ಎನ್ಎಸ್ಎ ಅಡಿ ಡಾ.ಕಫೀಲ್ ಖಾನ್ ಬಂಧನ 'ಕಾನೂನುಬಾಹಿರ': ತಕ್ಷಣವೇ ಬಿಡುಗಡೆಗೊಳಿಸಲು ಹೈಕೋರ್ಟ್ ಆದೇಶ

Source: VB News | Published on 1st September 2020, 9:56 PM | National News | Don't Miss |

 

 

ಲಕ್ನೊ: ಪೌರತ್ವ ಕಾಯ್ದೆ(ತಿದ್ದುಪಡಿ) ಅಥವಾ ಸಿಎಎ ವಿರುದ್ಧ ಭಾಷಣ ಮಾಡಿರುವುದಕ್ಕೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಅಡಿ ಉತ್ತರಪ್ರದೇಶದ ವೈದ್ಯ ಡಾ.ಕಫೀಲ್ ಖಾನ್‌ರನ್ನು ಬಂಧಿಸಿರುವುದು 'ಕಾನೂನುಬಾಹಿರ' ಎಂದು ಮಂಗಳವಾರ ಬೆಳಗ್ಗೆ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ತಕ್ಷಣವೇ ಕಫೀಲ್ ಖಾನ್‌ರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ಕಳೆದ ವರ್ಷಾಂತ್ಯದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರುದ್ಧ ಭಾಷಣ ಮಾಡಿದ್ದ ಡಾ.ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಜನವರಿ 29ರಂದು ಗೋರಖ್‌ಪುರದ ವೈದ್ಯ ಖಾನ್‌ರನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರನ್ನು ಅಲಿಗಢದ ಜೈಲಿನಲ್ಲಿ ಇರಿಸಲಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಡಾ.ಖಾನ್ ಅವರು ವಿಶ್ವವಿದ್ಯಾಲಯದ ಶಾಂತಿಯುತ ವಾತಾವರಣವನ್ನು ಕದಡಿದ ಹಾಗೂ ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು.
2017ರಲ್ಲಿ ಗೋರಖ್‌ಪುರದಲ್ಲಿ ಆಮ್ಲಜನಕ ಕೊರತೆಯಿಂದ 60ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಡಾ.ಖಾನ್‌ರನ್ನು ಅಮಾನತುಗೊಳಿಸಿ, ಬಂಧಿಸಲಾಗಿತ್ತು. ಆ ನಂತರ ಉತ್ತರಪ್ರದೇಶ ಸರಕಾರವೇ ಖಾನ್‌ರನ್ನು ಎಲ್ಲ ಪ್ರಮುಖ ಆರೋಪಗಳಿಂದ ಮುಕ್ತಗೊಳಿಸಿತ್ತು.
ಯಾರು ಈ ಡಾ.ಕಫೀಲ್ ಖಾನ್ ?
ಡಾ.ಖಾನ್ ಅವರು ಗೋರಖಪುರದ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕ ಮತ್ತು ಮಿದುಳು ಜ್ವರ ವಾರ್ಡ್‌ನ ನೋಡಲ್ ಅಧಿಕಾರಿಯಾಗಿದ್ದರು. 2017ರಲ್ಲಿ 63 ಮಕ್ಕಳನ್ನು ಬಲಿತೆಗೆದುಕೊಂಡಿದ್ದ ಆಸ್ಪತ್ರೆಯಲ್ಲಿ ಸಂಭವಿಸಿದ್ದ ದುರಂತದ ಸಂದರ್ಭದಲ್ಲಿ ಮಕ್ಕಳ ಜೀವಗಳನ್ನುಳಿಸಲು ಮಾಡಿದ್ದ ಪ್ರಯತ್ನಗಳಿಗಾಗಿ ಡಾ.ಖಾನ್ ಬಗ್ಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿದ್ದವು. ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದ ಈ ಸಾವುಗಳು ಸಂಭವಿಸಿದ್ದು,ವೈದ್ಯಕೀಯ ನಿರ್ಲಕ್ಷ್ಯ ಇದಕ್ಕೆ ಕಾರಣವೆಂದು ದೂರಲಾಗಿತ್ತು. ಆದರೆ ಇದನ್ನು ಉತ್ತರ ಪ್ರದೇಶ ಸರಕಾರವು ನಿರಾಕರಿಸಿದ ಬಳಿಕ 2017, ಆಗಸ್ಟ್‌ನಲ್ಲಿ ಡಾ.ಖಾನ್ ಅವರನ್ನು ಬಂಧಿಸಲಾಗಿತ್ತು. 2019ರಲ್ಲಿ ಅವರು ನ್ಯಾಯಾಲಯದಲ್ಲಿ ತನ್ನ ವಿರುದ್ಧದ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದರು.
ಡಾ.ಖಾನ್ ಈಗೇಕೆ ಜೈಲಿನಲ್ಲಿದ್ದರು ?
ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ 2019, ಡಿ.10ರಂದು ಅಲಿಗಡ್ ಮುಸ್ಲಿಂ ವಿವಿಯಲ್ಲಿ ಭಾಷಣವನ್ನು ಮಾಡಿದ ಬಳಿಕ ಜನವರಿಯಿಂದಲೂ ಡಾ.ಖಾನ್ ಜೈಲಿನಲ್ಲಿದ್ದಾರೆ. ಫೆ.13ರಂದು ಉತ್ತರ ಪ್ರದೇಶ ಸರಕಾರವು ಅವರ ವಿರುದ್ಧ ಎನ್‌ಎಸ್‌ಎ ಹೇರಿತ್ತು. ಆ.16ರಂದು ಎನ್‌ಎಸ್‌ಎ ಅಡಿ ಬಂಧನದ ಅವಧಿಯನ್ನು ಎರಡನೇ ಬಾರಿಗೆ ಮೂರು ತಿಂಗಳು ವಿಸ್ತರಿಸಲಾಗಿತ್ತು.
ಬಂಧನ ಅವಧಿ ವಿಸ್ತರಣೆ ಅಕ್ರಮ ಹೇಗೆ ?
ಎನ್‌ಎಸ್‌ಎ ಅಡಿ ಯಾವುದೇ ವ್ಯಕ್ತಿ ರಾಷ್ಟ್ರೀಯ ಭದ್ರತೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿದ್ದಾನೆ ಎಂದು ಅಧಿಕಾರಿಗಳಿಗೆ ಮನವರಿಕೆಯಾದರೆ ಯಾವುದೇ ಆರೋಪವಿಲ್ಲದೆ ಆ ವ್ಯಕ್ತಿಯನ್ನು 12 ತಿಂಗಳವರೆಗೆ ಬಂಧನದಲ್ಲಿರಿಸಬಹುದು. ಡಾ.ಖಾನ್ ಬಿಡುಗಡೆಯನ್ನು ಕೋರಿ ಅವರ ತಾಯಿ ನುಝ್‌ಹತ್ ಪರ್ವೀನ್ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ದೀಪಕ್ ವರ್ಮಾ ಅವರ ಪೀಠವು ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳಿಗೆ ಆದೇಶಿಸಿತ್ತು. ಡಾ.ಖಾನ್ ಅವರ ಭಾಷಣವು ಪ್ರಚೋದನಕಾರಿಯಾಗಿರಲಿಲ್ಲ ಮತ್ತು ಅವರ ಬಂಧನಕ್ಕೆ ಸಾಕಷ್ಟು ಕಾರಣಗಳಿರಲಿಲ್ಲ ಎಂದು ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನ್ಯಾಯಾಲಯ ಹೇಳಿದ್ದೇನು ?
ದ್ವೇಷ ಅಥವಾ ಅಶಾಂತಿಯನ್ನು ಉತ್ತೇಜಿಸುವ ಯಾವುದೇ ಅಂಶಗಳು ಡಾ.ಖಾನ್ ಭಾಷಣದಲ್ಲಿರಲಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಮತ್ತು ಸೌಮಿತ್ರ ದಯಾಳ ಸಿಂಗ್ ಅವರ ಪೀಠವು, ಭಾಷಣವು ಅಲಿಗಢದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಿರಲಿಲ್ಲ. ಅದು ರಾಷ್ಟ್ರೀಯ ಸಮಗ್ರತೆ ಮತ್ತು ಪ್ರಜೆಗಳ ನಡುವೆ ಏಕತೆಗೆ ಕರೆ ನೀಡಿತ್ತು ಎಂದು ಹೇಳಿದೆ.
ಡಾ.ಖಾನ್ ಬಿಡುಗಡೆಗೆ ಆಗ್ರಹಿಸಿದ್ದ ನಾಗರಿಕ ಸಮಾಜದ ಗುಂಪುಗಳು ಮತ್ತು ಹಲವಾರು ಸೆಲೆಬ್ರಿಟಿಗಳು ಹಲವಾರು ತಿಂಗಳುಗಳಿಂದ ಅಭಿಯಾನವನ್ನು ನಡೆಸುತ್ತಿದ್ದಾರೆ. 2018ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಡಾ.ಖಾನ್ ಅವರ ಕ್ರಿಯಾಶೀಲ ಸಾಮಾಜಿಕ ಕಾರ್ಯಗಳು ಅವರಿಗೆ ಬೆಂಬಲವನ್ನು ಹೆಚ್ಚಿಸಿದ್ದವು ಎಂದು ಕುಟುಂಬಸ್ಥರು ಹೇಳಿದ್ದಾರೆ

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...