ಹೊಸದಿಲ್ಲಿ: ಭಾರತ ಗೊಂಬೆಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕು ಮೋದಿ ಆಶಯ ಭಾರತ ಆಟಿಕೆ ಮೇಳಕ್ಕೆ ಚಾಲನೆ

Source: VB | By S O News | Published on 1st March 2021, 11:04 PM | National News |

ಹೊಸದಿಲ್ಲಿ: ನಾವೀನ್ಯತೆಗೆ ಗಮನ ನೀಡಿ, ಕಡಿಮೆ ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಅಧಿಕ ಬಳಸುವ ಮೂಲಕ ಆಕರ್ಷಕ ಆಟಿಕೆಗಳನ್ನು ತಯಾರಿಸಬೇಕು ಎಂದು ಆಟಿಕೆ ಉತ್ಪಾದಕರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗುವ ಎಲ್ಲಾ ಅವಕಾಶ ಮತ್ತು ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದ್ದಾರೆ.

ಪ್ರಪ್ರಥಮ ಭಾರತ ಆಟಿಕೆ ಮೇಳ 2021ಕ್ಕೆ ವೀಡಿಯೊ ಕಾನ್ಸರೆನ್ಸಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗುವ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಆಟಿಕೆಗಳಿಗೆ ಇರುವ ಬೇಡಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.  ಜಾಗತಿಕ ಮಾರುಕಟ್ಟೆಯಲ್ಲಿ ಆಟಿಕೆಗಳ ಟ ವ್ಯವಹಾರ 100 ಬಿಲಿಯನ್ ಡಾಲರ್ ಮೊತ್ತದ್ದಾಗಿದ್ದು ಇದರಲ್ಲಿ ಭಾರತದ ಪಾಲು ಅತ್ಯಂತ ಕನಿಷ್ಠವಾಗಿದೆ. ದೇಶದಲ್ಲಿ ಮಾರಾಟವಾಗುತ್ತಿರುವ ಆಟಿಕೆಗಳಲ್ಲೂ 85 ಶೇ.ರಷ್ಟು ಆಮದು ಆಟಿಕೆಗಳಾಗಿವೆ. ದೇಶೀಯ ಆಟಿಕೆ ಉತ್ಪಾದನಾ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 15 ಸಚಿವಾಲಯಗಳು ಒಳಗೊಂಡಿರುವ ರಾಷ್ಟ್ರೀಯ ಆಟಿ ಕೆ ಕ್ರಿಯಾ  ಯೋಜನೆಯನ್ನು ಸರಕಾರ ರೂಪಿಸಿದೆ. ಭಾರತವನ್ನು ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ಸಂದರ್ಭ ಅವರು ಕರ್ನಾಟಕದ ಚನ್ನಪಟ್ಟಣ, ಉತ್ತರಪ್ರದೇಶದ ವಾರಣಾಸಿ ಮತ್ತು ರಾಜಸ್ಥಾನದ ಜೈಪುರದ ಪಾರಂಪರಿಕ ಆಟಿಕೆ ತಯಾರಕರ ಜೊತೆ ಸಂವಾದ ನಡೆಸಿದರು. ಮರು ಬಳಸಬಹುದಾದ, ಪರಿಸರ ಸ್ನೇಹೀ ಮತ್ತು ಮಕ್ಕಳ ಮನಸ್ಸನ್ನು ವಿಕಸಿಸುವ ರೀತಿಯ ಆಟಿಕೆಗಳನ್ನು ಉತ್ಪಾದಿಸಬೇಕು. ಭಾರತೀಯ ಆಟಿಕೆ ಉದ್ಯಮ ಪರಂಪರೆ, ತಂತ್ರಜ್ಞಾನ, ಪರಿಕಲ್ಪನೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದು, ವಿಶ್ವಕ್ಕೆ ಪರಿಸರ ಸ್ನೇಹಿ ಆಟಿಕೆಗಳನ್ನು ಪೂರೈಸಲು ನಮಗೆ ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಚನ್ನಪಟ್ಟಣ ಆಟಿಕೆ ತಯಾರಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ದೇಶದಲ್ಲಿ ಆಯೋಜಿಸಲಾದ ಪ್ರಪ್ರಥಮ ಭಾರತ ಆಟಿಕೆ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಚನ್ನಪಟ್ಟಣ ಗೊಂಬೆ ತಯಾರಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸಬಾರದು. ಆಟಿಕೆ ತಯಾರಕರೆಲ್ಲರೂ ಚರ್ಚೆ ನಡೆಸಿ, ನಿಮ್ಮ 200 ವರ್ಷ ಪುರಾತನ ವೃತ್ತಿಗೆ ನಾವೀನ್ಯತೆಯ ಸ್ಪರ್ಶ ನೀಡಿ ವಿಶ್ವದ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನಿಂದ 60 ಕಿ.ಮೀ. ದೂರವಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರ ಗೊಂಬೆಗಳ ನಗರವೆಂದೇ ಪ್ರಸಿದ್ದ ಎಂದು ಪ್ರಧಾನಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಚನ್ನಪಟ್ಟಣ ಗೊಂಬೆ ತಯಾರಕರ ತಂಡವೊಂದು ಹೇಳಿ, ತಾವು ತಯಾರಿಸುವ ಕೆಲವು ಜನಪ್ರಿಯ ಗೊಂಬೆಗಳನ್ನು ಉಲ್ಲೇಖಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ 'ನೀವು ಉಲ್ಲೇಖಿಸಿದ ಗೊಂಬೆಗಳ ಹೆಸರು ನನ್ನನ್ನು ಬಾಲ್ಯಕಾಲಕ್ಕೆ ಕರೆದೊಯ್ದಿತು' ಎಂದರು.

ಚನ್ನಪಟ್ಟಣದಲ್ಲಿ ಗೊಂಬೆ ತಯಾರಿಕೆಯನ್ನೇ ಕಸುಬಾಗಿರಿಸಿಕೊಂಡ ಸುಮಾರು 2,000 ಕುಶಲಕರ್ಮಿಗಳಿದ್ದು ಇದರಲ್ಲಿ 20 ಶೇ. ಮಹಿಳೆಯರು. ಇಲ್ಲಿನ ಗೊಂಬೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಗೊಂಬೆ, ಮಣಿಚೌಕಟ್ಟು(ಅಬಾಕಸ್), ಪಗಡೆಯ ದಾಳಗಳು, ಬುಗುರಿ ಹಾಗೂ ಇತರ ಆಟಿಕೆಗಳನ್ನು ಸ್ಥಳೀಯವಾಗಿ ಲಭಿಸುವ ಹಾಲೆ ಮರದಿಂದ ತಯಾರಿಸಿ ವಾರ್ನಿಶ್ ನೀಡಲಾಗುತ್ತದೆ.

ನಿಮ್ಮ ಆಟಿಕೆ, ಗೊಂಬೆಗಳ ಬಗ್ಗೆ ವಿಶ್ವದ ಗಮನ ಸೆಳೆಯಬೇಕಿದ್ದರೆ ನಿಮ್ಮ ಉತ್ಪನ್ನಗಳಿಗೆ ನಾವೀನ್ಯತೆಯ ಸ್ಪರ್ಷದ ಅಗತ್ಯವಿದೆ. ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸಬೇಡಿ, ಗೊಂಬೆ ತಯಾರಿಕರೆಲ್ಲರೂ ಚರ್ಚಿಸಿ, ನಿಮ್ಮ 2 ಶತಮಾನ ಪುರಾತನ ವೃತ್ತಿಗೆ ಹೊಸತನದ ಮೆರುಗು ತರಲು ಪ್ರಯತ್ನಿಸಿ. ಸರಕಾರದ ಇಲಾಖೆಗಳು ನಿಮಗೆ ನೆರವು ನೀಡುತ್ತವೆ. ವಿಶ್ವದೆಲ್ಲೆಡೆಯ ಮಕ್ಕಳ ಮುಖದಲ್ಲಿ ನಗು ಅರಳಿಸುವ ರೀತಿಯಲ್ಲಿ ನಿಮ್ಮ ಗೊಂಬೆ, ಆಟಿಕೆಗಳಲ್ಲಿ ನಾವೀನ್ಯತೆ ತನ್ನಿ ಎಂದು ಮೋದಿ ಹೇಳಿದರು.

ಗೊಂಬೆಗಳ ಪಟ್ಟಣ ಚನ್ನಪಟ್ಟಣಕ್ಕೆ ಬೆಂಗಳೂರಿನ ನವೋದ್ಯಮಿಗಳು ಹಾಗೂ ಐಟಿ ಸಂಸ್ಥೆಗಳು ಭೇಟಿ ನೀಡಿ, ಅಲ್ಲಿನ ಕುಶಲಕರ್ಮಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸುವಂತೆ ಕರ್ನಾಟಕ ಸರಕಾರದೊಂದಿಗೆ ಮಾತನಾಡುತ್ತೇನೆ. ಸ್ಪರ್ಧಾತ್ಮಕವಾದ ಈಗಿನ ಕಾಲದಲ್ಲಿ ಹೊಸಕಲ್ಪನೆ, ನಾವೀನ್ಯತೆ ಅತ್ಯಗತ್ಯವಾಗಿದೆ ಎಂದು ಮೋದಿ ಹೇಳಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...