ಕೊರೊನಾ ಸೋಂಕು ಎರಡನೇ ಹಂತ ದಾಟದಂತೆ ಕ್ರಮ ವಹಿಸೋಣ# #ನಾನು ಬದುಕಬೇಕೆಂಬ ಭಾವನೆ ಮೊದಲು ಬರಬೇಕು : ಕೆ.ಎಸ್.ಈಶ್ವರಪ್ಪ

Source: so news | Published on 22nd March 2020, 12:25 AM | State News |

ದಾವಣಗೆರೆ: ನಾನು ಬದುಕಬೇಕೆಂಬ ಭಾವನೆ ಮೊದಲು ಮನುಷ್ಯರಲ್ಲಿ ಮೂಡಬೇಕು. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳು, ದೊಡ್ಡ ಅಂಗಡಿ, ಮುಗ್ಗಟ್ಟು, ಬಾರ್ ರೆಸ್ಟೋರೆಂಟ್‍ಗಳನ್ನು ಬಲವಂತವಾಗಿ ಮುಚ್ಚಿಸುವುದಲ್ಲ. ಬದಲಾಗಿ ಮಾಲೀಕರೇ ಸ್ವ ಪ್ರೇರಣೆಯಿಂದ ತಾನೂ ಮತ್ತು ತನ್ನ ಕುಟುಂಬ ಸ್ವಸ್ಥವಾಗಿ ಬದುಕಬೇಕೆಂಬ ನಿರ್ಧಾರದಿಂದ ಮುಂದೆ ಬಂದು ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ಮತ್ತು ಕೊರೋನಾ ವೈರಸ್ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಲು ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೊರೊನಾ ಸೋಂಕಿನ ಕುರಿತು ಎಲ್ಲ ಮಾಧ್ಯಮಗಳು ಸಾರ್ವಜನಿಕರಲ್ಲಿ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಿ, ಕೊರೊನಾ ವೈರಸ್ ಸೋಂಕು ತಡೆಗಟ್ಟುವಲ್ಲಿ sಸಹಕರಿಬೇಕು ಎಂದರು.

ಕೊರೊನಾ ವೈರಸ್ ಸೋಂಕು ತಡೆ ಮತ್ತು ನಿಯಂತ್ರಣ ಸರ್ಕಾರದ ಮೊದಲ ಆದ್ಯತೆ ಆಗಿದ್ದು ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ಎರಡನೇ ಹಂತದಲ್ಲಿದ್ದು, ಮುಂದಿನ ಹಂತಕ್ಕೆ ಹೋಗಬಾರದು. ಮೂರನೇ ಹಂತಕ್ಕೆ ತಲುಪಿದರೆ ಹೀಗೆ ಸಭೆ ನಡೆಸಲು ಕೂಡ ಆಗುವುದಿಲ್ಲ. ಆದ್ದರಿಂದ ಮೂರನೇ ಹಂತಕ್ಕೆ ತಲುಪದಂತೆ ಎಲ್ಲರೂ ಜಾಗೃತರಾಗಿ ಸ್ವಯಂ ಕ್ರಮ ವಹಿಸಬೇಕು ಎಂದರು.

#ಕೊರೊನಾ ವೈರಸ್ ಸೋಂಕಿನ ಹಂತಗಳು : ಕೊರೊನಾ ವೈರಸ್ ಸೋಂಕಿನಲ್ಲಿ ನಾಲ್ಕು ವಿವಿಧ ಹಂತಗಳಿವೆ. ಮೊದಲನೇ ಹಂತದಲ್ಲಿ ವಿದೇಶಿ ವ್ಯಕ್ತಿ ತನ್ನೊಂದಿಗೆ ಸೋಂಕನ್ನು ಇಲ್ಲಿಗೆ ತಂದು ಈ ದೇಶದ ವ್ಯಕ್ತಿಗಳಿಗೆ ಹರಡುವುದು. ಎರಡನೇ ಹಂತದಲ್ಲಿ ನಮ್ಮ ದೇಶದ ಸೋಂಕಿತ ವ್ಯಕ್ತಿ ತನ್ನ ಮನೆ ಸದಸ್ಯರು ಮತ್ತು ಹತ್ತಿರದ ಸ್ನೇಹಿತರಿಗೆ ಹರಡುವ ಹಂತವಾಗಿದೆ. ಈ ಹಂತದಲ್ಲಿ ಒಬ್ಬ ವ್ಯಕ್ತಿ ಒಂದು ವಾರದಲ್ಲಿ 2.5 ಜನಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಮೂರನೇ ಹಂತದಲ್ಲಿ ಈ ಎರಡನೇ ಹಂತದ ವ್ಯಕ್ತಿಗಳು ಒಂದು ದಿನಕ್ಕೆ 350 ಜನರಿಗೆ ಹರಡುವ ಸಾಧ್ಯತೆ ಇದ್ದು ಇದು ದ್ವಿಗುಣ ಆಗುತ್ತಾ ಹೋಗಿ ಪಕ್ಕದ ಬಡಾವಣೆ, ಗ್ರಾಮಗಳಿಗೆ ಹರಡಿ ರಾಜ್ಯವ್ಯಾಪಿಯಾಗಬಹುದು. ನಾಲ್ಕನೇ ಹಂತದಲ್ಲಿ ರಾಜ್ಯದಿಂದ ದೇಶವ್ಯಾಪಿ ಹರಡಲಿದೆ.

ಕಾಳಪ್ಪನವರ್, ಎಸ್‍ಎಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ

#ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಪಿಪಿಟಿ ಪ್ರದರ್ಶನದ ಮೂಲಕ ಕೊರೊನಾ ವೈರಸ್ ಸೋಂಕಿನ ಕುರಿತು ವಿವರಣೆ ನೀಡುತ್ತಾ, ಒಟ್ಟು 7 ತರಹದ ಕೊರೊನಾ ವೈರಸ್‍ಗಳಿದ್ದು, ಇವುಗಳಲ್ಲಿ 3 ತರಹದ ವೈರಸ್‍ಗಳು ಔಟ್‍ಬ್ರೇಕ್ ಆಗಿವೆ. 2002 ದಕ್ಷಿಣಾ ಚೀನಾದಲ್ಲಿ ಸಾರ್ಸ್ ರೂಪದಲ್ಲಿ 8000 ಜನರನ್ನು ಬಲಿಪಡೆದು, 2012 ರಲ್ಲಿ ಮಧ್ಯ ಪಶ್ಚಿಮದ 27 ರಾಷ್ಟ್ರಗಳಲ್ಲಿ ಕಂಡು ಬಂದಿದ್ದು, ಇದೀಗ 2019 ರ ಡಿಸೆಂಬರ್ ಕಡೆ ಭಾಗದಲ್ಲಿ ಚೀನಾದ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಕೋವಿಡ್ 19 ಕಂಡು ಬಂದು ರಾಷ್ಟ್ರವ್ಯಾಪಿ ಹರಡುತ್ತಿದೆ. ಜನವರಿ 7 ರಂದು ಭಾರತ ದೇಶಕ್ಕೂ ಪ್ರವೇಶ ಇಟ್ಟಿದ್ದು, ರಾಷ್ಟ್ರಾದ್ಯಂತ ಆರೋಗ್ಯ ತುರ್ತು ಘೋಷಿಸಲಾಗಿದೆ.
ಕೊರೊನಾ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. 6 ವಿವಿಧ ತಂಡಗಳನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ/ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 15, ಬಾಪೂಜಿ ಆಸ್ಪತ್ರೆಯಲ್ಲಿ 15 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 100 ಬೆಡ್‍ಗಳ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ನಿಗಾವಣೆ ಮಾಡಲು ಸಾಧ್ಯವಿಲ್ಲದವರಿಗೆ ಚಿಗಟೇರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಗಂಟಲು ದ್ರವ ಮಾದರಿಗಳನ್ನು ಸದ್ಯಕ್ಕೆ ಶಿವಮೊಗ್ಗ ಮತ್ತು ಹಾಸನಕ್ಕೆ ಕಳುಹಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ನಿರ್ವಹಣೆ ಕುರಿತು ಆರೋಗ್ಯ ಶಿಕ್ಷಣವನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಮಾಡಲಾಗುತ್ತಿದೆ.
ಕೆಎಸ್‍ಆರ್‍ಟಿಸಿ ಮತ್ತು ರೈಲ್ವೇ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎರಡು ಹೆಲ್ಪ್‍ಡೆಸ್ಕ್ ತೆರೆದು ಪ್ರಯಾಣಿಕರಿಗೆ ಕೊರೊನಾ ಕುರಿತು ಮಾಹಿತಿ ಮತ್ತು ಶೀತ ಕೆಮ್ಮಿನ ಲಕ್ಷಣ ಇದ್ದರೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ವಿದೇಶಿ ಪ್ರವಾಸಿಗರ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಹೋಟೆಲ್ ಉದ್ಯಮ, ಬಟ್ಟೆ ಅಂಗಡಿ, ಪಾರ್ಕ್‍ಗಳನ್ನು ಬಂದ್ ಮಾಡಲಾಗಿದೆ. ಹರಿಹರ ಗ್ರಾಸಿಮ್ ಕಂಪೆನಿಗೆ ಹೋಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ
#ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ ಸ್ಯಾನಿಟೈಸರ್ ಮತ್ತು ಬಟ್ಟೆಯ ಮಾಸ್ಕ್ ತಯಾರಿಸುವ ತರಬೇತಿ ನೀಡಲಾಗಿದ್ದು, ಇವರು ತಯಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ತೊಡಗಲಿದ್ದಾರೆ. ಹಾಗೂ ನಿರಂತರವಾಗಿ ಪಿಡಿಓಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಿ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಮಾಡಿಸಲಾಗುತ್ತಿದೆ ಎಂದರು.
ಲ್ಯಾಬ್ ಪರೀಕ್ಷೆಗೆ ಅನುಮತಿ & ಕಿಟ್ಸ್ ಕೋರಿಕೆ: ಎಸ್‍ಎಸ್‍ಐಎಂಎಸ್‍ನ ವೈದ್ಯಕೀಯ ಅಧೀಕ್ಷಕರಾದ ಕಾಳಪ್ಪನವರ್ ಮಾತನಾಡಿ ನಗರದ ಎಸ್‍ಎಸ್‍ಐಎಂಎಸ್ ಆಸ್ಪತ್ರೆಯಲ್ಲಿ ದೃಢೀಕೃತ ಪಿಸಿಆರ್ ಲ್ಯಾಬ್ ಇದೆ. ಪರಿಣಿತ ಸಿಬ್ಬಂದಿ ಇದ್ದಾರೆ. ಇಲ್ಲಿಯೇ ಪರೀಕ್ಷೆಗೆ ಅನುಮತಿ ನೀಡಿ ಕಿಟ್ಸ್ ಒದಗಿಸಿದರೆ ಶೀಘ್ರದಲ್ಲಿ ಫಲಿತಾಂಶ ಲಭಿಸಲಿದೆ ಹಾಗೂ ದಾವಣಗೆರೆ, ಹಾವೇರಿ, ಚಿತ್ರದುರ್ಗ, ಕೊಪ್ಪಳ ಮತ್ತು ಬಳ್ಳಾರಿ ಐದು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದರು.
#ಎಸ್‍ಎಸ್‍ಐಎಂಎಸ್‍ನ ಪ್ರಾಂಶುಪಾಲ ಪ್ರಸಾದ್ ಮಾತನಾಡಿ ಇದುವರೆಗೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿದ್ದರೂ ಲ್ಯಾಬ್‍ಗಳಿದ್ದರೂ ಪರೀಕ್ಷೆಗೆ ಅನುಮತಿ ನೀಡಿಲ್ಲ. ಸಂಶಯಾಸ್ಪದ ವ್ಯಕ್ತಿಗಳ ಮಾದರಿಯನ್ನು ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಕಳುಹಿಸಿದರೆ ಸುಮಾರು 48 ಗಂಟೆ ಫಲಿತಾಂಶಕ್ಕೆ ಕಾಯಬೇಕಾಗುತ್ತದೆ. ಇದರಿಂದ ಇನ್ನಿತರೆ ಅನಾಹುತ ಸಂಭವಿಸಬಹುದು. ನಮ್ಮಲ್ಲೇ ಪಿಸಿಆರ್ ಲ್ಯಾಬ್ ಇದ್ದು ಪರೀಕ್ಷೆಗೆ ಅನುಮತಿ ನೀಡಿದರೆ ಕೆಲವು ಗಂಟೆಗಳ ಒಳಗೆ ಫಲಿತಾಂಶ ಬಂದು ಮುಂದಿನ ಕ್ರಮ ಜರುಗಿಸಲು ಅನುಕೂಲವಾಗುತ್ತದೆ. ಜೆಜೆಎಂ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜು ಎರಡೂ ಕಡೆ ಉತ್ತಮ ಲ್ಯಾಬ್, ಪರಿಣಿತ ಸಿಬ್ಬಂದಿಗಳಿದ್ದು ಅನುಮತಿ ಜೊತೆ ಕಿಟ್ಸ್ ವಿತರಿಸಿದರೆ ಉಪಯುಕ್ತವಾಗುತ್ತದೆ ಎಂದರು.
ಸಚಿವರು ದೂರವಾಣಿ ಮೂಲಕ ಆರೋಗ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿರುವ ಲ್ಯಾಬ್‍ಗಳಿಗೆ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಅನುಮತಿ ಬಗ್ಗೆ ವಿಚಾರಿಸಿದರು. ಹಾಗೂ ಸೋಮವಾರದಿಂದ ಸುಸಜ್ಜಿತ ಲ್ಯಾಬ್ ಇರುವ ಆಸ್ಪತ್ರೆಗಳಿಗೆ ಪರೀಕ್ಷೆಗೆ ಅನುಮತಿ, ಕಿಟ್ಸ್ ಸೇರಿದಂತೆ ಮಾಸ್ಕ್ ಮತ್ತು ಇತರೆ ಅಗತ್ಯ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಹಾಗೂ ನಿನ್ನೆ ಕೇಂದ್ರ ಸರ್ಕಾರ ಖಾಸಗಿ ಲ್ಯಾಬ್‍ಗಳಿಗೆ ಅನುಮತಿ ನೀಡಿದೆ ಎಂಬ ಅಂಶವನ್ನು ಹೇಳಿದರು.
# ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 10 ವೆಂಟಿಲೇಟರ್‍ಗಳನ್ನು ಮೀಸಲಿಡಲಾಗಿದೆ. ಪಲ್ಮಮನರಿ ಮತ್ತು ನೆಫ್ರಾಲಜಿಗೆ ಸಂಬಂಧಿಸಿದಂತೆ ಅಗತ್ಯ ವೈದ್ಯರು ಇದ್ದಾರೆ ಎಂದರು.
ಜಿಲ್ಲಾಧಿಕಾರಿಗಳು, 10 ವೆಂಟಿಲೇಟರ್‍ಗಳ ಜೊತೆಗೆ 13 ಆಕ್ಸಿಜನ್ ಸಿಲಿಂಡರ್ ಇದ್ದು, ಎಸ್‍ಡಿಆರ್‍ಎಫ್ ನಿಧಿ ಸಾಕಷ್ಟಿದ್ದು ಅಗತ್ಯ ವಸ್ತುಗಳನ್ನು ಖರೀದಿಸಲಾಗುವುದು ಎಂದರು.
#ಎಸ್‍ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರಸಾದ್, ಎಸ್‍ಎಸ್‍ಐಎಂಎಸ್ ನಲ್ಲಿ ಒಟ್ಟು 28 ವೆಂಟಿಲೇಟರ್‍ಗಳಿದ್ದು ಸದ್ಯಕ್ಕೆ 3 ವೆಂಟಿಲೇಟರ್‍ಗಳನ್ನು ಕೊರೊನಾಗೆ ಸಂಬಂಧಿಸಿದಂತೆ ಮೀಸಲಿಡಲಾಗಿದ್ದು ಮುಂದೆ ಅಗತ್ಯ ಬಿದ್ದರೆ ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‍ಗಳನ್ನು ಒದಗಿಸಲಾಗುವುದು ಎಂದರು.
ಸಚಿವರು ಪ್ರತಿಕ್ರಿಯಿಸಿ ಖಾಸಗಿ ಆಸ್ಪತ್ರೆಯ ಪ್ರತಿಕ್ರಿಯೆ ಉತ್ತಮವಾಗಿದ್ದು ನಿಮ್ಮ ಸಹಕಾರಕ್ಕೆ ಅಭಿನಂದನೆಗಳು. ಸರ್ಕಾರದಿಂದ ಏನೇ ಸೌಲಭ್ಯಗಳು ಬೇಕಾದಲ್ಲಿ ಡಿಸಿ, ಡಿಹೆಚ್‍ಓ ಅಥವಾ ನೇರವಾಗಿ ನನ್ನನ್ನೇ ಕೇಳಿ ಪಡೆಯಿರಿ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆಲ್ಲ ಕೈಜೋಡಿಸಿ ಕೆಲಸ ಮಾಡೋಣ ಎಂದರು.
ಶಾಸಕರಾದ ರಾಮಪ್ಪ ಮಾತನಾಡಿ, ಹರಿಹರ ತಾಲ್ಲೂಕಿನ ಬನ್ನಿಕೋಡಿನಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು, ಅಗತ್ಯ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ತಂಡದೊಂದಿಗೆ ಮತ್ತೊಮ್ಮೆ ಭೇಟಿ ಪರಿಶೀಲನೆ ನಡೆಸೋಣ ಎಂದರು.
####ಜಿ.ಪಂ.ಸದಸ್ಯ ಬಸವಂತಪ್ಪ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 6 ವೆಂಟಿಲೇಟರ್‍ಗಳು ಕೆಟ್ಟಿವೆ. ಹಾಗೂ ಇದನ್ನು ನಿರ್ವಹಿಸುವ ಸಿಬ್ಬಂದಿ ಕೊರೆತೆಯೂ ಇದೆ. ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಪಡೆಯುವುದು ದುಬಾರಿಯಾಗುವ ಹಿನ್ನೆಲೆಯಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ ಸೌಲಭ್ಯ ಒದಗಿಸುವುದು ಸೂಕ್ತ ಎಂದರು.
ಇಲಾಖಾವಾರು ಜವಾಬ್ದಾರಿ ತಿಳಿಸಿದ ಸಚಿವರು :
• ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಮಾಧ್ಯಮದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತಾದ ಪ್ರಕಟಣೆಗಳು, ಸುದ್ದಿಗಳು ಮತ್ತು ಜಾಹಿರಾತುಗಳನ್ನು ಬಿಡುಗಡೆ ಮಾಡಬೇಕು.
• ಗ್ರಾಮೀಣಾಭಿವೃದ್ದಿ ಇಲಾಖೆ ವತಿಯಿಂದ ಪಿಡಿಓಗಳು ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸಬೇಕು ಎಂದರು.
• ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಕೊರೊನಾ ಸೋಂಕು ನಿಯಂತ್ರಣದ ಕುರಿತು ಬಿಗಿ ನಿಲುವಿನ ಜೊತೆಗೆ ಮನವೊಲಿಸುವ ಕಾರ್ಯದಲ್ಲೂ ತೊಡಗಬೇಕು. ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಮೊದಲು ತಾವು ಜಾಗೃತರಾಬೇಕು. ನಾನು ಆರೋಗ್ಯವಾಗಿದ್ದರೆ ತಾನೆ ವ್ಯಾಪಾರ ನಡೆಸಲು ಸಾಧ್ಯ ಎಂಬ ಮನೋಭಾವ ಬರಬೇಕು. ಹಾಗೆ ಇಲಾಖೆಯವರು ತಿಳುವಳಿಕೆ ನೀಡಬೇಕೆಂದರು.
• ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಭೇಟಿ ನೀಡಿ ಕೊರೊನಾ ಸೋಂಕಿನ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ಸ್ವ ಸಹಾಯ ಮತ್ತು ಸ್ತ್ರೀಶಕ್ತಿ ಮಹಿಳಾ ಗುಂಪುಗಳು ಸೇರಬಾರದು. ಏಕೆ ಸೇರಬಾರದು ಎಂಬ ಬಗ್ಗೆಯೂ ಅರಿವು ಮೂಡಿಸಬೇಕು.
• ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ನಿರ್ವಾಹಕರು, ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಬೇಕು. ಬಸ್‍ಗಳನ್ನು ಟ್ರಿಪ್ ಮುಗಿಸಿ ಬಂದ ನಂತರ ಸ್ವಚ್ಚಗೊಳಿಸಬೇಕು. ಕೇರಳ, ತಿರುಪತಿ ಹೀಗೆ ಸೋಂಕು ಇರುವ ರಾಜ್ಯಗಳಿಗೆ ಬಸ್ ನಿಲುಗಡೆ ಮಾಡಬೇಕೆಂದರು.
• ಪಾಲಿಕೆ ವತಿಯಿಂದ ಕೋಳಿ, ಮಾಂಸದ ಅಂಗಡಿಗಳನ್ನು ಬಂದ್ ಮಾಡಬೇಕು. ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸಿ, ಸಂತೆಗಳನ್ನು ಚದುರಿಸಿ ಮಾಡಬೇಕು. ಹೋಟೆಲ್‍ನಲ್ಲಿ ಕೂತು ತಿನ್ನದೇ, ಪಾರ್ಸೆಲ್ ತರುವುದು ಒಳಿತು.
• ಶಿಕ್ಷಣ ಇಲಾಖೆಯವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸೂಕ್ತ ಪೂರ್ವ ಸಿದ್ದತೆ ನಡೆಸಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದರು.
• ಹಾಗೂ ಪತ್ರಿಕಾ ಮತ್ತು ಟಿವಿ ಮಾಧ್ಯಮದವರ ಪಾತ್ರ ಮಹತ್ವದ್ದಾಗಿದ್ದು, ಕೊರೊನಾ ವೈರಸ್ ಸೋಂಕಿನ ನಿಯಂತ್ರಣದ ಕುರಿತು ಎಲ್ಲ ಸುದ್ದಿಗಳನ್ನು, ಅರಿವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಜನ ಜಾಗೃತಿ ಮೂಡಿಸಬೇಕು. ಈಗಾಗಲೇ ಮೇಲ್ಕಂಡ ಎಲ್ಲ ಇಲಾಖೆಗಳು, ಮಾಧ್ಯಮದವರು ಈ ಕೆಲಸ ಮಾಡುತ್ತಿದ್ದು ಇನ್ನು ಮುಂದೆಯೂ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತರಾಗಬೇಕೆಂದರು.
ಭಾರತ ದೇಶ ಕೊರೊನಾ ವೈರಸ್ ಸೋಂಕು ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇತರೆ ರಾಷ್ಟ್ರಗಳೂ ಹೇಳುತ್ತಿವೆ. ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕೊರೊನಾ ಜಾಗೃತಿ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸ ಆಗುತ್ತಿದ್ದು, ಮೊದಲು ನಾನು ಎಂಬುವನು ಜಾಗೃತನಾಗಬೇಕು. ಸದ್ಯಕ್ಕೆ ಮಾಂಸಾಹಾರ ತ್ಯಜಿಸಬೇಕು. ಆ ಮೂಲಕ ಎಲ್ಲರೂ ಜಾಗೃತರಾಗಿ ಕೊರೊನಾ ಸೋಂಕು ಮೆಟ್ಟಿ ನಿಲ್ಲಲು ಸಹಕರಿಸಬೇಕೆಂದರು.
ಹಿಂದೆಂದೂ ಇಂತಹ ಸಮಸ್ಯೆ ಬಗ್ಗೆ ನಾನು ಕೇಳಿರಲಿಲ್ಲ. ಭವಿಷ್ಯಃ ಹಿಂದೆಂದೂ ಹೀಗೆ ದೇವಸ್ಥಾನಗಳು ಬಂದ್ ಆಗಿರಲಿಲ್ಲ. ಇಂತಹ ಕೆಟ್ಟ ಪರಿಸ್ಥಿತಿ ವಿರುದ್ದ ಎಲ್ಲರೂ ಹೋರಾಡೋಣ. ಜಿಲÉ್ಲಯಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಉತ್ತಮ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಗ್ರಾ.ಪಂ., ತಾ.ಪಂ, ಜಿ.ಪಂ ಸದಸ್ಯರು, ಎಂಎಲ್‍ಎ, ಎಂಎಲ್‍ಸಿ, ಎಂಪಿ ಹೀಗೆ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡು ಹೋರಾಡೋಣ ಎಂದರು.
ಪಿಡಿಓ ಸೇರಿದಂತೆ ಇತರೆ ಅಧಿಕಾರಿಗಳು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಇತರೆ ಕÉಲಸ ಸ್ತಬ್ದ ಆಗಿದ್ದು, ಜನರನ್ನು ಉಳಿಸುವ ಕೆಲಸ ಮಾಡೋಣವೆಂದು ಅಧಿಕಾರಿಗಳಿಗೆ ತಿಳಿಸಿದರು
ಮನೆಯಲ್ಲೇ ಪ್ರಾರ್ಥಿಸಿ : ಜೀವ ಉಳಿಸಿಕೊಳ್ಳಲು ದೇವಸ್ಥಾನ, ಮಸೀದಿ ಮತ್ತು ಚರ್ಚ್‍ಗಳಿಗೆ ಹೋಗುತ್ತೇವೆ. ಸಾಯುವುದಕ್ಕೆ ಅಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಗುಂಪಾಗಿ ಒಂದೆಡೆ ಸೇರಬಾರದು. ಅಂತರ ಕಾಯ್ದುಕೊಳ್ಳಬೇಕು. ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಗುಂಪಾಗಿ ಸೇರಬಾರದು. ಶಬರಿ, ಗುರುವಾಯೂರ್, ತಿರುಪತಿಯಂತಹ ದೇವಸ್ಥಾನಗಳ ಪ್ರವೇಶವನ್ನು ಬಂದ್ ಮಾಡಲಾಗಿದೆ. ಇದೇ ರೀತಿ ಎಲ್ಲ ಸಮುದಾಯವರು ಸದ್ಯಕ್ಕೆ ತಮ್ಮ ತಮ್ಮ ಮನೆಗಳಲ್ಲೇ ಪೂಜೆ, ಪ್ರಾರ್ಥನೆ ಮಾಡಿಕೊಳ್ಳುವುದು ಒಳಿತು. ತಮ್ಮ ತಮ್ಮ ಜೀವ, ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಹಾಗೂ ಸ್ವಯಂ ತಾವೇ ಜಾಗರೂಕರಾಗಿ ಕ್ರಮ ವಹಿಸುವುದು ಒಳಿತೆಂದರು.
ಜನತಾ ಕಫ್ರ್ಯೂ ಯಶಸ್ವಿಗೊಳಿಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ಹಿತದೃಷ್ಟಿಯಿಂದ ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಮನೆಯಲ್ಲೇ ಉಳಿಯುವ ಮೂಲಕ ಜನತಾ ಕಫ್ರ್ಯೂ ಹಾಕಿಕೊಳ್ಳುವಂತೆ ಕರೆ ನೀಡಿದ್ದು, ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಹೀಗೆ ರಾಷ್ಟ್ರವ್ಯಾಪಿ ಜನರು ಮನೆಯಿಂದ ಹೊರಗೆ ಬಾರದಂತೆ, ಮನೆಯಲ್ಲೇ ಉಳಿದು ಸ್ವಯಂ ಪ್ರೇರಿತರಾಗಿ ಜನತಾ ಕಫ್ರ್ಯೂ ಹಾಕಿಕೊಳ್ಳುವ ಮೂಲಕ ಸಹಕರಿಸಬೇಕು. ಎಲ್ಲರೂ ಮನೆಯಲ್ಲೇ ಉಳಿಯುವ ಮೂಲಕ ಕೊರೊನಾ ವೈರಸ್ ವಿರುದ್ದ ಹೋರಾಟ ಮಾಡೋಣ ಹಾಗೂ ನಿರಂತರ ಸೇವೆ ಮಾಡುವ ಆರೋಗ್ಯ ಇಲಾಖೆಯ, ವೈದ್ಯರ ಸೇವೆಯನ್ನು ಶ್ಲಾಘಿಸೋಣ ಎಂದರು.
#ಜಿಲ್ಲೆಯಲ್ಲಿ ಸೋಂಕು ಪ್ರಕರಣ ಇಲ್ಲ : ಜಿಲ್ಲಾಧಿಕಾರಿಗಳು, ಇದುವರೆಗೆ 137 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, ಒಬ್ಬರು 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೂ 16 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 127 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 08 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಒಟ್ಟು 16 ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು 7 ನೆಗೆಟಿವ್ ಬಂದಿದ್ದು ಇನ್ನು 5 ಇಂದು ಸಂಜೆ ಫಲಿತಾಂಶ ಲಭಿಸಲಿದೆ. ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಇಲ್ಲ ಎಂದರು.
ಹಕ್ಕಿ ಜ್ವರ : ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್ ಮಾತನಾಡಿ, ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡಿನಲ್ಲಿ ಕೋಳಿಗಳು ಅಸಹಜವಾಗಿ ಸಾಯುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಹಕ್ಕಿಜ್ವರವಿರುವುದು ದೃಢಪಟ್ಟಿದೆ. ಇಲ್ಲಿ ಹೆಚ್ 5ಎನ್1 ಮಾದರಿಯ ಜ್ವರವಿದೆ. ಈ ಸೋಂಕು ಕೋಳಿಗಳಿಂದ ಮನುಷ್ಯರಿಗೆ ಬಹಳ ಬೇಡ ಹರಡುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಹರಿಹರ ಮತ್ತು ದಾವಣಗೆರೆ ನಗರದಲ್ಲಿ ಕೋಳಿ, ಮೊಟ್ಟೆ, ಮಾಂಸದ ಆಹಾರ ಸೇವನೆ ನಿಷೇಧಿಸಲಾಗಿದೆ. ಬನ್ನಿಕೋಡಿನ ಒಂದು ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಎಂದು ಘೋಷಿಸಿ 10 ಕಿ.ಮೀ ವ್ಯಾಪ್ತಿಯ 45 ಗ್ರಾಮಗಳನ್ನು ಜಾಗೃತಿ ವಲಯ ಎಂದು ಘೋಷಿಸಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ ಎಂದರು.
ಇಲಾಖೆ ಅಧಿಕಾರಿಗಳಿಂದ ವೈಜ್ಞಾನಿಕವಾಗಿ ಇದುವರೆಗೆ 2162 ಕೋಳಿಗಳ ನಾಶ ಆಗಿದ್ದು, ಕಲ್ಲಿಂಗ್‍ನಲ್ಲಿ ಭಾಗವಹಿಸಿದ ಸಿಬ್ಬಂದಿಗಳನ್ನು ನಿಗಾವಣೆಯಲ್ಲಿ ಇರಿಸಲಾಗಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಹಕ್ಕಿಜ್ವರದ ಹಿನ್ನೆಲೆ ಹಾಗೂ ಕೊರೊನಾ ವೈರಸ್ ಸೋಂಕು ನಿರ್ವಹಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋಳಿ ಮಾಂಸ ಸೇರಿದಂತೆ ಮಾಂಸಾಹಾರ ತ್ಯಜಿಸಬೇಕೆಂದರು.
ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ರಾಮಪ್ಪ, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮಹಾಪೌರರಾದ ಬಿ.ಜೆ.ಅಜಯ್‍ಕುಮಾರ್, ಜಿ.ಪಂ. ಸದಸ್ಯ ಬಸವಂತಪ್ಪ, ಬಿಜೆಪಿ ಮುಖಂಡ ವೀರೇಶ್, ಎಸ್‍ಪಿ ಹನುಂತರಾಯ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಾ.ರಾಘವನ್, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...