ದಿಲ್ಲಿ ಹಿಂಸಾಚಾರಕ್ಕೆ ಮೋದಿ ಕಾರ್ಯವೈಖರಿ ಕಾರಣ: ‘ದ ಗಾರ್ಡಿಯನ್’

Source: sonews | By Staff Correspondent | Published on 27th February 2020, 10:57 PM | Global News | Don't Miss |

ಲಂಡನ್: ದಿಲ್ಲಿಯಲ್ಲಿ ನಡೆಯುತ್ತಿರುವ ಭೀಕರ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ‘ಅತ್ಯಂತ ವಿಳಂಬವಾಗಿ’ ನೀಡಿರುವ ‘ಶಾಂತಿ ಮತ್ತು ಸೌಹಾರ್ದತೆ’ಗಾಗಿನ ಕರೆಯು ಅವರ ಸುದೀರ್ಘ ಮೌನವನ್ನು ಕ್ಷಮಿಸುವುದಿಲ್ಲ ಎಂದು ಬ್ರಿಟನ್‌ನ ಪತ್ರಿಕೆ ‘ದ ಗಾರ್ಡಿಯನ್’ ಹೇಳಿದೆ.

 ಅದೂ ಅಲ್ಲದೆ, ಜನರನ್ನು ವಿಭಜಿಸುವ ಮೂಲಕ ಅವರು ನಿರ್ಮಿಸಿಕೊಂಡಿರುವ ರಾಜಕೀಯ ವೃತ್ತಿಜೀವನವನ್ನೇನೂ ಅವರ ಈ ಹೇಳಿಕೆ ಮರೆಮಾಚುವುದಿಲ್ಲ ಎಂದು ಪತ್ರಿಕೆಯು ತನ್ನ ಬುಧವಾರದ ಸಂಪಾದಕೀಯದಲ್ಲಿ ಬರೆದಿದೆ.

‘‘ಪ್ರಧಾನಿ ನರೇಂದ್ರ ಮೋದಿಯವರ ಪಕ್ಷ ಬಿಜೆಪಿಯು ‘ಹಿಂದೂ ರಾಷ್ಟ್ರೀಯತೆ’ ಎಂಬ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ದುರ್ಬಲ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ರಾಜಕೀಯದ ಮೂಲಕ ಅದು ಅಧಿಕಾರಕ್ಕೆ ಏರಿದೆ’’ ಎಂದು ಸಂಪಾದಕೀಯ ಹೇಳಿದೆ.

2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆ ಗಲಭೆಯಲ್ಲಿ ಸುಮಾರು 1,000 ಮುಸ್ಲಿಮರು ಮೃತಪಟ್ಟಿದ್ದಾರೆ. ಮುಸ್ಲಿಮರನ್ನು ರಕ್ಷಿಸಲು ಮೋದಿ ಉದ್ದೇಶಪೂರ್ವಕವಾಗಿ ವಿಫಲರಾದರು ಎಂಬ ಆರೋಪದಿಂದ ಸುಪ್ರೀಂ ಕೋರ್ಟ್ ಅವರನ್ನು ಖುಲಾಸೆಗೊಳಿಸಿತಾದರೂ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಪುನರ್ವಸತಿ ಸಿಕ್ಕಿದ್ದು ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕವೇ ಎಂದು ಸಂಪಾದಕೀಯ ಬರೆದಿದೆ.

ಅಮಿತ್ ಶಾ ರಾಜೀನಾಮೆ ಬೇಡಿಕೆ ಸರಿಯಾಗಿದೆ

‘‘ದಿಲ್ಲಿ ಕೋಮು ಸಂಘರ್ಷವನ್ನು ನಿಭಾಯಿಸುವಲ್ಲಿ ಪೊಲೀಸರ ನಾಚಿಕೆಗೇಡಿನ ನಿರ್ವಹಣೆಯ ಹಿನ್ನೆಲೆಯಲ್ಲಿ, ಮೋದಿಯವರ ಗೃಹ ಸಚಿವ ಅಮಿತ್ ಶಾರ ರಾಜೀನಾಮೆಗೆ ಆಗ್ರಹಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರಿಯಾದುದನ್ನೇ ಮಾಡಿದ್ದಾರೆ. ಮೋದಿಯ ನಿಕಟವರ್ತಿಯಾಗಿರುವ ಅಮಿತ್ ಶಾ ಅವರೇ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ‘ಗೆದ್ದಲುಗಳು’ ಎಂಬುದಾಗಿ ಬಣ್ಣಿಸಿ ಅವರನ್ನು ಬಂಗಾಳ ಕೊಲ್ಲಿಗೆ ಎಸೆಯಬೇಕು ಎಂದು ಹೇಳಿದ್ದರು’’ ಎಂದು ‘ದ ಗಾರ್ಡಿಯನ್’ ಹೇಳಿದೆ.

ಅನಿರೀಕ್ಷಿತವಲ್ಲ, ನಿಧಾನವಾಗಿ ಉದ್ದೀಪಿಸಿದ ಅಸಹನೆಯ ಫಲ

 ದಿಲ್ಲಿಯಲ್ಲಿ ರಾಜಕಾರಣಿಗಳು ಆಡಿರುವ ದ್ವೇಷದ ಮಾತುಗಳಷ್ಟೇ ಅಲ್ಲಿನ ಹಿಂಸಾಚಾರವು ಆಘಾತಕಾರಿಯಾಗಿದೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿರುವ ಈ ಭೀಕರ ಹಿಂಸಾಚಾರವನ್ನು ಅನಿರೀಕ್ಷಿತ ಸ್ಫೋಟ ಎಂಬುದಾಗಿ ಕರೆಯುವಂತಿಲ್ಲ ಅಥವಾ ಶತಮಾನಗಳ ಹಳೆಯ ಅಂತರ್ ಧರ್ಮೀಯ ವೈರದ ಅನಿವಾರ್ಯ ಅಭಿವ್ಯಕ್ತಿ ಎಂಬುದಾಗಿಯೂ ಬಣ್ಣಿಸಲು ಸಾಧ್ಯವಿಲ್ಲ. ಬದಲಿಗೆ, 35 ಸಾವುಗಳು ಮತ್ತು ನೂರಾರು ಗಾಯಗೊಂಡಿರುವ ಪ್ರಕರಣಗಳು, ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ನಿಧಾನವಾಗಿ ಉದ್ದೀಪಿಸಿದ ಅಸಹನೆಯ ಫಲವಾಗಿದೆ ಎಂದು ಪತ್ರಿಕೆ ಹೇಳಿದೆ.

‘‘ಈ ಘಟನೆಗಳು ಸ್ಥಾಪಕ ಮೌಲ್ಯಗಳಾದ ಬಹುತ್ವ ಮತ್ತು ಸಮಾನತೆಯಿಂದ ವಿಮುಖವಾಗಿ ಅಸಹಿಷ್ಣುತೆ ಮತ್ತು ದ್ವೇಷದತ್ತ ಸಾಗುತ್ತಿರುವ ಭಾರತದ ದಾರಿಯಲ್ಲಿನ ಇತ್ತೀಚಿನ ಹೆಜ್ಜೆಗಳಾಗಿವೆ’’ ಎಂದು ‘ದ ಗಾರ್ಡಿಯನ್’ ಅಭಿಪ್ರಾಯಪಟ್ಟಿದೆ.

ತಕ್ಷಣದ ಕಾರಣಗಳು

ನರೇಂದ್ರ ಮೋದಿಯವರ ನ್ಯಾಯಯುತವಲ್ಲದ ಪೌರತ್ವ ತಿದ್ದುಪಡಿ ಕಾಯ್ದೆ, ಈ ತಿಂಗಳು ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನಾಯಕರು ಬಳಸಿದ ಅಪಾಯಕಾರಿ ಪ್ರಚೋದನಕಾರಿ ಮಾತುಗಳು ಹಾಗೂ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಧರಣಿ ಕುಳಿತಿರುವ ಮುಸ್ಲಿಮರನ್ನು ಬಲವಂತವಾಗಿ ತೆರವುಗೊಳಿಸಲು ಕಪಿಲ್ ಮಿಶ್ರಾ ಮುಂತಾದ ಬಿಜೆಪಿ ನಾಯಕರು ಜನರಿಗೆ ನೀಡಿದ ಪ್ರಚೋದನೆಯು ಸೃಷ್ಟಿಸಿದ ಉದ್ವಿಗ್ನತೆಯು, ಈ ಹಿಂಸಾತ್ಮಕ ಘಟನೆಗಳಿಗೆ ತಕ್ಷಣದ ಕಾರಣಗಳಾಗಿವೆ ಎಂದಿದೆ.

 ‘‘ಹೊಡೆದಾಟಗಳು ಕ್ಷಿಪ್ರವಾಗಿ ವಿಜೃಂಭಿಸಿದವು. ಆದರೆ, ಅಸಹಾಯಕ ಮುಸ್ಲಿಮರು ಈ ಹಿಂಸಾಚಾರದ ಪ್ರಾಥಮಿಕ ಗುರಿಗಳು ಮತ್ತು ಸಂತ್ರಸ್ತರಾಗಿದ್ದಾರೆ ಎನ್ನುವುದು ಸ್ಪಷ್ಟ. ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು ಹಾಗೂ ರಾಷ್ಟ್ರೀಯವಾದಿ ಘೋಷಣೆಗಳನ್ನು ಕೂಗುತ್ತಿದ್ದ ಅಥವಾ ವಿವೇಚನೆಯಿಲ್ಲದೆ ಗುಂಡು ಹಾರಿಸುತ್ತಿದ್ದ ಗುಂಪುಗಳೊಡನೆ ಕೈಜೋಡಿಸುತ್ತಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎಂದು ಹೇಳುವಂತೆ ಬಿಜೆಪಿ ನಾಯಕರು ಜನರ ಗುಂಪುಗಳನ್ನು ಪ್ರಚೋದಿಸುತ್ತಿರುವುದು ದಾಖಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ‘ಅತ್ಯಾಚಾರಿಗಳು ಮತ್ತು ಕೊಲೆಗಡುಕರು’ ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಆಘಾತಕಾರಿಯಾದರೂ, ಯಾರಿಗೂ ಆಶ್ಚರ್ಯವಾಗಿಲ್ಲ’’ ಎಂದು ಸಂಪಾದಕೀಯ ಹೇಳಿದೆ.

ದಿಲ್ಲಿಯಲ್ಲಿ ಹಿಂಸೆ ಉಲ್ಬಣಿಸುತ್ತಿರುವ ಹೊತ್ತಿನಲ್ಲೇ ಭಾರತ ಪ್ರವಾಸಗೈದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ವಾಧಿಕಾರಿ ಪ್ರವೃತ್ತಿಯ ರಾಷ್ಟ್ರೀಯವಾದಿ ನಾಯಕನೊಬ್ಬನನ್ನು ಆಲಿಂಗಿಸಬೇಕಾಗಿ ಬಂದದ್ದು ಆಶ್ಚರ್ಯವೇನಲ್ಲ. ಆದರೆ, ಹಲವಾರು ಜಾಗತಿಕ ನಾಯಕರು ಮೋದಿಯ ಅಪಾಯಕಾರಿ ಬಲಪಂಥೀಯ ಜನಮರುಳು ಧೋರಣೆಗಳನ್ನು ಸ್ವೀಕರಿಸಿದ್ದಾರೆ.

-‘ದ ಗಾರ್ಡಿಯನ್’

ನಾಗರಿಕ ಸಮಾಜದಿಂದ ಪ್ರತಿ ಹೋರಾಟ

 ರಾಜಕೀಯ ಪ್ರತಿಪಕ್ಷವನ್ನು ಮೋದಿ ದುರ್ಬಲಗೊಳಿಸಿದ್ದಾರೆ. ನಾಗರಿಕ ಸಮಾಜವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಅವರು ಮುಂದುವರಿಸಿದ್ದಾರೆ. ಆದರೂ, ನಾಗರಿಕ ಸಮಾಜ ಪ್ರತಿ ಹೋರಾಟ ನಡೆಸುತ್ತಿದೆ. ದೇಶ ನಡೆಯುತ್ತಿರುವ ದಾರಿಯ ಬಗ್ಗೆ ಭಾರತೀಯ ನಾಗರಿಕರು ಅಸಹನೆ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ದೇಶ ಸಾಗುತ್ತಿರುವ ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗದು. ಆದರೆ, ಪ್ರತಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜನರ ಬೆಂಬಲವಿಲ್ಲದೆ ಪ್ರಸಕ್ತ ದಾರಿಯನ್ನು ಬದಲಿಸಲು ಸಾಧ್ಯವಿಲ್ಲ.

ಕೃಪೆ: vbnewsonline

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...