ಗುಜರಾತ್: ತೂಗು ಸೇತುವೆ ದುರಂತ; ಮೃತರ ಸಂಖ್ಯೆ 141ಕ್ಕೇರಿಕೆ; ಸಂಸದನ ಕುಟುಂಬದ 12 ಮಂದಿ ಸಾವು

Source: S O News | By I.G. Bhatkali | Published on 2nd November 2022, 8:27 AM | National News |

ಅಹ್ಮದಾಬಾದ್: ಗುಜರಾತ್‌ನಮೊರ್ಬಿ ಯಲ್ಲಿರುವ ಮಚ್ಚು ನದಿಯ ಶತಮಾನದಷ್ಟು ಹಳೆಯ ತೂಗು ಸೇತುವೆ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 141ಕ್ಕೆ ಏರಿಕೆಯಾಗಿದೆ.

177 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದ ಹಲವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ. ಆದರೆ, ಇಂದು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಮಂಗಳವಾರಕ್ಕೆ ಮುಂದೂಡಲಾಗಿದೆ.

ಜನದಟ್ಟಣೆಯೇ ಕಾರಣ ವಿಧಿವಿಜ್ಞಾನ ಪ್ರಯೋಗಾಲಯ:  ಜನದಟ್ಟಣೆ ತೂಗು ಸೇತುವೆ ಕುಸಿಯಲು ಕಾರಣ ಎಂದು ಭಾರತ ಅತ್ಯುಚ್ಚ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ. ಸೇತುವೆಯ ಮಾದರಿ ಸಂಗ್ರಹಿಸಲು ಗ್ಯಾಸ್ ಕಟ್ಟರ್ ಅನ್ನು ಬಳಸಲಾಗಿದೆ. ಈಗಷ್ಟೇ ನವೀಕರಣಗೊಂಡ ಸೇತುವೆಯ ರಚನೆ ದುರ್ಬಲ ಗೊಂಡಿರುವುದು ಕ೦ಡು ಬ೦ದಿದೆ ಎ೦ದು విధి ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ತಿಳಿಸಿದ್ದಾರೆ.

9 ಮಂದಿಯ ಬಂಧನ: ಸೇತುವೆ ಕುಸಿತ ಘಟನೆಗೆ ಸಂಬಂಧಿಸಿ ಗುಜರಾತ್ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಇವರಲ್ಲಿ ಸೇತುವೆಯ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ಒರೆವಾ ಕಂಪೆನಿಯ ಅಧಿಕಾರಿಗಳು, ಟಿಕೆಟ್ ಮಾರಾಟಗಾರರು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಸಂಬಂಧಿತ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ಇಂದು ತನಿಖೆಯ ಎರಡನೇ ದಿನ. ಹೆಚ್ಚು ಮಾಹಿತಿ ಸಿಕ್ಕಿದ ಕೂಡಲೇ ನಾವು ಕ್ರಮ ತೆಗೆದುಕೊಳ್ಳಲಿದ್ದೇವೆ ಹಾಗೂ ಹೆಸರನ್ನು ಬಹಿರಂಗ ಗೊಳಿಸಲಿದ್ದೇವೆ' ಎಂದು ರಾಜ್ ಕೋಟ್ ವಲಯದ ಐಜಿ ಅಶೋಕ್ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ.

ಸಂಸದನ ಕುಟುಂಬದ 12 ಮಂದಿ ಸಾವು: ಅಹ್ಮದಾಬಾದ್, ಅ.31: ತೂಗುಸೇತುವೆ ಕುಸಿದು ಸಂಭವಿಸಿದ ದುರಂತದಲ್ಲಿ ತನ್ನ 12 ಮಂದಿ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ರಾಜ್‌ಕೋಟ್‌ನ ಬಿಜೆಪಿಯ ಲೋಕಸಭಾ ಸದಸ್ಯ ಮೋಹನ್ ಕುಂದರಿಯಾ ಅವರು ಸೋಮವಾರ ತಿಳಿಸಿದ್ದಾರೆ.

ಅವರು ಪ್ರವಾಸಿ ಸ್ಥಳವಾದ ಈ ಸೇತುವೆಗೆ ಭೇಟಿ ನೀಡಿದ ಸಂದರ್ಭ ದುರಂತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಮೃತಪಟ್ಟ ತನ್ನ ಕುಟುಂಬದ 12 ಮಂದಿಯಲ್ಲಿ ಐವರು ಮಕ್ಕಳು, ನಾಲ್ವರು ಮಹಿಳೆಯರು, ಮೂವರು ಪುರುಷರು ಸೇರಿದ್ದಾರೆ. ಎಲ್ಲರೂ ನನ್ನ ಹಿರಿಯ ಸಹೋದರನ ಸಂಬಂಧಿಕರು. ದುರಂತದ ಹೊಣೆಗಾರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

“ದುರಂತದಲ್ಲಿ ನನ್ನ ಹಿರಿಯ ಸಹೋದರನ ಭಾವನ ನಾಲ್ವರು ಪುತ್ರಿಯರು, ಅವರಲ್ಲಿ ಮೂವರ ಗಂಡಂದಿರು ಹಾಗೂ ಐವರು ಮಕ್ಕಳು ಮೃತಪಟ್ಟಿದ್ದಾರೆ' ಎಂದು ಕುಂದರಿಯಾ ಅವರು ತಿಳಿಸಿದ್ದಾರೆ. ಅವರು ಟಂಕಾರಾ ತಾಲೂಕಿನ ವಿವಿಧ ಗ್ರಾಮಕ್ಕೆ ಸೇರಿದವರು. ರವಿವಾರ ಅವರು ಪ್ರವಾಸಿ ಕೇಂದ್ರಕ್ಕೆ ತೆರಳಿದ್ದರು. ಘಟನೆ ನಡೆದ ಅರ್ಧ ಗಂಟೆಯ ಬಳಿಕ ನಾನು ಅಲ್ಲಿಗೆ ತಲುಪಿದೆ. ಈಗ ಅಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡುತ್ತಿದ್ದೇನೆ ಎಂದು ಕುಂದರಿಯಾ ತಿಳಿಸಿದ್ದಾರೆ.

ಕಾರ್ಯಕ್ಷಮತೆ ಪ್ರಮಾಣ ಪತ್ರ ಇರಲಿಲ್ಲ: ಮೊರ್ಬಿ ನಗರ ಸಭೆ ಮುಖ್ಯಸ್ಥ: ತೂಗುಸೇತುವೆಯನ್ನು ನವೀಕರಣಗೊಳಿಸಿದ ಬಳಿಕ ಕಾರ್ಯಕ್ರಮತೆ ಪ್ರಮಾಣ ಪತ್ರ ಇಲ್ಲದೆ ಅಕ್ಟೋಬರ್ 26ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು ಎಂದು ಮೊರ್ಬಿ ನಗರ ಸಭೆ ರವಿವಾರ ಹೇಳಿದೆ.

ಈ ಸೇತುವೆಯನ್ನು ಮೊರ್ಬಿ ನಗರ ಸಭೆ ನಿರ್ವಹಿಸುತ್ತಿತ್ತು. ಆದರೆ, ಕಳೆದ ಮಾರ್ಚ್‌ನಲ್ಲಿ ಇದರ ನಿರ್ವಹಣೆಯನ್ನು ಒರೆವಾ ಸಮೂಹಕ್ಕೆ 15 ವರ್ಷಗಳಿಗೆ ಗುತ್ತಿಗೆಗೆ ನೀಡಲಾಗಿತ್ತು. ಆನಂತರ ಸೇತುವೆಯನ್ನು ನವೀಕರಣಕ್ಕೆ ಮುಚ್ಚಲಾಗಿತ್ತು ಎಂದು ಮೊರ್ಬಿ ನಗರಸಭೆಯ ಮುಖ್ಯಸ್ಥ ಸಂದೀಪ್ ಸಿನ್ಹಾ ಝಲಾ ಅವರು ಹೇಳಿದ್ದಾರೆ.

“ಆದರೆ, ಒರೆವಾ ಸಮೂಹ ನಮಗೆ ತಿಳಿಸದೆ ಸೇತುವೆಯನ್ನು ಪ್ರವಾಸಿಗರಿಗೆ ತೆರೆದಿತ್ತು. ಆದುದರಿಂದ ನಮಗೆ ಸೇತುವೆಯ ಸುರಕ್ಷಾ ಲೆಕ್ಕ ಪರಿಶೋಧನೆಯನ್ನು ನಡೆಸಲು ಸಾಧ್ಯವಾಗಲಿಲ್ಲ” ಎಂದು ಝಲಾ ತಿಳಿಸಿದ್ದಾರೆ.

ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ ಅದನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಆದರೆ, ಸ್ಥಳೀಯ ನಗರ ಸಭೆ ಇದುವರೆಗೆ ಕಾರ್ಯಕ್ಷಮತೆಯ ಯಾವುದೇ ಪ್ರಮಾಣ ಪತ್ರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...