ಸಂತ್ರಸ್ತರ ಪರಿಹಾರಕ್ಕಾಗಿ ನ್ಯೂಶಮ್ಸ ಸ್ಕೂಲ್ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ 1ಲಕ್ಷ ರೂ ದೇಣಿಗೆ

Source: sonews | By Staff Correspondent | Published on 8th September 2019, 4:21 PM | Coastal News |

ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ಹಾಗೂ ಶಿಕ್ಷಕರು ಸೇರಿ ಇತ್ತಿಚೆಗೆ ಉಂಟಾದ ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ 1,08,530 ರೂ ಹಣವನ್ನು ತಂಝೀಮ್ ನ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲಾಯಿತು. 

ಶನಿವಾರ ಶಾಲಾ ಸಭಾಭವನದಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ತಂಝೀಮ್ ಪ್ರದಾನಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಕೀಬ್ ರಿಗೆ ನಗದು ರೂಪದಲ್ಲಿ ಹಣವನ್ನು ಹಸ್ತಾಂತರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತರಬಿಯತ್ ಎಜ್ಯುಕೇಶನ್ ಸೂಸೈಟಿ ಉಪಾಧ್ಯಕ್ಷ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್, ಕೊಡುವ ಕೈ ಪಡೆಯುವ ಕೈಗಿಂತಲೂ ಶ್ರೇಷ್ಠವಾಗಿದ್ದು ನಾವು ನಮ್ಮ ಕೈಲಾದ ಮಟ್ಟಿಗೆ ಜನರಿಗೆ ಸಹಾಯ ಮಾಡುವುದನ್ನು ಕಲಿತುಕೊಳ್ಳಬೇಕು. ಕೊಡುವ ಕೈಗಳನ್ನು ಸಮಾಜ ಗೌರವಿಸುತ್ತದೆ, ಒಳಿತಿನೆಡೆ ಧಾವಿಸಬೇಕಾದುದು ವಿಶ್ವಾಸಿಯಾದವನ ಕರ್ತವ್ಯವಾಗಿದ್ದು ವಿದ್ಯಾರ್ಥಿಗಳು ಒಳಿತನ್ನು ಮೈಗೂಡಿಸಿಕೊಳ್ಳಬೇಕು, ಉನ್ನತ ಯೋಚನೆಗಳನ್ನಿಟ್ಟುಕೊಳ್ಳಬೇಕು ದೊಡ್ಡ ಕನಸುಗಳನ್ನು ಕಾಣಬೇಕು ದೊಡ್ಡ ಕನಸುಗಳು ನಮ್ಮನ್ನು ದೊಡ್ಡ ದೊಡ್ಡ ಕೆಲಸಗಳಿಗಾಗಿ ಪ್ರೇರೇಪಿಸುತ್ತವೆ ಎಂದ ಅವರು, ಪ್ರವಾದಿ ಮುಹಮ್ಮದ್(ಸ) ರು ಸಮಾಜದ ದುರ್ಬಲರ, ಅಸಹಾಯಕ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದರು ಎಂದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಸೇವಾ ಕಾರ್ಯಕ್ಕೆ ಅಣಿಗೊಳಿಸಲಾಗುತ್ತಿದೆ. ಮುಂಬರುವ ಪೀಳಿಗೆ ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಏಕೈಕ ಉದ್ದೇಶದೊಂದಿಗೆ ಪ್ರತಿಸಲವೂ ದೇಶದ ಹಲವು ಭಾಗಗಳಲ್ಲಿ ಪ್ರಕೃತಿ ವಿಕೋಪಗಳು ನಡೆದಾಗ ನಮ್ಮ ವಿದ್ಯಾರ್ಥಿಗಳು ಉದಾರತೆಯೊಂದಿಗೆ ಧನಸಹಾಯ ನೀಡಿದ್ದಾರೆ. ಬಡವರಿಗೆ ದುರ್ಬಲರಿಗೆ ಉಣಬಡಿಸುವಂತೆ ಕುರ್‍ಆನ್ ಮುಸ್ಲಿಮರಿಗೆ ಉತ್ತೇಜನ ನೀಡುತ್ತದೆ. ಅದೇ ಕಾರ್ಯವನ್ನು ಒಗ್ಗಟ್ಟಾಗಿ ಮಾಡುವಂತೆ ನಾವು ವಿದ್ಯಾರ್ಥಿಗಳನ್ನು ಸಿದ್ದಗೊಳಿಸುತ್ತಿದ್ದೇವೆ. ತಂಝೀಮ್ ಸಂಸ್ಥೆ ಕಳೆದ ನೂರು ವರ್ಷಗಳಿಂದ ತನ್ನನ್ನು ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಇಂದಿಗೂ ಅದು ಮುಂದುವರೆದಿದೆ. 1ಲಕ್ಷಕ್ಕೂ ಅಧಿಕ ಹಣವು ತಂಝೀಮ್‍ನ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡುವುದರ ಮೂಲಕ ನಮ್ಮ ಸಂಸ್ಥೆ ತಂಝೀಮ್ ನ ಕೈಯನ್ನು ಬಲಬಲಪಡಿಸಿದೆ ಎಂದರು. 

ಮಜ್ಲಿಸೆ ಇಸ್ಲಾಹ್ ತಂಝೀಮ್ ಪ್ರಧಾನ ಕಾಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವನೆ ಬೆಳೆಯುತ್ತಿರುವುದು ಶ್ಲಾಘನೀಯವಾಗಿದ್ದು ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ಸಮಾಜದ ಆಧಾರಸ್ಥಂಭಗಳಾಗಿ ಮಾರ್ಪಡುವರು ಎಂದರು. 

ಪ್ರಾಂಶುಪಾಲೆ ಫಹಮಿದಾ ಖೀಝರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಧನ್ಯವಾದ ಅರ್ಪಿಸಿದರು. ಸ್ಕೂಲ್ ಕೌನ್ಸಿಲ್ ನಾಯಕ ನಾದಿರ್ ಇಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ಲಾ ಅರ್ಮಾರ್ ಕುರ್‍ಆನ್ ವಾಚಿಸಿದರು. 

ವೇದಿಕೆಯಲ್ಲಿ ಸಂಸ್ಥೆಯ ಮುಖಂಡರಾದ ಎಸ್.ಎಂ.ಸೈಯ್ಯದ್ ಶಕೀಲ್, ಮುಹಮ್ಮದ್ ಸಲೀಮ್ ಸಾದಾ, ಮೌಲಾನ ಸೈಯ್ಯದ್ ಯಾಸಿರ್ ನದ್ವಿ ಬರ್ಮಾವರ್, ತಂಝೀಮ್ ಉಪಾಧ್ಯಕ್ಷ ಹಾಷಿಮ್ ಮೊಹತೆಶಮ್ ಮತ್ತಿತರರು ಉಪಸ್ಥಿತರಿದ್ದರು. 
 

Read These Next