ಹೊಸದಿಲ್ಲಿ: ನೂತನ ಐಟಿ ನಿಯಮಗಳು: ಸುಪ್ರೀಂ, ಕೇರಳ ಹೈಕೋರ್ಟ್‌ನಲ್ಲಿ ಕೇಂದ್ರ ಸರಕಾರಕ್ಕೆ ಹಿನ್ನಡೆ

Source: VB | By S O News | Published on 10th July 2021, 11:33 AM | National News |

ಹೊಸದಿಲ್ಲಿ: ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ವಿಚಾರಣೆ ನಡೆಸುವುದನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ. ಇದೇ ವೇಳೆ ಕೇರಳ ಉಚ್ಚ ನ್ಯಾಯಾಲಯವು ಸುದ್ದಿ ಸಂಸ್ಥೆಗಳು ನೂತನ ಐಟಿ ನಿಯಮಗಳನ್ನು ಪಾಲಿಸದಿದ್ದರೆ ಅವುಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಇವೆರಡೂ ಬೆಳವಣಿಗೆಗಳು ಕೇಂದ್ರಕ್ಕೆ ಹಿನ್ನಡೆಯನ್ನುಂಟು ಮಾಡಿವೆ ಸುದ್ದಿ ಸಂಸ್ಥೆಗಳು ಮದ್ರಾಸ್‌ನಿಂದ ಹಿಡಿದು ಕೇರಳದವರೆಗೆ ವಿವಿಧ ನ್ಯಾಯಾಲಯಗಳಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿವೆ.

ನೂತನ ಐಟಿ ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ತಮ್ಮ ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಮತ್ತು ಸರಕಾರಕ್ಕೆ ಆನ್‌ಲೈನ್‌ ಸುದ್ದಿ ವಿಷಯಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗುವಂತೆ ರೂಪಿಸಲ್ಪಟ್ಟಿವೆ ಎಂದು ಸುದ್ದಿ ಸಂಸ್ಥೆಗಳು ಆರೋಪಿಸಿದ್ದರೆ, ಈ ವಿಶಾಲ ಮತ್ತು ಬೆಳೆಯುತ್ತಿರುವ ಕ್ಷೇತ್ರದ ಹೆಚ್ಚಿನ ನಿಯಂತ್ರಣವು ಅಗತ್ಯವಾಗಿದೆ ಎನ್ನುವುದು ಸರಕಾರದ ವಾದವಾಗಿದೆ.

ಚೈಲ್ಡ್ ಪೊರ್ನೊಗ್ರಫಿಯ

ಪೋಸ್ಟಿಂಗ್ ಅಥವಾ ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ವಿಷಯಗಳು ಇತ್ಯಾದಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ತಮ್ಮ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಜರುಗಿಸಲು ಹಾಲಿ ಕಾನೂನುಗಳಲ್ಲಿ ಅವಕಾಶಗಳಿವೆ ಎಂದು ಸುದ್ದಿಸಂಸ್ಥೆಗಳು ವಾದಿಸಿವೆ.

ದೇಶದ ಕೆಲವು ದೊಡ್ಡ ಸುದ್ದಿಜಾಲಗಳನ್ನೊಳಗೊಂಡಿರುವ ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ಕೇರಳ ಉಚ್ಚ ನ್ಯಾಯಾಲಯದಲ್ಲಿ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿದೆ. ಶುಕ್ರವಾರ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಸುದ್ದಿಸಂಸ್ಥೆಗಳು ಐಟಿ ನಿಯಮಗಳನ್ನು ಪಾಲಿಸದಿದ್ದರೆ ಅವುಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತರ ಮಾಧ್ಯಮ ಸಂಸ್ಥೆಗಳು ಮತ್ತು ಸಂಘಗಳೂ ವಿವಿಧ ನ್ಯಾಯಾಲಯಗಳಲ್ಲಿ ಇಂತಹುದೇ ಅರ್ಜಿಗಳನ್ನು ದಾಖಲಿಸಿವೆ. ಈ ಎಲ್ಲ ಅರ್ಜಿಗಳನ್ನು ಒಗ್ಗೂಡಿಸುವಂತೆ ಮತ್ತು ದಿಲ್ಲಿಯಲ್ಲಿ ವಿಚಾರಣೆ ನಡೆಸುವಂತೆ ಕೇಂದ್ರವು ಸರ್ವೋಚ್ಚ ನ್ಯಾಯಾಲಯವನ್ನು ಕೋರಿತ್ತು. ಸದ್ಯಕ್ಕೆ ಕೇಂದ್ರದ ಕೋರಿಕೆಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು,ಮುಂದಿನ ವಿಚಾರಣೆಯನ್ನು ಜು.16ರಂದು ನಡೆಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇತರ ನ್ಯಾಯಾಲಯಗಳು ಸದ್ಯಸ್ಥೆ ನೂತನ ಐಟಿ ನಿಯಮಗಳ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಬಹುದಾಗಿದೆ.

ಫೇಸ್‌ಬುಕ್ ಬಿರುಕಿನ ಲಾಭವೆತ್ತುತ್ತಿದೆ

ಕೇಂದ್ರ, ದಿಲ್ಲಿ ಸರಕಾರಗಳು ಜೊತೆಯಾಗಿ ಕೆಲಸ ಮಾಡಬೇಕು

 

ಹೊಸದಿಲ್ಲಿ: ಫೇಸ್‌ಬುಕ್ ಕೇಂದ್ರ ಮತ್ತು ದಿಲ್ಲಿ ಸರಕಾರಗಳ ನಡುವಿನ ರಾಜಕೀಯ ಕಚ್ಚಾಟಗಳು ಮತ್ತು ಕಾನೂನು ಸಮರದ ಲಾಭವನ್ನು ಪಡೆದುಕೊಳ್ಳುತ್ತಿದೆ ಎಂಬ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು, ಕೇಂದ್ರ ಮತ್ತು ದಿಲ್ಲಿಯಲ್ಲಿ ಎರಡು ವಿಭಿನ್ನ ಸರಕಾರಗಳನ್ನು ಆಯ್ಕೆ ಮಾಡುವಲ್ಲಿ ಮತದಾರರು ಪ್ರದರ್ಶಿಸಿದ್ದ ಅದೇ ಪಕ್ವತೆಯೊಂದಿಗೆ ಉಭಯ ಸರಕಾರಗಳು ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತನ್ನು ಹೇಳಿದೆ.

2020ರ ದಿಲ್ಲಿ ದಂಗೆಗಳ ಸಂದರ್ಭದಲ್ಲಿ ಜಾಲತಾಣ ವೇದಿಕೆಗಳ ಬಳಕೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಅಧಿಕಾರಿಗಳನ್ನು ವಿಚಾರಣೆಗಾಗಿ ಕರೆಸುವ ದಿಲ್ಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿಯ ಹಕ್ಕನ್ನು ಗುರುವಾರ ಎತ್ತಿಹಿಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸಮಿತಿಯ ಮುಂದೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಫೇಸ್‌ಬುಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಲಯವು ದಿಲ್ಲಿ ಮತ್ತು ಕೇಂದ್ರದ ಮಟ್ಟಗಳಲ್ಲಿ ಪರಸ್ಪರ ಸಹಕಾರದ ಕೊರತೆಗಾಗಿ ಆಪ್ ಮತ್ತು ಬಿಜೆಪಿಯನ್ನೂ ತರಾಟೆಗೆತ್ತಿಕೊಂಡಿತು.

ಉಭಯ ಸರಕಾರಗಳು ನಿರಂತರ ಕಾನೂನು ಸಮರದಲ್ಲಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ದಿನೇಶ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರ ಪೀಠವು, ದುರದೃಷ್ಟಮಾತ್‌ ಪರಸ್ಪರ ಮೇಲಾಟಕ್ಕೆ ಪೈಪೋಟಿಯ ಪ್ರಯತ್ನ ನಡೆಯುತ್ತಿದೆ. ವಿಶಾಲ ದೃಷ್ಟಿಕೋನವನ್ನು ಹೊಂದಲು ಉಭಯ ಸರಕಾರಗಳ ವೈಫಲ್ಯದಿಂದಾಗಿ ಪದೇ ಪದೇ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಬದಲು ಪೂರ್ವಭಾವಿ ಚರ್ಚೆ ಮತ್ತು ಪರಸ್ಪರ ತಿಳುವಳಿಕೆ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುತ್ತದೆ ಎಂದು ಹೇಳಿತು.

ಉಭಯ ಸರಕಾರಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ಸಹಮತದ ಮಾರ್ಗವೊಂದನ್ನು ಕಂಡುಕೊಳ್ಳುವಲ್ಲಿ ಅವುಗಳ ಅಸಾಮರ್ಥ್ಯದ ಲಾಭವನ್ನೆತ್ತಲು ಅರ್ಜಿದಾರರು (ಫೇಸ್‌ಬುಕ್) ಹವಣಿಸುತ್ತಿದ್ದಾರೆ ಮತ್ತು ಇದೇ ಕಾರಣದಿಂದ ದಿಲ್ಲಿ ವಿಧಾನಸಭೆಯ ಸಮನ್ಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ಫೇಸ್‌ಬುಕ್‌ ವಿರುದ್ಧ ವಿಚಾರಣೆಯನ್ನು ಆರಂಭಿಸುವ ಮತ್ತು ಸಮನ್ಸ್ ಕಳುಹಿಸುವ ದಿಲ್ಲಿ ವಿಧಾನಸಭೆಯ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರಕರಣದಲ್ಲಿಯ ವಾದವಿವಾದಗಳು ಸಮಸ್ಯೆಗಳನ್ನು ಸೃಷ್ಟಿಸಿವೆ. ಫೇಸ್‌ಬುಕ್‌ ಸರಕಾರದ ಪರ ಅಥವಾ ಬಲಪಂಥೀಯರ ಬಗ್ಗೆ ಒಲವು ಹೊಂದಿದೆ ಎಂದು ಪ್ರತಿವಾದಿ (ದಿಲ್ಲಿ) ಆರೋಪಿಸುವಂತೆ ಕಂಡು ಬರುತ್ತಿದ್ದರೆ ಇನ್ನೊಂದೆಡೆ ಕೇಂದ್ರ ಸರಕಾರವು ಅದಕ್ಕೆ ವಿರುದ್ಧವಾದುದನ್ನು ಹೇಳುತ್ತಿದೆ. ಇಲ್ಲಿ ಸಾಮಾನ್ಯ ಅಂಶವೆಂದರೆ ಅರ್ಜಿದಾರರ ವಿರುದ್ಧ ತಾರತಮ್ಯದ ಆರೋಪಗಳನ್ನು ಮಾಡುತ್ತ ಅವು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ವಿಭಿನ್ನ ನಿಲುವುಗಳನ್ನು ಪ್ರದರ್ಶಿಸುತ್ತಿವೆ ಎಂದು ಹೇಳಿತು.

Read These Next

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...