ಹೊನ್ನಾವರ: ಚುನಾವಣೆ ಮುಗಿದರೂ ಮುಗಿಯದ ಕೋಟಿಗಳ ಲೆಕ್ಕಾಚಾರ; ಹಾಲಿ, ಮಾಜಿಗಳ ನಡುವೆ ಮುಂದುವರೆದ ವಾಕ್ಸಮರ

Source: S O News Service | By Office Staff | Published on 25th February 2020, 10:41 PM | Coastal News |

ಹೊನ್ನಾವರ: ಭಟ್ಕಳ- ಹೊನ್ನಾವರ ಕ್ಷೇತ್ರಕ್ಕೆ ವಿಧಾನಸಭಾ ಚುನಾವಣೆ ಮುಗಿದು ಎರಡು ವರ್ಷ ಸಮೀಪಿಸುತ್ತಿದ್ದರೂ ಚುನಾವಣಾ ಆಖಾಡ ಮುಗಿಯುವಂತೆ ಕಾಣುತ್ತಿಲ್ಲ. ಚುನಾವಣೆಗಿಂತ ಮುಂಚೆ ಕ್ಷೇತ್ರದ ತುಂಬೆಲ್ಲ ಇರುವ ಬ್ಯಾನರ್ ವಿಷಯ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಗಷ್ಟೆ ಈ ಹಿಂದೆ ಸೀಮೀತವಾಗಿದ್ದ ಈ ಚರ್ಚೆ, ಇದೀಗ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

1,500 ಕೋಟಿ ಸರದಾರ, 2 ಸಾವಿರ ಕೋಟಿ ಸರದಾರ ಎನ್ನುವ ಬ್ಯಾನರ್ ವಿಷಯ ಮತ್ತೊಮ್ಮೆ ಕ್ಷೇತ್ರದ ಜನತೆಯನ್ನು ನೆನಪಿಸುವಂತೆ ಮಾಡಿದೆ. ಈ ಹಿಂದೆ ಶಾಸಕರಾಗಿದ್ದ ಮಂಕಾಳ ವೈದ್ಯ 5 ವರ್ಷದ ಅವಧಿಯಲ್ಲಿ ಹಲವು ಯೋಜನೆ ತಂದಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಕೆಲವು ಯೋಜನೆಗಳು ಸಂಪೂರ್ಣವಾಗಿದ್ದರೂ, ಹಲವು ಯೋಜನಾ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದೆ. ಇನ್ನು ಕೆಲವು ಪೂರ್ಣಗೊಳ್ಳುವ ಹಂತದಲ್ಲಿದ್ದರೆ, ಇನ್ನಷ್ಟು ಅನುಷ್ಠಾನವೇ ಆಗಿರಲಿಲ್ಲ. ಈ ಮಧ್ಯೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಾಸಕ ಸುನೀಲ ನಾಯ್ಕ ಕ್ಷೇತ್ರದಲ್ಲೆಡೆ ಹಲವು ಯೋಜನೆ ಆರಂಭಿಸಿದ್ದರು. ಕಳೆದ ತಿಂಗಳು ಗುಂಡಬಾಳ- ಚಿಕ್ಕೊಳ್ಳಿ ರಸ್ತೆ, ಗುಂಡಿಬೈಲ್, ಹಿರೇಬೈಲ್ ರಸ್ತೆ ಭೂಮಿಪೂಜೆ ನೆರವೇರಿಸಿ ಸಾವಿರ ಕೋಟಿ ಅನುದಾನದ ಬಗ್ಗೆ ಮಾತನಾಡಿ, ಬ್ಯಾನರ್ ವಿಷಯ ಪ್ರಸ್ತಾಪಿಸಿದ್ದರು.

ಮುಂದುವರೆದು ಚರ್ಚೆಗೆ ಬನ್ನಿ ಎಂದು ಸವಾಲು ಕೂಡ ಹಾಕಿದ್ದರು. ನಿಮ್ಮ ಅವಧಿ ಸಾವಿರಾರು ಕೋಟಿ ಯೋಜನೆಯ ಮಾಹಿತಿ ನೀಡಿ ಸಂಬಂಧಿಸಿ ದಾಖಲಾತಿ ಇಡುವಂತೆ ಆಗ್ರಹಿಸಿದ್ದರು. ಫೆ.22ರಂದು ದಬ್ಬೋಡದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕರ ಹೇಳಿಕೆಗೆ ಕೌಂಟರ್ ನೀಡಿ, ‘ಶಾಸಕರ ಸವಾಲು ಸ್ವೀಕರಿಸಿದ್ದೇನೆ. ನನ್ನ ಅವಧಿಯಲ್ಲಿ ತಂದ ಕಾಮಗಾರಿಗಳ ಚರ್ಚೆಗೆ ಬರಲಿದ್ದೇನೆ. ಹಲವು ಯೋಜನೆಗಳು ಜಾರಿಯಾಗಿದೆ. ಇನ್ನು ಹಲವು ಯೋಜನೆಗಳಿಗೆ ಇವರೇ ಭೂಮಿಪೂಜೆ ಮಾಡುತ್ತಿದ್ದಾರೆ. ಕೆಲವು ಯೋಜನೆಗಳು ಜಾರಿಯಾಗದೇ ಇರಲು ಇವರ ಆಢಳಿತ ವೈಖರಿಯೇ ಕಾರಣ’ ಎಂದು ಕಟುವಾಗಿ ಟೀಕಿಸಿದ್ದರು.  

‘ರಾಜ್ಯದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಒಂದೇ ದಿನದಲ್ಲಿ 1,500 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಲನ್ಯಾಸ ಮಾಡಲಾಗಿದೆ. ನಾನು ಯೋಜನೆ ತಂದಿಲ್ಲ ಎಂದು ಸಾಬೀತುಪಡಿಸಿ, ಕ್ಷೇತ್ರಕ್ಕೆ ತಂದ ಅನುದಾನದ ಬಗ್ಗೆ ಚರ್ಚೆಗೆ ದಾಖಲೆ ಸಮೇತ ಸಿದ್ಧ’ ಎಂದಿದ್ದರು. ಸೋಮವಾರ (ಫೆ.24) ಹೊನ್ನಾವರ ಶಾಸಕರ ಕಾರ್ಯಲಯದಲ್ಲಿ ಚೆಕ್ ವಿತರಣೆ ಬಳಿಕ ಶಾಸಕ ಸುನೀಲ ನಾಯ್ಕ ಮಾತನಾಡಿ, ‘ಮಂಕಾಳ ವೈದ್ಯರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತದೆ. ಜಾತಿ ಜಾತಿಗಳ ನಡುವೆ ಎತ್ತಿಕಟ್ಟಿ ರಾಜಕೀಯ ಮಾಡುವ ಕಾರ್ಯ ಮೊದಲು ನಿಲ್ಲಿಸಲಿ. ಇಂತಹ ನೀಚ ಕೆಲಸಕ್ಕೆ ಮುಂದಾಗದೇ ಇದ್ದರೆ ಒಳ್ಳೆಯದು. ಈ ಹಿಂದೆ 1,500 ಕೋಟಿ ಅನುದಾನದ ಬೋರ್ಡ್ ಜನರೇ ಕಿತ್ತು ಹಾಕಿದ್ದಾರೆ. ಈಗಾಗಲೇ ನಿಮ್ಮ ಕಾರ್ಯ ನೋಡಿಯೇ ಕ್ಷೇತ್ರದ ಮತದಾರರು ಉತ್ತರ ನೀಡಿದ್ದಾರೆ. ನಿಮ್ಮಲ್ಲಿರುವ ದಾಖಲಾತಿಯನ್ನು ತೆಗೆದುಕೊಂಡು ನೀವು ಸ್ಥಳ ನಿಗದಿಪಡಿಸಿ. ಅಲ್ಲಿಯೇ ಸಾನು ಬರಲು ಸಿದ್ಧನಿದ್ದೇನೆ. ಈಗಾಗಲೇ ನಾನು 300 ಕೋಟಿ ಅನುದಾನ ತಂದಿದ್ದೇನೆ. ಅದರ ಬಗ್ಗೆ ಬೇಕಾದರೆ ಸೂಕ್ತ ದಾಖಲಾತಿ ನೀಡಲು ಸಿದ್ಧ’ ಎಂದಿದ್ದಾರೆ.

ಒಟ್ಟಾರೆ, ಇವರ ನಡುವೆ ವಾಕ್ಸಮರ ಕ್ಷೇತ್ರದ ಜನತೆಗೆ ರಾಜಕೀಯ ಕುತೂಹಲ ಮೂಡಿಸಿದೆ. ಇಬ್ಬರೂ ಚರ್ಚೆಗೆ ಆಹ್ವಾನ ನೀಡತ್ತಿದ್ದಾರೆಯೇ ಹೊರತು, ಒಬ್ಬರೂ ಸ್ಥಳ, ಸಮಯ ಹೇಳುತ್ತಿಲ್ಲ. ಇದೆಲ್ಲವನ್ನು ನೋಡಿದರೆ ‘ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು?’ ಎನ್ನುವಂತಿದ್ದು, ಸ್ಥಳ, ಸಮಯ ನಿಗದಿ ಮಾಡುವವರು ಯಾರು? ಎನ್ನುವ ಪ್ರಶ್ನೆ ಇಬ್ಬರು ಜನನಾಯಕರಿಗೆ ಕೇಳಬೇಕಾಗಿದೆ. ಚುನಾವಣೆ ಮುಗಿದು ಎರಡು ವರ್ಷ ಗತಿಸಿದರೂ ಇಷ್ಟರ ಮಟ್ಟಿಗೆ ಹಿಂದಿನ ಅವಧಿಯ ಆಢÀಳಿತ ಮತ್ತು ಹಿಂದಿನ ಶಾಸಕರ ಚರ್ಚೆ ನಡೆಯುತ್ತಿರುವುದು ರಾಜ್ಯದಲ್ಲಿ ಭಟ್ಕಳ ಕ್ಷೇತ್ರದಲ್ಲಿ ಮಾತ್ರವಿರಬಹುದು ಎಂದರೆ ತಪ್ಪಾಗಲಾರದು.

ಮುಂದಿನ ದಿನಗಳಲ್ಲಿ ಹಾಲಿ, ಮಾಜಿ ಶಾಸಕರು ಈ ಬಗ್ಗೆ ಚರ್ಚೆ ನಡೆಸಿ, ಕ್ಷೇತ್ರದ ಮತದಾರರಿಗೆ ಮಾಹಿತಿ ನೀಡಲಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ತನ್ನದೇ ಆದ ಪಾತ್ರವಿದ್ದು, ಈ ಬಗ್ಗೆ ಮುತುವರ್ಜಿ ವಹಿಸಲಿ. ಇಬ್ಬರೂ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಲ್ಲಿ ಹೆಚ್ಚಿನ ಗಮನಹರಿಸಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...