ಕೋವಿಡ್ ಸೋಂಕಿತರ ಅಸಹಾಯಕತೆ ದುರುಪಯೋಗ ಬೇಡ ; ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ಬರದಂತೆ ಕರ್ತವ್ಯ ನಿರ್ವಹಿಸಿ : ಸಚಿವ ಜಗದೀಶ ಶೆಟ್ಟರ್ ಮನವಿ

Source: SO News | By Laxmi Tanaya | Published on 1st May 2021, 8:13 AM | State News | Don't Miss |

ಧಾರವಾಡ : ಕೋವಿಡ್-19 ರ ಸೋಂಕು ಹೆಚ್ಚಾಗುತ್ತಿದ್ದಂತೆ ಬಹಳಷ್ಟು ಜನ ತೊಂದರೆಗಳಿಗೆ ಸಿಲುಕಿದ್ದಾರೆ. ಕೆಲವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿ ವೆಚ್ಚ ಭರಿಸಲು ಕಷ್ಟಪಡುತ್ತಿದ್ದಾರೆ. ಅಂತಹವರ ನೆರವಿಗಾಗಿ ಸರ್ಕಾರವು ಉಚಿತ ಚಿಕಿತ್ಸೆ ಹಾಗೂ ಇತರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೆ ಆಸ್ಪತ್ರೆಗಳು ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಮೊತ್ತ ಪಾವತಿಸುವಂತೆ ಕೋವಿಡ್ ಸೋಂಕಿತರ ಹಾಗೂ ಅವರ ಕುಟುಂಬದವರಿಗೆ ಒತ್ತಡ ಹೇರಿ, ಈ ಅಸಹಾಯಕತೆಯ ದುರುಪಯೋಗ ಮಾಡಿಕೊಂಡು ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ತರಬಾರದು ಮತ್ತು ಸರ್ಕಾರವು ಕೋವಿಡ್ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಂಡ ನಿರ್ಧಾರಗಳಿಗೆ ಸಹಕರಿಸಬೇಕೆಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.  

ಧಾರವಾಡದ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೇಮಕಗೊಂಡಿರುವ ನೋಡೆಲ್ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

 ಕೋವಿಡ್ ಸೋಂಕು ಹೆಚ್ಚುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಮಿತ್ರರು ಬಡವರಿಗೆ, ಅಸಹಾಯಕರಿಗೆ ನೆರವಾಗಿ ವೃತ್ತಿ ನಿರ್ವಹಿಸಬೇಕು. ಸರ್ಕಾರವು ಕೈಗೊಂಡಿರುವ ಕ್ರಮಗಳಿಗೆ ಸಹಕಾರ ನೀಡಿ, ವೃತ್ತಿಗೌರವ ಹೆಚ್ಚಿಸಬೇಕು ಎಂದರು.

 ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಕೈಜೋಡಿಸಿದಾಗ ಮಾತ್ರ ಉತ್ತಮ ರೀತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು. 

 ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನವಿದೆ. ಆ ನಂಬಿಕೆಯನ್ನು ಆಪತ್ಕಾಲದಲ್ಲಿ ನೆರವಾಗುವ ಮೂಲಕ ಎಲ್ಲ ವೈದ್ಯರು, ಆಸ್ಪತ್ರೆಗಳು ಉಳಿಸಿಕೊಳ್ಳಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಸಹಕಾರ ನೀಡಲು ಸರ್ಕಾರವು ಜಿಲ್ಲಾಡಳಿತದ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ. ಆಸ್ಪತ್ರೆಗಳು ಬಯಸಿದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತನ್ನು ನೀಡಲು ಸಿದ್ಧರಿದ್ದೇವೆ. ಎಲ್ಲರೂ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮ ವಹಿಸಲು ಪರಸ್ಪರ ಸಹಕಾರದಿಂದ ಕೈಜೋಡಿಸಬೇಕೆಂದು ಸಚಿವರು ಹೇಳಿದರು. 

ಪ್ರತಿ ಖಾಸಗಿ ಆಸ್ಪತ್ರೆ ಶೇ.50 ರಷ್ಟು ಹಾಸಿಗೆ, ಇತರ ಸೌಲಭ್ಯ ಮೀಸಲಿಡುವುದು ಕಡ್ಡಾಯ : ಕೆಪಿಎಂಇ ಕಾಯ್ದೆಯಡಿ ನೋಂದಾಯಿತವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ತಮ್ಮಲ್ಲಿನ ಒಟ್ಟು ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಸರ್ಕಾರಕ್ಕೆ ಮೀಸಲಿಡಬೇಕು. ಮತ್ತು ಐಸಿಯು ಬೆಡ್, ವೆಂಟಿಲೇಟರ್ ಬೆಡ್‍ಗಳಲ್ಲೂ ಶೇ.50 ರಷ್ಟನ್ನು ಮೀಸಲಿಡಬೇಕು. 

 ಆದರೆ ಬಹಳಷ್ಟು ಆಸ್ಪತ್ರೆಗಳು ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲಿಸಿ ಸ್ಪಂಧಿಸಿವೆ. ಆದರೆ ಕೆಲವು ಆಸ್ಪತ್ರೆಗಳು ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳದೇ ತಿರಸ್ಕರಿಸುತ್ತಿರುವುದು ಹಾಗೂ ದಾಖಲಾತಿ ಮಾಡಿಕೊಳ್ಳುವಲ್ಲಿ ನಿಧಾನಗತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. 

 ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಲು ಮೊದಲ ಹಂತದಲ್ಲಿ ಪರಸ್ಪರ ಚರ್ಚೆ, ಮನವಿ ಮಾಡಲಾಗಿದೆ. ಅದಾಗ್ಯೂ ಖಾಸಗಿ ಆಸ್ಪತ್ರೆಗಳ ಸ್ಪಂಧನೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿದ್ದಲ್ಲಿ ಜಿಲ್ಲಾಡಳಿತವು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸಚಿವರು ಎಚ್ಚರಿಸಿದರು.

ಸೋಂಕಿತರ ಚಿಕಿತ್ಸೆಗೆ ಬೆಡ್, ಐಸಿಯು ಬೆಡ್ ಇಲ್ಲ ಅನ್ನುವಂತಿಲ್ಲ: ಕೋವಿಡ್ ಸೋಂಕಿತರ ನೆರವಿಗಾಗಿ ಜಿಲ್ಲಾಡಳಿತವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ವಿವಿಧ ತಂಡಗಳನ್ನು ರಚಿಸಿದೆ. ಪ್ರತಿ ಖಾಸಗಿ ಆಸ್ಪತ್ರೆಗೆ ಜಿಲ್ಲಾಮಟ್ಟದ ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಪ್ರತಿದಿನ ಆಯಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್, ಐಸಿಯು ಬೆಡ್, ವೆಂಟಿಲೇಟರ್‍ಗಳ ಮಾಹಿತಿಯನ್ನು ನೋಡಲ್ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡುತ್ತಾರೆ. ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್‍ಗಳ ಲಭ್ಯತೆಯ ಮಾಹಿತಿ ಹಾಗೂ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸುವಲ್ಲಿ ಸಮನ್ವಯತೆ ಸಾಧಿಸಲು ಜಿಲ್ಲಾಮಟ್ಟದ ಸಹಾಯವಾಣಿಯನ್ನು ಸಹ ಆರಂಭಿಸಲಾಗಿದೆ. 

 ಇನ್ನು ಮುಂದೆ ಯಾವುದೇ ಕೋವಿಡ್ ಸೋಂಕಿತರನ್ನು ರೆಫರಲ್ ಮೂಲಕ ಸರ್ಕಾರವು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದಾಗ ಆ ಆಸ್ಪತ್ರೆಯವರು ಬೆಡ್, ಐಸಿಯು ಬೆಡ್ ಇಲ್ಲ ಎನ್ನುವಂತಿಲ್ಲ. ಒಂದು ವೇಳೆ ಸುಳ್ಳು ಹೇಳಿದರೆ ಆ ಆಸ್ಪತ್ರೆಯ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಜಿಲ್ಲಾಡಳಿತವು ನೇಮಿಸಿರುವ ನೋಡಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಲಭ್ಯವಿರುವ ಬೆಡ್‍ಗಳ ಕುರಿತು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಆಸ್ಪತ್ರೆಗಳು ನಿರ್ಧಿಷ್ಟ ಅಧಿಕಾರಿ ಅಥವಾ ವ್ಯಕ್ತಿಯನ್ನು ನೇಮಿಸಬೇಕು. ಅವರ ಮೂಲಕ ಮಾಹಿತಿಯನ್ನು  ನೀಡಬೇಕೆಂದು ಸಚಿವರು ತಿಳಿಸಿದರು. 

ಬೆಡ್‍ಗಳ ಲಭ್ಯತೆ ನಿರ್ವಹಣೆಗಾಗಿ ಹೆಲ್ಪ್‍ಲೈನ್ : 08047168111 ಆರಂಭ : 

 ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಮತ್ತು ಬೆಡ್‍ಗಳ ಪೂರೈಕೆ ಮಾಡಲು ಜಿಲ್ಲಾಡಳಿತದಿಂದ ನೂತನ ಕ್ರಮ ಕೈಗೊಂಡಿದ್ದು, ಇಂದಿನಿಂದ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ 08047168111 ಸಹಾಯವಾಣಿಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. 

 ಈ ಸಹಾಯವಾಣಿಗೆ ಕೋವಿಡ್ ಸೋಂಕಿತರು, ಸೋಂಕಿತರ ಕುಟುಂಬದವರು ಕರೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿರುವ ಬೆಡ್ ಮಾಹಿತಿಯನ್ನು ಪಡೆಯಬಹುದು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿರುವ ಬೆಡ್‍ಗಳ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರದ ರೆಫರೆಲ್ ಪಡೆಯಲು ಸೋಂಕಿತರ ಆಧಾರಕಾರ್ಡ್ ಮತ್ತು ಕೋವಿಡ್ ಪಾಸಿಟಿವ್ (ಎಸ್‍ಆರ್‍ಐಎಫ್ ಐಡಿ ಸಂಖ್ಯೆ) ವರದಿಯ ಮಾಹಿತಿಯನ್ನು ಹೊಂದಿರಬೇಕು. ಅಂತಹವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. 

 ಬೆಡ್‍ಗಳ ಸಮಸ್ಯೆ ಉಂಟಾಗದಂತೆ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಈಗಾಗಲೇ ಪ್ರತಿ ಖಾಸಗಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಈಗಾಗಲೇ ಪ್ರಕಟಿಸಲಾಗಿದೆ. ಹೆಲ್ಪ್‍ಲೈನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಧಾರವಾಡ ಉಪವಿಭಾಗಾಧಿಕಾರಿಗಳಿಗೆ ಉಸ್ತುವಾರಿ ನೀಡಿ, ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಸಚಿವರು ತಿಳಿಸಿದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...