ರಾಷ್ಟ್ರೀಯ ಹೆದ್ದಾರಿಗಳ ಸೇವಾ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿರಲಿ

Source: SO News | By Laxmi Tanaya | Published on 8th September 2021, 10:43 PM | State News | Don't Miss |

ಕಲಬುರಗಿ :  ಕಲಬುರಗಿ ನಗರ ಒಳಗೊಂಡಂತೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮಧ್ಯೆ ಸೇವಾ ರಸ್ತೆಗಳು ಕೆಟ್ಟು ಬ್ಲಾಕ್ ಆಗಿದ್ದು, ಕೂಡಲೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳಿಗೆ ಸಂಸದ ಡಾ.ಉಮೇಶ ಜಾಧವ ಅವರು ಸೂಚಿಸಿದರು.

ಗುರುವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಕಿಂದ್ರಾಬಾದ್-ವಾಡಿ ಮಧ್ಯೆ ಲೇವಲ್ ಕ್ರಾಸ್ 3ರಲ್ಲಿ ರೈಲ್ವೆ ರಸ್ತೆ ಮೇಲ್ಸೇತುವೆ ಕಾಮಗಾರಿಯನ್ನು 2022ರ ಡಿಸೆಂಬರ್ ಅಂತ್ಯದೊಳಗೆ ಮುಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿ ಪ್ರಥಮ ಅಗರವಾಲ್ ತಿಳಿಸಿದರು. ಕಾಮಗಾರಿ ಕಾಲಮಿತಿಯೊಳಗೆ ಮತ್ತು ಗುಣಮಟ್ಟದಿಂದ ಕೂಡಿರಬೇಕು ಎಂದು ಲೋಕಸಭಾ ಸದಸ್ಯರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆಗಾಲ ಸಂದರ್ಭ ಇದಾಗಿದ್ದರಿಂದ ಕಲಬುರಗಿ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್ ಮೇಲ್ಛಾವಣೆ ಸೋರಿಕೆಯಾಗುತ್ತಿದ್ದು, ಕೂಡಲೆ ದುರಸ್ತಿಪಡಿಸಬೇಕು. ಅದೇ ರೀತಿ ವಾಡಿ ರೈಲ್ವೆ ನಿಲ್ದಾಣದಲ್ಲಿ ಚರಂಡಿ ನೀರಿನ ಸಮಸ್ಯೆ ಇದ್ದು, ಇದನ್ನು ಸಹ ನಿವಾರಿಸಬೇಕು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಸಂಭಾವ್ಯ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಾ ಆರೋಗ್ಯ ಸಂಸ್ಥೆಗಳಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಡಿ.ಹೆಚ್.ಓ. ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಚರ್ಚೆ ವೇಳೆ ಉಪನಿರ್ದೇಶಕ ಪ್ರಭುರಾಜ ಹೆಚ್.ಎಸ್. ಅವರು ರಾಷ್ಟ್ರೀಯ ತೋಟಗಾರಿಕೆ ಯೋಜನೆಯಡಿ ಈರುಳ್ಳಿ ಶೇಖರಣೆ ಘಟಕ ಸ್ಥಾಪನೆಗೆ 2019-20ನೇ ಸಾಲಿಗೆ 316 ಮತ್ತು 2020-21ನೇ ಸಾಲಿಗೆ 400 ಫಲಾನುಭವಿಗಳಿಗೆ ಕ್ರಮವಾಗಿ 2.76 ಕೋಟಿ ಮತ್ತು 3.50 ಕೋಟಿ ರೂ. ಸಹಾಯಧನ ವಿತರಿಸಿದೆ. ಪ್ರಸಕ್ತ 2021-22ನೇ ಸಾಲಿಗೆ ಜಿಲ್ಲೆಗೆ ಕೇವಲ 170 ಭೌತಿಕ ಗುರಿ ನೀಡಿದ್ದು, ಇದು ಸಾಲದು ಹೀಗಾಗಿ ಗುರಿ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದರು. 

ಸಂಸದ ಡಾ. ಉಮೇಶ ಜಾಧವ ಅವರು ಮಾತನಾಡಿ ನಿಜವಾದ ರೈತ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಮತ್ತು ಫಲಾನುಭವಿಗಳು ಪುನರಾವರ್ತವನೆಯಾಗದಂತೆ ಆಯ್ಕೆ ಮಾಡಿ ಎಂದ ಅವರು ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸೂಕ್ತ ಮಾರುಕಟ್ಟೆ ಮತ್ತು ಶೀಥಲೀಕರಣ ಘಟಕ ಇಲ್ಲದಿದ್ದಕ್ಕೆ ಕಲ್ಲಂಗಡಿ, ದ್ರಾಕ್ಷಿ ಬೆಳೆದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು. ಈ ಮಧ್ಯೆ ಡಿ.ಸಿ. ವಿ.ವಿ. ಜ್ಯೋತ್ಸ್ನಾ ಮಾತನಾಡಿ ಇಂತಹ ಹಲವಾರು ರೈತಪರ ಯೊಜನೆಗಳು ಹೆಚ್ಚಾಗಿ ರೈತಾಪಿ ವರ್ಗಕ್ಕೆ ತಿಳಿದಿರುವುದಿಲ್ಲ ಈ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಪಿ.ನಾಗಪ್ಪ ಅವರು ಮಾತನಾಡಿ ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಬರುವ ಶಹಾಬಾದ-ವಾಡಿ ನಡುವಿನ ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ 65 ಕೋಟಿ ರೂ., ಇದೇ ಹೆದ್ದಾರಿಯಲ್ಲಿ ಶಹಾಬಾದ ಇ.ಎಸ್.ಐ.ಸಿ. ಆಸ್ಪತ್ರೆ ಬಳಿಯಿರುವ ಪ್ರಸ್ತುತ ದ್ವಿಪಥದಿಂದ ನಾಲ್ಕು ಪಥ ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ. ಹಾಗೂ ರಾಷ್ಟ್ರೀಯ ಹೆದ್ದಾರಿ 150-ಇ ಅಫಜಲಪೂರ ಪಟ್ಟಣದಲ್ಲಿ 1.7 ಕಿ.ಮಿ. ನಾಲ್ಕು ಪಥ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರಾತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಜಲ್ ಜೀವನ್ ಮಿಷನ್ ಯೋಜನೆ ಆರಂಭಿಸಿದೆ. ಇದರಡಿ ಪ್ರತಿ ಗ್ರಾಮಕ್ಕೂ ಪೈಪ್‍ಲೈನ್ ಅಳವಡಿಸಿ ನಳ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸಬೇಕು. ನರೇಗಾ ಯೋಜನೆಯಡಿ ನಿಗದಿತ ಮಾನವ ದಿನ ಸೃಜಿಸಬೇಕು ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ಮಾನೇಜರ್ ಇಂತೇಜಾರ್ ಹುಸೇನ್ ಮಾತನಾಡಿ ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳು ಮೂಲಕ 48680 ಫಲಾನುಭವಿಗಳಿಗೆ 250.23 ಕೋಟಿ ರೂ. ಸಾಲ ವಿತರಿಸಿದೆ.

ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಮತ್ತು ಮುದ್ರಾ ಯೋಜನೆಯಡಿ ಅರ್ಹ ನಿರುದ್ಯೋಗ ಯುವಕರಿಗೆ ಹಾಗೂ ನವೋದ್ಯಮಿಗಳಿಗೆ ಸಾಲ ನೀಡಬೇಕು. ನಿರುದ್ಯೋಗ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ಇಲಾಖೆ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೆಂದ್ರದ ಜಂಟಿ ನಿರ್ದೇಶಕ ಮಾಣಿಮ ರಘೋಜಿ ಅವರಿಗೆ ನಿರ್ದೇಶನ ನೀಡಿದರು.

ಬೆಳೆ ಹಾನಿ ಬಗ್ಗೆ ವರದಿ ಕೊಡಿ: ಕಳೆದ ಜುಲೈ ಮಾಹೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಬಹುತೇಕ ಬೆಳೆ ಹಾನಿಯಾಗಿದ್ದು, ಕೂಡಲೆ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದರು. ಜಂಟಿ ಕೃಷಿ ಡಾ.ರತೇಂದ್ರನಾಥ ಸೂಗೂರು ಮಾತನಾಡಿ ಜುಲೈ ಮಾಹೆಯಲ್ಲಿ ವಾಡಿಕೆಗಿಂತ 83 ಮಿ.ಮಿ. ಮಳೆ ಹೆಚ್ಚಳ, ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ 10 ಮಿ.ಮಿ. ಕಡಿಮೆ ಹಾಗೂ ಸೆಪ್ಟೆಂಬರ್ ಮಾಹೆಯಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ 47 ಮಿ.ಮಿ. ಮಳೆ ಹೆಚ್ಚಾದ ಕಾರಣ 55000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಬೆಳೆ ಹಾನಿಯಾಗಿದೆ. ಹೆಚ್ಚಾಗಿ ತೊಗರಿ, ಹೆಸರು ಕಾಳು ಮಳೆಗೆ ತುತ್ತಾಗಿದೆ. ಸೇಡಂ ಉಪ ವಿಭಾಗದಲ್ಲಿಯೇ ಶೇ.90ರಷ್ಟು ಬೆಳೆ ಹಾನಿಯಾಗಿದೆ. ಕಳೆದ 4 ದಿನದಿಂದ ಸತತ ಮಳೆಯಾಗುತ್ತಿದ್ದು, ಮಳೆ ನಿಂತ ಮೇಲೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನೆಟ್‍ವರ್ಕ್ ಸಮಸ್ಯೆ ಮೊದಲು ಬಗೆಹರಿಸಿ: ಕೋವಿಡ್ ಕಾರಣ ಶಾಲಾ-ಕಾಲೇಜುಗಳ ಮಕ್ಕಳಿಗೆ ಆನ್‍ಲೈನ್ ಪಾಠ ಬೋಧನೆ ಹೆಚ್ಚಾಗಿದ್ದು, ಬಿ.ಎಸ್.ಎನ್.ಎಲ್. ನೆಟ್‍ವರ್ಕ್ ಸಮಸ್ಯೆ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಮೊದಲು ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಬಿ.ಎಸ್.ಎನ್.ಎಲ್. ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದರು ಜಿಲ್ಲೆಯಲ್ಲಿರುವ 260 ಗ್ರಾಮ ಪಂಚಾಯತಿಯಲ್ಲಿ ಶೇ.50ರಷ್ಟು ಗ್ರಾ.ಪಂ.ಗಳಲ್ಲಿ ಬ್ರಾಡ್‍ಬ್ಯಾಂಡ್ ಸೇವೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿ.ಎಸ್.ಎನ್.ಎಲ್ ಅಧಿಕಾರಿಗಳು ಬಿಲ್ಲು ಪಾವತಿಯಾಗದ ಕಾರಣ ಸಂಪರ್ಕ ಕಡಿತಗೊಳಿಸಿದೆ ಎಂದರು. ಕೂಡಲೆ ಬಿಲ್ಲು ಪಾವತಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಡಾ.ಉಮೇಶ ಜಾಧವ ಅವರು ನಿರ್ದೇಶನ ನೀಡಿದರು.

ಜನಪ್ರತಿನಿಧಿಗಳಿಗೆ ಮಾಹಿತಿ ಕೊಡಿ: ಸಭೆಯಲ್ಲಿ ಭಾಗವಹಿಸಿದ ಕೈಗಾರಿಕಾಭಿವೃದ್ಧಿ ಆಯುಕ್ತೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಕೆಯ ನಿರ್ದೇಶಕಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ ಕೃಷ್ಣಾ ಅವರು ಮಾತನಾಡಿ ಕೈಗಾರಿಕಾ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನಪ್ರತಿನಿಧಿಗಳು ಮತ್ತು ಉದ್ಯಮಿಗಳಿಗೆ ಮಾಹಿತಿ ನೀಡುವ ಕಾರ್ಯಾಗಾರ ಆಯೋಜಿಸಬೇಕು. ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಯೋಜನೆಗಳು ತಲುಪಬೇಕು. ಅದೇ ರೀತಿ ಬ್ಯಾಂಕಿನವರು ತಮ್ಮ ವಾರ್ಷಿಕ ಗುರಿಯಂತೆ ಸಾಲ ನೀಡಬೇಕು ಮತ್ತು ಅನಗತ್ಯ ಫಲಾನುಭವಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕøತ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಯಿತು.
ಸಭೆಯಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಇನ್ನಿತರ ಅಧಿಕಾರಿಗಳು ಇದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...