ಒಳಚರಂಡಿಗಳನ್ನು ಸ್ವಚ್ಚ ಮಾಡುವಾಗ ಸಂಭವಿಸುತ್ತಿರುವ ಸಾವುಗಳು ಸಹಜ ಸಾವುಗಳೇ?

Source: sonews | By Staff Correspondent | Published on 26th September 2018, 12:00 AM | National News | Special Report | Incidents | Don't Miss |

ಒಳಚರಂಡಿಗಳ ಸ್ವಚ್ಚತೆಯನ್ನು ಹೆಚ್ಚೆಚ್ಚು ಯಾಂತ್ರೀಕರಣಗೊಳಿಸುವ ಮೂಲಕ ಅಂಥಾ ಸಾವಿನ ಕೂಪದೊಳಗೆ ಮನುಷ್ಯರು ಇಳಿದು ಸ್ವಚ್ಚ ಮಾಡುವುದನ್ನು ತಪ್ಪಿಸಬಹುದು.

ಇತ್ತೀಚೆಗೆ ಎರಡು ಬೇರೆಬೇರೆ ಪ್ರಕರಣಗಳಲ್ಲಿ ಮೋರಿಯನ್ನು ಸ್ವಚ್ಚಗೊಳಿಸುತ್ತಿರುವಾಗ ಆರು ಜನ ಕಾರ್ಮಿಕರು ದೆಹಲಿಯಲ್ಲಿ ಸಾವನ್ನಪ್ಪಿದರು. ಇದು ಸರಣಿಯೋಪಾದಿಯಲ್ಲಿ ಸಂಭವಿಸುತ್ತಿರುವ ಇಂಥಾ ಸಾವುಗಳಿಗೆ ಹೊಸ ಸೇರ್ಪಡೆಯಾಗಿದೆ. ಆದರೆ ಆಡಳಿತ ವರ್ಗದ ಪ್ರತಿಕ್ರಿಯೆ ಮಾತ್ರ ಇದು ಸರ್ವೇ ಸಾಮಾನ್ಯವೇನೋ ಎಂಬಂತಿದೆ. ಪ್ರಧಾನಿಗಳ ಸ್ವಚ್ಚ ಭಾರತದ ಯೋಜನೆಯ ಅತ್ಯಗತ್ಯ ಭಾಗವಾಗಿರುವ ಇಂಥಾ ದುರ್ಭರ ಕೆಲಸಗಳನ್ನು ಮಾಡಲೇಬೇಕಾದ ಅನಿವಾರ್ಯತೆಗೊಳಗಾಗಿರುವವರ ಬಗ್ಗೆ ಸಮಾಜ ತೋರುತ್ತಿರುವ ಖಂಡನೀಯ ಮತ್ತು ಸಂವೇದನಾಶೂನ್ಯ ನಡವಳಿಕೆಗಳೆಲ್ಲಾ ಆಡಳಿತವರ್ಗದ ವರ್ತನೆಗಳಲ್ಲೂ ಅಭಿವ್ಯಕ್ತಗೊಳ್ಳುತ್ತಿದೆ.

ಹಿಂದೆ ಹೀಗೆಯೇ ಗುಂಡಿಗಿಳಿದು ತನ್ನಂಥ ಹಲವಾರು ಕಾರ್ಮಿಕರು ಉಸಿರುಗಟ್ಟಿ ಸತ್ತಿದ್ದಾರೆ ಎಂದು ತಿಳಿದಿದ್ದರೂ ಸಹ ಬಡತನದ ಒತ್ತಡಗಳಿಂದಾಗಿ ಕಾರ್ಮಿಕರು  ಹೆಚ್ಚೂಕಡಿಮೆ ಬೆತ್ತಲಾಗಿ  ಚರಂಡಿಯೊಳಗಿಳಿದು ಪೇರಿಗಟ್ಟಿರುವ ಮಲ-ಮೂತ್ರ, ಕೊಚ್ಚೆ ಕೊಳಕುಗಳನ್ನು ಬರಿಗೈಯಲ್ಲೇ ತೆಗೆದು ಸ್ವಚ್ಚಗೊಳಿಸುವ ಕೆಲಸಗಳನ್ನು ಮಾಡುತ್ತಾರೆ. ಇಂಥಾ ಕ್ರೂರ ಸಾವುಗಳು ಸಂಭವಿಸಿದಾಗಲೆಲ್ಲಾ ಹುಟ್ಟಿಕೊಳ್ಳುವ ಪ್ರಶ್ನೆಯೆಂದರೆ: ಚರಂಡಿಗಳನ್ನು ಸ್ವಚ್ಚಗೊಳಿಸುವ ಯಂತ್ರಗಳು ಲಭ್ಯವಿದ್ದರೂ ಮತ್ತು ಯಂತ್ರಗಳನ್ನೇ ಬಳಸಬೇಕೆಂದು ಕಾನೂನು ಕಡ್ಡಾಯ ಮಾಡುತ್ತಿದ್ದರೂ ಕಾರ್ಮಿಕರೇಕೆ ಕೊಚ್ಚೆಯೊಳಗಿಳಿಯಬೇಕಿದೆ? ಪ್ರಶ್ನೆಗೆ ತುರ್ತು ಉತ್ತರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ನೀಡಬೇಕೆಂದೂ ಮತ್ತು ಅವರ ಜೀವನದ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕೆಂದೂ ಸತತವಾಗಿ ಹೋರಾಡುತ್ತಿರುವ ಕಾರ್ಯಕರ್ತರು ಒಳಚರಂಡಿ ಕಾರ್ಮಿಕರ ಸ್ಥಿತಿಗತಿ ಇತ್ಯಾದಿಗ ಬಗ್ಗೆ ವಿಶ್ವಾಸಾರ್ಹ ಅಂಕಿಅಂಶಗಳೇ ಲಭ್ಯವಿಲ್ಲದಿರುವ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ದೇಶದಲ್ಲಿ ಎಷ್ಟು ಜನ ಬಗೆಯ ಸಫಾಯಿ ಕಾರ್ಮಿಕರಿದ್ದಾರೆ ಎಂಬ ಬಗ್ಗೆಯೇ ಯಾವುದೇ ದಾಖಲಾತಿಯಿಲ್ಲ. ಹಾಗೆ ದಾಖಲಾತಿ ಮಾಡಿದರೆ ಅಂಥಾ ವ್ಯವಸ್ಥೆ ಇನ್ನೂ ಅಸ್ಥಿತ್ವದಲ್ಲಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ ಎಂಬುದೇ ಅದರ ಬಗ್ಗೆ ದಾಖಲೆಗಳಿಲ್ಲದಿರುವುದಕ್ಕೆ ಕಾರಣವಿರಬಹುದು. ಆದರೂ, ಮಾಧ್ಯಮಗಳ ವರದಿಗಳು ಮತ್ತು ವಿವಿಧ ಶಾಸನ ಸಭೆ ಮತ್ತು ಸಂಸತ್ತುಗಳಲ್ಲಿ ಸರ್ಕಾರಗಳು ನೀಡಿರುವ ಉತ್ತರಗಳನ್ನು ಆಧರಿಸಿ ಸಫಾಯಿ ಕಾರ್ಮಿಕರ ಸಂಖ್ಯೆಯ ಬಗ್ಗೆ ಒಂದು ಅಂದಾಜಿದ್ದರೂ ಅದು ಗೊಂದಲಮಯವಾಗಿದೆ. ಆದರೆ ಅಸಲಿ ವಿಷಯವೇನೆಂದರೆ ೧೯೯೩ರಲ್ಲಿ ಜಾರಿಯಾಗಿ ೨೦೧೩ರಲ್ಲಿ ತಿದ್ದುಪಡಿಗೂ ಒಳಗಾದ ಎಂಪ್ಲಾಯ್ಮೆಂಟ್ ಆಫ ಮ್ಯಾನುಯಲ್ ಸ್ಕಾವೆಂಜರ್ಸ್ ಅಂಡ್ ಕನ್ಸ್ಟ್ರಕ್ಷನ್ ಆಫ್ ಡ್ರೈ ಲಾಟ್ರಿನ್ (ಪ್ರಾಹಿಬಿಷನ್) ಆಕ್ಟ್ (ಸಫಾಯಿ ಕಾರ್ಮಿಕರ ನೇಮಕಾತಿ ಮತ್ತು ಒಣಪಾಯಖಾನೆ ನಿರ್ಮಾಣ (ನಿಷೇಧ) ಕಾಯಿದೆ) ಪ್ರಕಾರ ಯಾವುದೇ ವ್ಯಕ್ತಿಯಾಗಲೀ, ಸ್ಥಳೀಯ ಸಂಸ್ಥೆಗಳಾಗಲೀ, ಅಥವಾ ಸಂಬಂಧಿತ ಸಂಸ್ಥೆಗಳಾಗಲೀ ಸೆಫ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಅಪಾಯಕಾರಿಯಾದ ರೀತಿಯಲ್ಲಿ ಸ್ವಚ್ಚಗೊಳಿಸುವ ಸಲುವಾಗಿ ಯಾರನ್ನೂ ನೇಮಿಸಿಕೊಳ್ಳುವಂತಿಲ್ಲ.

ಆದರೆ ಭಾರತದ ಸಮಾಜ ಮತ್ತು ಆಡಳಿತವರ್ಗಗಳು ತಾವು ಪ್ರಧಾನವೆಂದು ಪರಿಗಣಿಸುವ ವಿಷಯಗಳಲ್ಲಿ ಸಮಾಜದ ಅತ್ಯಂತ ಕೆಳಜಾತಿಗಳ ಹಿನ್ನೆಲೆಯಿರುವ ಸಫಾಯಿ ಕಾರ್ಮಿಕರ ಸ್ಥಿತಿಗತಿಗಳು ಯಾವುದೇ ಪ್ರಾಮುಖ್ಯತೆ ಪಡೆದುಕೊಂಡಿರುವುದು ಕಾಣುವುದಿಲ್ಲ. ಆದರೆ ತಮ್ಮದಾದ ಒಂದು ಗುರುತಿಲ್ಲದ ಕಾರ್ಮಿಕರು ಬಿಡಿಗಾಸು ಕೊಟ್ಟರು ನಮ್ಮ ನಗರ-ಪಟ್ಟಣಗಳ ಬೀದಿಗಳನ್ನು, ಗಲ್ಲಿಗಳನ್ನು, ಮೋರಿಗಳನ್ನು, ಸೆಪ್ಟಿಕ್ ಟ್ಯಾಂಕುಗಳನ್ನು ಮತ್ತು ಒಳಚರಂಡಿಗಳನ್ನು ಸ್ವಚ್ಚ ಮಾಡುತ್ತಾ ಬಂದಿದ್ದಾರೆ. ಆದರೆ ಸ್ವಚ್ಚ ಭಾರತ ಅಭಿಯಾನ ಪ್ರಾರಂಭವಾದಾಗಿನಿಂದಲೂ ಅಭಿಯಾನದ ನಿಜವಾದ ಕಾಲಾಳುಗಳಾಗಿರುವ ಕಾರ್ಮಿಕರ ಬಗ್ಗೆ ಕನಿಷ್ಟ ಗಮನನ್ನಾಗಲೀ ಅಥವಾ ಕನಿಷ್ಟ ಸಂಪನ್ಮೂಲವನ್ನಾಗಲೀ ನೀಡುತ್ತಿಲ್ಲವೆಂಬ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಬರಲಾಗಿದೆ. ವಾಸ್ತವವಾಗಿ ಮುಂಬೈನ ಪೌರ ಕಾರ್ಮಿಕರ ಮಹಾ ಮಂಡಳವಾಗಿರುವ ಕಚ್ರಾ ವಾಹತುಕ್ ಶ್ರಮಿಕ್ ಸಂಘ್ ಹೇಳುವಂತೆ ಪೊರಕೆ ಹಿಡಿದು ಫೋಸು ಕೊಡುವ ಗಣ್ಯರು ಮತ್ತು ಮಂತ್ರಿಮಾಗಧರು ತಮ್ಮ ನೆರಳುಗಳನ್ನಷ್ಟೇ ಗುಡಿಸುತ್ತಾರೆ. ಆದರೆ ದೇಶವನ್ನು ನಿಜವಾಗಿ ಸ್ವಚ್ಚವಾಗಿಟ್ಟಿರುವುದು ನಾವು.

ಇತರರ ಹೊಲಸನ್ನು ಸ್ವಚ್ಚಗೊಳಿಸುವ ಕೆಲಸವನ್ನು ಮಾಡುವವರು ಸಮಾಜದ ಅತ್ಯಂತ ಕೆಳಜಾತಿಗಳೇ ಆಗಿರುವುದರಿಂದಾಗಿ ಇಂಥಾ ಕೆಲಸಗಳಲ್ಲಿ ಮನುಷ್ಯರ ಬದಲು ಯಂತ್ರಗಳನ್ನು ಹೇಗೆ ಬಳಸಬಹುದೆಂಬ ಅನ್ವೇಷಣೆಯ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಕಾಣುವುದಿಲ್ಲ. ತ್ವರಿತಗತಿಯಲ್ಲಿ ಮತ್ತು ದಿಕ್ಕುದಿಸೆಯಿಲ್ಲದೆ ನಗರಿಕರಣಗೊಳ್ಳುತ್ತಿರುವ ದೇಶವೊಂದರಲ್ಲಿ ನಗರಗಳು ಸುಗಮವಾಗಿ ನಡೆಯಬೇಕೆಂದರೆ ಅದರ ಹೊಟ್ಟೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ನೈರ್ಮಲ್ಯ ವ್ಯವಸ್ಥೆಯ ಕೆಲಸಗಳು ಅಬಾಧಿತವಾಗಿ ಸಾಗುತ್ತಿರಬೇಕು. ಉದಾಹರಣೆಗೆ ಬೆಂಗಳೂರು ನಗರದಲ್ಲಿರುವ ವಸತಿ ಸಂಕೀರ್ಣಗಳು ತಮ್ಮದೇ ಕೊಳೆ ಶುದ್ಧೀಕರಣ ಘಟಕಗಳನ್ನು ಇಟ್ಟುಕೊಳ್ಳಬಹುದು ಮತ್ತು ಸ್ಥಳೀಯ ನಗರಾಡಳಿತದ ಸೇವೆಯನ್ನು ಪಡೆದುಕೊಳ್ಲದೆ ಅದರ ದುರಸ್ಥಿ ಮತ್ತು ನಿರ್ವಹಣೆಯನ್ನು ಮಾಡಿಕೊಳ್ಳಬಹುದು. ಇದರ ಅರ್ಥವೇನೆಂದರೆ ಕೆಲಸಕ್ಕಾಗಿ ಖಾಸಗಿ ಏಜೆನ್ಸಿಗಳನ್ನು ಅಥವಾ ಗುತ್ತಿಗೆದಾರರನ್ನು ನಿಯೋಜಿಸಿಕೊಳ್ಳಲಾಗುತ್ತದೆ. ಮತ್ತು ಸಂಸ್ಥೆಗಳು ಕಾರ್ಮಿಕರ ಸುರಕ್ಷೆತೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ದಿನಗೂಲಿ ಲೆಕ್ಕದಲ್ಲಿ  ಕಾರ್ಮಿಕರನ್ನು ಕರೆತಂದು ಇಂಥಾ ಅಪಾಯಕಾರಿ ಕೆಲಸಗಳನ್ನು ಮಾಡಿಸುತ್ತಾರೆ. ದೆಹಲಿಯಲ್ಲಿ ಸಾವನ್ನಪ್ಪಿದ ಆರು ಕಾರ್ಮಿಕರಲ್ಲಿ ಐವರು ಮೃತರಾದದ್ದು ಕಾರಣದಿಂದಾಗಿಯೇ.

ಸಫಾಯಿ ಕಾರ್ಮಿಕರ ನಡುವೆ ಕೆಲಸ ಮಾಡುತ್ತಿರುವ ಒಬ್ಬ ಪ್ರಮುಖ ಕಾರ್ಯಕರ್ತರು ಹೇಳಿದಂತೆ ಭಾರತದ ಬಳಿ ಮುಗಿಲೆತ್ತರಕ್ಕೆ ಉಪಗ್ರಹಗಳನ್ನು ಉಡಾಯಿಸಬಲ್ಲ ತಂತ್ರಜ್ನಾನವಿದೆ. ಆದರೆ ಕೇವಲ ಹತ್ತಿಪ್ಪತ್ತು ಅಡಿ ಕೆಳಗಿರುವ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕುಗಳನ್ನು ಸ್ವಚ್ಚಗೊಳಿಸುವ ತಂತ್ರಜ್ನಾನ ಮಾತ್ರ ಲಭ್ಯವಿಲ್ಲ. ಆದರೆ ತಮ್ಮದೇ ಆದ ತಂತ್ರಜ್ನಾನವನ್ನು ಅನ್ವಯಿಸಿಯೋ ಅಥವಾ ಇನ್ನಿತರ ಮಾರ್ಗಗಳಿಂದಲೋ ಇದಕ್ಕೆ ಪರ್ಯಾಯ ದಾರಿಯನ್ನು ಅನ್ವೇಷಿಸುವ ಪ್ರಯತ್ನಗಳು ನಡೆದಿವೆ. ಹೈದರಾಬಾದ್ ಮೆಟ್ರೋಪಾಲಿಟನ್ ವಾಟರ್ ಸಪ್ಲ್ಯ ಅಂಡ್ ಸೀವರೇಜ್ ಬೋರ್ಡ್ ಪ್ರಯೋಗಿಸುತ್ತಿರುವ ಜೆಟ್ಟಿಂಗ್ ಯಂತ್ರಗಳು, ಕೇರಳದ ತಿರುವನಂತಪುರಂನ ಸಾಮಾಜಿಕ ಪ್ರಜ್ನೆಯುಳ್ಳ ಇಂಜನೀಯರುಗಳು ಅನ್ವೇಷಿಸಿರುವ ಬಂದಿಕೂಟ್ ಹೆಸರಿನ ರೋಬೋಟಿಕ್ ಯಂತ್ರ ಪ್ರಯೋಗ, ಹೈದರಾಬಾದಿನ ಇಂಜನಿಯರುಗಳು ಮತ್ತು ವಿಜ್ನಾನಿಗಳು ಸಂಶೋಧಿಸಿರುವ ಸೆವರ್ ಕ್ರಾಕ್ ಯಂತ್ರಗಳು ಹಾಗೂ ಮಾಧ್ಯಮಗಳಲ್ಲಿ ವರದಿಯಾಗದಿರುವ ಇನ್ನೂ ಎಷ್ಟೋ ಪ್ರಯತ್ನಗಳು ಸಾಲಿನಲ್ಲಿವೆ. ಆಡಳಿತವರ್ಗವು ಇಂಥಾ ಪ್ರಯತ್ನಗಳನ್ನು ಹುರಿದುಂಬಿಸಬೇಕು ಮತ್ತು ಸಕ್ರಿಯವಾಗಿ ಬೆಂಬಲಿಸಬೇಕು. ದೆಹಲಿ ಸರ್ಕಾರಕ್ಕೂ ಸಹ ಕೊಚ್ಚೆ ಮತ್ತು ಮೋರಿಗಳ ಸ್ವಚ್ಚೀಕರಣವನ್ನು ಯಾಂತ್ರೀಕರಿಸುವ ಬಗ್ಗೆ ಪ್ರಸ್ತಾಪವೊಂದನ್ನು ಸಲ್ಲಿಸಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಸಫಾಯಿ ಕಾರ್ಮಿಕರಿಗೆ ಸಾಲವನ್ನು ನೀಡಿ ಮೋರಿ ಸ್ವಚ್ಚಗೊಳಿಸುವ ಯಂತ್ರಗಳನ್ನು ಕೊಂಡುಬಸುವಂತೆ ಮಾಡುವ ಮೂಲಕ ಅವರನ್ನೇ ಉದ್ಯಮಿಗಳನ್ನಾಗಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದರಿಂದ ಅವರು ಸಾಕಷ್ಟು ಕಷ್ಟ-ನಷ್ಟಗಳೆನ್ನುದುರಿಸಬಹುದಾದ ಸಾಧ್ಯತೆಗಳಿರುವುದರಿಂದ ಸರ್ಕಾರವೇ ಯಂತ್ರಗಳನ್ನು ಖರೀದಿ ಮಾಡಿ ಅವುಗಳನ್ನು ಬಳಸಲು ಜನರನ್ನು ನೇಮಕ ಮಾಡಿಕೊಳ್ಳಬೇಕು

ವಿಪರ್ಯಾಸದ ಸಂಗತಿಯೆಂದರೆ ಸರ್ಕಾರವು ಕೆಲವು ಕಡೆ ಸುರಕ್ಷಾ ಕವಚಗಳನ್ನು ಒದಗಿಸಿದ್ದರೂ ಅವು ತುಂಬಾ ವಜ್ಜೆಯಾಗಿರುವುದರಿಂದ ಅವುಗಳನ್ನು ಬಳಸಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ಸಫಾಯಿ ಕಾರ್ಮಿಕರು ಅವುಗಳನ್ನು ಕಳಚಿ ಬರಿಗೈಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇಲ್ಲೂ ಕೂಡಾ ಅಗತ್ಯವಿರುವುದು ಸತತವಾಗಿ ಪ್ರಯೋಗಗಳನ್ನು ಮಾಡುತ್ತಾ ಸುಗಮವಾಗಿ ಕೆಲಸ ಮಾಡಲು ಸಾಧ್ಯವಾಗುವ ಹಗುರವಾದ ರಕ್ಷಾ ಕವಚಗಳನ್ನು ಒದಗಿಸುವುದಾಗಿದೆ. ಆದರೆ ಸಫಾಯಿ ಕಾರ್ಮಿಕರ ಪ್ರಾಣಗಳು ಅಷ್ಟೆಲ್ಲಾ ಹಣವನ್ನು ವ್ಯಯಮಾಡಿ ಸೂಕ್ತವಾದ ತಂತ್ರಜ್ನಾನವನ್ನು ಅನ್ವೇಷಿಸುವಷ್ಟು ಅಮೂಲ್ಯವಾದದ್ದು  ಎಂದು ಅಧಿಕಾರಿಗಳು ಪರಿಗಣಿಸುತ್ತಾರೆಯೇ? ಯಂತ್ರೀಕೃತ ಸ್ವಚ್ಚತಾ ತಂತ್ರಜ್ನಾನದ ಕೊರತೆಯೆ ಜೊತೆಜೊತೆಗೆ ಸರ್ಕಾರದಲ್ಲೇ ಇಂಥಾ ನೈರ್ಮಲ್ಯ ಕೆಲಸಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಅನುದಿನದ ಮತ್ತು ನಿರಂತರ ನೈರ್ಮಲ್ಯೀಕರಣದ ಅಗತ್ಯವಿರುವ ರೈಲ್ವೇ ಇಲಾಖೆಯೇ ಸೇವೆಗೆ ಅತಿ ದೊಡ್ಡ ರೀತಿಯಲ್ಲಿ ಗುತ್ತಿಗೆ ಸೇವೆಯನ್ನು ಬಳಸಿಕೊಳ್ಳುವ ಸಂಸ್ಥೆಯಾಗಿದೆ.

ತಂತ್ರಜ್ನಾನ ಮತ್ತು ಅನ್ವೇಷಣೆಯ ಶಕ್ತಿಯನ್ನು ಪ್ರಗತಿಗಾಗಿ ಬಳಸಿಕೊಳ್ಳುವುದು ಸರ್ಕಾರದ ಧ್ಯೇಯವೆಂದು ಕೊಚ್ಚಿಕೊಳ್ಳಲಾಗುತ್ತದೆ. ಅದು ನಿಜವೇ ಆಗಿದ್ದಲ್ಲಿ ಸರ್ಕಾರವು ಶಕ್ತಿಯನ್ನು ಮೊದಲು ಸಫಾಯಿ ಕಾರ್ಮಿಕರ ಕ್ರೂರ ಮತ್ತು ಅನಗತ್ಯ ಸಾವುಗಳನ್ನು ತಡೆಗಟ್ಟಲು ಬಳಸಬೇಕಿದೆ.

ಕೃಪೆ: Economic and Political Weekly ಅನು: ಶಿವಸುಂದರ್

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...