ತಮಿಳು ನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ. ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ

Source: ANI | Published on 7th May 2021, 3:47 PM | National News |

ಚೆನ್ನೈ: ತಮಿಳು ನಾಡಿನ ನೂತನ ಮುಖ್ಯಮಂತ್ರಿಯಾಗಿ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್(ಎಂ.ಕೆ.ಸ್ಟಾಲಿನ್) ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಚೆನ್ನೈಯ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ ಕೆ ಸ್ಟಾಲಿನ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಬೋಧಿಸಿದರು.

ತಮಿಳು ನಾಡು ಸರ್ಕಾರದ ಇತಿಹಾಸದಲ್ಲಿ 69 ವರ್ಷದ ಎಂ ಕೆ ಸ್ಟಾಲಿನ್ ಅವರು ಇಂದು ಅಧಿಕಾರ ವಹಿಸಿಕೊಳ್ಳುವ ಮೂಲಕ ಅತ್ಯಂತ ಹಿರಿಯ ವಯಸ್ಸಿನ ನಾಯಕ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ತಮಿಳು ನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸ್ಥಾಪಕ ಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ಎಂ. ಕೆ.ಸ್ಟಾಲಿನ್ ಅವರು ಈ ಹಿಂದೆ 2009ರಲ್ಲಿ ತಮಿಳು ನಾಡಿನ ಉಪ ಮುಖ್ಯಮಂತ್ರಿ ಹುದ್ದೆ, 2006ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವ ಖಾತೆಯನ್ನು, ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಅಲಂಕರಿಸಿ ಆಗಿ ಸರ್ಕಾರದ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಸ್ಟಾಲಿನ್ ಅವರಿಗೆ 5 ದಶಕಗಳ ರಾಜಕೀಯ ಅನುಭವವಿದೆ.

2018ರಲ್ಲಿ ಎಂ ಕರುಣಾನಿಧಿಯವರ ನಿಧನ ಬಳಿಕ ಡಿಎಂಕೆ ಅಧ್ಯಕ್ಷ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಟಾಲಿನ್ ಅವರು ವಹಿಸಿಕೊಂಡರು. ಅಭಿಮಾನಿಗಳಿಂದ ಪ್ರೀತಿಯಿಂದ ತಲಪತಿ ಎಂದು ಸ್ಟಾಲಿನ್ ಕರೆಸಿಕೊಳ್ಳುತ್ತಾರೆ.

33 ಸಂಪುಟ ಸಚಿವರು ಪ್ರಮಾಣ ವಚನ: ಎಂ ಕೆ ಸ್ಟಾಲಿನ್ ಅವರ ಜೊತೆಗೆ ಉಳಿದ 33 ಮಂದಿ ಶಾಸಕರು ಕೂಡ ಇಂದು ರಾಜಭವನದಲ್ಲಿ ಸಂಪುಟಕ್ಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ, ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ, ಎಂಡಿಎಂಕೆ ಸ್ಥಾಪಕ ವೈಕೊ ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸ್ಟಾಲಿನ್ ಅವರ ಪುತ್ರ ಉದಯನಿಧಿ ಕೂಡ ತಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದನ್ನು ಕಣ್ತುಂಬಿಕೊಂಡರು.

ಇಂದು ಬೆಳಗ್ಗೆ 9 ಗಂಟೆಗೆ ಆರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಕೇವಲ 250 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನವಿತ್ತು. 

ಎಂ ಕೆ ಸ್ಟಾಲಿನ್ ಅವರು ಸಚಿವಾಲಯಕ್ಕೆ ತೆರಳಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಮಧ್ಯಾಹ್ನ ವೇಳೆಗೆ ಪ್ರಮುಖ ಪ್ರಕಟಣೆ ಮಾಡುವ ಸಾಧ್ಯತೆಯಿದೆ. 

ಪ್ರಧಾನಿ ಅಭಿನಂದನೆ: ತಮಿಳು ನಾಡಿನ 8ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ಎಂ ಕೆ ಸ್ಟಾಲಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 

 

Read These Next

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...