ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಪಕ್ಷಪಾತಿ ಧೋರಣೆ, ಕೇಂದ್ರ ಸರಕಾರದ ಅಸಾಂವಿಧಾನಿಕ ನಡೆಯನ್ನು ಖಂಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮತ್ತೊಂದೆಡೆ ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಯಾದಗಿರಿ, ರಾಯಚೂರು, ಕೋಲಾರ ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
'ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಏಕೆ ಕೊಡುತ್ತಿಲ್ಲ? ಜತೆಗೆ, ರಾಜ್ಯ ಸರಕಾರವನ್ನು ದುರ್ಬಲಗೊಳಿಸಲು ಕೇಂದ್ರ ಹುನ್ನಾರ ಮಾಡಿದೆ. 136 ಮಂದಿ ಶಾಸಕರು ಗೆದ್ದಿದ್ದೇವೆ. ಯಾವುದಕ್ಕೂ ಬಗ್ಗಲ್ಲ. ಅಲ್ಲದೆ, ಇಂತಹ ಬೆಳವಣಿಗೆಯಿಂದ ರಾಜ್ಯಪಾಲರು ಕನ್ನಡಿಗರಿಗೆ ದ್ರೋಹ ಮಾಡಿದಂತೆ ಕಾಣುತ್ತಿದೆ' ಎಂದು ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ಟೀಕಿಸಿದರು.
ಫ್ರೀಡಂ ಪಾರ್ಕಿನ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯ ಕೇಂದ್ರ ಸರಕಾರ ರಾಜ್ಯಪಾಲರ ಕಚೇರಿಯನ್ನು ಗುಮಾಸ್ತರ ಕಚೇರಿ ಮಾಡಿಕೊಂಡಿದೆ. ರಾಜ್ಯಪಾಲರಿಗೆ ಕೊಡಬೇಕಾದ ಗೌರವವನ್ನು ಕೇಂದ್ರ ಸರಕಾರ ನೀಡುತ್ತಿಲ್ಲ. ರಾಜ್ಯಪಾಲರನ್ನು ಗುಮಾಸ್ತರ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಮುಖ್ಯಮಂತ್ರಿಗಳ ಮೇಲೆ ಯಾವುದೇ ಅಪಾದನೆ ಇಲ್ಲದಿದ್ದರೂ ಸುಳ್ಳು ಕಾರಣ ನೀಡಿ ಅವರ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಟೀಕಿಸಿದರು.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ರಾಜ್ಯಪಾಲರು ಪ್ರತಿ ಕನ್ನಡಿಗನ ಮೇಲೆ ದಾಳಿ ಮಾಡಿದೆ. ಅವರು ಹೊಸದಿಲ್ಲಿ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುಲಾಮರಾಗಿ ಕೆಲಸ ಮಾಡುವವರು ಬೇಕು ಕೇಂದ್ರಕ್ಕೆ. ನಮ್ಮ ರಾಜ್ಯ ಸರಕಾರ ಕೇಂದ್ರದ ವಿರುದ್ಧ ತೆರಿಗೆ, ಕಾವೇರಿ, ಕೃಷ್ಣ ಮಹಾದಾಯಿ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ಹೀಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಸರಕಾರವನ್ನು ಬುಡ ಮೇಲು ಮಾಡಲು ಹೊರಟಿದೆ. ಕನ್ನಡಿಗರ ಮೇಲೆ ದೌರ್ಜನ್ಯ ಮಾಡಲು ಹೊರಟಿದ್ದಾರೆ ಎಂದರು.
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನಮ್ಮ ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇಡೀ ಸಚಿವ ಸಂಪುಟ ಈ ಯೋಜನೆ ಜಾರಿ ಮಾಡಿದೆ. ಮೋದಿ ಅವರ ಕೆಟ್ಟ ನೀತಿಗಳಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು, ಅವರ ಕಷ್ಟಕ್ಕೆ ಪರಿಹಾರ ನೀಡಲು ಈ ಯೋಜನೆ ರೂಪಿಸಲಾಯಿತು. ನಮ್ಮ ಸರಕಾರದ ಉತ್ತಮ ಆಡಳಿತ ಸಹಿಸಲಾಗದೇ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಸಿದ್ದರಾಮಯ್ಯ ಅವರ ಪ್ರಖ್ಯಾತಿ ಸಹಿಸಲಾಗದೆ, ಈ ಸರಕಾರವನ್ನು ತೆಗೆಯಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ. ಬಿಜೆಪಿ ದೇಶದಲ್ಲಿ 450ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದು, ಒಬ್ಬೊಬ್ಬ ಶಾಸಕರಿಗೆ 20 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಜನ ಬಹುಮತ ನೀಡಿಲ್ಲ. ಆಪರೇಷನ್ ಕಮಲ ಮೂಲಕ ಸರಕಾರ ರಚಿಸಿದೆ. ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಬದ್ದ ಆರೋಪಗಳಿಲ್ಲ ಎಂದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 'ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಬೀದಿ-ಬೀದಿಗಳಲ್ಲಿ ಮೋದಿ ಪ್ರಚಾರ ಮಾಡಿದ್ದರು. ಅವರಿಗೆ ದೊಡ್ಡ ಮುಖಭಂಗ ಆಯಿತು. ಮೋದಿ ಹೋದ ಕಡೆ ಬಿಜೆಪಿ ಸೋಲಬೇಕಾಯಿತು. ನಮ್ಮ ಸರಕಾರ ರಾಜ್ಯದ ಹಿತ ಕಾಯುವ ಕೆಲಸ ಮಾಡುತ್ತಿದೆ, ತೆರಿಗೆ ವಿಚಾರದಲ್ಲಿ ದೇಶದ ಗಮನ ಸೆಳೆಯುವ ಹೋರಾಟ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ' ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಹೀಂ ಖಾನ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಎಐಸಿಸಿ ಉಸ್ತುವಾರಿ ಅಭಿಶೇಕ್ ದತ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.