ಮಂಗಳೂರು | ಭೂಕುಸಿತ ಪ್ರಕರಣ: ₹10 ಲಕ್ಷ ಪರಿಹಾರ ವಿತರಣೆ

Source: so news | Published on 8th July 2020, 12:07 AM | Coastal News | Don't Miss |

 


ಮಂಗಳೂರು: ನಗರದ ಹೊರವಲಯದ ಗುರುಪುರದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಭಾನುವಾರ ಭೂಕುಸಿತದಿಂದ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ₹ 10 ಲಕ್ಷ ಮೊತ್ತದ ಪರಿಹಾರದ ಚೆಕ್‌ಗಳನ್ನು  ವಿತರಿಸಿದರು.
ಭಾನುವಾರ ಮಧ್ಯಾಹ್ನ 30 ಅಡಿ ಎತ್ತರದ ಗುಡ್ಡ ಕುಸಿದು ಮನೆಗಳ ಮೇಲೆ ಬಿದ್ದಿತ್ತು. ಸಫ್ವಾನ್‌ (16) ಮತ್ತು ಸಹಾಲಾ (10) ಎಂಬ ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಮತ್ತು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರೊಂದಿಗೆ ಸೋಮವಾರ ಘಟನಾ ಸ್ಥಳಕ್ಕೆ ಭೇಟಿನೀಡಿದ ಸಚಿವರು, ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಿಸಿದರು.
ಘಟನೆಯಲ್ಲಿ ಎರಡು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. 14 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗುಡ್ಡ ಕುಸಿತದಿಂದ ರಸ್ತೆಯ ಮೇಲೆ ಬಿದ್ದಿದ್ದ ಬೃಹತ್‌ ಮಣ್ಣಿನ ರಾಶಿಯನ್ನು ಸೋಮವಾರ ತೆರವುಗೊಳಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ

Read These Next