ಲೋಕಸಭೆ ಚುನಾವಣೆ ಹಿನ್ನೆಲೆ; ಎಸ್.ಐ.ಓ ದಿಂದ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

Source: sonews | By Staff Correspondent | Published on 27th March 2019, 5:07 PM | Coastal News | Don't Miss |

ಭಟ್ಕಳ: ಇಲ್ಲಿನ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಭಟ್ಕಳ ಶಾಖೆಯು ಲೋಕಸಭೆ ಚುನಾವಣೆ ನಿಮಿತ್ತ ವಿದ್ಯಾರ್ಥಿ ಪ್ರಣಾಳಿಕೆಯನ್ನು ಬಿಡುಗೊಳಿಸಿತು. 

ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಎಸ್.ಐ.ಓ ರಾಜ್ಯ ಸಂಘಟನಾ ಕಾರ್ಯದರ್ಶಿ ಫಹಿಮುದ್ದೀನ್ ಬೀದರ, ರಾಷ್ಟ್ರಾದ್ಯಂತ ಇಂದು ವಿದ್ಯಾರ್ಥಿ ಸಮುದಾಯ ಮತ್ತು ಯುವಕರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಅಥವಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿಲ್ಲ, ಈ ಕಾರಣಕ್ಕಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕವು ಚುನಾವಣಾ ವಿದ್ಯಾರ್ಥಿ ಪ್ರಣಾಳಿಕೆಯನ್ನು ತರುತ್ತಿದ್ದು ಎಂದಿನಂತೆ ಧರ್ಮ,ಜಾತಿ ಆಧಾರದಲ್ಲಿ ದೇಶದ ಭವಿಷ್ಯದ ಬಗ್ಗೆ ತೀರ್ಮಾನ ಮಾಡದೆ ಸಮಾಜದ ನೈಜ್ಯ ವಿಚಾರಗಳಾದ ಶಿಕ್ಷಣ, ಉದ್ಯೋಗ, ಮತ್ತು ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿ ಚರ್ಚೆಗಳು ನಡೆದು ಆ ಮೂಲಕ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಯುವಜನರ ಸಮಸ್ಯೆಗಳ ಸಮಗ್ರ ಪರಿಹಾರಕ್ಕಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. 
ಈ ಹಿನ್ನಲೆ ಐದು ಮುಖ್ಯ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಣಾಳಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಶಿಕ್ಷಣ,ಉದ್ಯೋಗ,ಪರಿಸರ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಡಿಯಲ್ಲಿ ಅತೀ ಮುಖ್ಯವಾಗಿ ಅಗತ್ಯವಿರುವ ಮುಖ್ಯಾಂಶಗಳನ್ನು ಈ ವಿದ್ಯಾರ್ಥಿ ಪ್ರಣಾಳಿಕೆ ಚರ್ಚಿಸುತ್ತದೆ. ಶಿಕ್ಷಣದ ಭಾಗವಾಗಿ ಹಲವು ಶಿಕ್ಷಣ ಆಯೋಗಗಳ ಶಿಫಾರಸಿನಂತೆ ಶಿಕ್ಷಣದ ಮೇಲಿನ ವೆಚ್ಚದ ಪ್ರಮಾಣವನ್ನು ಜಿಡಿಪಿ ಯ ಶೇ.8%ಕ್ಕೆ ಏರಿಸಬೇಕೆಂಬುದು ನಮ್ಮ ಪ್ರಾಥಮಿಕ ಬೇಡಿಕೆಯಾಗಿದೆ.ಆರ್.ಟಿ.ಇ ಕಾಯ್ದೆಯನ್ನು ಹುಟ್ಟಿನಿಂದ 18 ವಯಸ್ಸಿನ ವರೆಗೆ ವಿಸ್ತರಿಸಬೇಕು. ಆ ಮೂಲಕ ಎಲ್ಲಾ ಮಕ್ಕಳಿಗೆ ಬಾಲ ಪೂರ್ವ ಶಿಕ್ಷಣ ಲಭಿಸುವುದನ್ನು ಖಾತ್ರಿಪಡಿಸಬೇಕು ಮತ್ತು ಪ್ರಜ್ಞೆ, ಅರಿವು ಮತ್ತು ಸಂವೇದನೆಯನ್ನು ಮತ್ತು ಆರೋಗ್ಯ ಹಾಗೂ ಪೌಷ್ಠಿಕತೆಯನ್ನು ಆರಂಭಿಕ ವಯಸ್ಸಿನಲ್ಲೇ ಬೆಳೆಸಲು ಪ್ರೋತ್ಸಾಹಿಸಿದಂತಾಗುತ್ತದೆ. ಮಕ್ಕಳ ಪೂರ್ವಭಾವಿ ಅವಕಾಶಕ್ಕಾಗಿ ಮತ್ತು ಸಮರ್ಥ ಅಭಿವೃದ್ಧಿಗಾಗಿ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೆರೆಹೊರೆ ಶಾಲೆಯು ನೀಡಬೇಕು.ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಕ್ಕೊಂದು ಶಾಲೆ ಪರಿಕಲ್ಪನೆಯಡಿಯಲ್ಲಿ ಶಾಲೆಗಳನ್ನು ಸ್ಥಾಪಿಸಬೇಕು. ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕೆಂದು ಎಸ್.ಐ.ಓ ಪ್ರಣಾಳಿಕೆಯಲ್ಲಿ ಚರ್ಚಿಸಿದೆ.

ಪ್ರಸ್ತುತ ಉದ್ಯೋಗ ಯುವಜನರ ಪ್ರಮುಖ ಚರ್ಚಾ ವಿಚಾರವಾಗಿದ್ದು ಆ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಕೌಶಲ್ಯ ಭಾರತ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುವವರಿಗೆ ಪ್ರಮಾಣ ಪತ್ರ, ಸ್ಟೈಪಂಡ್ ಮತ್ತು 100% ಉದ್ಯೋಗ ಖಾತ್ರಿಯನ್ನು ನೀಡಬೇಕು.ಎಲ್ಲಾ ಸರಕಾರಿ ಮತ್ತು ಸಾರ್ವಜನಿಕ ಹುದ್ದೆಗಳನ್ನು ಭರ್ತಿಮಾಡಬೇಕು. ಮುಂದಿನ ಆರು ತಿಂಗಳ ಒಳಗಾಗಿ ಸರಕಾರದ 

ಎಲ್ಲಾ ಖಾಲಿ ಹುದ್ದೆಗಳು ಭರ್ತಿಯಾಗುವುದನ್ನು ಖಾತ್ರಿ ಪಡಿಸಬೇಕೆಂದು ಈ ಪ್ರಣಾಳಿಕೆಯ ಮೂಲಕ ಎಲ್ಲ ರಾಜಕೀಯ ಪಕ್ಷಗಳ ಗಮನ ಯುವಜನರತ್ತ ಸೆಳೆಯಲು ಯತ್ನಿಸಲಾಗಿದೆ.

ಜನರನ್ನು ವ್ಯವಸ್ಥಿತವಾಗಿ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಂದ ವಂಚಿಸುವ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ಈ ಮರ್ದಿತ ವರ್ಗಗಳು ಮುಖ್ಯಸ್ಥರದಲ್ಲಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಣಾಳಿಕೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.ಅವುಗಳಲ್ಲಿ ಮುಖ್ಯವಾಗಿ ಜಸ್ಟಿಸ್ ರಂಗನಾಥ ಮಿಶ್ರಾ ಸಮಿತಿಯ ವರದಿಯಂತೆ ಧಾರ್ಮಿಕ ಅಲ್ಪಸಂಖ್ಯಾತ ವಿಭಾಗಕ್ಕೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೇ.10% ಮೀಸಲಾತಿಯನ್ನು ನೀಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳು- ಉದಾಹರಣೆಗೆ ಬೀದರ್ ಮುಂತಾದ ಕಡೆಗೆ ವಿಶೇಷ ಗಮನವನ್ನು ನೀಡಬೇಕು. ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳಾದ ಅಲೀಘಡ್ ಮುಸ್ಲಿಮ್ ಯುನಿವರ್ಸಿಟಿ ಮುಂತಾದವುಗಳ ಆಫ್ ಕ್ಯಾಂಪಸ್‍ಗಳನ್ನು ಉನ್ನತ ಶಿಕ್ಷಣದ ಲಭಿಸುವಿಕೆಗಾಗಿ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳಲ್ಲಿ ಸ್ಥಾಪಿಸಬೇಕು.

ಈ ಎಲ್ಲ ಬೇಡಿಕೆಯೊಂದಿಗೆ ಪರಿಸರದ ರಕ್ಷಣೆ ಕೂಡ ನಮ್ಮ ಪ್ರಧಾನ ಆದ್ಯತೆಯಾಗಬೇಕಾದ ಅವಶ್ಯಕತೆಯಿದೆ. ಪ್ರಸ್ತುತ ಪರಿಸರದ ರಕ್ಷಣೆ ಮುಖ್ಯ ಭೂಮಿಕೆಯಲ್ಲಿ ಚರ್ಚಿಸಲ್ಪಡುತ್ತಿರುವ ವಿಚಾರವಾಗಿದೆ. ಅದನ್ನು ಕೂಡ ಈ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ಕೊಟ್ಟು ಚರ್ಚಿಸಲಾಗಿದೆ. ಮುಖ್ಯವಾಗಿ ಬತ್ತಿರುವ ಕೆರೆಗಳಲ್ಲಿ ಮತ್ತೆ ನೀರು ತುಂಬಿಕೊಳ್ಳುವಂತೆ ರಾಜ್ಯವು ಶ್ರಮಿಸಬೇಕು. ಉಪ ಮೇಲ್ಮೈ ಅಣೆಕಟ್ಟು, ಕರಾವಳಿ ಜಲಾಶಯಗಳು ಹೀಗೆ ಜಲ ಸಂರಕ್ಷಣೆಗಾಗಿ ಅನೇಕ ಪರ್ಯಾಯ ಮಾರ್ಗಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಪರಿಸರ ಸಮಗ್ರತೆಯನ್ನು ಕಾಪಾಡಲು, ಸಿಹಿ ನೀರನ್ನು ಉಳಿಸಕೊಳ್ಳಲು ಮತ್ತು ಯೋಗ್ಯ ಪರಿಸರ ಸ್ಥಿತಿಯಲ್ಲಿ ಅವುಗಳನ್ನು ನಿರ್ವಹಿಸಲು ನದಿಗಳ ಒಳ ಹರಿವಿನ ಮೌಲ್ಯಮಾಪನವನ್ನು ಜಾರಿಗೊಳಿಸಬೇಕು.ದೇಶದಲ್ಲಿ ಎಲ್ಲಾ ಇಂಧನ ಬೇಡಿಕೆಯನ್ನು ಪೂರೈಸಲು ಸ್ವಚ್ಛ, ಮರುಬಳಕೆಗೆ ಯೋಗ್ಯವಾದ ಮತ್ತು ಶೂನ್ಯ ಹೊಗೆಯ ಮೂಲಗಳನ್ನು 2050ರಲ್ಲಿ ಸಾಧಿಸುವ ಗುರಿಯನ್ನು ರಾಜ್ಯವು ಹೊಂದಬೇಕು. ಆ ಮೂಲಕ ವ್ಯಾಪಕವಾದ ಪರಿಸರ ಮತ್ತು ಆರ್ಥಿಕ ಬದಲಾವಣೆಯನ್ನು ತರಬಹುದು. ಆರ್ಥಿಕ ಬೆಳವಣಿಗೆ ಮತ್ತು ಪರಿಸರವು ಒಟ್ಟೊಟ್ಟಾಗಿ ಸಂಚರಿಸುತ್ತದೆ.

ಈ ಸಂದರ್ಭದಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷ ಅಬುದ್ ಆಸಿಫ್ ರುಕ್ನುದ್ದೀನ್, ಭಟ್ಕಳ ಶಾಖೆಯ ಅಧ್ಯಕ್ಷ ಸನಾವುಲ್ಲಾ ಅಸಾದಿ, ಕಾರ್ಯದರ್ಶಿ ಶುಯೇಬ್ ಎಸ್.ಎಂ ಹಾಗೂ ಜಮಾಅತೆ ಇಸ್ಲಾಮಿ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಉಪಸ್ಥಿತರಿದ್ದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...