ಭಟ್ಕಳದಲ್ಲಿರುವ ನೆಮ್ಮದಿ ಕೇಂದ್ರ ಜನರಿಗೆ ನೆಮ್ಮದಿ ನೀಡದ ನೆಮ್ಮದಿ ಕೇಂದ್ರ! 

Source: so news | Published on 19th June 2018, 8:32 PM | Special Report |

ಭಟ್ಕಳ: ಆಧಾರ್ ಕಾರ್ಡ ಬೇಕು ಬೇಡಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಲೇ ಇದೆ. ಜನಸಾಮಾನ್ಯರು ಕೆಲಸ ಕಾರ್ಯಗಳನ್ನು ಬದಿಗೆ ಒತ್ತಿ, ತಾವು ಕೇಳಿಸಿಕೊಂಡ ಪ್ರಯೋಜನಗಳನ್ನು ಎಣಿಸುತ್ತ ಆಧಾರ್ ಕಾರ್ಡ ಪಡೆಯಲು ನೆಮ್ಮದಿ ಕೇಂದ್ರಕ್ಕೆ ಎಡ ತಾಕುತ್ತಲೇ ಇದ್ದಾರೆ. ಆದರೆ ದಿನಗಳೆದಂತೆ ಈ ಕೇಂದ್ರವೇ ಜನರ ನೆಮ್ಮದಿಯನ್ನು ಕದಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
  ಆಧಾರ್ ಕಡ್ಡಾಯದ ಬಗ್ಗೆ ಖಚಿತತೆ ಇಲ್ಲದಿದ್ದರೂ ಆಧಾರ್ ಕಾರ್ಡ ಅನಿವಾರ್ಯ ಎಂಬಂತೆ ಓಡಾಡುತ್ತಲೇ ಇದ್ದಾರೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೂ ಆಧಾರ್ ವಿಚಾರಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದಕ್ಕಾಗಿ ಜನರು ನೆಮ್ಮದಿ ಕೇಂದ್ರದ ಸುತ್ತ ಸುತ್ತುತ್ತಲೇ ಇದ್ದಾರೆ. ಆದರೆ ಇಲ್ಲಿನ ನೆಮ್ಮದಿ ಕೇಂದ್ರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ತಾಲೂಕಿನ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಕಾರ್ಡ ಒದಗಿಸಲು ಪ್ರತ್ಯೇಕ ಕಂಪ್ಯೂಟರ್ ಅಳವಡಿಸಲಾಗಿದೆ. ಆದಾಯ, ಜಾತಿ ಸೇರಿದಂತೆ ಉಳಿದ ಪ್ರಮಾಣ ಪತ್ರವನ್ನು ಪಡೆಯಲು ಇನ್ನೊಂದು ಕಂಪ್ಯೂಟರ್‍ನ್ನು ಹೊಂದಿಸಲಾಗಿದೆ. ನಿತ್ಯವೂ ಏನಿಲ್ಲವೆಂದರೂ 40-50 ಜನರು ಆಧಾರ್ ಕಾರ್ಡಗಾಗಿಯೇ ಈ ಕೇಂದ್ರಕ್ಕೆ ಆಗಮಿಸುತ್ತಾರೆ. ಪ್ರತಿಯೊಬ್ಬರೂ ಆಧಾರ್ ಕಾರ್ಡಗಾಗಿ ಕನಿಷ್ಠ 15 ನಿಮಿಷಗಳನ್ನು ವಿನಿಯೋಗಿಸಬೇಕು. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಯುತ್ತ ಕುಳಿತರೂ ಜನರ ಕೆಲಸ ನಡೆಯುತ್ತಲೇ ಇಲ್ಲ. ಒಂದು ಕಂಪ್ಯೂಟರ್‍ನಿಂದ ಅದೆಷ್ಟು ಆಧಾರ್ ಕಾರ್ಡ ಕೊಡುತ್ತಾರೋ ದೇವರೇ ಬಲ್ಲ. ಸಾಲದೆಂಬಂತೆ ಕರೆಂಟ್ ಕೈ ಕೊಟ್ಟರೆ ದಿನವೆಲ್ಲ ಹಾಳು! ಕರೆಂಟ್ ಸಮಸ್ಯೆಯಿಂದ ಬಿಡುಗಡೆ ಪಡೆಯಲು ನೆಮ್ಮದಿ ಕೇಂದ್ರದಲ್ಲಿರುವ ಬ್ಯಾಟರಿಗಳಿಗೇ ಕಳೆದ 6 ತಿಂಗಳುಗಳಿಂದ ಜೀವವೇ ಇಲ್ಲ! ಬ್ಯಾಟರಿ ಒದಗಿಸಿ ನಿರ್ವಹಣೆಯ ಹೊಣೆ ಹೊತ್ತಿದ್ದ ಹುಬ್ಬಳ್ಳಿ ಕಂಪನಿ ತನ್ನ ಅವಧಿ ಮುಗಿದಿದೆ ಎಂದು ಕೈ ತೊಳೆದುಕೊಂಡಿದ್ದು, ಕಂಪನಿಯ ಸಿಬ್ಬಂದಿಗಳು ನೆಮ್ಮದಿ ಕೇಂದ್ರಕ್ಕೆ ಕಾಲಿಡುತ್ತಿಲ್ಲ. ಸದ್ಯ ದುರಸ್ತಿಯ ಮಾತು ದೂರವೇ ಉಳಿದಿದೆ. ಯಾವುದೇ ಓರ್ವ ಅಧಿಕಾರಿ ನೆಮ್ಮದಿ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ತಿಂಗಳ ಹಿಂದಷ್ಟೇ ಚುನಾವಣೆ ಮುಗಿಸಿರುವ ಜನಪ್ರತಿನಿಧಿಗಳಿಗೆ ಅಷ್ಟರ ಮಟ್ಟಿಗೆ ನೆಮ್ಮದಿ ಕೇಂದ್ರ ಮರೆತೇ ಹೋಗಿದೆ. ನೆಮ್ಮದಿ ಕಳೆದುಕೊಂಡ ಜನರು ಹಿಡಿಶಾಪ ಹಾಕುತ್ತಲೇ ನೆಮ್ಮದಿ ಕೇಂದ್ರದಿಂದ ತೆರಳುತ್ತಿದ್ದಾರೆ. 
  ಬರಕತ್ತಾಗದ ಬಾಪೂಜಿ ಕೇಂದ್ರ : ಇತ್ತ ಗ್ರಾಮೀಣ ಪ್ರದೇಶದಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ತೆರೆದು `ಸಕಾಲ' ಸೇವೆಯನ್ನು ಒದಗಿಸುವ ಕಾರ್ಯವೂ ನೆನೆಗುದಿಗೆ ಬಿದ್ದಿದೆ. ಪ್ರಾಯೋಗಿಕವಾಗಿ ಮಾವಳ್ಳಿ, ಹಾಡುವಳ್ಳಿ, ಬೆಳಕೆಯಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ತೆರೆಯಲಾಗಿತ್ತಾದರೂ ಸೇವೆ ನೀಡದ ಸೇವಾ ಕೇಂದ್ರವಾಗಿ ಉಳಿದುಕೊಂಡಿದೆ. ಆದಾಯ, ಜಾತಿ ಪ್ರಮಾಣ ಪತ್ರದ ಕಥೆ ಬಿಡಿ, ಕನಿಷ್ಠ ಪಹಣಿ ಪತ್ರಿಕೆಯನ್ನು ನೀಡುವ ಸೌಲಭ್ಯವೂ ನಿಂತು ಹೋಗಿದೆ. ಅಧಿಕಾರಿಗಳು ನೆಟ್ ಬ್ಯಾಂಕಿಂಗ್ ಕಾರಣವನ್ನು ಹೇಳುತ್ತಲೇ ದಿನ ಕಳೆಯುತ್ತಿದ್ದಾರೆ. ವ್ಯವಸ್ಥೆ ಸರಿಯಾಗುವುದು ಯಾವಾಗ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೆಲವು ದಿನಗಳಲ್ಲಿ ವ್ಯವಸ್ಥೆ ಸರಿಯಾಗಲಿದೆ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ. ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. 
 ಈ ಬಗ್ಗೆ ಪ್ರತಿಕ್ರಿಯೆ ಸಿದ್ದ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ
 ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಭಟ್ಕಳ ನೆಮ್ಮದಿ ಕೇಂದ್ರದ ಸಮಸೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ಠರಾವನ್ನೂ ಅಂಗೀಕರಿಸಲಾಗಿದೆ. ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
 

Read These Next

ಮಂಗಳೂರು ವಿಮಾನ ನಿಲ್ದಾಣ ಸ್ಪೋಟಕ ಪ್ರಕರಣ; ಕನ್ನಡ ಮಾಧ್ಯಮಗಳಿಂದ ’ಸ್ಪೋಟಕ ವರದಿಗಾರಿಕೆ

ಮಂಗಳೂರು: ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕವೊಂದು ಪತ್ತೆಯಾಗಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ...

ಪರ್ಮನೆಂಟ್ ಇರಲು ಬಂದಿಲ್ಲವಂತೆ ಸಂಸದರು; ಯೋಜನೆಗಳಿಗೆ ವಿರೋಧ ವ್ಯಕ್ತವಾದಲ್ಲಿ ಆರಂಭದಲ್ಲೇ ಹೊಸಕಿ ಹಾಕ್ಬೇಕಂತೆ! ‘ಹಿಂದೂ ಹುಲಿ’ ಹೆಗಡೆ ಹೇಳಿಕೆಗೆ ಮೀನುಗಾರರು ಕೆಂಡಾಮಂಡಲ

ವಿವಾದಗಳಿಂದ ದೂರ ಉಳಿದುಕೊಳ್ಳಲು ಖುದ್ದು ಸಂಸದ ಅನಂತಕುಮಾರ್ ಹೆಗಡೆಗೂ ಸಾಧ್ಯವಿಲ್ಲ ಎನಿಸುತ್ತಿದೆ. ಕಳೆದ ಕೆಲ ತಿಂಗಳಿಂದ ಯಾವುದೇ ...