ಪಠ್ಯಪುಸ್ತಕ ಪುನರ್‌ ಪರಿಷ್ಕರಣ ಸಮಿತಿ ವಿಸರ್ಜನೆಗೆ ಸಾಹಿತಿ, ಚಿಂತಕರ ಪಟ್ಟು

Source: Vb | By I.G. Bhatkali | Published on 26th May 2022, 1:02 AM | State News |

ಬೆಂಗಳೂರು: ವಿವಾದಿತ ಅಂಶ, ವ್ಯಕ್ತಿಗಳ ಕುರಿತು ಮಕ್ಕಳ ತಲೆಯಲ್ಲಿ ತುಂಬಲು ಹೊರಟಿರುವ ಪಠ್ಯಪುಸ್ತಕ ಪುನರ್ ಪರಿಷ್ಕರಣ ಸಮಿತಿಯನ್ನು ರಾಜ್ಯ ಸರಕಾರ ಈ ಕೂಡಲೇ ವಿಸರ್ಜನೆ ಮಾಡಬೇಕು ಎಂದು ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳು ಆಗ್ರಹಿಸಿದ್ದಾರೆ.

ಸೋಮವಾರ ನಗರದ ಕೆ.ಆರ್‌. ವೃತ್ತದ ಅಲುಮ್ಮಿ ಅಸೋಸಿಯೇಷನ್ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘಟನೆಗಳು, ಜನಪರ ಸಂಘಟನೆಗಳ ಸಹ ಯೋಗದೊಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸುವಂತೆ ಒತ್ತಾಯ ಮಾಡಿದರು. ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ಮನುಧರ್ಮ ಸ್ಥಾಪಿಸುವ ಉದ್ದೇಶ ಹೊಂದಿರುವ ಹಲವರು ಈ ಪಠ್ಯಗಳನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಹೀಗಾಗಿಯೇ, ಯಾವುದೇ ಅನುಭವ ಇಲ್ಲದ ರೋಹಿತ್ ಚಕ್ರತೀರ್ಥ ರನ್ನು ಅಧ್ಯಕ್ಷ ಸ್ಥಾನದಲ್ಲಿಟ್ಟು, ಅವರ ವಿಚಾರಧಾರೆಯನ್ನು ಒತ್ತಾಯಪೂರ್ವಕ ವಾಗಿ ತುಂಬಲು ಹೊರಟಿದ್ದಾರೆ ಎಂದು ಟೀಕಿಸಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ ಅವರು ನಮಗೆ ಶಿಕ್ಷಣ, ಹೋರಾಟಕ್ಕೆ ಕರೆ ನೀಡಿದರು. ಆದರೆ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಪಡೆದವರೇ ಹೆಚ್ಚಾಗಿ ಮೂಲಭೂತದ ಕಡೆ ಹೊರಟಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗ ಅವರಿಗೆ ಬೆಂಬಲ ನೀಡುತ್ತಿರುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ವಿವಾದಿತ ಪಠ್ಯಪುಸ್ತಕ ಮಕ್ಕಳ ಕೈಸೇರುವುದನ್ನು ನಾವು ತಡೆಯಬೇಕು ಎಂದ ಅವರು, ಈಗಾಗಲೇ ಪೊಲೀಸ್, ನ್ಯಾಯಾಂಗ ಸೇರಿದಂತೆ ಎಲ್ಲೆಡೆ ಅವರ ವಕ್ತಾರರು ಇದ್ದಾರೆ. ಆದರೂ, ನಾವು ಒಗ್ಗೂಡಿ ಇದರ ವಿರುದ್ಧ ಧ್ವನಿಗೂಡಿಸಬೇಕು. ಅದರಲ್ಲೂ ಹೆಚ್ಚಾಗಿ ಸಂಘಟನೆಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಅವರು ಈ ಹುನ್ನಾರಗಳ ವಿರುದ್ಧ ಪ್ರತಿಭಟಿಸಲಿ ಎಂದು ಸಿದ್ದರಾಮಯ್ಯ ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಗಳು ಬದಲಾಗುವುದು ಸಹಜ. ಅವುಗಳ ಸೈದ್ಧಾಂತಿಕ ರಾಜಕೀಯ ವಿಚಾರಗಳಿಗಾಗಿ ಮಕ್ಕಳು ಓದುವ ಪಠ್ಯ ಪುಸ್ತಕಗಳನ್ನು ರಾಜಕೀಯ ಪಕ್ಷಗಳ ಪ್ರಣಾಳಿಕೆಯಂತೆ

ಬದಲಾಯಿಸುವುದು ಅಪಾಯಕಾರಿ ಬೆಳವಣಿಗೆ ಎಂದರು. ಶಿಕ್ಷಣ ತಜ್ಞ ಶ್ರೀಪಾದ ಭಟ್ ಮಾತನಾಡಿ, ಇಂತಹ ವಿವಾದಿತ ಪಠ್ಯಗಳನ್ನು ಹೋರಾಟಗಾರರು, ಜನಪ್ರತಿನಿಧಿಗಳು ಮಾತ್ರವಲ್ಲದೆ, ಶಿಕ್ಷಕರೂ ವಿರೋಧಿಸಬೇಕು. ಅದರ ಜೊತೆಗೆ ವಿದ್ಯಾರ್ಥಿಗಳ ಪೋಷಕರು ಧ್ವನಿಗೂಡಿಸಬೇಕು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೇ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳವಳಿಯಿಂದ ದೂರವಿದ್ದ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಕೆ.ಶರೀಫಾ ಮಾತನಾಡಿ, ಈ ಪಠ್ಯದಲ್ಲಿ ಹಲವಾರು ಮಹಿಳಾ ವಿರೋಧಿ ವಿಚಾರಗಳಿವೆ. ಇವು ಮನುವಾದಿ ಚಿಂತನೆಗಳನ್ನು ಪೋಷಿಸುತ್ತವೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ಸಂವಿಧಾನ ವಿರೋಧಿ ಶಿಕ್ಷಣ ನೀತಿಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದರು.

ಎಸ್ ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಮಾತನಾಡಿ, ಇಂತಹ ವಿವಾದಿತ ಸಮಿತಿಯನ್ನು ರಾಜ್ಯ ಸರಕಾರ ಕೂಡಲೇ ವಿಸರ್ಜನೆ ಮಾಡಬೇಕು. ಅಷ್ಟೇ ಅಲ್ಲದೆ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಸಭೆಯಲ್ಲಿ ಚಿಂತಕ, ಬರಹಗಾರ ಶಿವಸುಂದರ್‌, ಇತಿಹಾಸ ತಜ್ಞ ಎನ್.ನರಸಿಂಹಯ್ಯ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಕೆವಿಎಸ್ ರಾಜ್ಯ ಸಂಚಾಲಕ ಸರೋವರ ಬೆಂಕಿಕೆರೆ, ದಲಿತ್ ವಿದ್ಯಾರ್ಥಿ ಪರಿಷತ್‌ನ ಶ್ರೀನಾಥ್ ಪೂಜಾರಿ, ನ್ಯಾಯವಾದಿ ಅನಂತ್ ನಾಯ್ಕ, ಜೆಎಂಎಸ್ ರಾಜ್ಯಾಧ್ಯಕ್ಷ ದೇವಿ, ರಾಜ್ಯ ಕಾರ್ಯದರ್ಶಿ ಗೌರಮ್ಮ, ಹೋರಾಟಗಾರ ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...