ಪಾಕ್ ಸಂಸತ್ತಿನಲ್ಲಿ 'ಮೋದಿ ಮೋದಿ' ಘೋಷಣೆ ಎಂದು ಸುಳ್ಳು ಹೇಳಿ ನಗೆಪಾಟಲಿಗೀಡಾದ 'ಇಂಡಿಯಾ ಟಿವಿ', 'ಟೈಮ್ಸ್ ನೌ'

Source: sonews | By Staff Correspondent | Published on 31st October 2020, 1:39 AM | National News |

ಹೊಸದಿಲ್ಲಿ: ಪ್ರವಾದಿ ವ್ಯಂಗ್ಯಚಿತ್ರಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ಶಿರಚ್ಛೇದನ ಪ್ರಕರಣ ಸಂಬಂಧ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ತಳೆದಿದ್ದಾರೆಂದು ಆರೋಪಿಸಲಾದ ಇಸ್ಲಾಂ ವಿರೋಧಿ ಧೋರಣೆಯನ್ನು ಖಂಡಿಸಲು ಇತ್ತೀಚೆಗೆ ನಡೆದ ಪಾಕಿಸ್ತಾನದ ಸಂಸತ್ ಅಧಿವೇಶನದ ಸಂದರ್ಭ ಕೆಲವು ಸಂಸದರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿ 'ಮೋದಿ' 'ಮೋದಿ' ಎಂಬ ಘೋಷಣೆಗಳನ್ನು ಕೂಗಿದ್ದಾರೆದು ಹೇಳಿಕೊಂಡು ಈ ಕುರಿತಾದ ವೀಡಿಯೋ ಕ್ಲಿಪ್ ಒಂದನ್ನು ಮುಖ್ಯವಾಹಿನಿ ಟಿವಿ ಚಾನೆಲುಗಳಾದ 'ಇಂಡಿಯಾ ಟಿವಿ', 'ಟೈಮ್ಸ್ ನೌ' ಸಹಿತ ಬಲಪಂಥೀಯ ವೆಬ್ಸೈಟ್ 'ಓಪ್‍ಇಂಡಿಯಾ' ಕೂಡ ಪ್ರಸಾರ ಮಾಡಿದ್ದವು.

ಈ ನಿರ್ದಿಷ್ಟ ವೀಡಿಯೋವನ್ನು ಶೇರ್ ಮಾಡಿದ ಇತರರಲ್ಲಿ ಚಿತ್ರ ತಯಾರಕ ವಿವೇಕ್ ಅಗ್ನಿಹೋತ್ರಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ತಜೀಂದರ್ ಬಗ್ಗಾ ಹಾಗೂ ನ್ಯೂಸ್ ಆ್ಯಂಕರ್ ದೀಪಕ್ ಚೌರಾಸಿಯಾ ಕೂಡ ಸೇರಿದ್ದರು.

ಶೋಭಾ ತಮ್ಮ ಟ್ವೀಟ್‍ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿ "ತಮ್ಮ ನಿಷ್ಠೆ, ಬದ್ಧತೆ ಹಾಗೂ ಭಾರತದ ಅಭಿವೃದ್ಧಿ ಕುರಿತಾದ ದೂರದೃಷ್ಟಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿದ್ದಾರೆ. ನೋಡಿ ಪಾಕಿಸ್ತಾನದ ಸಂಸತ್ತಿನಲ್ಲೂ ವಿಪಕ್ಷಗಳು ಆಡಳಿತ ಸರಕಾರಕ್ಕೆ ವಿರುದ್ಧವಾಗಿ ಅಲ್ಲಿ 'ಮೋದಿ ಮೋದಿ' ಘೋಷಣೆ ಕೂಗುತ್ತಿದ್ದಾರೆ,'' ಎಂದು ಬರೆದಿದ್ದಾರೆ.

ಫೇಸ್ ಬುಕ್‍ನಲ್ಲೂ ಈ ವೀಡಿಯೋ ವೈರಲ್ ಆಗಿದೆಯಲ್ಲದೆ ಪಾಕಿಸ್ತಾನದ ಸಂಸದರು ಮೋದಿಯನ್ನು ಹಾಡಿ ಹೊಗಳಿದ್ದಾರೆಂದು ಹಲವರು ಬರೆದಿದ್ದಾರೆ.

ವಾಸ್ತವವೇನು?

'ಇಂಡಿಯಾ ಟಿವಿ' ಪ್ರಸಾರ ಮಾಡಿರುವ ವೀಡಿಯೋದಲ್ಲಿ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಅವರು ಸಂಸತ್ತಿನಲ್ಲಿ ಮಾತನಾಡುತ್ತಿರುವುದು ಕಾಣಿಸುತ್ತದೆ. ಅವರ ಹೆಸರು ಹಾಕಿ ಗೂಗಲ್ ಸರ್ಚ್ ಮಾಡಿದಾಗ ಪಾಕಿಸ್ತಾನದ 92ನ್ಯೂಸ್ ಎಚ್‍ಡಿ ವಾಹಿನಿ ಅಪ್‍ಲೋಡ್ ಮಾಡಿದ ಒಂದು ವೀಡಿಯೋ ಕಂಡು ಬಂತು. ಇವರ ಹತ್ತು ನಿಮಿಷ ಅವಧಿಯ ಭಾಷಣದ ಸಂದರ್ಭದ ಕೆಲವೊಂದು ತುಣುಕುಗಳನ್ನು ಬಳಸಿ ಪಾಕ್ ಸಂಸತ್ತಿನಲ್ಲಿ ಮೋದಿ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಿಕೊಳ್ಳಲು ಈ ಟಿವಿ ವಾಹಿನಿಗಳು ಬಳಸಿದ್ದವು.

ಯುಕಟ್ ವೀಡಿಯೋ ಎಡಿಟರ್ ಬಳಸಿ ವೀಡಿಯೋವನ್ನು ನಿಧಾನಗೊಳಿಸಿ ಕೇಳಿದಾಗ ಸಂಸದರು ವಾಸ್ತವವಾಗಿ 'ವೋಟಿಂಗ್... ವೋಟಿಂಗ್,' ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಸ್ಪೀಕರ್ ಕೂಡ ಒಂದು ಹಂತದಲ್ಲಿ `ವೋಟಿಂಗ್ ಸಬ್ ಕುಚ್ ಹೋಗಾ... ವೋಟಿಂಗ್ ಸಬ್ ಕುಚ್ ಹೋಗಾ' (ಮತದಾನ ನಡೆಯಲಿದೆ) ಎಂದು ಹೇಳಿ ಸಂಸದರನ್ನು ಶಾಂತಗೊಳಿಸಲು ಯತ್ನಿಸುವುದು ಕೇಳಿಸುತ್ತದೆ.

ಪತ್ರಕರ್ತ ಆದಿತ್ಯ ರಾಜ್ ಕೌಲ್ ಹಾಗೂ ಪಾಕ್ ನಟ ಫಕ್ರ್-ಎ-ಆಲಂ ಅವರು ಕೂಡ ಸಂಸದರು 'ವೋಟಿಂಗ್ ವೋಟಿಂಗ್' ಎಂದು ಬೊಬ್ಬೆ ಹೊಡೆಯುತ್ತಿದ್ದುದಾಗಿ ಹಾಗೂ 'ಮೋದಿ ಮೋದಿ' ಹೇಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಖುರೇಶಿ ತಮ್ಮ ಭಾಷಣದ ವೇಳೆ ಬಲೂಚಿಸ್ತಾನವನ್ನು ಉಲ್ಲೇಖಿಸಿ, ವಿಪಕ್ಷಗಳು ಭಾರತ ಹಾಗೂ ಅಲ್ಲಿನ ಪ್ರಧಾನಿ ಜತೆ ಶಾಮೀಲಾಗಿವೆ ಎಂದು ಆರೋಪಿಸಿದಾಗ ವಿಪಕ್ಷ ಸಂಸದರು 'ಮೋದಿ ಕಾ ಜೋ ಯಾರ್ ಹೈ, ಗದ್ದಾರ್ ಹೈ... ಗದ್ದಾರ್ ಹೈ' ( ಯಾರು ಮೋದಿಯ ಸ್ನೇಹಿತರಾಗುತ್ತಾರೋ ಅವರು ದೇಶದ್ರೋಹಿಗಳು) ಎಂದು ಘೋಷಣೆ ಕೂಗುವುದು ಕೇಳಿಸುತ್ತದೆ.

ಒಟ್ಟಾರೆ ಪಾಕ್ ಸಂಸದರು 'ವೋಟಿಂಗ್ ವೋಟಿಂಗ್' ಹಾಗೂ 'ಯಾರು ಮೋದಿಯ ಸ್ನೇಹಿತರಾಗುತ್ತಾರೋ ಅವರು ದೇಶದ್ರೋಹಿಗಳು' ಎಂದಿದ್ದರೂ ಕೆಲ ವಾಹಿನಿಗಳು ಮಾತ್ರ ಅವುಗಳನ್ನು ತಿರುಚಿ ಅವರು ಮೋದಿ ಪರ ಘೋಷಣೆ ಕೂಗಿದ್ದಾರೆಂಬ ರೀತಿಯಲ್ಲಿ ಪ್ರಸಾರ ಮಾಡಿವೆ.

ಕೃಪೆ: thequint.com

Read These Next

ನಾಗಾಲ್ಯಾಂಡ್ ಗೋಲಿಬಾರ್‌ ಪ್ರಕರಣ; ಸೇನೆಯ ನಿರ್ಲಕ್ಷದ ದಾಳಿ ಕೊಲೆಗೆ ಸಮಾನ; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಲೋಕೂರ್

ಶಸ್ತ್ರ ಪಡೆಗಳ ವಿಶೇಷಾಧಿಕಾರ (ಎಎಫ್‌ಎಸ್‌ಪಿಎ) ಎಂದರೆ ಭದ್ರತಾ ಪಡೆಗಳು ಸುಮ್ಮನೆ ಯಾರನ್ನೂ ಕೊಲ್ಲಬಹುದು ಎಂದು ಅರ್ಥವಲ್ಲ ಎಂದು ...

ನೌಕಾ ದಿನಾಚರಣೆಯಲ್ಲಿ ಪಾಲ್ಗೊಂಡ ರಾಜ್ಯಪಾಲರು. ದೇಶದ ರಕ್ಷಣೆಗೆ ನೌಕಾಸೇನೆ ಪಾತ್ರ ಮುಖ್ಯ : ಥಾವರಚಂದ್ ಗೆಹ್ಲೋಟ್

ಕಾರವಾರ : ಏಷ್ಯಾದ ಅತಿ ದೊಡ್ಡ ನೌಕಾನೆಲೆ ಕಾರವಾರದಲ್ಲಿ ಶನಿವಾರ ನೌಕಾ ದಿನಾಚರಣೆ ನಡೆಸಲಾಯಿತು. ಬಿಣಗಾದ ಕದಂಬ ನೌಕಾನೆಲೆಯಲ್ಲಿ ...