ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕರಾವಳಿ ಮೀನುಗಾರರ ನಿರ್ಲಕ್ಷ್ಯ; ಮೀನುಗಾರ ಮುಖಂಡ ವಸಂತ ಖಾರ್ವಿ ಆರೋಪ

Source: sonews | By Staff Correspondent | Published on 29th May 2020, 8:04 PM | Coastal News | Don't Miss |

ಭಟ್ಕಳ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರಾವಳಿ ಮೀನುಗಾರರನ್ನು ನಿರ್ಲಕ್ಷ ಮಾಡಿದ್ದು ಕೋಟಿಗಟ್ಟಲೆ ಪರಿಹಾರ ನೀಡಿದ್ದು ಮೀನುಗಾರರಿಗೆ ಒಂದು ನಯಾ ಪೈಸೆ ಕೂಡಾ ದೊರೆತಿಲ್ಲ ಎಂದು ಮೀನುಗಾರರ ಹಿರಿಯ ಮುಖಂಡ ವಸಂತ ಖಾರ್ವಿ ಹೇಳಿದರು. 

ಅವರು ಮಾವಿನಕುರ್ವೆ ಬಂದರಿನಲ್ಲಿ ಪರ್ಶಿನ್ ಬೋಟ್ ಯೂನಿಯನ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದರಿಂದ ರಾಜ್ಯ ಸರ್ಕಾರ ಸಣ್ಣ ಸಣ್ಣ ಸಮುದಾಯಗಳಿಗೆ ನೆರವಿನ ಹಸ್ತ ಚಾಚಿದೆ ಆದರೆ ಮೀನುಗಾರರನ್ನು ಸಂಪೂರ್ಣ ಕಡೆಗಣಿಸಿರುವುದರ ಹಿಂದೆ ಯಾವ ಅಜೆಂಡಾ ಅಡಗಿದೆ ಎನ್ನುವುದು ತಿಳಿದಿಲ್ಲ ಎಂದರು. 

ಕಳೆದ 2-3 ವರ್ಷದಿಂದ ಮೀನು ಕ್ಷಾಮ ಮೀನುಗಾರರನ್ನು ಕಾಡುತ್ತಿದ್ದರೆ ಈ ಬಾರಿಯ ಮೀನುಗಾರಿಕಾ ಸೀಸನ್ ಸಂಪೂರ್ಣ ಇಲ್ಲವಾಯಿತು. ಇನ್ನೊಂದೆಡೆ ಚಂಡಮಾರುತದ ಹಾವಳಿಯಿಂದಾಗಿ ಮೀನುಗಾರರ ಬದುಕೇ ದುಸ್ತರವಾಗಿದೆ ಎಂದ ಅವರು ಮೀನುಗಾರರ ಸಾಲಾ ಮನ್ನಾ ವಿಷಯದಲ್ಲಿಯೂ ಕೂಡಾ ತಾರತಮ್ಯ ಎಸಲಾಗುತ್ತಿದೆ. ಕಳೆದ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಮೀನುಗಾರರ ಸಾಲಮನ್ನಾ ಘೋಷಿಸಿತ್ತು. ಆದರೆ. ಅದರ ಹೆಚ್ಚಿನ ಲಾಭ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರಿಗೆ ಆಗಿದ್ದು ಜಿಲ್ಲೆಯ ಮೀನುಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಾಮಾಧಾನ ವ್ಯಕ್ತಪಡಿಸಿದ ವಸಂತ ಖಾರ್ವಿ  ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆಗಳ ಬಗ್ಗೆ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳೀಯ ಶಾಸಕ ಸುನೀಲ್ ನಾಯ್ಕ ಅವರ ಗಮನಕ್ಕೆ ತರಲಾಗಿದೆಯಾದರೂ ಯಾರೂ ನಮ್ಮ ಕೋರಿಕೆಗೆ ಸ್ಪಂಧಿಸಿಲ್ಲ ಎಂದರು. 

ಸಾಲ ಮಾಡಿ ಮೀನುಗಾರಿಕೆ ಬೋಟ್‍ಗಳನ್ನು ಮಾಡಿದವರ ಪರಿಸ್ಥಿತಿ ಹೇಳತೀರದಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಬೋಟ್ ಸಾಲ ತುಂಬಲಾರದೇ ಸಂಕಷ್ಟದಲ್ಲಿರುವ ಮೀನುಗಾರರು ಈ ಬಾರಿ ಮೀನುಗಾರಿಕೆಯಿಂದಲೇ ವಂಚಿತರಾದರು. ಇನ್ನು ಹದಿನೈದು ದಿನಗಳ ಕಾಲ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಸಹ ಈಗಾಗಲೇ ನಮ್ಮ ಕರಾವಳಿಯಲ್ಲಿ ಬೇರೆ ಬೇರೆ ಬೋಟುಗಳು ಬಂದು ಮೀನುಗಾರಿಕೆ ಮಾಡಿದ್ದರಿಂದ ಮೀನು ಸಿಗುತ್ತಿಲ್ಲ.  ಸರಕಾರ ಈಗಲಾದರೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರನ್ನು ಆರ್ಥಿಕವಾಗಿ ಎತ್ತಿ ಹಿಡಿಯಲು ಕನಿಷ್ಟ ಒಂದು ಬೋಟಿಗೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 

ಲಾಕ್ ಡೌನ್ ಸಮಯದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಿದ್ದರಿಂದ ಮೀನುಗಾರರು ಮೀನುಗಾರಿಕೆ ತೆರಳಿದ್ದರು. ಆ ಸಮಯದಲ್ಲಿ ಕರಾವಳಿ ಕಾವಲು ಪಡೆಯವರು ಅವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಸಮುದ್ರದಲ್ಲಿ ಭದ್ರತೆ ವಿಷಯದಲ್ಲಿ ಪ್ರತಿಯೊಂದು ಮಾಹಿತಿಯನ್ನು ಮೀನುಗಾರರು ಭದ್ರತಾ ಪಡೆಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀಧರ ಮೊಗೇರ, ಈಶ್ವರ ನಾರಾಯಣ ಮೊಗೇರ, ತಿಮ್ಮಪ್ಪ ಖಾರ್ವಿ, ಶ್ರೀನಿವಾಸ ಖಾರ್ವಿ, ಜಟ್ಗಾ ಮೊಗೇರ ಮುಂತಾದವರು ಉಪಸ್ಥಿತರಿದ್ದರು. 


 

Read These Next