ಸಂಸತ್ ಕಲಾಪದ ನಡುವೆಯೇ ಹಾಜರಾಗಲು ಈ.ಡಿ. ಸಮನ್ಸ್; ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

Source: Vb | By I.G. Bhatkali | Published on 6th August 2022, 9:45 AM | National News |

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದು, ಸಂಸತ್ತಿನ ಕಲಾಪದ ನಡುವೆಯೇ ಅಪರಾಹ್ನ 12:30ಕ್ಕೆ ಹಾಜರಾಗುವಂತೆ ಸೂಚಿಸಿತು ಎಂದು ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ನಾನು ಕಾನೂನು ಅನುಸರಿಸಲು ಬಯಸುತ್ತೇನೆ. ಆದರೆ, ಸಂಸತ್ತಿನ ಕಲಾಪ ನಡೆಯುತ್ತಿರುವಾಗ ಈ ರೀತಿ ಸಮನ್ ನೀಡುವುದು ಎಷ್ಟು ಸೂಕ್ತ?” ಎಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಇದೇ ಸಂದರ್ಭ ಅವರು, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ ಕಚೇರಿಗೆ ಈ.ಡಿ. ಬುಧವಾರ ಬೀಗಮುದ್ರೆ ಹಾಕುತ್ತಿದ್ದಂತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ನಿವಾಸಗಳು ಹಾಗೂ ಪಕ್ಷದ ಕೇಂದ್ರ ಕಚೇರಿಯನ್ನು ಪೊಲೀಸರು ಸುತ್ತುವರಿದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ನಾವು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆಯೇ? ಕೇಂದ್ರ ಸರಕಾರ ನೈತಿಕ ಸ್ಥೆರ್ಯವನ್ನು ಕುಗ್ಗಿಸಲು ಹಾಗೂ ನಮ್ಮನ್ನು (ಕಾಂಗ್ರೆಸ್) ನಾಶಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಹೆದರುವುದಿಲ್ಲ. ನಾವು ಹೋರಾಡಲಿದ್ದೇವೆ ಎಂದು ಅವರು ಹೇಳಿದರು. ಜಾರಿ ನಿರ್ದೇಶನಾಲಯ ಹಾಗೂ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವ ಆರೋಪದ ಕುರಿತು ರಾಜ್ಯ ಸಭೆಯಲ್ಲಿ ಚರ್ಚೆ ನಡೆಸುವಂತೆ ಖರ್ಗೆ ಅವರು ಆಗ್ರಹಿಸಿದರು.

ಹೆರಾಲ್ಡ್ ಹೌಸ್‌ನಲ್ಲಿರುವ ಯಂಗ್ ಇಂಡಿಯನ್ ಕಂಪೆನಿಗೆ ಬುಧವಾರ ಬೀಗ ಮುದ್ರೆ ಹಾಕಿದ್ದ ಜಾರಿ ನಿರ್ದೇಶನಾಲಯ ಇಂದು ಶೋಧ ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿ ಹಾಜರಿರುವಂತೆ ಖರ್ಗೆ ಅವರಿಗೆ ಸಮನ್ಸ್ ನೀಡಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...