ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ವೀಸಾ ನಿರಾಕರಣೆ; 2014ರಲ್ಲಿ ಮೋದಿಗೆ ನೀಡಿದ ವಿನಾಯಿತಿ ಸೌದಿ ಯುವರಾಜರಿಗೂ ಅನ್ವಯ: ಅಮೆರಿಕ

ಹೊಸದಿಲ್ಲಿ: ಇತ್ತೀಚೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಕಾನೂನು ಕ್ರಮದ ವಿರುದ್ಧ ನೀಡಲಾಗಿರುವ ರಕ್ಷಣೆಯನ್ನು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೂ ನೀಡಲಾಗಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಅವರು, ಪತ್ರಕರ್ತ ಜಮಾಲ್ ಖಶೋಗಿಯವರ ಬರ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸೌದಿ ಯುವರಾಜರಿಗೆ ನೀಡಲಾಗಿರುವ ವಿನಾಯಿತಿಯ ಕುರಿತು ಪ್ರಶ್ನೆಗೆ ಇಂತಹುದೇ ರಕ್ಷಣೆಯನ್ನು ಪಡೆದವರಲ್ಲಿ ಪ್ರಧಾನಿ ಮೋದಿಯವರೂ ಸೇರಿದ್ದಾರೆ ಎಂದು ತಿಳಿಸಿದರು.
“ಅಮೆರಿಕ ಹೀಗೆ ಮಾಡಿರುವುದು ಇದೇ ಮೊದಲೇನಲ್ಲ. ಅದು ಮತ್ತು ನಿರಂತರ ಪ್ರಯತ್ನವಾಗಿದ್ದು, ಈ ಹಿಂದೆ ಹಲವಾರು ದೇಶಗಳ ಮುಖ್ಯಸ್ಥರಿಗೆ ಅದನ್ನು ಅನ್ವಯಿಸಲಾಗಿದೆ. ಉದಾಹರಣೆಗೆ 1993ರಲ್ಲಿ ಹೈಟಿ ಅಧ್ಯಕ್ಷ ಅರಿಸ್ಟಿಡ್ 2001ರಲ್ಲಿ ಝಿಂಬಾದ್ರೆ ಅಧ್ಯಕ್ಷ ಮುಗಾಬೆ, 2014ರಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು 2018ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ಸಿ)ದ ಅಧ್ಯಕ್ಷ ಕ ಬಿ ಲಾ ಅವರಿಗೆ ಇಂತ ಹ ವಿನಾಯಿತಿ ನೀಡಲಾಗಿತ್ತು. ಇದು ದೇಶಗಳ ಮುಖ್ಯಸ್ಥರಿಗೆ, ಸರಕಾರಗಳ ಮುಖ್ಯಸ್ಥರಿಗೆ ಮತ್ತು ವಿದೇಶಿ ಸಚಿವರಿಗೆ ನಾವು ವಿನಾಯಿತಿ ನೀಡುವ ನಿರಂತರ ವಾಡಿಕೆಯಾಗಿದೆ ” ಎಂದರು.
ಪಟೇಲ್ ಹೇಳಿಕೆಗೆ ಭಾರತವಿನ್ನೂ ಪ್ರತಿಕ್ರಿಯಿಸಬೇಕಿದೆ.
2002ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಸಂಭವಿಸಿದ್ದ ಗಲಭೆಗಳನ್ನು ನಿಲ್ಲಿಸಲು ಅವರ ಸರಕಾರವು ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ ಎಂಬ ಆರೋಪದಲ್ಲಿ ಅಮೆರಿಕ 2005ರಲ್ಲಿ ಅವರನ್ನು ವೀಸಾ ನಿಷೇಧ ಪಟ್ಟಿಯಲ್ಲಿರಿಸಿತ್ತು. ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಮೋದಿ ವಿರುದ್ಧ ತಮ್ಮ ಬಹಿಷ್ಕಾರವನ್ನು ಅಂತ್ಯಗೊಳಿಸಿದ್ದರೂ 2014ರಲ್ಲಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವವರೆಗೂ ಅಮೆರಿಕವು ತನ್ನ ನೀತಿಯಲ್ಲಿ ಯಾವುದೇ ಬದಲಾ ವಣೆಯಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಮೋದಿಯವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಗುಜರಾತ್ ಹತ್ಯೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅವರನ್ನು ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಈ ವರ್ಷದ ಪೂರ್ವಾರ್ಧದಲ್ಲಿ ತಿರಸ್ಕರಿಸಿತ್ತು.