ಕಾರ್ಮಿಕ ಇಲಾಖೆಗೆ ಹೊಸ ಜೀವ ಕೊಡುವೆ: ಶಿವರಾಮ ಹೆಬ್ಬಾರ್

Source: S O News Service | By Office Staff | Published on 15th February 2020, 8:38 PM | Coastal News |

ಅಂಕೋಲಾ: ‘ಅಭಿವೃದ್ಧಿಯ ಹೊಸ ದಿಕ್ಕನ್ನು ಕಾಣುವಂತಹ ನಾಡಿನ ಜನಗಳ ಆಶೋತ್ತರದಂತೆ, ಕಾರ್ಮಿಕ ಇಲಾಖೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇವೆ’ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಶಾಂತಾದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ನನಗೆ ನೀಡಿದ ಕಾರ್ಮಿಕ ಇಲಾಖೆ ಚಿಕ್ಕದು ಎನ್ನುವ ಮನೋಭಾವ ಕೆಲವರಲ್ಲಿದೆ. ಆದರೆ, ಇಲಾಖೆಗೆ ಹೊಸ ಜೀವ ತರುವಂತ ಬದಲಾವಣೆ ಮಾಡಿ ತೋರಿಸುತ್ತೇನೆ. ಮೊದಲು ನಾನು ಕೂಡ ಚಾಲಕನಾಗಿ ಕಾರ್ಯನಿರ್ವಹಿಸಿದ್ದೆ. ಆದ್ದರಿಂದ ಶ್ರಮಿಕ ವರ್ಗದ ಸಂಕಷ್ಟಗಳ ಪ್ರತ್ಯಕ್ಷ ಅನುಭವ ನನಗಿದೆ. ದುಡಿಯುವ ಕೈಗಳ ಹಕ್ಕುಗಳ ರಕ್ಷಣೆ ಮಾಡುತ್ತೇನೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಈ ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮತ್ತೆ ಮಾತೃ ಪಕ್ಷಕ್ಕೆ ಮರಳಿದ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕರಿಗೆ ಆಗುವ ಅನ್ಯಾಯದ ವಿರುದ್ಧ ನ್ಯಾಯ ದೊರಕಿಸಿಕೊಡಬಲ್ಲರು ಎನ್ನುವ ನಂಬಿಕೆ ನನ್ನಲ್ಲಿದೆ. ಜೊತೆಗೆ, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಇವರ ಪಾತ್ರ ಮುಖ್ಯವಾಗಿದೆ’ ಎಂದರು.

ಪ್ರಮುಖರಾದ ಜಗದೀಶ ನಾಯಕ, ರಾಜೇಂದ್ರ ನಾಯ್ಕ, ಬಾಸ್ಕರ ನಾರ್ವೇಕರ, ನಿತ್ಯಾನಂದ ಗಾಂವಕರ, ರಾಮಚಂದ್ರ ನಾಯ್ಕ, ನೀಲೇಶ ನಾಯ್ಕ, ರಾಘು ಭಟ್ಟ, ಸಂಜಯ ನಾಯ್ಕ, ಗಣಪತಿ ಉಳ್ವೇಕರ, ಸಂಜೀವ ಕುಚಿನಾಡ, ಜಯಾ ನಾಯ್ಕ, ಶಾಂತಲಾ ನಾಡಕರ್ಣಿ, ತಾರಾ ನಾಯ್ಕ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.  
 

Read These Next