ಶಾಸಕ ಮುನಿರತ್ನ ಮನೆ ಬಳಿ ಸ್ಫೋಟ; ಓರ್ವ ವ್ಯಕ್ತಿ ಸಾವು

Source: so news | By Manju Naik | Published on 19th May 2019, 7:01 PM | State News | Don't Miss |

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಿಗೂಢ ಸ್ಫೋಟವಾಗಿದ್ದು, ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ರಾಜರಾಜೇಶ್ವರಿ ನಗರದಲ್ಲಿರುವ  ಶಾಸಕ ಮುನಿರತ್ನ ಮನೆ ಬಳಿ ಈ ಸ್ಫೋಟ ನಡೆದಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ವ್ಯಕ್ತಿಯೊಬ್ಬರ ದೇಹ ಛಿದ್ರ ಛಿದ್ರವಾಗಿದೆ.
ವೆಂಕಟೇಶ್(45) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಮೃತ ವೆಂಕಟೇಶ್​ವೈಯಾಲಿಕಾವಲ್ ದೋಬಿಗಾಟ್​​ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದ. ವೆಂಕಟೇಶ್ ಮತ್ತು ಮಗಳು ಮುನಿರತ್ನ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದರು. ವೆಂಕಟೇಶ್​​ ಹತ್ತು ಗಂಟೆ ಸುಮಾರಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಮುನಿರತ್ನ ಮನೆ ಮುಂದೆ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಅನುಮನಾಸ್ಪದ ವಸ್ತು ಸ್ಫೋಟಗೊಂಡಿದೆ.  ಮೊಬೈಲ್ ಕೂಡಾ ನುಚ್ಚು ನೂರಾಗಿದೆ. ಸ್ಟೋಟದ ತೀವ್ರತೆಗೆ ಪಕ್ಕದ ಮನೆಯ ಬಾಗಿಲು ಹಾಗೂ ಗೋಡೆ ಛಿದ್ರವಾಗಿದೆ.
ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಸ್ಥಳಕ್ಕೆ ಡಿಸಿಪಿ ದೇವರಾಜ್​, ಸ್ಥಳಕ್ಕೆ ಕಮೀಷನರ್ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಿರತ್ನ ಮನೆಯ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಪೋಟವಾಗಿದೆ ಎನ್ನಲಾಗಿದೆ. ಮೃತ ವೆಂಕಟೇಶ್​​ ಮುನಿರತ್ನ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
11ನೇ ಬಿ ಕ್ರಾಸ್ ವೈಯಾಲಿಕಾವಲ್ ಬಳಿ ಶಾಸಕ ಮುನಿರತ್ನ ನಿವಾಸ ಇದೆ. ಇವರ ಮನೆ ಬಳಿಯಲ್ಲೇ ಸ್ಫೋಟವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಶಬ್ದದ ತೀವ್ರತೆಗೆ ಮನೆಯವರೆಲ್ಲಾ ಕಂಗಾಲಾಗಿದ್ದಾರೆ. ಸ್ಫೋಟದ ಸದ್ದಿಗೆ ಶಾಸಕರ ಕುಟುಂಬ ಬೆಚ್ಚಿ ಬಿದ್ದಿದೆ.
ಸ್ಫೋಟದ ತೀವ್ರತೆಗೆ ವೆಂಕಟೇಶ್ ದೇಹದ ಕತ್ತು ಮತ್ತು ಕೈ ಛಿದ್ರವಾಗಿದೆ. 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

 

Read These Next