ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ; 11 ರಾಜ್ಯಗಳಲ್ಲಿ ಶೋಧಕಾರ್ಯಾಚರಣೆ;100ಕ್ಕೂ ಅಧಿಕ ಮಂದಿ ಬಂಧನ

Source: Vb | Published on 22nd September 2022, 6:19 PM | State News | National News |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಜಾರಿನಿರ್ದೇಶನಾಲಯ (ಈ.ಡಿ.) ದಾಳಿ ನಡೆಸಿದ್ದು, ಸಂಘಟನೆಯ ನಾಯಕರ ಸಹಿತ 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ. ಭಯೋತ್ಪಾದನೆ ಚಟುವಟಿಕೆಗಳ ಜೊತೆ ನಂಟು ಹೊಂದಿದ ಆರೋಪದಲ್ಲಿ ಈ ದಾಳಿ ನಡೆಸಲಾಗಿದೆಯೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶಾದ್ಯಂತ 100ಕ್ಕೂ ಅಧಿಕ ಪಿಎಫ್‌ ಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬಂಧನವಾಗಿದ್ದು, ಕೇರಳದಲ್ಲಿ ಗರಿಷ್ಠ 22 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ 20 ಮಂದಿಯ ಬಂಧನವಾಗಿದೆ. ಆಂಧ್ರಪ್ರದೇಶ 5, ಅಸ್ಸಾಂ 9, ದಿಲ್ಲಿ 3, ಮಧ್ಯಪ್ರದೇಶ 4, ಪುದುಚೇರಿ3, ತಮಿಳುನಾಡು 10, ಉತ್ತರಪ್ರದೇಶ 8 ಹಾಗೂ ರಾಜಸ್ಥಾನದಲ್ಲಿ 2 ಮಂದಿ ಯನ್ನು ಬಂಧಿಸಲಾಗಿದೆಯೆಂದು ವರದಿಯಾಗಿದೆ.

ಎನ್‌ಐಎ ಸರಕಾರದ ಕೈಗೊಂಬೆ: ಪಿಎಫ್‌ಐ
ಬೆಂಗಳೂರು: ಎನ್‌ಐಎ ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಸುವ ಉದ್ದೇಶವನ್ನಷ್ಟೇ ಹೊಂದಿದೆ. ಆದರೆ, ಇಂತಹ ದಾಳಿಗಳಿಗೆ ಬೆದರುವುದಿಲ್ಲ ಎಂದು ಪಿಎಫ್‌ಐ ತಿಳಿಸಿದೆ.

ಗುರುವಾರ ದೇಶದೆಲ್ಲೆಡೆ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ಪ್ರಕರಣ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ, ದೇಶಾದ್ಯಂತ ಎನ್‌ಐಎ, ಈಡಿ. ದಾಳಿಗಳು, ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಅನ್ಯಾಯದ ಬಂಧನ ಮತ್ತು ಕಿರುಕುಳಗಳು, ಸಂಘಟನೆಯಸದಸ್ಯರು ಮತ್ತು ಬೆಂಬಲಿಗರನ್ನು ಗುರಿಯಾಗಿಸಿರುವುದನ್ನು ತೀವ್ರವಾಗಿ ಖಂಡಿಸಿದೆ. ಕೇಂದ್ರೀಯ ಏಜೆನ್ಸಿಗಳನ್ನು ತನ್ನ ಕೈಗೊಂಬೆಗಳನ್ನಾಗಿ ಬಳಸುವ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಇಂತಹ ಭೀತಿಯ ತಂತ್ರಗಳಿಗೆ ಪಾಪ್ಯುಲರ್ ಫ್ರಂಟ್ ಎಂದೂ ಬೆದರುವುದಿಲ್ಲ. ಸಂಘಟನೆಯು ತನ್ನ ನಿಲುವಿನಲ್ಲಿ ಬದ್ಧವಾಗಿದೆ. ನಮ್ಮ ಪ್ರೀತಿಯ ದೇಶದ ಸಾಂವಿಧಾನಿಕ ಸ್ಫೂರ್ತಿ ಹಾಗೂ ಮೌಲ್ಯಗಳನ್ನು ಪುನಃಸ್ಥಾಪಿಸುವ ಹೋರಾಟದಲ್ಲಿ ದೃಢವಾಗಿ ನಿಲ್ಲಲಿದೆ ಎಂದು ಪ್ರಕಟನೆಯಲ್ಲಿ ಹೇಳಿದೆ.

ಪಿಎಫ್‌ಐಗೆ ಸೇರಿದ ಸ್ಥಳಗಳ ಮೇಲೆ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಆಯಾ ರಾಜ್ಯಗಳ ಪೊಲೀಸ್ ಪಡೆಗಳು ಕೂಡಾ ಭಾಗವಹಿಸಿರುವುದಾಗಿ ಮೂಲಗಳು ತಿಳಿಸಿವೆ.

ಈವರೆಗೆ ಎನ್ಐಎ ನಡೆಸಿದ ಅತಿ ದೊಡ್ಡ ದಾಳಿ ಕಾರ್ಯಾಚರಣೆ ಇದಾಗಿದೆ ಎಂದು ಅದರ ಅಧಿಕಾರಿಗಳು ಬಣ್ಣಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು, ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಗೊಳ್ಳುವಂತೆ ಮಾಡಲು ಜನರನ್ನು ಪ್ರಚೋದಿಸುವುದು ಹಾಗೂ ತರಬೇತಿ ಶಿಬಿರಗಳನ್ನು ನಡೆಸುವುದರಲ್ಲಿ ಶಾಮೀಲಾಗಿರುವುದು ಇತ್ಯಾದಿ ಆರೋಪಗಳಿಗೆ ಸಂಬಂಧಿಸಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆಯೆಂದು ಎನ್‌ಐಎ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಎನ್‌ಐಎ ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎನ್ ಐಎ ಮಹಾನಿರ್ದೇಶಕ ದಿನಕರ್ ಗುಪ್ತಾ ಜೊತೆ ಸಭೆ ನಡೆಸಿ, ನೂತನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮಧ್ಯೆ ಪಿಎಫ್‌ ಐ ಹೇಳಿಕೆಯೊಂದನ್ನು ನೀಡಿ, ತನ್ನ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ನಾಯಕರ ನಿವಾಸಗಳ ಮೇಲೆ ಎನ್‌ಐಎ ದಾಳಿ ನಡೆಸಿರುವುದಾಗಿ ತಿಳಿಸಿದೆ. ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನವಾಗಿಸಲು ಏಜೆನ್ಸಿಗಳನ್ನು ಬಳಸಿಕೊಳ್ಳುವ ಫ್ಯಾಶಿಸ್ಟ್ ಆಡಳಿತದ ನಡೆಯನ್ನು ತಾನು ಬಲವಾಗಿ ಪ್ರತಿಭಟಿಸುವುದಾಗಿ ಸಂಘಟನೆ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳಿಗೆ ಪ್ರಚೋದನೆ, 2020ರ ಈಶಾನ್ಯ ದಿಲ್ಲಿ ಹಿಂಸಾಚಾರ ಹಾಗೂ ಉತ್ತರಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲಭೆಗೆ ಸಂಚು ಇತ್ಯಾದಿ ಆರೋಪಗಳಿಗೆ ಸಂಬಂಧಪಟ್ಟಂತೆ ಪಿಎಫ್ ಐನ ಹಣಕಾಸು ನಂಟುಗಳ ಬಗ್ಗೆ ಜಾರಿ ನಿರ್ದೇಶನಾಲಯ (ಈ.ಡಿ.) ತನಿಖೆ ನಡೆಸುತ್ತಿದೆ.

ಈಡಿ. ಈ ಮೊದಲು, ಲದಲ್ಲಿನ ಕಪ್ಪುಹಣ ಬಿಳುಪು ತಡೆ ಕುರಿತ ವಿಶೇಷ ನ್ಯಾಯಾಲಯದ ಮುಂದೆ ಪಿಎಫ್‌ಐ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಎರಡು ದೋಷಾರೋಪಪಟ್ಟಿಗಳನ್ನು ದಾಖಲಿಸಿದೆಯೆಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 18ರಂದು ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿದ ಆರೋಪದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪಿಎಫ್‌ ಐನ 40 ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು.

ಪಿಎಫ್‌ಐನ ರಾಷ್ಟ್ರೀಯ ಚೇರ್‌ಮನ್, ಪ್ರಧಾನ ಕಾರ್ಯದರ್ಶಿ ಬಂಧನ:

ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗುರುವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಪಿಎಫ್‌ಐನ ರಾಷ್ಟ್ರೀಯ ಚೇರ್‌ಮನ್‌ ಒ.ಎಂ.ಎ. ಸಲಾಂ ಸೇರಿದಂತೆ ಪಿಎಫ್‌ ಐನ ಐವರು ನಾಯಕರನ್ನು ಬಂಧಿಸಿದೆ.

ಪಿಎಫ್‌ ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಸರುದ್ದೀನ್‌ ಎಲಾಮರಂ ಕೇರಳ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ. ಮುಹಮ್ಮದ್‌ ಬಶೀರ್ ಹಾಗೂ ಪದಾಧಿಕಾರಿಗಳಾದ ಕೆ. ಮುಹಮ್ಮದ್ ಅಲಿ, ಕೆ.ಪಿ.ಜಮ್ಮದ್ ಅವರನ್ನು ಮಲಪ್ಪುರಂ ಜಿಲ್ಲೆಯ ವಿವಿಧೆಡೆ, ಅವರ ಮನೆಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಿಎಫ್‌ಐನ ದಿಲ್ಲಿ ಘಟಕದ ವರಿಷ್ಠ ಪರ್ವೇಝ್ ಅಹ್ಮದ್ ಹಾಗೂ ಅವರ ಸಹೋದರ ಬಂಧಿತರಲ್ಲಿ ಸೇರಿದ್ದಾರೆ.

ರಾಜ್ಯದ ವಿವಿಧೆಡೆ ದಾಳಿ: ಭಯುತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇಲೆ ರಾಜ್ಯದ ಎಂಟು ಜಿಲ್ಲಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಎಸ್ ಡಿಪಿಐ ಪಕ್ಷೆದ ನಾಯಕರ ಮನೆ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ನಡೆಸಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ ದಾಳಿ ಖಂಡಿಸಿ ಪ್ರತಿಭಟಿಸಿದ ಪಿಎಫ್‌ಐ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ.

ಪಿಎಫ್‌ಐ ಸಂಘಟನೆಯ ಸಕ್ರಿಯ ನಾಯಕರು ಎನ್ನಲಾದ ಯಾಸೀರ್ ಎ.ಹಸನ್, ಮುಹಮ್ಮದ್ ಶಾಕಿಬ್, ಅನೀಸ್ ಅಹ್ಮದ್, ಅಫ್ಸೆರ್ ಪಾಷಾ, ಅಬ್ದುಲ್ ವಾಹಿದ್ ಸೇತ್, ಮುಹಮ್ಮದ್ ಫಾರೂಕ್, ಶಾಹಿದ್ ನಾಸೀರ್ ಎಂಬವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಅಧಿಕೃತವಾಗಿ ತಿಳಿಸಿದೆ.

ಗುರುವಾರ ಮುಂಜಾನೆ ಸ್ಥಳೀಯ ಠಾಣೆಯ ಪೊಲೀಸರ ಸಹಯೋಗದೊಂದಿಗೆ ಎನ್‌ಐಎ ಅಧಿಕಾರಿಗಳು ಬೆಂಗಳೂರು, ಮಂಗಳೂರು, ದಾವಣಗೆರೆ, ಮೈಸೂರು, ಕಲಬುರಗಿ, ಶಿವಮೊಗ್ಗ, ಕೊಪ್ಪಳ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆನಂತರ, ವಶಕ್ಕೆ ಪಡೆದು ಹಲವರ ಹೇಳಿಕೆಗಳನ್ನು ದಾಖಲಿಸಿದರು. ದಾಳಿ ಸಂದರ್ಭದಲ್ಲಿ ಕೆಲ ಕರಪತ್ರಗಳು, ಇನ್ನಿತರ ದಾಖಲೆ, ನಗದು, ಕಂಪ್ಯೂಟರ್ ಸಿಪಿಯು, ಲ್ಯಾಪ್ ಟಾಪ್, ಪೆನ್‌ ಡ್ರೈವ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಲಾಠಿ ಪ್ರಹಾರ: ಎಸ್‌ ಡಿಪಿಐ ಮತ್ತು ಪಿಎಫ್‌ಐ ಮುಖಂಡರ ಮನೆಗಳ ಮೇಲೆ ಎನ್‌ಐಎ ದಾಳಿ ಖಂಡಿಸಿ, ಹುಬ್ಬಳ್ಳಿ, ಮೈಸೂರು, ಕೊಪ್ಪಳ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಲಾಯಿತು.

ಇಲ್ಲಿನ ಹುಬ್ಬಳ್ಳಿ ನಗರದ ಕೌಲ್‌ ಪೇಟೆ ಬಳಿ ಬೆಂಗಳೂರು ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಮತ್ತು ಪಿಎಫ್‌ ಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಎಸ್‌ಡಿಪಿಐ ಬಾವುಟ ಹಿಡಿದ ನೂರಕ್ಕೂ ಹೆಚ್ಚು ಮಂದಿ ರಸ್ತೆಯಲ್ಲಿ ಜಮಾಯಿಸಿದರು. ಮಾನವ ಸರಪಳಿ ರಚಿಸಿ, 'ಗೋ ಬ್ಯಾಕ್ ಎನ್‌ಐಎ' ಎಂದು ಜೋರಾಗಿ ಕೂಗುತ್ತಾ ರಸ್ತೆಗೆ ಅಡ್ಡವಾಗಿ ನಿಂತರು.

ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ತಡೆಯದ ಶಾಂತವಾಗಿ ಪ್ರತಿಭಟಿಸುವಂತೆ ಸೂಚಿಸಿದರೂ, ಕಾರ್ಯಕರ್ತರು ಘೋಷಣೆಗಳನ್ನು ಮುಂದುವರಿಸಿದರು. ಕಡೆಗೆ ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಪಕ್ಕಕ್ಕೆ ತಳ್ಳಲು ಯತ್ನಿಸಿದರು. ಈ ವೇಳೆ, ಪರಸ್ಪರ ತಳ್ಳಾಟ ಉಂಟಾಯಿತು, ಕಡೆಗೆ ಲಘು ಲಾಠಿ ಪ್ರಹಾರ ನಡೆಸಿದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...