ಬಂಡುಕೋರರು ಮರಳಿದರೆ ಮೈತ್ರಿಕೂಟ ತೊರೆಯಲು ಸಿದ್ಧ; ಶಿವಸೇನೆ ಸಂಸದ ಸಂಜಯ್ ರಾವುತ್

Source: Vb | By I.G. Bhatkali | Published on 24th June 2022, 2:59 PM | National News |
ಮುಂಬೈ: ಗುವಾಹಟಿಯಲ್ಲಿರುವ ಬಂಡುಕೋರ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಮರಳಿದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಮೈತ್ರಿಯಿಂದ ಹೊರಬರಬೇಕೆಂಬ ಅವರ ಬೇಡಿಕೆಯನ್ನು ಪಕ್ಷವು ಪರಿಗಣಿಸಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಗುರುವಾರ ಇಲ್ಲಿ ಹೇಳಿದ್ದಾರೆ.

40ಕ್ಕೂ ಅಧಿಕ ಶಾಸಕರು ಗುವಾಹಟಿಯಲ್ಲಿ ಅತೃಪ್ತ ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರ ಜೊತೆಯಲ್ಲಿದ್ದಾರೆ. ಶಿವಸೇನೆಯು ಹಿಂದುತ್ವಕ್ಕಾಗಿ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದು ಶಿಂದೆಯವರ ಬೇಡಿಕೆಯಾಗಿದೆ. ಹಿಂದೆಯವರ ಬಂಡಾಯವು ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರವನ್ನು ಉರುಳಿಸುವ ಬೆದರಿಕೆಯನ್ನೊಡ್ಡಿದೆ.

ಶಿವಸೇನೆಯು ಮೈತ್ರಿಯಿಂದ ಹೊರಗೆ ಬರಬೇಕು ಎಂದು ಬಂಡುಕೋರ ಶಾಸಕರು ಬಯಸಿದ್ದರೆ ಅವರು ಪಕ್ಷದ ಮುಖ್ಯಸ್ಥರಿಗೆ ಅಧಿಕೃತ ಅಹವಾಲು ಸಲ್ಲಿಸಬೇಕು ಎಂದು ಹೇಳಿದ ರಾವುತ್ 'ನಾವು ಆ ಬಗ್ಗೆ ಚರ್ಚಿಸುತ್ತೇವೆ, ಆದರೆ ಮುಂಬೈಗೆ ಮರಳುವ ಧೈರ್ಯವನ್ನು ತೋರಿಸಿ, ಶಿವಸೈನಿಕರಾಗಿದ್ದೇವೆ. ಎಂದು ನೀವು ಹೇಳುತ್ತಿದ್ದರೆ ಮತ್ತು ನಿಮ್ಮ ಸಮಸ್ಯೆಗಳು ಪ್ರಸಕ್ತ ಸರಕಾರದ ಕುರಿತಾಗಿದ್ದರೆ ಶಿವಸೇನೆಯು ಹೊರಗೆ ಬರಲು ಸಿದ್ಧವಿದೆ' ಎಂದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸದಂತೆ ರಾವುತ್‌ ಶಾಸಕರಿಗೆ ಸೂಚಿಸಿದ್ದಾರೆ. ಇದಕ್ಕೂ ಮುನ್ನ ಶಿವಸೇನೆ ನಾಯಕ ಸಂಜಯ್ ಶಿರಸಾಟ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಬರೆದಿದ್ದ ಪತ್ರವನ್ನು ಶಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು.

ಕಳೆದ ಎರಡೂವರೆ ವರ್ಷಗಳಿಂದಲೂ ಅವಮಾನವನ್ನು ಎದುರಿಸುತ್ತಿರುವ ಶಿವಸೇನೆ ಶಾಸಕರ ಒತ್ತಡಕ್ಕೆ ಮಣಿದು ಶಿಂದೆಯವರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬೀಳಲು ನಿರ್ಧರಿಸಿದ್ದಾರೆ ಎಂದು ಔರಂಗಾಬಾದ್ (ಪಶ್ಚಿಮ) ಕ್ಷೇತ್ರದ ಶಾಸಕ ಶಿರಸಾಟ್ ತನ್ನ ಪತ್ರದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಯವರು ಪಕ್ಷದ ಶಾಸಕರ ಸಂಪರ್ಕಕ್ಕೆ ಸಿಗುವುದಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ಎಲ್ಲ ಶಾಸಕರು ತೊಂದರೆಗಳನ್ನು ಅನುಭವಿಸಿದ್ದಾರೆ. ನಿಮ್ಮ ಸುತ್ತಲಿನ ಜನರು ಎಂದೂ ನಮ್ಮ ಸಮಸ್ಯೆಗಳನ್ನು ಆಲಿಸಲಿಲ್ಲ ಮತ್ತು ಅವುಗಳನ್ನು ನಿಮಗೆ ತಿಳಿಸಲೂ ಇಲ್ಲ. ಆದರೆ ಇದೇ ವೇಳೆ ಏಕನಾಥ್ ತಂದೆಯವರ ಬಾಗಿಲುಗಳು ನಮಗಾಗಿ ಮುಕ್ತವಾಗಿದ್ದವು' ಎಂದೂ ಶಿರಸಾಟ್ ಪತ್ರದಲ್ಲಿ ತಿಳಿಸಿದ್ದಾರೆ.

ಸಮ್ಮಿಶ್ರ ಸರಕಾರವನ್ನು ತೊರೆಯಲು ಶಿವಸೇನೆ ಸಿದ್ಧವಿದೆ ಎಂಬ ರಾವುತ್ ಹೇಳಿಕೆಯ ಬಳಿಕ ಟೀಟಿಸಿರುವ ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಅವರು, 'ಕೊನೆಯವರೆಗೂ ನಾವು ಠಾಕ್ರೆಯವರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಈ ಸರಕಾರವನ್ನು ಉಳಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ' ಎಂದು ಹೇಳಿದ್ದಾರೆ.

ನಂತರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಾಟೀಲ್, 'ಅವರು ಬೇರೆ ಏನನ್ನೋ ಯೋಚಿಸಿ ಹಾಗೆ ಹೇಳಿರಬಹುದು. ನಾವು ಅವರೊಂದಿಗೆ ಮಾತನಾಡುತ್ತೇವೆ. ಅವರು ನಮಗೆ ನೇರವಾಗಿ ಏನನ್ನೂ ತಿಳಿಸಿಲ್ಲ. ಆ ಬಗ್ಗೆ ನಾವೀಗ ಪ್ರತಿಕ್ರಿಯಿಸುವುದಿಲ್ಲ' ಎಂದು ಹೇಳಿದರು.

ಈ ನಡುವೆ ಕಾಂಗ್ರೆಸ್ ಗುರುವಾರ ಸಂಜೆ ತನ್ನ ನಾಯಕರ ಸಭೆಯನ್ನು ನಡೆಸಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ತನ್ನ ಪಕ್ಷವು ಶಿವಸೇನೆಯ ಜೊತೆಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದರು.

ಶಿಂದೆ ಬಂಡಾಯದ ನಡುವೆಯೇ ಬುಧವಾರ ಠಾಕ್ರೆ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುವ ಕೊಡುಗೆಯನ್ನು ಮುಂದಿರಿಸಿದ್ದರು. ಬಳಿಕ ಅವರು ದಕ್ಷಿಣ ಮುಂಬೈನಲ್ಲಿನ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಬಾಂದ್ರಾದಲ್ಲಿರುವ ಕುಟುಂಬದ ನಿವಾಸಕ್ಕೆ ತೆರಳಿದ್ದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...