“ಮತದಾನ ಪವಿತ್ರ ದಾನ” -ಪ್ರೊ. ಎಂ. ಕೆ. ಶೇಖ್

Source: sonews | By Staff Correspondent | Published on 28th January 2020, 3:31 PM | Coastal News | Don't Miss |

ಭಟ್ಕಳ : ಮತದಾನ ಪವಿತ್ರ ದಾನವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಪ್ರಮುಖವಾಗಿರುವುದರಿಂದ ಸರ್ವರೂ ಮತದಾನ ಮಾಡುವುದರ ಮೂಲಕ ದೇಶದ ಆಡಳಿತದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಇಲ್ಲಿಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಪ್ರೊ. ಎಂ. ಕೆ. ಶೇಖ ಕರೆನೀಡಿದರು. 

ಅಂಜುಮನ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದಡಿಯಲ್ಲಿ ಹಮ್ಮಿಕೊಂಡ ಮತದಾನ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರೊ. ಶೇಖ್ ಮತದಾನ ನಮಗೆಲ್ಲರಿಗೂ ಸಂವಿಧಾನದತ್ತವಾಗಿ ಬಂದ ಅಧಿಕಾರವಾಗಿದ್ದು, ಅದನ್ನು ಅತ್ಯಂತ ವಿವೇಚನೆಯಿಂದ ಬಳಸಿಕೊಳ್ಳಬೇಕೆಂದು ಹೇಳಿದರು. ಜಾತಿ, ಮತ, ಧರ್ಮ, ಭಾಷೆ, ಪ್ರದೇಶ ಎಂಬ ಭೇದಭಾವವಿಲ್ಲದೆ ಮತ್ತು ಯಾವುದೇ ತರದ ಆಮಿಷಗಳಿಗೆ ಬಲಿಯಾಗದೆ ಪ್ರಜೆಗಳನ್ನು, ದೇಶವನ್ನು ಯೋಗ್ಯ ರೀತಿಯಲ್ಲಿ ಮುನ್ನೆಡಸಬಲ್ಲ ವ್ಯಕ್ತಿಗಳನ್ನು ಚುನಾಯಿಸುವುದು ನಮ್ಮೆಲ್ಲರ ಆಧ್ಯತೆಯಾಗಬೇಕೆಂದು ತಿಳಿಸಿದರು.

ಎನ್‍ಎಸ್‍ಎಸ್ ಘಟಕದ ಸಂಯೋಜನಾಧಿಕಾರಿಗಳಾದ ಪ್ರೊ. ಆರ್. ಎಸ್. ನಾಯಕರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಹದಿನೆಂಟು ವರ್ಷ ಮೀರಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ದಾಖಲಿಸಬೇಕು ಮತ್ತು ಮುಂದೆ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿ ಖಡ್ಡಾಯವಾಗಿ ಮತ ಚಲಾಯಿಸಿ ಪ್ರಬುದ್ಧತೆಯನ್ನು ಮೆರೆಯಬೇಕೆಂದು ಹೇಳಿದರು. ನಗರ ಪ್ರದೇಶದ ಜನ ಮತ್ತು ವಿದ್ಯಾವಂತರು ಮತದಾನದಲ್ಲಿ ನಿರುತ್ಸಾಹ ತೋರುತ್ತಿರುವುದು ಬೇಜವಾಬ್ದಾರಿತನದ ದ್ಯೋತಕವೆಂದು ವಿಷಾದ ವ್ಯಕ್ತಪಡಿಸಿದರು. 

ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎ. ಎಂ. ಮುಲ್ಲಾ ವಿದ್ಯಾರ್ಥಿಗಳು ಮತದಾರರ ಯಾದಿಗೆ ತಮ್ಮ ಹೆಸರು ನೊಂದಾಯಿಸಿ ಮತ ಚಲಾಯಿಸುವುದರ ಜೊತೆಗೆ, ತಮ್ಮ ಅಕ್ಕಪಕ್ಕದ ಜನರಿಗೂ ಮತದಾರರ ಪಟ್ಟಿಗೆ ಸೇರುವಂತೆ ಮತ್ತು ಯಾವ ಆಮಿಷಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಗೆ ಮತನೀಡುವಂತೆ ತಿಳಿಹೇಳುವುದೂ ರಾಷ್ಟ್ರಕ್ಕೆ ಸಲ್ಲಿಸುವ ಸೇವೆಯಾಗುತ್ತದೆಂದು ಕಿವಿಮಾತು ಹೇಳಿದರು.
ನ್ಯಾಕ್ ಸಂಯೋಜಕರಾದ ಪ್ರೊ. ಎಸ್. ಎ. ಇಂಡಿಕರ ಮತ್ತು ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಎ. ಅತ್ತರ ವೇದಿಕೆಯಲ್ಲಿದ್ದರು. ಆರಂಭದಲ್ಲಿ ವಿದ್ಯಾರ್ಥಿ ಶ್ರೇಯಸ್ ನಾಯಕ ಸರ್ವರನ್ನೂ ಸ್ವಾಗತಿಸಿದರೆ, ಕೊನೆಯಲ್ಲಿ ರೋಹಿತ ನಾಯ್ಕ ವಂದಿಸಿದರು. ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ ಹರೀಶ ನಾಯ್ಕ ಕಾರ್ಯಕ್ರಮನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...