ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಸಚಿವ -ಅರವಿಂದ ಲಿಂಬಾವಳಿ

Source: SO News | By Laxmi Tanaya | Published on 5th June 2021, 10:51 PM | Coastal News | Don't Miss |

ಮಂಗಳೂರು : ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಹೊಣೆಯಾಗಿದೆ, ಪ್ರತಿಯೊಬ್ಬರು ಪರಿಸರ ಕಾಳಜಿ ಇಟ್ಟುಕೊಂಡು ತಮ್ಮ ಸುತ್ತಲೂ ಅವಕಾಶವಿರುವ ಕಡೆ ಗಿಡ ನೆಡುವ ಮೂಲಕ ಹಸಿರು ಬೆಳೆಸುವ ಕೆಲಸ ಮಾಡಬೇಕು, ಆಮೂಲಕ ನಮ್ಮ ಸುತ್ತಲ ಪರಿಸರದಲ್ಲಿ ಪ್ರಾಕೃತಿಕವಾಗಿ ಶುದ್ಧ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಬೇಕೆಂದು ಅರಣ್ಯ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.

     ಅವರು ಶನಿವಾರ ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ 'ಕಾಡಿನಲ್ಲಿ ವನ್ಯಮೃಗ ಗಳಿಗಾಗಿ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಧರ್ಮಸ್ಥಳದ 125 ಹೆಕ್ಟೇರು ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
     ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಇಂದು ಈ ಕಾರ್ಯಕ್ರಮಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರೊಂದಿಗೆ ಚಾಲನೆ ನೀಡಿದರು.

    ಕಾರ್ಯಕ್ರಮದ ಆರಂಭದಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂಬ ದ್ಯೇಯ ವಾಕ್ಯಕ್ಕೆ ದನಿಗೂಡಿಸಿದರು.

       ಆನಂತರ ವೃಕ್ಷ ಬಂಧನ ವಿಧಿ ನಡೆಸಲಾಯಿತು. ಆ ಮೂಲಕ ಮರಗಳ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಬದ್ಧತೆಯಿಂದ ದುಡಿಯುವ, ವೃಕ್ಷ ಕಾಯುವ ಕಾಯಕಕ್ಕೆ ಕೈಜೋಡಿಸಲು ಅನುವು ಮಾಡಿಕೊಡಲಾಯಿತು.

      ನಂತರ ಧರ್ಮಸ್ಥಳದ ಅರಣ್ಯಪ್ರದೇಶದಲ್ಲಿ ಸಚಿವರು ಹಾಗೂ ಧರ್ಮಾಧಿಕಾರಿಗಳು ಗಿಡ ನೆಟ್ಟು ಯೋಜನೆಗೆ ಚಾಲನೆ ನೀಡಿದರು.
ಅಲ್ಲದೆ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಂದಲೂ ಗಿಡ ನಡೆಸಲಾಯಿತು.

      ಇದೇ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಅರ್ಧ ಎಕರೆ ಅರಣ್ಯ ಪ್ರದೇಶದಲ್ಲಿ ಕೈಗೊಂಡಿರುವ ಮಿಯಾವಾಕಿ ಮಾದರಿ ನೆಡುತೋಪು ಯೋಜನೆ ಉದ್ಘಾಟಿಸಲಾಯಿತು. ನಂತರ ಧರ್ಮಸ್ಥಳ ಶ್ರೀ ಕ್ಷೇತ್ರ ನೂತನವಾಗಿ ಜಾರಿಗೆ ತಂದಿರುವ ಹಸಿರು ಬಸ್ ಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

      ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತಲಿನಲ್ಲಿ ಅರಣ್ಯ ನಾಶವಾಗಿರುವ ಕಡೆ ಗಿಡ ನೆಡಬೇಕು , ವಿಶೇಷವಾಗಿ ವನ್ಯಮೃಗಗಳಿಗೆ ಆಹಾರ ಕ್ಕಾಗಿ ಹಣ್ಣಿನ ಗಿಡಗಳನ್ನು ನೆಡಬೇಕು ಎಂದು ಎರಡು ತಿಂಗಳ ಹಿಂದೆ ಇಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೆವು ಅದರಂತೆ ಇಂದು ಇಲ್ಲಿ ಗಿಡ ನೆಟ್ಟಿದ್ದೇವೆ, ನೀವು ಸಹ ನಿಮ್ಮ ಸುತ್ತಮುತ್ತ ಅವಕಾಶವಿರುವ ಕಡೆ ಗಿಡ ನೆಡಬೇಕು ಎಂದು ಅವರು ಮನವಿ ಮಾಡಿದರು. ಕರೋನಾ ಇದ್ದರೂ ಕೂಡ ವಿಶ್ವ ಪರಿಸರದ ದಿನವಾಗಿ ಇಂದು ನಾವು ಸ್ವಸ್ಥ ಪರಿಸರಕ್ಕಾಗಿ ಈ ಮಹತ್ವದ  ಯೋಜನೆಗೆ ಚಾಲನೆ ನೀಡುತ್ತಿದ್ದೇವೆ .ಇದು ನಾಟಿ ಸಮಯವೂ ಆಗಿರುವುದರಿಂದ ಯೋಜನೆಯ ಅನುಷ್ಠಾನಕ್ಕೆ ಉತ್ತಮ ಸಮಯವಾಗಿದೆ. ಸಾರ್ವಜನಿಕರು ಕೂಡ ಇಂತಹ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ ಹಸಿರು ಸಂರಕ್ಷಣೆಗೆ ಮುಂದಾಗಬೇಕೆಂದು ಸಚಿವ ಅರವಿಂದ ಲಿಂಬಾವಳಿ  ತಿಳಿಸಿದರು.

     ಈ ಪ್ರದೇಶದಲ್ಲಿ ಮಾವು, ಹಲಸು ,ನೆಲ್ಲಿ, ಕಾಡು ಬಾದಾಮಿ, ಹೆಬ್ಬಲಸು ಮತ್ತು ನೇರಳೆ ಹಣ್ಣಿನ ಗಿಡಗಳನ್ನು ನೆಡಲಾಯಿತು.

      ಸಮಾರಂಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಳನ್ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...