ಜ.20ರ ಮುರುಡೇಶ್ವರ ಬ್ರಹ್ಮ ರಥೋತ್ಸವ ಆಚರಣೆ; ಮತ್ತೊಂದು ನಿಯಮ ಪ್ರಕಟಿಸಿದ ಎಸಿ ಮಮತಾದೇವಿ

Source: S O News | By V. D. Bhatkal | Published on 18th January 2022, 3:00 PM | Coastal News |

ಭಟ್ಕಳ: ಕೊರೊನಾ ಎಂಬ ಮಹಾಮಾರಿ ಹೇಗೆ ಅನಿರೀಕ್ಷಿತವಾಗಿ ಒಕ್ಕರಿಸಿ ಜನರಲ್ಲಿ ಆತಂಕ ಸೃಷ್ಟಿಸಿತೋ, ರೂಪಾಂತರಗೊಳ್ಳುತ್ತ ಹೊಸ ಹೆಸರಿನಲ್ಲಿ ಕೀಟಲೆ ನೀಡುತ್ತ ಹೋಯಿತೋ, ಸರಕಾರ, ಅಧಿಕಾರಿಗಳ ಆದೇಶವೂ ಬಣ್ಣ, ರೂಪ ಬದಲಾಯಿಸುತ್ತ ಜನರನ್ನು ಗೊಂದಲಕ್ಕೆ ನೂಕುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಮೊನ್ನೆಯಷ್ಟೇ ಪ್ರಕಟಗೊಂಡಿದ್ದ ಜ.20ಕ್ಕೆ ಆಚರಿಸಲಾಗುವ ಮುರುಡೇಶ್ವರ ರಥೋತ್ಸವ ಕುರಿತ ಬಂದ್ ಆದೇಶ, ರಾಜಕಾರಣಿಗಳು, ವ್ಯಾಪಾರಿಗಳು ಹಾಗೂ ಜನಪ್ರತಿನಿಧಿಗಳ ಒತ್ತಡದಿಂದ ಮತ್ತೆ ರೂಪಾಂತರಗೊಂಡು ರಥೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ಅನುಮತಿ ನೀಡಿದೆ.

 ಅಧಿಕಾರಿಗಳು ಹೊರಡಿಸಿದ ಆದೇಶವನ್ನು ಅಧಿಕಾರಿಗಳೇ ಮೊದಲು ಪಾಲಿಸಲಿ. 2000-3000 ಜನರು ಜಾತ್ರೆಯಲ್ಲಿ ಸೇರುವುದಾದರೆ ಅಂಗಡಿ ಮಾತ್ರ ಬೇಡ ಎನ್ನುವುದು ಯಾವ ತರ್ಕ?
   - ತಿಮ್ಮಪ್ಪ ನಾಯ್ಕ, ಪಂಚಾಯತ ಸದಸ್ಯರು, ಮಾವಳ್ಳಿ-1

ಹೊಸ ಆದೇಶದ ಪ್ರಕಾರ ರಥೋತ್ಸವ ನಡೆಯುವ ಸ್ಥಳಕ್ಕೆ ದೇವಸ್ಥಾನ ಸಮಿತಿ ಹಾಗೂ ದೇವಸ್ಥಾನದ ಸೀಮಾ ಸಮಿತಿಯ ಸದಸ್ಯರನ್ನು ಒಳಗೊಂಡಂತೆ ಪಾಸ್ ಪಡೆದ 200 ಜನರಿಗೆ ಆರ್‍ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ದೃಢಪಡಿಸಿಕೊಂಡು ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಇನ್ನಿತರೇ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.  ರಥೋತ್ಸವದಲ್ಲಿ ಹಣ್ಣು ಕಾಯಿ, ರಥ ಕಾಣಿಕೆ ಎಲ್ಲ ರೀತಿಯ ಸೇವೆಗಳನ್ನು ನಿರ್ಬಂಧಿಸಿದ್ದು, ಧಾರ್ಮಿಕ ವಿಧಿ ವಿಧಾನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿಪರ್ಯಾಸ ಸಂಗತಿ ಎಂದರೆ ಕೊರೊನಾ ನಿಯಂತ್ರಣಕ್ಕೆ ಕಳೆದ ಜ.4ರಿಂದ ಸರಕಾರದ ಮಾರ್ಗಸೂಚಿ ಪ್ರಕಟಗೊಳ್ಳುತ್ತಲೇ ಇದ್ದರೂ, ಆದೇಶದ ಒಕ್ಕಣಿಗೂ ವಾಸ್ತವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇಲ್ಲಿ ಯಾವುದೇ ಕಾರ್ಯಕ್ರಮ ಇರಲಿ 30% ಆದೇಶವೂ ಪಾಲನೆಯಾಗುತ್ತಲೇ ಇಲ್ಲ ಅಥವಾ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸುತ್ತಲೇ ಇಲ್ಲ! ಹಾಗಾದರೆ ಈ ಆದೇಶವನ್ನು ಪ್ರಕಟಿಸುವುದು ಏಕೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲ. ಎಲ್ಲರೂ ಆದೇಶ ಪಾಲನೆಯ ಹೆಸರಿನಲ್ಲಿ ನುಣುಚಿಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಆರ್‍ಟಿಪಿಸಿಆರ್ ಟೆಸ್ಟಂತೆ!:
ಮುರುಡೇಶ್ವರ ಜಾತ್ರೆ, ಉತ್ಸವ, ಕಾರ್ಯಕ್ರಮದಲ್ಲಿ ಹಾಜರಾಗುವ ಜನರ ಆರ್‍ಟಿಪಿಸಿಆರ್ ಟೆಸ್ಟಂತೆ, ನೆಗೆಟಿವ್ ಪ್ರಮಾಣ ಪತ್ರ ಬೇಕಂತೆ! ಯಾವುದೇ ಕಾರ್ಯಕ್ರಮ, ಉತ್ಸವಕ್ಕೆ ತೆರಳಿದರೂ ಆದೇಶದಲ್ಲಿರುವ ಈ ನಿಯಮದಷ್ಟು ಹಾಸ್ಯಾಸ್ಪದ ಸಂಗತಿ ಬೇರೆ ಏನೂ ಇಲ್ಲ. ತಾಲೂಕಿನಲ್ಲಿ ನಡೆದ ಉಳಿದ ಉತ್ಸವ, ಕಾರ್ಯಕ್ರಮಗಳನ್ನು ನೋಡಿಕೊಂಡು ಮುರುಡೇಶ್ವರ ರಥೋತ್ಸವ ವಿಷಯಕ್ಕೆ ಬರುವುದಾದರೆ, ಅಲ್ಲಿ ಬರುವ ಜನರ ಲೆಕ್ಕ ಹಾಕುವವರು, ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ದಾಖಲಿಸಿಕೊಳ್ಳುವವರು ಯಾರಪ್ಪ ಎನ್ನುವುದು ಮತ್ತೊಂದು ಗೋಳಿನ ಕಥೆ! ಜನರನ್ನು ಆದೇಶದ ಹೆಸರಿನಲ್ಲಿ ಹೆದರಿಸಿಯೂ ಮುರುಡೇಶ್ವರ ಜಾತ್ರೆಯಲ್ಲಿ ಸಾವಿರಾರು ಜನರು ಒಂದೆಡೆ ಸೇರಲು ಅವಕಾಶ ಸಿಗುವುದಾದರೆ, 20-30 ಅಂಗಡಿ ತೆರೆಯಲು ನಿರ್ಬಂಧ ವಿಧಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. 

ಬ್ಯಾರಿಕೇಡ್ ಅಂತೆ, ಜನರಿಗೆ ನಿರ್ಬಂಧವಂತೆ!
ಮುರುಡೇಶ್ವರದಲ್ಲಿ ಜಾತ್ರೆ, ಅಂಗಡಿಗೆ ಅವಕಾಶಗಳನ್ನಾದರೂ ನೀಡಿ ಅಥವಾ ನೀವೇ ಹೊರಡಿಸಿದ ನಿಯಮಗಳ ಪೈಕಿ ಕನಿಷ್ಠ 50% ಅನ್ನಾದರೂ ಪಾಲಿಸಿ ಎಂದು ಅಧಿಕಾರಿಗಳನ್ನು ಕೇಳಿದರೆ ನಿಯಮ ಪಾಲನೆ ಕಟ್ಟುನಿಟ್ಟು ಎನ್ನುತ್ತಿದ್ದಾರೆ. ಮುರುಡೇಶ್ವರ ಓಲಗಮಂಟಪವನ್ನು ಸೇರುವ 11 ಮಾರ್ಗಗಳನ್ನು ಬಂದ್ ಮಾಡಿ ಪೊಲೀಸ್ ಕಾವಲನ್ನು ಹಾಕುತ್ತಾರಂತೆ. ಮಂಗಳವಾರವೇ ಪಾಸ್ ಪಡೆಯುವ 200 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗುತ್ತದೆಯಂತೆ, ಪಾಸಿಟಿವ್ ಬಂದವರಿಗೆ ಜಾಗವಿಲ್ಲವಂತೆ! ಇದು ತಮಾಷೆಯೋ, ನಿಜವೋ ಎನ್ನುವುದನ್ನು ಬ್ರಹ್ಮರಥೋತ್ಸವದ ದಿನ ಮಹಾ ಶಿವನೇ ಉತ್ತರಿಸಬಹುದು! 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...