೬೫ ಕ್ಕೂ ಹೆಚ್ಚು ಅನಾರೋಗ್ಯ ಕುರಿಗಳ ಸಾವು

Source: sonews | By Staff Correspondent | Published on 7th June 2017, 8:29 PM | Coastal News | State News | Incidents | Don't Miss |

ಮುಂಡಗೋಡ: ಅನಾರೋಗ್ಯದಿಂದ ಸುಮಾರು ೬೫ ಕ್ಕೂ ಅಧಿಕ ಕುರಿ(ಮೇಕೆಗಳು) ಸಾವನ್ನಪ್ಪಿದ್ದು, ಮತ್ತಷ್ಟು ಕುರಿಗಳು ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಮಂಗಳವಾರ ತಾಲೂಕಿನ ನ್ಯಾಸರ್ಗಿ ಗ್ರಾಮದ ಅಂಚಿನ ಗದ್ದೆಯಲ್ಲಿ ಬೆಳಕಿಗೆ ಬಂದಿದೆ 
ಹಲವು ದಿನಗಳಿಂದ ಬೀಡು ಬಿಟ್ಟಿದ್ದ ಕುರಿಗಳ ಹಿಂಡಿನಲ್ಲಿ ಕಳೆದ ೩-೪ ದಿನಗಳಿಂದ ನಿತ್ಯ ಹತ್ತಾರು ಕುರಿಗಳು ಪ್ರಾಣ ಬಿಡುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯು ಭತ್ತದ ಸುಗ್ಗಿ ಪ್ರಾರಂಭವಾಗುತ್ತಿದ್ದಂತೆ ಸಹಸ್ರಾರು ಸಂಖ್ಯೆಯ ಕುರಿಗಳೊಂದಿಗೆ ಈ ಭಾಗಕ್ಕೆ ಲಗ್ಗೆ ಇಟ್ಟು ಸಂತಾನೋತ್ಪತ್ತಿ ಮಾಡಿಕೊಂಡು ಇನ್ನೇನು ಮುಂಗಾರು ಮಳೆಗಾಲ ಪ್ರಾರಂಭವಾಗಿ ಸ್ವ ಗ್ರಾಮಕ್ಕೆ ಮರಳುವ ಹಂತದಲ್ಲಿರುವ ಕುರುಬರಿಗೆ ಈ ಅನಾಹುತದಿಂದ ತೀವ್ರ ಪೆಟ್ಟು ಬಿದ್ದಂತಾಗಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ಯ ಮಹಾದೇವ ಬೀರಪ್ಪ ಹೆಗ್ಗನ್ನವರ ಹಾಗೂ ರಾಮಚಂದ್ರ ಹೆಗ್ಗನ್ನವರ ಮತ್ತು ಮಾಯಪ್ಪ ಅವರಿಗೆ ಸೇರಿದ ಕುರಿಗಳೇ ಸಾವನ್ನಪ್ಪಿವೆ. ಸುದ್ದಿ ತಿಳಿದ ತಾಲೂಕಾ ಪಶು ವೈದ್ಯಾಧಿಕಾರಿ ರವೀಂದ್ರ ಹುಜರತ್ತಿ, ಗೋವಿಂದ ಭಟ್ ಹಾಗೂ ಸಂಶೋದನಾಧಿಕಾರಿ ಗಣೇಶ ಹೆಗಡೆ ಸೇರಿದಂತೆ ಹಲವು ಪಶು ವೈದ್ಯರು ಈಗ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ. ಸಾವನ್ನಪ್ಪಿದ ಕುರಿಗಳ ಮರಣೋತ್ತರ ಪರೀಕೆಯನ್ನು ಸ್ತಳದಲ್ಲಿಯೇ ನಡೆಸಲಾಗುತ್ತಿದೆ. ಅಸ್ವಸ್ಥಗೊಂಡ ಕುರಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಚಿಕಿತ್ಸೆ ಪಲಕಾರಿಯಾಗದೆ ಸಾಕಷ್ಟು ಕುರಿಗಳು ಮೃತಪಡುತ್ತಲೇ ಸಾಗಿರುವುದು ಮತ್ತಷ್ಟು ಬೀತಿಯುಂಟು ಮಾಡಿದೆ.
ತಹಶೀಲ್ದಾರ ಅಶೋಕ ಗುರಾಣಿ, ಸ್ಥಳಿಯ ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ ಮಂಗಳವಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುರಿಗಳನ್ನು ಕಳೆದುಕೊಂಡ ಕುರುಬಗೌಡರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸರ್ಕಾರದಿಂದ ತಲಾ ಒಂದು ಕುರಿಗೆ ೫ ಸಾವಿರದಂತೆ ಪರಿಹಾರ ಒದಗಿಸಲಾಗುದೆಂದು ತಿಳಿಸಿದ ಅವರು, ಅನಾರೋಗ್ಯಗೊಂಡಿರುವ ಕುರಿಗಳಿಗೆ ವೈದ್ಯರಿಂದ ಅಗತ್ಯ ಚಿಕಿತ್ಸೆ ಕೊಡಿಸುವುದಾಗಿ ಬರವಸೆ ನೀಡಿದರು.
ಹೇಳಿಕೆ: ಕರಳು ಬೇನೆಯಿಂದ ಕುರಿಗಳು ಸಾವನ್ನಪ್ಪುತ್ತಿರಬಹುದೆಂದು ಅಂದಾಜಿಸಲಾಗಿದೆ. ಕರಳು ಬೇನೆ ರೋಗ ತಡೆಯಲು ಮುಂಜಾಗ್ರತೆಯಾಗಿ ಇ.ಟಿ ಲಸಿಕೆ ಹಾಕಬೇಕು. ಆದರೆ ಕುರಿಗಳಿಗೆ ಲಸಿಕೆ ಹಾಕಲಾಗಿಲ್ಲ. ಈಗ ಮಳೆ ಬಿದ್ದಿರುವುದರಿಂದ ಚಿಗುರೊಡೆದ ಎಳೆಯ ಹುಲ್ಲು ಸೇವಿಸುವುದರಿಂದ ಕುರಿಗಳು ಮೃತಪಡುವ ಸಾದ್ಯತೆ ಇರುತ್ತದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ. _ರವೀಂದ್ರ ಹುಜರತ್ತಿ, ತಾಲೂಕಾ ಪಶು ವೈದ್ಯಾಧಿಕಾರಿ 

ಆರಾಮವಾಗಿಯೇ ಇದ್ದ ಕುರಿಗಳು ಒಂದರ ಹಿಂದೊಂದು ಅನಾರೋಗ್ಯಗೊಂಡು ಕುಸಿದು ಬಿದ್ದು, ಸಾವನ್ನಪ್ಪಲಾರಂಬಿಸಿವೆ. ಪ್ರಾರಂಭದಲ್ಲಿ ೧-೨ ಕುರಿಗಳು ಸಾವನ್ನಪ್ಪಿದಾಗ ಏನೋ ಅನಾರೋಗ್ಯದಿಂದ ಸತ್ತಿರಬಹುದೆಂದು ಬಾವಿಸಿ ಸತ್ತ ಕುರಿಗಳನ್ನು ಅರಣ್ಯ ಪ್ರದೇಶದಲ್ಲೆಸೆದು ಸುಮ್ಮನಿದ್ದೆವು. ಆದರೆ ಬರ್ತಾ ಬರ್ತಾ ದಿನಕ್ಕೆ ಹತ್ತಾರು ಕುರಿಗಳು ಸಾಯಲಾರಂಬಿಸಿದವು ಇದರಿಂದ ಗಾಬರಿಗೊಂಡು ಸಂಬಂಧಿಸಿದ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಕುರಿಗಳನ್ನು ಬದುಕಿಸಲು ಸಾದ್ಯವಾಗುತ್ತಿಲ್ಲ. ಇದುವರೆಗೆ ನೂರಕ್ಕೂ ಅಧಿಕ ಕುರಿಗಳು ಮೃತಪಟ್ಟಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಹೀಗಾದರೆ ನಾವು ಬದುಕುವುದು ಹೇಗೆ 
             ಮಹಾದೇವ ಬೀರಪ್ಪ ಹೆಗ್ಗನ್ನವರ, ಕುರಿಗಳನ್ನು ಕಳೆದುಕೊಂಡ ಕುರುಬಗೌಡ  

 

Read These Next

ಮುಂಡಗೋಡ: ಛತ್ರಪತಿ ಶಿವಾಜಿ ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ : ಎಲ್.ಟಿ.ಪಾಟೀಲ್

ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದು ಧರ್ಮವನ್ನು ಉಳಿಸಿ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ. 17ನೇ ಶತಮಾನದಲ್ಲಿ ...