ಪೋಲಿಯೊ ಕಾರ್ಯಕ್ರಮ. ಮೊದಲ ಹಂತದಲ್ಲಿ ಸುಮಾರು ೨೦ ಸಾವಿರ ಜನರಿಗೆ ಕೋವಿಡ್ ಲಸಿಕೆಗೆ ಸಿದ್ಧತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Source: SO News | By Laxmi Tanaya | Published on 18th December 2020, 9:50 AM | State News |

ಧಾರವಾಡ :  ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ದೇಶದಾದ್ಯಂತ ಜ.೧೭ ರಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು.ಕೋವಿಡ್ ಲಸಿಕಾಕರಣಕ್ಕೆ (ವ್ಯಾಕ್ಸಿನೇಷನ್) ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಗುರುತಿಸಲಾಗಿರುವ ೨೦ ಸಾವಿರಕ್ಕೂ ಅಧಿಕ  ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಈಗಾಗಲೇ ಕೋವಿನ್ ಸಾಫ್ಟ್ವೇರ್ ಗೆ ಅಪ್‌ಲೋಡ್ ಮಾಡಲಾಗಿದೆ . ರಾಜ್ಯದಲ್ಲಿಯೇ ವಿಶಿಷ್ಟ ಎನಿಸುವ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಔಷಧೀಯ ಮಳಿಗೆ ಹಾಗೂ ಪ್ರಯೋಗಾಲಯಗಳ ಬಳಿ ಉಚಿತವಾಗಿ ಕೋವಿಡ್  ತಪಾಸಣೆಗೆ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು, ಔಷಧ ವ್ಯಾಪಾರಿಗಳು ಸ್ವಇಚ್ಛೆಯಿಂದ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.

 ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗುರುವಾರ ಸಂಜೆ ರಾಷ್ಟ್ರೀಯ ಪಲ್ಸ್ ಪೋಲಿಯೊ , ಕೋವಿಡ್ ಲಸಿಕಾಕರಣ ಕುರಿತು ಕಾರ್ಯಪಡೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಪೊಲಿಯೋ ಮುಕ್ತ ರಾಷ್ಟ್ರವಾಗಿದೆ. ನೆರೆಯ ಕೆಲವು ರಾಷ್ಟ್ರಗಳಲ್ಲಿ ಈ ವೈರಾಣು ಇನ್ನೂ ಇರುವುದರಿಂದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯ ಎಚ್ಚರಿಕೆಯಿಂದ ನಿರ್ವಹಿಸಬೇಕು.ಈ ಬಾರಿ ಲಸಿಕಾ ಕಾರ್ಯಕ್ರಮದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು . ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಹಾಕುವಾಗ ಮನೆಯ ಒಳಗಡೆ ಪ್ರವೇಶ ಮಾಡದೇ, ಮಗುವನ್ನು ಹೊರಗೆ ಕರೆ ತರಲು ತಿಳಿಸಬೇಕು. ನೆಗಡಿ,ಕೆಮ್ಮು, ಜ್ವರ ಇರುವ ಮಕ್ಕಳಿಗೆ ಲಸಿಕೆ ಹಾಕುವಾಗ ಪ್ರತ್ಯೇಕತೆಯ ಎಚ್ಚರಿಕೆ ವಹಿಸಬೇಕು. ಕಟ್ಟಡ ನಿರ್ಮಾಣ ಸ್ಥಳ, ಕಾರ್ಮಿಕರ ವಸತಿ ಸ್ಥಳಗಳಿಗೆ ತೆರಳಿ ಜಾಗೃತಿ ಮಾಡಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಕಿಟ್‌ಗಳನ್ನು ಈ ಬಾರಿ ಜನವರಿ ೧೭ ರಂದು ಪಲ್ಸ್ ಪೋಲಿಯೊ ಬೂತ್‌ಗಳಲ್ಲಿಯೇ ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. 

ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮಾತನಾಡಿ, ಕಳೆದ ಜನವರಿಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಶೇ.೧೦೦.೭೫ ಗುರಿ ಸಾಧಿಸಲಾಗಿತ್ತು.ಈ ಬಾರಿ ಬರುವ ೨೦೨೧ ರ ಜನವರಿ ೧೭ ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಜರುಗಲಿದೆ. ಇದಕ್ಕಾಗಿ ೮೮೮ ಬೂತ್‌ಗಳನ್ನು ಸ್ಥಾಪಿಸಲಾಗುವುದು. ಜನವರಿ ೧೮ ರಿಂದ ೨೦ ರವರೆಗೆ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ೫ ವರ್ಷದೊಳಗಿನ ೨೧೩೦೮೨ ಮಕ್ಕಳನ್ನು ಗುರುತಿಸಲಾಗಿದೆ.೯೫ ಟ್ರಾಂಜಿಸ್ಟ್ , ೫೫ ಸಂಚಾರಿ ತಂಡಗಳು, ೩೮೧೬ ವ್ಯಾಕ್ಸಿನೇಟರುಗಳು,  ೧೯೬ ಮೇಲ್ವಿಚಾರಕರ ಅಗತ್ಯವಿದೆ. ಜಿಲ್ಲೆಯಲ್ಲಿ ೪೧೯೭೧೩ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಸಭೆಗೆ ವಿವರಿಸಿದರು.

 ಪ್ರಥಮ ಹಂತದಲ್ಲಿ ೨೦೮೪೩ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ :  ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಲಸಿಕಾಕರಣಕ್ಕೆ (ವ್ಯಾಕ್ಸಿನೇಷನ್) ೬೮ ಸರ್ಕಾರಿ ಕಟ್ಟಡಗಳು, ೮೩೮ ಖಾಸಗಿ ಸೌಲಭ್ಯಗಳು ಸೇರಿ ಒಟ್ಟು ೯೦೬ ಲಸಿಕಾ ಕೇಂದ್ರಗಳ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಕೋವಿನ್ ಪೋರ್ಟಲ್‌ನಲ್ಲಿ ೨೦೮೪೩ ವಿವಿಧ ಹಂತಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ. ಶೇ. ೧೦೭ ರಷ್ಟು ಮಾಹಿತಿ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆಯನ್ನು ವೈಜ್ಞಾನಿಕವಾಗಿ ದಾಸ್ತಾನುಮಾಡಿಕೊಳ್ಳಲು ಸ್ಥಳ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದರು.
 
ಔಷಧಾಲಯ ಮತ್ತು ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕವಾಗಿ ಕೋವಿಡ್ ಸ್ವಾಬ್ ಸಂಗ್ರಹ:  ಜಿಲ್ಲೆಯ ಖಾಸಗಿ ಜೌಷಧಮಳಿಗೆಗಳು ಹಾಗೂ ರಕ್ತ ತಪಾಸಣಾ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕವಾಗಿ ಕೋವಿಡ್ ಪತ್ತೆಗೆ ಮೂಗು ಮತ್ತು ಗಂಟಲು ದ್ರವ ಸಂಗ್ರಹಣೆ ಬೂತ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಜಿಲ್ಲೆಯ ಔಷದ ವ್ಯಾಪಾರಿಗಳ ಸಹಕಾರ ಇದಕ್ಕೆ ಅಗತ್ಯ. ಸ್ವಯಂ ಪ್ರೇರಣೆಯಿಂದ  ಮುಂದೆ ಬರುವ ಔಷಧ ಮಳಿಗೆಗಳಲ್ಲಿ ಸ್ವಾಬ್ ಸಂಗ್ರಹಣೆ ಪ್ರಾರಂಭಿಸಲಾಗುವುದು. ಇದರಿಂದ ಜನರಿಗೆ ಅನುಕೂಲವಾಗಲಿದೆ. ಔಷಧ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ಸೇವೆ ನೀಡಿದಂತಾಗುತ್ತದೆ ಹಾಗೂ ಅವರೊಂದಿಗೆ ಸೌಹಾರ್ದ ಬಾಂಧವ್ಯ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ಔಷಧ ವ್ಯಾಪಾರಿಗಳಿಗೆ ಸಲಹೆ ನೀಡಿದರು.
 ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಉಪ ಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಭು ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಉಪವಿಭಾಗಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಬೆಳಗಾವಿ ವಿಭಾಗದ ಎನ್.ಪಿ.ಎಸ್.ಪಿ. ಎಸ್.ಎಮ್.ಒ ಡಾ. ಸಿದ್ದಲಿಂಗಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ ಮತ್ತಿತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...