ನವಾಯತಿ ಭಾಷಾಶಾಸ್ತ್ರೀಯ ಸಂಶೋಧನಾ ಗ್ರಂಥ ಬಿಡುಗಡೆ

Source: SO News | By Laxmi Tanaya | Published on 15th February 2021, 7:32 PM | Coastal News | Special Report | Don't Miss |

ಭಟ್ಕಳ : ಭಾಷಾಶಾಸ್ತ್ರ ಸಂಶೋಧಕಿ ಹರ್ಷ ಶಂಕರ್ ಭಟ್ ರಚಿಸಿದ "ನವಾಯತಿ ಆಫ್ ಭಟ್ಕಳ್ - ಎ ಶಾರ್ಟ್ ಡಿಸ್ಕ್ರಿಪ್ಟಿವ್ ಸ್ಟಡಿ" ಭಾಷಾಶಾಸ್ತ್ರೀಯ ಗ್ರಂಥವನ್ನು   ನವಾಯತ ಸಮುದಾಯದ ಹಿರಿಯ ಅಬ್ದುಲ್ ರಹಮಾನ್ ಮೊಹ್ತೆಶಾಮ್ ಬಿಡುಗಡೆ ಮಾಡಿದರು. 

ಭಟ್ಕಳದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರಿ. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಂಶೋಧನಾ ಫೆಲೊಶಿಪ್ ಅಡಿಯಲ್ಲಿ ಹರ್ಷಾ ಶಂಕರ್ ಭಟ್ ಕೈಗೊಂಡ ವಿಸ್ತ್ರತ ಸಂಶೋಧನಾ ಕಾರ್ಯದ ಫಲಶ್ರುತಿಯಾಗಿರುವ ಈ ಗ್ರಂಥದ ಬಿಡುಗಡೆ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರ ಮತ್ತು ನವಾಯತ ಮೆಹಫಿಲ್ ಇದರ ಜಂಟಿ ಆಯೋಜಕತ್ವದಲ್ಲಿ ಜರುಗಿತು.

 ಸಂಶೋಧನಾ ಗ್ರಂಥ ಹಾಗೂ ಲೇಖಕಿಯ ಬಗ್ಗೆ ಪರಿಚಯಾತ್ಮಕ ಮಾತುಗಳನ್ನಾಡಿದ ವಿಶ್ವ ಕೊಂಕಣಿ ಕೇಂದ್ರದ ಸಂಶೋಧನಾ ವಿಭಾಗದ ನಿರ್ದೇಶಕ ಗುರುದತ್ತ ಬಂಟ್ವಾಳಕಾರ್, ನವಾಯತಿಯ ಭಾಷಾ ಶಾಸ್ತ್ರೀಯ ಗ್ರಂಥವು ವಿಶ್ವ ಕೊಂಕಣಿ ಕೇಂದ್ರದ ಫೆಲೋಶಿಪ್ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುವ ವಿವಿಧ ಸಂಶೋಧನಾ ಕಾರ್ಯಗಳ ಸರಣಿಯಲ್ಲಿ ಒಂದಾಗಿದೆ. ಕೊಂಕಣಿ ಭಾಷೆಗಳನ್ನು ಅವಲೋಕಿಸುವ ಹೊಸ ದೃಷ್ಟಿಕೋನವನ್ನು ಹರ್ಷಾ ಶಂಕರ್ ಭಟ್ ರವರು ನೀಡಿದ್ದಾರೆ ಎಂದು ಶ್ಲಾಘಿಸಿದರು.
 ಈ ಸಂಶೋಧನಾ ಕಾರ್ಯಕ್ಕೆ ಬಹಳ ಮುತುವರ್ಜಿ ವಹಿಸಿ ಸಹಕರಿಸಿದ ನವಾಯತ ಸಮುದಾಯವನ್ನು ಅಭಿನಂದಿಸಿದರು. 

ಕರಾವಳಿಯ ಇತಿಹಾಸವನ್ನು ಪರ್ಶಿಯನ್ ಹಾಗೂ ಅರೇಬಿಕ್ ಮೂಲದ ದಾಖಲೆ ಹಾಗೂ ದಸ್ತಾವೇಜುಗಳನ್ನು ಆಕರವಾಗಿಸಿ ಸಂಶೋಧನೆಯನ್ನು ಕೈಗೊಳ್ಳಲು ನವಾಯತರ ಅರೇಬಿಕ್ ಭಾಷಾಜ್ಞಾನವು ಸಹಕಾರಿಯಾಗಬಹುದು ಆದುದರಿಂದ ನವಾಯತ ಯುವಕರಿಗೆ ಈ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲು ಕರೆ ನೀಡಿದರು. 

ಪುಸ್ತಕ ಬಿಡುಗಡೆಯ ಬಳಿಕ ಮಾತನಾಡಿದ ಲೇಖಕಿ ಸಂಶೋಧಕಿ ಹರ್ಷ ಶಂಕರ್ ಭಟ್, ನವಾಯತಿಯಲ್ಲಿ ಹುದುಗಿರುವ ಅನೇಕ ಪರ್ಶಿಯನ್ ಮತ್ತು ಅರೇಬಿಕ್ ಮೂಲದ ಭಾಷಾ ಲಕ್ಷಣಗಳನ್ನು ಗುರುತಿಸಿದ್ದೇನೆ. ಕೊಂಕಣಿ ಭಾಷೆಗಳಲ್ಲಿ ನವಾಯತಿಯು ವಿಶಿಷ್ಟ ಸಂರಚನೆ ಮತ್ತು ನುಡಿಗಟ್ಟುಗಳನ್ನು ಒಳಗೊಂಡಿದೆ ಎಂದರು.

 ನವಾಯತ ಸಮುದಾಯದಲ್ಲಿ ಒಂದು ಶ್ರೀಮಂತ ಕಾವ್ಯ ಪರಂಪರೆಯಿದೆ. ಅನೇಕ ಹಾಡುಗಳಲ್ಲಿ ಕೊಂಕಣಿಯ ಮೂಲಸ್ವರೂಪದ ನುಡಿಗಟ್ಟುಗಳು ಮತ್ತು ಪರ್ಶಿಯನ್ ಭಾಷೆಗಳ ಸಂಪರ್ಕದ ಪರಿಣಾಮಗಳನ್ನು ತಾನು ಗುರುತಿಸಿದ್ದೇನೆ ಎಂದು ನುಡಿದರು. 

ನವಾಯತರ ಮಾತೃಭಾಷಾಭಿಮಾನ, ಮಾತೃಭೂಮಿ ಭಟ್ಕಳ ಬಗೆಗಿನ ಅಭಿಮಾನವನ್ನು ಬಿಂಬಿಸುವ "ಆಪವತಾ ಅಪುಣ್ ಕಾ ಗಾಂವ್ ಯಾ" ಎನ್ನುವ ನವಾಯತಿ ಕವಿ ಶಬ್ಬೀರ್ ಬಾಯ್ದಾರವರ ಕವಿತೆಯನ್ನು ಹರ್ಷಾ ಭಟ್ ಹಾಡಿದರು. 

ಈ ಸಂಶೋಧನಾ ಕಾರ್ಯದ ಅವಧಿಯಲ್ಲಿ ತನ್ನನ್ನು ಮನೆಯ ಮಗಳಂತೆ ಪ್ರೀತಿನೀಡಿ ಗೌರವಿಸಿದ ನವಾಯತ ಸಮುದಾಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಬ್ದುಲ್ ರಹಮಾನ್ ಮೊಹ್ತೆಶಾಮ್ ರವರು, ಈ ಗ್ರಂಥವು ನವಾಯತ ಭಾಷೆಯ ಶಬ್ದ ಭಂಡಾರ, ಭಾಷಾ ಸಂರಚನೆ, ವ್ಯಾಕರಣ ಹಾಗೂ ಭಾಷಾ ಲಕ್ಷಣಗಳ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಒಳಗೊಂಡಿದೆ. ಅತ್ಯಂತ ಶೃದ್ಧೆಯಿಂದ ಈ ಸಂಶೋಧನೆಯನ್ನು ಪೂರೈಸಿದ ಹರ್ಷ ಶಂಕರ್ ಭಟ್ ಹಾಗೂ ಈ ಕಾರ್ಯಕ್ಕೆ ಫೆಲೋಶಿಪ್ ನೀಡಿದ ವಿಶ್ವ ಕೊಂಕಣಿ ಕೇಂದ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಹಾಗೂ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರು, ಕೊಂಕಣಿ ಭಾಷೆಗಳಲ್ಲಿ ನವಾಯತಿಯು ಒಂದು ಸುಂದರ ಭಾಷೆ. ಭಾಷೆಯ ಮೂಲಕ ಭಾವೈಕ್ಯ ಎನ್ನುವುದೇ ವಿಶ್ವ ಕೊಂಕಣಿ ಕೇಂದ್ರದ ಧ್ಯೇಯವಾಕ್ಯ. ಸಮುದಾಯಗಳನ್ನು ಬೆಸೆಯುವ ಕಾರ್ಯಕ್ಕಿಂತ ದೊಡ್ಡ ದೇಶಸೇವೆಯಿಲ್ಲ ಎಂದು ನುಡಿದರು.

ಸಮಾರಂಭದಲ್ಲಿ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲಿಯಾಸ್ ನದ್ವಿ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಕಾರ್ಯದರ್ಶಿ ಹಾಗೂ ಹಾಂಗ್ಯೋ ಐಸ್ ಕ್ರೀಂ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿರ‍್ರಹ್ಮಾನ್ ಮುನಿರಿ, ಖಾರ್ವಿ ಸಮುದಾಯದ ಕೆ.ಬಿ.ಖಾರ್ವಿ, ವಸಂತ್ ಖಾರ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಖಮರ್ ಸಾದಾ, ನಕ್ಷೆ ನವಾಯತ್ ಪತ್ರಿಕೆಯ ಸಂಪಾದಕ ಮೌಲಾನ ಅಬ್ದುಲ್ ಅಲೀಂ ಕಾಸ್ಮಿ ಮುಂತಾದವರು ಉಪಸ್ಥಿತರಿದ್ದರು. ಅತೀಖ್ ರ‍ ಹ್ಮಾನ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...