ಹಿರಿಯ ನಾಗರಿಕರು ಅನುಭವಗಳ ಕಣಜ : ನ್ಯಾ. ಟಿ. ಗೋವಿಂದಯ್ಯ

Source: S O News service | By I.G. Bhatkali | Published on 16th October 2019, 5:50 PM | Coastal News |

ಕಾರವಾರ: ಹಿರಿಯ ನಾಗರಿಕರು ಅನುಭವಗಳ ಕಣಜವಾಗಿದ್ದು, ತಮ್ಮ ಅನುಭವಗಳನ್ನು ಇತರರಿಗೆ ಹಂಚಿ ಸಹಾಯ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ಹೇಳಿದರು. 

ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾಧಿಗಳ ಸಂಘ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರಣ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾದ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
  ಹಿರಿಯರು ಅನುಭವಗಳನ್ನು ಹೊಂದಿದ್ದರೂ ಕೂಡಾ ಇಂದು ಆಧುನಿಕತೆ ಮತ್ತು ಉದ್ಯೋಗದ ಭರಾಟೆಯಲ್ಲಿ ಯುವ ಸಮೂಹ, ಕುಟುಂಬ ಸದಸ್ಯರು ಕಡೆಗಾಣಿಸಿದ್ದನ್ನು ನೋಡುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಹಿರಿಯರು ತಮ್ಮ ಜೀವಾನುಭವದೊಂದಿಗೆ ಕಾನೂನಿನ ಅರಿವನ್ನು ಹೊಂದಿ, ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಿರಬೇಕೆಂದು ಅಭಿಪ್ರಾಯ ಪಟ್ಟರು. 

ಇಂದು ಕುಟುಂಬ ಎಂದರೆ ಗಂಡ ಹೆಂಡತಿ ಮತ್ತು ಮಕ್ಕಳು ಮಾತ್ರ ಎಂದಂತಾಗಿದೆ. ಹಿರಿಯರಿಲ್ಲದ ಮನೆ, ಮನೆ ಎಂದೆನಿಸಿಕೊಳ್ಳುವುದು ಕಷ್ಟ, ಇನ್ನು ಹಿರಿಯರು ತಮಗೆ ವಯಸ್ಸಾಯಿತೆಂದು ಎದೆಗುಂದದೇ,  ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಪ್ರತಿಯೊಂದಕ್ಕೂ ಇತರರನ್ನು ಅವಲಂಭಿಸುವದನ್ನು ಕಡಿಮೆ ಮಾಡಿಕೊಂಡು,  ಸ್ವಕಾರ್ಯಗಳನ್ನು ಮಾಡಿಕೊಳ್ಳಲು ತೊಡಿಗಿದಾಗ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು. 

ಹಿರಿಯ ಮಹಿಳೆಯರಿಗೆ ಮಿತಿಯಿಲ್ಲದ ಆಧಾಯ ಮತ್ತು ವಾರ್ಷಿಕ ಒಂದು ಲಕ್ಷಕಿಂತ ಕಡಿಮೆ  ಆದಾಯ ಹೊಂದಿರುವ ಪುರುಷ ಹಿರಿಯ ನಾಗಿಕರು ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಸಹಾಯ ಪಡೆಯಬಹುದಾಗಿದ್ದು, ಎಲ್ಲ ಹಿರಿಯ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು. 

ಜಿಲ್ಲಾ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಅವರು ಮಾತನಾಡಿ ಇಂದು ದುಡ್ಡು ಗಳಿಸಬೇಕೆಂಬ ಹುಚ್ಚಿನಲ್ಲಿ ವೃದ್ಧ ತಂದೆ ತಾಯಿಗಳನ್ನು ವೃದ್ದಾಶ್ರಮಗಳಿಗೆ ದೂಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಿರಿಯರು ಕಾನೂನಿನ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೆಶಕ ರಾಜೇಂದ್ರ ಬೇಕಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದü ಕೆ.ಬಿ.ನಾಯ್ಕ ಅವರು ಪೋಷಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ ಕಾಯಿದೆ 2007, ಎ.ಆರ್.ಬಿ.ಡಿಸೋಜಾ ಅವರು ಮಧ್ಯಸ್ಥಿಕೆ, ಸಂದಾನ ಮತ್ತು ಜನತಾ ನ್ಯಾಯಾಲಯಗಳು ಎಂಬ ವಿಷಯಗಳ ಮೇಲೆ ಉಪನ್ಯಾಸ ನೀಡಿದರು. ಸಮಾಜ ಸೇವಾ ಕಾರ್ಯಕರ್ತ ಅಬ್ದುಲ್ ರಜಾಕ್ ಸ್ವಾಗತಿಸಿದರು.  ಮಲ್ಲಿಕಾರ್ಜುನ ಜನಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖೋತ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.  

Read These Next