ಮಹಾಮಳೆಗೆ ಮುಂಬೈ ತತ್ತರ; ಜೋಪಡಿ, ಕಟ್ಟಡ ಕುಸಿದು ಕನಿಷ್ಠ 31 ಮಂದಿ ಸಾವು - ನಗರದ ಹಲವು ಪ್ರದೇಶಗಳು ಜಲಾವೃತ, ರೈಲು ಸಂಚಾರ ಅಸ್ತವ್ಯಸ್ತ, ರೆಡ್ ಅಲರ್ಟ್ ಘೋಷಣೆ

Source: VB News | By I.G. Bhatkali | Published on 19th July 2021, 10:26 AM | National News |

ಮುಂಬೈ: ಶನಿವಾರ ತಡರಾತ್ರಿಯಿಂದ ಸುರಿದ ಭಾರೀ ಮಳೆಗೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರ ಅಕ್ಷರಶಃ ತತ್ತರಿಸಿದೆ. ಚೆಂಬೂರು ಹಾಗೂ ವಿಕ್ರೋಲಿ ಪ್ರದೇಶಗಳಲ್ಲಿ ಮಹಾಮಳೆಯಿಂದಾಗಿ ಮನೆಗಳು ಕುಸಿದುಬಿದ್ದು ಕನಿಷ್ಠ 31 ಮಂದಿ ಸಾವನ್ನಪ್ಪಿದ್ದಾರೆ. ರವಿವಾರವೂ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಹಾಗೂ ನಾಗರಿಕರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ.

ವಿಕ್ರೋಲಿ ಪ್ರದೇಶದಲ್ಲಿ ರವಿವಾರ ನಸುಕಿನಲ್ಲಿ ಜೋಪಡಿ ಕಟ್ಟಡ ಕುಸಿದು, ಹತ್ತು ಮಂದಿ ಮೃತಪಟ್ಟಿದ್ದಿದ್ದಾರೆ ಹಾಗೂ 15 ಮಂದಿಯನ್ನು ರಕ್ಷಿಸಲಾಗಿದೆ. ಚೆಂಬೂರಿನ ಭರತ್‌ನಗರದಲ್ಲಿ ಗುಡಿಸಲುಗಳ ಮೇಲೆ ಗೋಡೆಯೊಂದು ಕುಸಿದುಬಿದ್ದುದರಿಂದ 21 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಹಲವಾರು ಮಂದಿ ಸಿಲುಕಿರುವ ಸಾಧ್ಯತೆಯಿರುವುದರಿಂದ ಎರಡೂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮುಂಬೈಯಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಸಂಭವಿಸಿರುವ ಪ್ರಾಣ ಹಾನಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಕೂಡಾ ಪ್ರಧಾನಿ ಪ್ರಕಟಿಸಿದ್ದಾರೆ.

ಮಹಾನಗರದ ತಗ್ಗುಪ್ರದೇಶಗಳಾದ ಚುನಾಭಟ್ಟ, ಸಯನ್, ದಾದರ್, ಗಾಂಧಿ ಮಾರ್ಕೆಟ್, ಚೆಂಬೂರು ಹಾಗೂ ಕುರ್ಲಾ ಎಲ್‌ಬಿಎಸ್ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬೊರಿವಿಲಿಯಲ್ಲಿ ಹಲವಾರು ಕಾರುಗಳು ನೆರೆನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ರೈಲ್ವೆ ಹಳಿಗಳು ಸಂಪೂರ್ಣವಾಗಿ ನೆರೆ ನೀರಿನಲ್ಲಿ ಮುಳುಗಿ ದ್ದರಿಂದ ಉಪನಗರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಾದರ್, ಪರೇಲ್, ಮಾತುಂಗ, ಕುರ್ಲಾ, ಸಯಾನ್, ಭಾಂಡುಪ್ ಮತ್ತಿತರೆಡೆಗಳಲ್ಲೂ ರೈಲು ಹಳಿಗಳು ಜಲಾವೃತಗೊಂಡಿದ್ದರಿಂದ ಸಿಎಸ್ ಎಂಟಿ ಹಾಗೂ ಥಾಣೆ ನಡುವಿನ ರೈಲು ಸಂಚಾರವನ್ನು ಕೂಡಾ ಸ್ಥಗಿ ತಗೊಳಿಸಲಾಗಿದೆ. ಕೇಂದ್ರ ರೈಲ್ವೆ ವಲಯ ಹಾಗೂ ಪಶ್ಚಿಮ ರೈಲ್ವೆ ವಲಯದ ಹಲವಾರು ದೂರಸಂಚಾರದ ರೈಲುಗಳ ಸೇವೆಗಳೂ ಕೂಡಾ ಬಾಧಿತವಾಗಿವೆಯೆಂದು ವರದಿಗಳು ತಿಳಿಸಿವೆ.

ಶನಿವಾರ ರಾತ್ರಿ 8 ಗಂಟೆಯಿಂದ ರವಿವಾರ ಬೆಳಗ್ಗೆ 8 ಗಂಟೆಯ ನಡುವೆ ಮುಂಬೈಯಲ್ಲಿ 176.96 ಮಿ.ಮೀ. ಮಳೆಯಾಗಿದೆ. ನಗರದ ಪೂರ್ವಭಾಗದ ಉಪನಗರಗಳಲ್ಲಿ 204.07 ಹಾಗೂ ಪಶ್ಚಿಮದ ಉಪನಗರಗಳಲ್ಲಿ 195.48 ಮಿ.ಮೀ. ಮಳೆಯಾಗಿದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಐದು ದಿನಗಳವರೆಗೆ ಮುಂಬೈನಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ. 2019ರಲ್ಲಿ ನಗರದಲ್ಲಿ 375.2 ಮಿ.ಮೀ. ಮಳೆಯಾಗಿದ್ದು 2010ರಿಂದೀಚೆಗೆ 24 ತಾಸುಗಳ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಪ್ರಮಾಣದ ಮಳೆಯಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...