ಅಧಿಕಾರಿಗಳು ಗೈರು ಹಾಜರಾಗದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ: ಜಯಶ್ರೀ ಮೊಗೇರ

Source: SO News | By Laxmi Tanaya | Published on 12th September 2020, 7:49 AM | Coastal News | Don't Miss |

ಕಾರವಾರ :  ಜಿಲ್ಲಾ ಹಾಗೂ ತಾಲೂಕು ಪಂಚಾಯತನ ಕೆಡಿಪಿ ಸಭೆಗಳು ಶಾಸನಬದ್ಧ ಸಭೆಗಳಾಗಿದ್ದು, ಇಂತಹ ಸಭೆಗಳಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಗೈರು ಹಾಜರಾಗದೆ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮುತುವರ್ಜಿ ವಹಿಸಿ ಪ್ರಗತಿ ಸಾಧಿಸುವುದು ಅತ್ಯಗತ್ಯವಾಗಿದೆ. ಎಲ್ಲದಕ್ಕೂ ಕೊರೋನಾ ಕಾರಣ ಹೇಳದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಕೋವಿಡ್-19 ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಆಯ್ದ ಇಲಾಖೆಗಳ ಅಧಿಕಾರಿಗಳನ್ನೇ ಸಭೆಗೆ ಕರೆದಿದ್ದರೂ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದು ವಿಷಾದನೀಯವಾಗಿದ್ದು, ಮುಂದಿನ ಯಾವುದೇ ಸಭೆಯಲ್ಲಿ ಕೂಡ ಈ ರೀತಿ ಬೇಜವಾಬ್ದಾರಿಯುತವಾಗಿ ವರ್ತಿಸಬಾರದೆಂದು ಎಚ್ಚರಿಕೆ ನೀಡಿದರು.

 ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಚೈತ್ರಾ ಕೋಠಾರಕರ ಅವರು ಮಾತನಾಡಿ, ಸೆಪ್ಟಂಬರ 5 ರಂದು ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಣ ಇಲಾಖೆಯು ಶಿಷ್ಠಾಚಾರದಂತೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ನಿರ್ಲಕ್ಷ ತೋರಿದ್ದು ಸಮಂಜಸವಲ್ಲ, ಮಾಡಿದ ತಪ್ಪನ್ನು ಕೊರೋನಾ ನೆಪ ಒಡ್ಡದೇ ಜನಪ್ರತಿನಿಧಿಗಳಿಗೆ ಗೌರವ ನೀಡುವ ಕಾರ್ಯವನ್ನು ನಿರ್ವಹಿಸಬೇಕೆಂದರು.

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ನಾಗೇಶ ರಾಯ್ಕರ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ  ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನಿಯಮಿತವಾಗಿ ಕೋವಿಡ್ ಸೆಂಟರ್‍ಗಳಿಗೆ ಭೇಟಿ ನೀಡುವಂತಹ ಕಾರ್ಯನಿರ್ವಹಿಸಬೇಕು. ಅಲ್ಲಿನ ವೈದ್ಯಾಧಿಕಾರಿಗಳು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುವುದರ ಬಗ್ಗೆ ಮೇಲುಸ್ತುವಾರಿ ವಹಿಸಬೇಕು. ಯಾವುದೇ ಇಲಾಖೆಯ ಕಚೇರಿಯಲ್ಲಿ ಕೋವಿಡ್-19 ಕಂಡು ಬಂದರೆ ಅಲ್ಲಿ ಸ್ಯಾನಿಟೈಸರ್ ಯಾರು ಸಿಂಪಡಿಸಬೇಕೆಂಬ ಮಾಹಿತಿ ನೀಡಬೇಕು. ಯಾರಾದರೂ ದೂರವಾಣಿ ಕರೆಗಳನ್ನು ಮಾಡಿದಾಗ ಕರೆಗಳನ್ನು ಸ್ವೀಕರಿಸಿ ಸ್ಪಂದಿಸುವ ಕಾರ್ಯ ಮಾಡಬೇಕು. ಬೇಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಹೇಳಿದರು. 

  ಸಭೆಯಲ್ಲಿ ಪಿಡಬ್ಲ್ಯೂಡಿ ಶಿರಸಿ ಮತ್ತು ಕಾರವಾರ ಪಿಎಂಜಿಎಸ್‍ವೈ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಆರ್‍ಇಡಿ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
  
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡಮನಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಉದಯ ನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...