ವೇದ ಶಿಕ್ಷಣ ದ ಪ್ರಸ್ತಾಪದ ಹಿಂದಿರುವ ಅಸಲಿ ಅಜೆಂಡಾಗಳು

Source: sonews | By Staff Correspondent | Published on 19th March 2019, 10:51 PM | National News | Special Report | Don't Miss |

ಜಾತಿ ವಿನಾಶಕ್ಕೆ ವೇದ ಶಿಕ್ಷಣ ಕೊಡುವ ಸಂದೇಶವೇನು?

ವೇದ ಶಿಕ್ಷಣವನ್ನು ಬೋಧಿಸುವ ಮತ್ತು ಪುನಶ್ಚೇತನಗೊಳಿಸುವ ಉದ್ದೇಶದ ಭಾರತೀಯ ಶಿಕ್ಷಾ ನಿಗಮದ ಸ್ಥಾಪನೆಯ ಪ್ರಸ್ತಾವನೆಯು ಎಂದಿನಂತೆ ಹಲವರ ಬೆಂಬಲಕ್ಕೆ ಮತ್ತು ಹಲವರ ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು ವೈದಿಕ ಸಂಸ್ಕೃತಿಯನ್ನು, ಶಾಸ್ತ್ರೀಯ ಪುರಾಣಗಳನ್ನು, ಮತ್ತು ಹಿಂದೂ ಧರ್ಮದೊಳಗಿನ ಆಚರಣೆಗಳ ಕಲಿಯುವಂತೆ ಮಾಡುವಲ್ಲಿ ಪ್ರಯತ್ನವು ಮತ್ತೊಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ. ಸೈದ್ಧಾಂತಿಕ ಪ್ರಶ್ನೆಗಳನ್ನೂ ಬದಿಗಿರಿಸಿದರೂ, ವೇದ ಶಿಕ್ಷಣವನ್ನು ನೀಡುವ ಶಿಕ್ಷಕರ ಬಗ್ಗೆ, ವಿದ್ಯಾರ್ಥಿಗಳಲ್ಲಿರುವ ನಿರೀಕ್ಷೆಗಳ ಬಗ್ಗೆ, ಮತ್ತು ಶಾಲೆ ಹಾಗೂ ಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುವುದರ ಪರಿಣಾಮಗಳ ಬಗ್ಗೆ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಬಹುದಾಗಿದೆ.

ಮೊದಲನೆಯದಾಗಿ ಶಿಕ್ಷಣ ವ್ಯವಸ್ಥೆಯ ಭಾಗವಾಗಿ ವೇದಗಳನ್ನು ಕಲಿಸುವುದಾದರೆ ಯಾರೂ ವೇದಗಳನ್ನು ಅಧ್ಯಯನ ಮಾಡುವ ಅವಕಾಶಗಳನ್ನು ಪಡೆದುಕೊಂಡು ಅದರಲ್ಲಿ ಪರಿಣಿತರಾಗಿದ್ದಾರೋ ಅವರನ್ನೇ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗುವುದೆಂದು ಊಹಿಸಬಹುದು. ಆದರೆ ವೇದಗಳನ್ನು ಯಾರು ಅಧ್ಯಯನ ಮಾqಬಹುದೆಂಬ ಬಗ್ಗೆ ನಿರ್ಬಂಧಗಳಿರುವುದರಿಂದ ವೇದಾಧ್ಯಯನ ಶಿಕ್ಷಣ ನೀಡುವವರು ಯಾರು ಎಂಬುದು ದ್ವಿಜರ ನಡುವೆ ಒಂದು ಹೊಸ ವರ್ಗೀಕರಣವನ್ನು ಹುಟ್ಟುಹಾಕುವುದೇ? ಈಗಾಗಲೇ ದೇಶದ ಹಲವಾರು ಕಡೆ ವೈದಿಕ ಪಾಠಶಾಲೆಗಳು ಅಸ್ಥಿತ್ವದಲ್ಲಿದ್ದು ಅದರಲ್ಲಿ ಯಾರು ಕಲಿಯಬೇಕು ಎಂಬ ನಿರ್ಬಂಧಗಳಲ್ಲಿ ಸ್ಪಷ್ಟವಾದ ಜಾತಿ ವರ್ಗೀಕರಣವಿದ್ದು ಸಮಾಜದ ಶ್ರೇಣೀಕರಣದ ಏಣಿಯಲ್ಲಿ ಮೇಲ್ಸ್ಥಾನದಲ್ಲಿರುವ ಸೌಲಭ್ಯವಂತ ಮೇಲ್ಜಾತಿಗಳು ಮಾತ್ರ ವೇದಗಳನ್ನು ಅಧ್ಯಯನ ಮಾಡುವ ಅವಕಾಶವಿದೆ. ಸೌಲಭ್ಯವಂತರೂ ಸಹ ಕಟ್ಟುನಿಟ್ಟಾಗಿ ಜಾತಿಯನ್ನೂ ಹಾಗೂ ಪುರೋಹಿತ ವೃತ್ತಿಯನ್ನೂ ಅನುಸರಿಸುತ್ತವೆ. ಇದನ್ನು ಇಲ್ಲಿ ಏಕೆ ಒತ್ತು ಕೊಟ್ಟು ಹೇಳಬೇಕಿದೆಯೆಂದರೆ ಇತರ ಪುರೋಹಿತೇತರ ಬ್ರಾಹ್ಮಣ ಜಾತಿಗಳಿಗಿಂತ ಪುರೋಹಿತ ಬ್ರಾಹ್ಮಣ ಜಾತಿಗಳು ದಿನದುದ್ದಕ್ಕೂ ಹಲವಾರು ವ್ರತನೇಮಾಚರಣೆಗಳನ್ನು ಮಾಡಬೇಕಿರುತ್ತದೆ.

ಬಗೆಯ ಕರ್ಮಠ ಶಿಕ್ಷರನ್ನು ನೊಂದಾಯಿಸಿಕೊಳ್ಳುವುದರಿಂದ ಶಾಲಾ- ಕಾಲೇಜುಗಳಲ್ಲೂ ಇವರಿಗಾಗಿಯೇ ಪ್ರತ್ಯೇಕವಾದ ಸ್ಥಳಾವಕಾಶಗಳನ್ನು ಒದಗಿಸಬೇಕಾಗುತ್ತದೆ. ಅದರಿಂದಾಗಿ ಜಾತಿ ಆಧಾರಿತ ಪ್ರತ್ಯೇಕೀಕರಣ ಮತ್ತು ಧರ್ಮಾಧಾರಿತ ಆಚರಣೆಗಳು ಶಾಲಾ-ಕಾಲೇಜುಗಳ ಆವರಣದೊಳಕ್ಕೂ ಕಾಲಿಡುವಂತಾಗುತ್ತದೆ. ಬ್ರಾಹ್ಮಣವಾದವು ಕರ್ಮಾಚರಣೆಗಳಲ್ಲೇ ತಳಮಟ್ಟ ಮುಳುಗಿರುವ ಮತವೆಂಬುದನ್ನು ಮರೆಯಬಾರದು. ವೈದಿಕ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಬ್ರಾಹ್ಮಣೀಯ ಕರ್ಮಾಚರಣೆಗಳನ್ನೂ ಅನುಸರಿಸುವರೇ? ಹಾಗಿದ್ದಲ್ಲಿ ಅದುನಮ್ಮ ಸಮಾಜದೊಳಗಿನ ಜಾತಿ ವಿದ್ಯಮಾನದ ಮೇಲೆ ಏನು ಪ್ರಭಾವ ಬೀರಬಹುದು?

ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಒಂದು ರೀತಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾದ ಪೂರ್ವಗ್ರಹದಿಂದ ಕೂಡಿದೆಯಾಗಿದ್ದರಿಂದ ಅದನ್ನು ಸರಿಪಡಿಸಬೇಕೆಂಬ ಅಭಿಪ್ರಾಯವೇ ಹೊಸ ಪ್ರಸ್ತಾಪವನ್ನು ಮುಂದಿರಿಸಲು ಕಾರಣವೆಂದು ಕಾಣುತ್ತಿದೆ. ಆದರೆ ಇದರ ತಾತ್ಪರ್ಯವು ನಮ್ಮ ಶಿಕ್ಷಣ ವ್ಯವಸ್ಥೆಯು ಇತರ ಧರ್ಮಗಳ ವಿರುದ್ಧವೂ ಅಷ್ಟೇ ಪೂರ್ವಗ್ರಹದಿಂದ ಕೂಡಿದೆ ಎಂದಾಗುತ್ತದೆ. ಅದರ ಅರ್ಥ ನಾವು ಈಗ ನೀಡುತ್ತಿರುವ ಧರ್ಮ ನಿರಪೇಕ್ಷ ಶಿಕ್ಷಣಕ್ಕೆ ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ ಎಂದೇ? ಹಾಗಿದ್ದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಜ್ನಾನಶಿಸ್ತನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಮಾತ್ರ ಅದನ್ನು ಬಗೆಹರಿಸಲು ಸಾಧ್ಯ. ನಮ್ಮ ಯಾವುದೇ ಆಧುನಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಸುವ್ಯವಸ್ಥಿತವಾದ ಧಾರ್ಮಿಕ ಅಧ್ಯಯನ ವಿಭಾಗಗಳು ಇಲ್ಲದಿರುವುದೊಂದು ವಿಪರ್ಯಾಸ. ಆದರೆ ವಿಭಾಗಗಳನ್ನು ಭಾರತದ ಹೊರಗಡೆ ಸ್ಥಾಪಿಸಿದಾಗ ಧರ್ಮಗಳ ಬಗ್ಗೆಯೇ ಅತಿಹೆಚ್ಚು ಶೈಕ್ಷಣಿಕ ಸಾರಸ್ವತವನ್ನು, ಕನಿಷ್ಟ ಇಂಗ್ಲೀಷ್ ಭಾಷೆಯಲ್ಲಂತೂಸೃಷ್ಟಿಸುತ್ತವೆಂಬುದು ಮತ್ತೊಂದು ವಿಪರ್ಯಾಸ. ವೇದಗಳ ಅಧ್ಯಯನಗಳ ಬಗ್ಗೆಯೂ ಒಂದು ವಿದ್ವತ್ಪೂರ್ಣವಾದ ಮತ್ತು ವಿಮರ್ಶಾತ್ಮಕವಾದ ಒಂದು ಪಠ್ಯಕ್ರಮವನ್ನು ಸಿದ್ಧಪಡಿಸಬೇಕಿದೆ. ಇಲ್ಲವಾದರೆ ಧರ್ಮಗಳ ವ್ಯಖ್ಯಾನವನ್ನು ಮಾಡಲು ಧಾರ್ಮಿಕ ನಾಯಕರ ಮೇಲೆಯೇ ಹೆಚ್ಚೆಚ್ಚು ಅವಲಂಬಿಸುವಂತಾಗಿಬಿಡುತ್ತದೆ.

ಇದರ ಜೊತೆಗೆ ಮತ್ತೊಂದು ಗಂಭೀರವಾದ ಸಂಗತಿಯಿದೆ. ಇದರ ಕೆಲವು ಬೆಂಬಲಿಗರ ಪ್ರಕಾರ ಪ್ರಸ್ತಾಪ ಏಕೆ ಮುಖ್ಯವೆಂದರೆ ಅದು ಕಡ್ಡಾಯ ಶಿಕ್ಷಣ ಕಾಯಿದೆಯು ಮಾಡಿರುವ ಹಾನಿಯನ್ನದು ಸರಿಪಡಿಸಲಿದೆ. ಇದು ಪ್ರಸ್ತಾಪದ ಹಿಂದಿರುವ ಗುಪ್ತ ಅಜೆಂಡಾವನ್ನು ಬಯಲು ಮಾಡುತ್ತದೆ. ಕಡ್ಡಾಯ ಶಿಕ್ಷಣ ಕಾಯಿದೆ (ಆರ್ಟಿಇ)ಯಿಂದ ಹಿಂದುಗಳು ನಡೆಸುವ ಶೈಕ್ಷಣಿಕ ಸಂಸ್ಥೆಗಳಿಗೆ ಹಾನಿಯುಂಟಾಗಿದೆಯೆಂಬ ಅಭಿಪ್ರಾಯವು ವಾಸ್ತವ ದೃಷ್ಟಿಯಿಂದಲೂ ತಪ್ಪು ತಿಳವಳಿಕೆ. ಮಾತ್ರವಲ್ಲ. ಕಾಯಿದೆ ಇರುವುದೇ ಇತರ zsರ್ಮಗಳ ಬಡ ವಿದ್ಯಾರ್ಥಿಗಳಿಗೆ (ಇದರ ಜೊತೆಗೆ ಇತರ ಜಾತಿಗಳಿಗೆ ಎಂಬ ತಿಳವಳಿಕೆಯೂ ಇದರ ಹಿಂದಿದೆ) ಎಂಬ ತಪ್ಪು ನೆಲೆಯ ಚಿಂತನೆಯಿಂದಲೂ ಅಭಿಪ್ರಾಯ  ಹುಟ್ಟುತ್ತಿದೆ. ಮತ್ತು ಇಲ್ಲಿ ಬಡ ವಿದ್ಯಾರ್ಥಿಗಳು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೂ ಅವರು ವೈದಿಕ ನಾಗರಿಕತೆಗೆ ಸೇರಿದವರಲ್ಲವೆಂದೇ ಪರಿಗಣಿಸಲಾಗುತ್ತಿದೆ. ಪ್ರತಿಪಾದನೆಯೇ  ವೈದಿಕ ಶಿಕ್ಷಣದ ಮೂಲಕ ಬ್ರಾಹ್ಮಣೀಯ ಶಿಕ್ಷಣವನ್ನು ಜಾರಿ ಮಾಡಲಾಗುತ್ತದೆಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಕೊನೆಯದಾಗಿ ಹೊಸ ಪ್ರಸ್ತಾಪವನ್ನು ಆತುಕೊಳ್ಳುವವರು ಯಾರು? ಇದು ಹಿಂದುಗಳಿಗೆ ಸ್ಪೂರ್ತಿ ನೀಡುತ್ತದೆ ಎಂದು ಸರ್ಕಾರವು ಭಾವಿಸಿದ್ದರೆ ಅದು ಅತ್ಯತ ತಪ್ಪಾದ ಗ್ರಹಿಕೆಯಾಗಿದೆ. ವಾಸ್ತವವೇನೆಂದರೆ ಹಿಂದೂಗಳಲ್ಲಿನ ಮಧ್ಯಮ ವರ್ಗzವರು, ಮೇಲ್ ವರ್ಗದವರು ಮತ್ತು ಮಹತ್ವಾಕಾಂಕ್ಷೆಗಳುಳ್ಳ ವರ್ಗಗಳು  (ಅದರಲ್ಲೂ ಬ್ರಾಹ್ಮಣ ಮೇಲ್ವರ್ಗದವರು) ತಮ್ಮ ಮಕ್ಕಳನ್ನು ಮಿಷನರಿ ಮತ್ತು ಅಂತರರಾಷ್ಟ್ರೀಯ ಶಾಲೆಗಳಿಗೆ ಕಳಿಸುತ್ತಾರೆಯೇ ವಿನಃ ವೈದಿಕ ಶಾಲೆಗಳಿಗಲ್ಲಅಲ್ಲದೆ ಈಗಾಗಲೇ ಅಸ್ಥಿತ್ವದಲ್ಲಿರುವ ವೈದಿಕ ಪಾಠಶಾಲೆಗಳಲ್ಲಿ ಅತ್ಯಲ್ಪ ಹಿಂದೂಗಳು ಅದರಲ್ಲೂ ಅತ್ಯಲ್ಪ ಬ್ರಾಹ್ಮಣ ಹಿನ್ನೆಲೆಯ ಮಕ್ಕಳು ಕಲಿಯುತ್ತಿದ್ದಾರೆ. ಹೀಗಾಗಿ ಯೋಜನೆಯ ಮುಖ್ಯ ಗುರಿಯಿರುವುದು ಬ್ರಾಹ್ಮಣೇತರ ಮತ್ತು ಹಿಂದೂಯೇತರ ಮಕ್ಕಳೆಂದು ಭಾಸವಾಗುತ್ತದೆ. ವೈದಿಕ ಶಿಕ್ಷಣದ ಹಿರಿಮೆಯನ್ನು ಬೋಧಿಸುವ ಮೂಲಕ ವೈದಿಕ ಎಂಬುದನ್ನು ಭಾರತೀಯ ಎಂಬುದಕ್ಕೆ ಅಂತರಿಕವಾಗಿ ಸಮೀಕರಿಸುತ್ತಾ ಪ್ರಧಾನವಾಗಿ ಹಿಂದುಯೇತರ ಮಕ್ಕಳನ್ನೇ ಯೋಜನೆ ಪ್ರಾಥಮಿಕ ಗುರಿ ಮಾಡಿಕೊಂಡಿರುವಂತೆ ಕಂಡುಬರುತ್ತದೆ. ಭಾರತದ ತತ್ವಶಾಸ್ತ್ರ, ಭಾಷೆ ಮತ್ತು ಕಲೆಗಳಿಗೆ ವೇದಕಾಲದ ಕೊಡುಗೆಗಳ ಬಗ್ಗೆ ನಮಗೆ ಯಾವ ತಕರಾರೂ ಇರಬೇಕಿಲ್ಲವಾದರೂ, ಬ್ರಾಹ್ಮಣೇತರ ಹಿಂದೂಗಳನ್ನೂ ಒಳಗೊಂಡಂತೆ ಎಲ್ಲಾ ಭಾರತೀಯರೂ ವೈದಿಕ ಪರಂಪರೆಗೇ ಸೇರಿದವರೆಂಬ ವ್ಯವಸ್ಥೆಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ.

ಹಾಗೆಯೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಈಗಲೂ ಯುರೋಪ್ ಕೇಂದ್ರಿತ ಹಸಿ ವೈಚಾರಿಕತೆಯೇ ಪ್ರಧಾನವಾಗಿದೆಯೆಂಬ ವಾಸ್ತವವೂ ಸಹ ಇಂಥಾ ವೈದಿಕ ಶಿಕ್ಷಣದ ಪ್ರಸ್ತಾವಗಳು ರಾಜಕೀಯ ಅಸ್ತ್ರವಾಗುವ ಅವಕಾವನ್ನು ಕಲ್ಪಿಸಿಕೊಡುತ್ತದೆ ಎಂಬುದನ್ನು ನಾವು ಮರೆಯಬಾರದು. ಬಗೆಯ ಶಿಕ್ಷಣ ವ್ಯವಸ್ಥೆಯಿಂದ ಮತ್ತು ಅದಕ್ಕೆ ಪಶ್ಚಿಮೇತರ ಜ್ನಾನಮೂಲಗಳ ಬಗ್ಗೆ ಇರುವ ಅನುಮಾನಗಳಿಂದ ವಿದ್ಯಾರ್ಥಿಗಳು ಮತ್ತವರ ಪೋಷಕರು ನಿಜವಾಗಿಯೂ ವ್ಯಾಕುಲರಾಗಿದ್ದಾರೆ. ಹೀಗಾಗಿ ವೈದಿಕ ಶಿಕ್ಷಣದ ಪ್ರಸ್ತಾಪವು ನಮ್ಮ ಶಿಕ್ಷಣ ವ್ಯವಸ್ಥೆಯ ಸಾರ ಮತ್ತು ವಿಧಾನಗಳ ಬಗ್ಗೆ ಕಳವಳಗೊಂಡಿರುವಂಥ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಎಚ್ಚರಿಕೆಯಿಂದ ಪಶ್ಚಿಮೇತರ ಸಮಾಜಗಳ ವೈಚಾರಿಕತೆ ಮತ್ತು ಅನುಭವಗಳಿಗೆ ಸಂವೇದನಾಶೀಲವಾಗಿರುವ ಬಹುಬಗೆಯ ದೃಷ್ಟಿಕೋನಗಳನ್ನು ಒಳಗೊಳ್ಳುವಂಥ ಬಗೆಯೊಂದನ್ನು ಕಂಡುಕೊಳ್ಳುತ್ತೇವೆಂದು ಆಶಿಸೋಣ

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...