಸಿ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಲಿ ಟ್ರಕ್ ಕುಸಿತದ ನಂತರ ನದಿಗೆ ಬಿದ್ದಿದೆ. ಟ್ರಕ್ ಚಾಲಕ ಬಾಲ ಮುರ್ಗನ್ ಕ್ಯಾಬಿನ್ ನ ಮುಂಭಾಗದ ಗಾಜನ್ನು ಒಡೆದು ತಪ್ಪಿಸಿಕೊಂಡು ಕ್ಯಾಬಿನ್ನ ಛಾವಣಿಯ ಮೇಲೆ ಹತ್ತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡವು ಇದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ, ಕರಾವಳಿ ಭದ್ರತಾ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಕೂಡಲೇ ಕಾರ್ಯಪ್ರವೃತ್ತರಾಗಿ ಮುರ್ಗನ್ ರನ್ನು ರಕ್ಷಿಸಿದ್ದಾರೆ.
ಸೇತುವೆ ಕುಸಿತದಿಂದಾಗಿ ಬೇರೇನಾದರೂ ಅನಾಹುತಗಳು ಸಂಭವಿಸಿರಬಹುದು ಎಂಬ ಅನುಮಾನದಿಂದ ಅದನ್ನು ಖಚಿತ ಪಡಿಸಿಕೊಳ್ಳಲು NDRF, SDRF, ಕರಾವಳಿ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದು ಅಂತಹ ಯಾವುದೇ ಅನಾಹುತಗಳು ಜರುಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಎಸ್ಪಿ ಎಂ.ನಾರಾಯಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ನದಿಗೆ ನಿರ್ಮಿಸಿರುವ ನೂತನ ಸೇತುವೆ ಸಂಚಾರ ಪುನರಾರಂಭಿಸಲು ತುರ್ತಾಗಿ ಸ್ಥಿರತೆ ಮತ್ತು ಶಕ್ತಿ ಪ್ರಮಾಣ ಪತ್ರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಇಲಾಖೆಗೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಸೂಚನೆ ನೀಡಿದ್ದಾರೆ.
ಐ.ಆರ್.ಬಿ. ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಸುಮಾರು 39 ವರ್ಷಗಳ ಹಿಂದೆ ಖಾಸಗಿ ಗುತ್ತಿಗೆದಾರ ಕಂಪನಿ ನಿರ್ಮಿಸಿದ ಸೇತುವೆಯು ಉತ್ತರ ಕನ್ನಡ (ಕರ್ನಾಟಕ) ಮತ್ತು ಗೋವಾವನ್ನು ಸಂಪರ್ಕಿಸುತ್ತದೆ. ಸೇತುವೆ ಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ಕಂಪನಿ ಐಆರ್‌ಬಿ ವಿರುದ್ಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ: ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉ.ಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಜಿಲ್ಲೆಯ ಎಲ್ಲ ಸೇತುವೆಗಳು, ರಸ್ತೆಗಳ ಸುರಕ್ಷತೆಯ ಕುರಿತುಖಾರತಿಪಡಿಸಿಕೊಳ್ಳುವಂತೆ ಹಾಗೂ ಯಾವುದೇ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾಗಿ ತಿಳಿದುಬಂದಿದೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ, ಸೇತುವೆ ಕುಸಿದ ಸಂದರ್ಭದಲ್ಲಿ ಗಾಯಗೊಂಡಿರುವ ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣದ ಕಾರ್ಯಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ ಸೇತುವೆಯ ಬಲವತ್ತತೆ ಕುರಿತು ಪರಿಶೀಲನೆಗಾಗಿ ಮತ್ತು ಈ ಪ್ರದೇಶದ ಎಲ್ಲ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕ ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.