ಭಟ್ಕಳ: 10.95 ಕೋಟಿದ ಮಿನಿ ವಿಧಾನ ಸೌಧ ಉದ್ಘಾಟನೆ

Source: S.O. News Service | Published on 25th January 2021, 10:56 PM | Coastal News |

ಭಟ್ಕಳ: ಸರಕಾರ ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿದ್ದನ್ನು ಪರಿಗಣಿಸಿ ಈಗಾಗಲೇ ರಾಜ್ಯದಲ್ಲಿ 922631 ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ಜಮಾ ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಅವರು ಹೇಳಿದರು. ಅವರು ಇಲ್ಲಿನ ಮಿನಿ ವಿಧಾನ ಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಹಣಕಾಸಿಗೆ ಕೊರತೆ ಇಲ್ಲ, ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿಯೂ ಕೂಡಾ ಸಾಕಷ್ಟು ಹಣ ಜಮಾ ಇದೆ, ಯಾವುದೇ ತುರ್ತು ಸಂದರ್ಭದಲ್ಲಿ ಖರ್ಚು ಮಾಡಲು ಅವರಿಗೆ ಅವಕಾಶ ಇದೆ ಎಂದ ಅವರು ಕಂದಾಯ ಮಂತ್ರಿಯಾದ ಮೇಲೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತಿದ್ದೇನೆ ಎಂದರು. ಜಿಲ್ಲೆಯ ಕಾರವಾರದಲ್ಲಿ 26 ಕೋೀಟಿ ವೆಚ್ಚದಲ್ಲಿ ಜಿಲ್ಲಾಡಳಿತ ಕಚೇರಿ ಹಾಗೂ ಜಿಲ್ಲೆಯ ಯಲ್ಲಾಪುರದಲ್ಲಿ 4 ಕೋಟಿ, ಸಿದ್ದಾಪುರದಲ್ಲಿ 8 ಕೋಟಿ, ಹಳಿಯಾಳದಲ್ಲಿ 3 ಕೋಟಿ, ದಾಂಡೇಲಿಯಲ್ಲಿ 10 ಕೋಟಿ, ಕುಮಟಾದಲ್ಲಿ 10 ಕೋಟಿ, ಹೊನ್ನಾವರದಲ್ಲಿ 6 ಕೋಟಿ, ಜೊಯಿಡಾದಲ್ಲಿ 6 ಕೋಟಿ, ಶಿರಸಿಯಲ್ಲಿ 28 ಲಕ್ಷ ರೂಪಾಯಿಗಳನ್ನು ಮಿನಿ ವಿಧಾನ ಸೌಧಕ್ಕೆ ಮಂಜೂರು ಮಾಡಲಾಗಿದೆ. ಭಟ್ಕಳದ ಮಿನಿ ವಿಧಾನ ಸೌಧವನ್ನು ಸರಿಯಾದ ಸಮಯದಲ್ಲಿ ಕಟ್ಟಿ ಮುಗಿಸಲಾಗಿದ್ದು 10.95 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದೆ. ಇನ್ನು ಪೀಠೋಪಕರಣಕ್ಕಾಗಿ 3.35 ಕೋಟಿ ರೂಪಾಯಿ ಅನುಮೋದನೆಯನ್ನು ಮುಖ್ಯ ಮಂತ್ರಿಗಳು ನೀಡಿದ್ದಾರೆ. ಮಿನಿ ವಿಧಾನ ಸೌಧದಲ್ಲಿ ಎಲ್ಲ ಕಚೇರಿಗಳೂ ಒಂದೇ ಕಡೆಯಲ್ಲಿ ಬರುವುದರಿಂದ ಜನ ಸಾಮಾನ್ಯರಿಗೆ ತೊಂದರೆ ತಪ್ಪಲಿದೆ ಎಂದೂ ಅವರು ಹೇಳಿದರು. ಕಟ್ಟಡವನ್ನು ಗುತ್ತಿಗೆದಾರರು ಅತ್ಯಂತ ಉತ್ತಮವಾಗಿ ಕಟ್ಟಿದ್ದು
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅವರು ಕಂದಾಯ ಇಲಾಖೆಯ ಕಚೇರಿಗಳಿಗೆ ಇನ್ನು ಮುಂದೆ ಪಿಂಚಣಿ, ವಿಧವಾ ವೇತನ, ವೃದ್ಧಾಪ್ಯ ವೇತನಗಳಿಗಾಗಿ ಅಲೆದಾಡುವ ಪ್ರಶ್ನೆ ಇಲ್ಲ. ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಹೋಗಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ನಿಮ್ಮ ಕೆಲಸ ಸುಗಮ ಮಾಡಲಿದ್ದಾರೆ. ಅಲ್ಲದೇ ನಮ್ಮ ಇಲಾಖೆಯಲ್ಲಿರುವ ವಿವರವನ್ನು ಆಧರಿಸಿ ಇನ್ನು ಮುಂದೆ ಜನರ ಮನೆ ಬಾಗಿಲಿಗೆ ಪಿಂಚಣಿ ಇತ್ಯಾದಿ ತಲುಪಲಿದೆ ಎಂದೂ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಡಿ ಜಮೀನು, ಬೆಟ್ಟದ ಜಮೀನು, ಸ್ಟ್ರಿಪ್ಟ್, ಕುಮ್ಕಿ ಈಸೊತ್ತು ಇತ್ಯಾದಿ ಸಮಸ್ಯೆಗಳಿವೆ. ರೆವೆನ್ಯೂ ಜಾಗಾದಲ್ಲಿ ಮನೆ ಕಟ್ಟಿಕೊಂಡವರಿಗೆ ರೆಕಾರ್ಡ ಮಾಡಿಕೊಡುವ ಕಾರ್ಯ ಕಂದಾಯ ಸಚಿವರು ಮಾಡಿಕೊಟ್ಟಿದ್ದಾರೆ. ಈಸೊತ್ತು ಸಮಸ್ಯೆಗೆ ಈಗಾಗಲೇ ಸಂಪುಟ ಉಪ ಸಮಿತಿ ರಚಿಸಲಾಗಿದೆ ಕಂದಾಯ ಸಚಿವರು ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ಇವುಗಳನ್ನು ಪರಿಹರಿಸಿಕೊಡಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಭಟ್ಕಳದ ಮಿನಿ ವಿಧಾನ ಸೌಧ ಉದ್ಘಾಟನೆಯಾಗಿದೆ. ಆದರೆ ಕಚೇರಿಗಳು ಶೀಘ್ರವಾಗಿ ಇಲ್ಲಿಗೆ ಸ್ಥಳಾಂತರವಾಗಬೇಕಾಗಿದೆ ಎಂದರು.
ಶಾಸಕ ಸುನಿಲ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತನ್ನ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಸಚಿವರ ಮುಂದೆ ಬಿಚ್ಚಿಟ್ಟರು.

ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ, ಪುರಸಭಾ ಅಧ್ಯಕ್ಷ ಪರ್ವೆಜ್ ಕಾಶಿಮಜಿ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಮೀಮ್ ಬಾನು ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತ ಭರತ್ ಎಸ್ ಅವರು ಸ್ವಾಗತಿಸಿದರು. ತಹಸೀಲ್ದಾರ್ ರವಿಚಂದ್ರ ಎಸ್. ವಂದಿಸಿದರು.

ಇದಕ್ಕೂ ಪೂರ್ವ ಸಚಿವರು ನೂತನವಾಗಿ ನಿರ್ಮಿಸಲಾಗಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಗುಣಮಟ್ಟದ ಆಹಾರವನ್ನು ಪೂರೈಸುವಂತೆ ಸೂಚಿಸಿದರು.

* ಆನಂದ ಸಿಂಗ್ ರಾಜೀನಾಮೆ ಕೊಟ್ಟಿರವ ಬಗ್ಗೆ ಇನ್ನೂ ನನಗೇನೂ ತಿಳಿದು ಬಂದಿಲ್ಲ. ಈ ಬಗ್ಗೆ ಮುಖ್ಯ ಮಂತ್ರಿ, ಗ್ರಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿರುವಾಗಲೇ ಮುಖ್ಯ ಮಂತ್ರಿಗಳಿಂದ ಕರೆ ಬಂದ ಹಿನ್ನೆಲೆಯಲ್ಲಿ ರಾತ್ರಿಯೊಳಗೆ ಬೆಂಗಳೂರಿಗೆ ಬರುವುದಾಗಿ ತಿಳಿಸಿದ ಸಚಿವರು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡು ಬಂದರು.

Read These Next