ಭಟ್ಕಳ ಪುರಸಭೆ ಕಾಮಗಾರಿ ಗುತ್ತಿಗೆದಾರರಿಗೆ ಹಣ ಪಾವತಿ; ಅಧ್ಯಕ್ಷ ಫರ್ವೇಜ್ ವಿರುದ್ಧ ತಿರುಗಿಬಿದ್ದ ಉಪಾಧ್ಯಕ್ಷ ಕೈಸರ್; ಮಾತಿನ ಚಕಮಕಿ; ಬುಧವಾರವೇ ಪರಿಶೀಲನೆಗೆ ಅಸ್ತು

Source: S O News | By V. D. Bhatkal | Published on 12th January 2022, 1:17 PM | Coastal News |

ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳು ಹಾಗೂ ಅದಕ್ಕೆ ಹಣ ಪಾವತಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭಾ ಉಪಾಧ್ಯಕ್ಷ ಕೈಸರ್ ಮೊತೇಶಮ್, ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ ವಿರುದ್ಧ ತಿರುಗಿ ಬಿದ್ದಿರುವ ಘಟನೆ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ.

 ಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಕೈಸರ್, ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪ ಗಾರ್ಡನ್, ಕಾರಂಜಿ ಕೆಲಸಕ್ಕೆ ರು.10 ಲಕ್ಷ ವಿನಿಯೋಗಿಸಲಾಗಿದೆ. ಆದರೆ ಅಲ್ಲಿ ನಡೆದಿರುವ ಕೆಲಸ, ಕಾರ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ. ಹಾಗೆಯೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸರಿಸುಮಾರು ರು.16 ಲಕ್ಷಕ್ಕೂ ಹೆಚ್ಚಿನ ಕಾಮಗಾರಿ ನಡೆದಿದೆ. ಅಲ್ಲದೇ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಚರಂಡಿ ಹೂಳೆತ್ತುವ ಕಾಮಗಾರಿಗಳಿಗೂ ಲಕ್ಷಾಂತರ ರುಪಾಯಿ ವ್ಯಯಿಸಲಾಗಿದೆ. ಹೀಗೆಯೇ ಲೆಕ್ಕ ಹಾಕುತ್ತ ಹೋದರೆ ಕಾಮಗಾರಿಗೆ ಬಿಡುಗಡೆಯಾಗಿರುವ ಒಟ್ಟೂ ಹಣ ರು.50 ಲಕ್ಷ ದಾಟುತ್ತದೆ.

ಕೆಲಸದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದೇ ಗುತ್ತಿಗೆದಾರರಿಗೆ ಹಣ ಪಾವತಿಸುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಫಾಸ್ಕಲ್ ಗೋಮ್ಸ್ ದನಿಗೂಡಿಸಿದರು. ಈ ಬಗ್ಗೆ ಮಾತನಾಡಿದ ಸದಸ್ಯ ಆಲ್ತಾಫ್ ಖರೂರಿ, ಗುತ್ತಿಗೆದಾರರಿಗೆ ಪೂರ್ತಿ ಹಣ ಪಾವತಿಸುವುದರಿಂದ ಕೆಲಸದ ಬಗ್ಗೆ ಪುರಸಭೆಯ ಹಿಡಿತ ತಪ್ಪುತ್ತದೆ. ಕಾಮಗಾರಿಯ ಒಟ್ಟೂ ಮೊತ್ತದ ಕನಿಷ್ಠ 25% ಹಣವನ್ನು ಕಾಮಗಾರಿಯ ಪರಿಶೀಲನೆಯ ನಂತರ ಪಾವತಿಸುವುದು ಒಳಿತು ಎಂದರು.

ಉಪಾಧ್ಯಕ್ಷರು ಹಾಗೂ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ, ಸದರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಭಿಯಂತರರು ನಾಳೆಯೇ ಕಾಮಗಾರಿಯ ಅಂದಾಜು ಪಟ್ಟಿ ಹಾಗೂ ಅಳತೆ ಪುಸ್ತಕವನ್ನು ಸದಸ್ಯರ ಮುಂದೆ ಹಾಜರುಪಡಿಸಬೇಕು. ಏನಾದರೂ ಲೆಕ್ಕ ತಪ್ಪಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇನೆ ಎಂದು ತಿಳಿಸಿದರು. ಜೆಸಿಬಿ ಯಂತ್ರ ಬಳಕೆಗೆ ಸಂಬಂಧಿಸಿದಂತೆ ಸದಸ್ಯ ಫಾಸ್ಕಲ್ ಗೋಮ್ಸ್ ಆಡಿದ ಮಾತೊಂದು ಕೋಲಾಹಲ ಸೃಷ್ಟಿಸಿತು. ಅಕ್ಟೋಬರ್ 2ರಂದು ಸಾರ್ವಜನಿಕರ ಕೆಲಸಕ್ಕೆ ಜೆಸಿಬಿಯ ಅಗತ್ಯವಿದ್ದರೂ ನೀಡಿಲ್ಲ, ಆ ದಿನ ಜೆಸಿಬಿ ಅಧ್ಯಕ್ಷರ ಮನೆ ಕೆಲಸಕ್ಕೆ ಹೋಗಿದೆ ಎಂದು ಆರೋಪಿಸಿದರು. ಇದನ್ನು ಅಲ್ಲಗಳೆದ ಅಧ್ಯಕ್ಷ ಫರ್ವೇಜ್, ಸುಮ್ಮನೇ ಮಾತನಾಡಬೇಡಿ, ನಮ್ಮ ಮನೆ ಕೆಲಸಕ್ಕೆ ಜೆಸಿಬಿ ಬಂದಿರುವುದರ ಬಗ್ಗೆ ಏನು ಪುರಾವೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಬೆಂಬಲ ಸೂಚಿಸಿದ ಸದಸ್ಯ ಇಮ್‍ಶಾದ್, ಜಾಲಿಯ ಕಡೆಗೆ ಜೆಸಿಬಿ ಹೋಗಿದೆ ಎಂದ ಮಾತ್ರಕ್ಕೆ ಅದು ಅಧ್ಯಕ್ಷರ ಮನೆಗೆ ಹೋಗಿದೆ ಎಂದು ಹೇಳುವುದು ಸರಿಯಲ್ಲ, ಮಾತು ಸರಿಯಾಗಿರಲಿ ಎಂದು ತಾಕೀತು ಮಾಡಿದರು. ಮಾತಿನ ಚಕಮಕಿಯಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಾವರಿಸಿಕೊಂಡ ಸದಸ್ಯ ಫಾಸ್ಕಲ್, ನನಗೆ ಅಧ್ಯಕ್ಷರ ಬಗ್ಗೆ ಗೌರವ ಇದೆ, ಆದರೆ ಸಾರ್ವಜನಿಕ ಕೆಲಸಕ್ಕೆ ಜೆಸಿಬಿಯನ್ನು ಒದಗಿಸದ ಅಧಿಕಾರಿಗಳ ನಡೆ ಸರಿಯಾದುದಲ್ಲ ಎಂದು ಸಮಜಾಯಿಸಿ ನೀಡಿದರು. ಭಟ್ಕಳ ಪಟ್ಟಣ ಪ್ರದೇಶದಲ್ಲಿ ಪುರಸಭೆಯಿಂದ ನೀಡಲಾದ ಸಿಸಿಟಿವಿ, ಅದರ ನಿರ್ವಹಣೆಯ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೆಯಿತು. ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...